Tuesday 11 August 2015

ಕಂಡಿದ್ದು , ಕೇಳಿದ್ದು, ಅನಿಸಿದ್ದು

ಸುಮಾರು ೨ ಗಂಟೆಯ ಹೊತ್ತು, ಸೂರ್ಯ ನೆತ್ತಿಯಲ್ಲಿದ್ದರೂ ಪ್ರಖರವಾಗಿರಲಿಲ್ಲ. ಮಂದಗಾಳಿಯೂ ಇದ್ದಿದ್ದಕ್ಕೆ ಕೂತು ಬಸ್ಗಾಗಿ ಕಾಯುವುದು ಹಿತವೇ ಎನಿಸಿತು. ಬಸವನಗುಡಿ ಕಡೆಗೆ ನನ್ನ ಸವಾರಿ ಹೊರಟಿತ್ತು. ಕಾಯುತ್ತಿದ್ದದ್ದು ಜಯನಗರ  9th blockನಲ್ಲಿ.  ಒಂದಷ್ಟು ಬೆಂಚಗಳಿದ್ದು, ಒಪ್ಪವಾಗಿದ್ದ ನಿಲ್ದಾಣವಾಗಿತ್ತದು. ಮಾಸಲು ಬಟ್ಟೆಯಲ್ಲಿ ಅತ್ತಿತ್ತ ಅಡ್ಡಾಡಿದ ಕುಳ್ಳು ವ್ಯಕ್ತಿಯೊಬ್ಬ ಕುಂಟುತ್ತಾ ಬಂದ. ಹರಕಲು ಮುರುಕಲು ಬಟ್ಟೆ ತೊಟ್ಟಿದ್ದ. ಅಸ್ತಮವಿತ್ತೇನೊ, ಅತ್ತಿತ್ತ ಓಡಾಡಿ ಕೊನೆಗೊಂದು ಬೆಂಚಿನ ಬಳಿ ಬಂದು ಅಸ್ತಮಾದ ಔಷಧಿ ಸೇವಿಸಿದ. ಆ ಬೆಂಚಿನ ಮುಂದೆ ಅಷ್ಟು ಹೊತ್ತು ನಿಂತರೂ ಕುಳಿತುಕೊಳ್ಳದೆ ಮತ್ತೆ ಕುಂಟುತ್ತಾ ಬಂದು ನೆಲದ ಮೇಲೆ ಕುಳಿತ. ಊಹ್ಞೂ !!! ನನಗೆ ಅವನ ಭಾವ ಅರ್ಥವಾಗಲೆ ಇಲ್ಲ. ಅವನ ನಿಷ್ಠುರವಾದ ಕಣ್ಣುಗಳು ಏನನ್ನೂ ಹೇಳಲಿಲ್ಲ. ಬಹುಷಃ ತಾನು ಇಷ್ಟಕ್ಕೇ ಯೋಗ್ಯ ಎಂಬ ಅಳುಕೊ ಅಥವಾ ನೆಲವೇ ಹಿತವೆಂಬ ಸರಳತೆಯೋ! ಅವನಿಗೆ ಅದೊಂದು ಯೋಚಿಸುವ ವಿಷಯವೇ ಅಲ್ಲವಾಗಿತ್ತೇನೋ. ಪೊಳ್ಳು ಪ್ರತಿಷ್ಟೆ ಅಭಿಮಾನಗಳ ಅಬ್ಬರದಲೆಗಳ ಬದುಕುಗಳ ನಡುವಲ್ಲಿ ಬದುಕುವ ನನಗೆ ಬಹುಷಃ ಒಂದು ನಿಮಿಷ ಬೇರೆ ಯೋಚನೆಗಳಿಗೆಲ್ಲಾ ರಜಾ ಕೊಟ್ಟು ಚಿಂತಿಸುವ ವಸ್ತುವಾಗಿತ್ತದು.

**
ಅಲ್ಲಿ ಕುಳಿತ ಅರ್ಧ ಗಂಟೆಯಲ್ಲಿ ನಾನು ಕಂಡಷ್ಟು ಕುರುಡರನ್ನು ಎಲ್ಲೂ ಕಂಡಿರಲಿಲ್ಲವೇನೊ, ಅಡಿಗಡಿಗೆ ಮನಸ್ಸು ಕರಗುತ್ತಿತ್ತು.
೩ ಜನ ಹುಡುಗಿಯರು ಎಲ್ಲಿಗೋ ಹೋಗುವ ಅವಸರದಲ್ಲಿದ್ದರು. ಬಸ್ಸೊಂದು ವೇಗವಾಗಿ ಬಂದು ರಿವರ್ಸ್ ತೆಗೆದುಕೊಳ್ಳುವ ತವಕದಲ್ಲಿತ್ತು. ಬಸ್ ನಿಲ್ದಾಣದ ಆಫೀಸಿನಲ್ಲಿದ್ದ ಅಧಿಕಾರಿಯೊಬ್ಬ, ಅವರನ್ನು ಕಂಡು "ನೋಡ್ಕೊಂಡ್ ಹೋಗ್ರಮ್ಮ" ಅಂದ. ಅಷ್ಟೂ ಜನರು ಕುರುಡಿಯರೆಂದು ನನಗೆ ಗೊತ್ತಾದಾಗ ಅವನ ಒಳ್ಳೆಯತನದ ಮಾತುಗಳು, ಅವರ ಬದುಕು ಆಡಿದ ವ್ಯಂಗ್ಯದಂತೆ ಕಂಡಿತು ನನಗೆ.
**

ಇವೆಲ್ಲವುಗಳಲ್ಲಿ ಮನಸ್ಸು ಭಾರವಾಗುತ್ತಿದ್ದಂತೆ, ಇನ್ನೊಬ್ಬ ಕುರುಡನನ್ನು ಯಾರೋ ಪುಣ್ಯಾತ್ಮರು ಕೈ ಹಿಡಿದು ಕರೆದುಕೊಂಡು ಬಂದು ಕೆಳಗೆ ಕೂರಿಸಿದರು. ಕೂತಲ್ಲೇ ನನ್ನ ತಲೆ ಎಲ್ಲೆಲ್ಲೋ ಓಡಿತು. ಕುರುಡನೊಬ್ಬನಿಗೆ ಒಂದು ಬಣ್ಣವನ್ನು ಹೇಳುವುದಾದರೆ ಹೇಗೆ ಹೇಳಬೇಕಾಗಬಹುದು. ಹೇಳಿದರೂ ಆತ ಯಾವ ಮಟ್ಟಕ್ಕೆ ಅರ್ಥ ಮಾಡಿಕೊಳ್ಳಬಲ್ಲ, ಅನ್ನೊ ಹುಚ್ಚು ಪ್ರಶ್ನೆಗಳು ಏಳುವಾಗ, ಬಸವನಗುಡಿಗೆ ಹೋಗುವ ೬೦ ಎ ಬಂದಿತು. ಅಲ್ಲಿ ಕುಳಿತಿದ್ದ ಕುರುಡನಿಗೆ ಅದೆ ಬಸ್ಗೆ ಹೋಗಬೇಕೆಂಬುದನ್ನು ತಿಳಿದುಕೊಂಡು ಬಸ್ ಹತ್ತಿಸಿ ಮುಂದಿನ ಸೀಟಿನಲ್ಲಿ ಕುಳಿತೆ. ಸ್ವಲ್ಪ ಹೊತ್ತಿಗೆ ಹಿರಿಯರಿಬ್ಬರು ಹತ್ತಿ ಒಬ್ಬರು ಅವನ ಪಕ್ಕದವನನ್ನು ಏಳಿಸಿ ಕೂತರು, ಇನ್ನೊಬ್ಬರು ಸೀಟು ಸಿಗದೆ, ಇವನ ಮೇಲೆ ರೇಗಲು ಶುರು ಮಾಡಿದರು. " ಸೀನಿಯರ್ ಸಿಟಿಜನ್ಗೆ ಸೀಟ್ ಬಿಟ್ಕೊಡಪ್ಪ, ನಿಂಗೆ ಹೇಳ್ತಿರೋದು" ಅಂದು ಮತ್ತೆ ಮತ್ತೆ ಹೇಳಿದ್ದೆಲ್ಲೊ ನನ್ನ ಕಿವಿಗೆ ಬಿದ್ದು, “ಆತ ಬ್ಲೈಂಡ್ ಸರ್ ಬಿಟ್ಬಿಡಿ” ಅಂದು ನನ್ನ ಸೀಟಿನಿಂದೆದ್ದೆ. ಸ್ವಲ್ಪ ಸಮಾಧಾನವಾಯ್ತು ಆ ಜೀವಕ್ಕೆ. ಸ್ವಲ್ಪ ಹೊತ್ತಲ್ಲೆ, ಅವನ ಪಕ್ಕದ ಸೀಟ್ ಖಾಲಿ ಆದ್ದರಿಂದ, ನಾನು ಸದ್ದಿಲ್ಲದೆ ಅವನ ಪಕ್ಕ ಕುಳಿತುಕೊಂಡೆ. ಒಂದೇ ಒಂದು ಮಾತು ಆಡಲಿಲಿಲ್ಲ.  ಆತ "ಮೇಡಮ್ ಬಸ್ ಸೆಟಲೈಟ್ ಒಳಗೆ ಹೋಗುತ್ತಾ" ಅಂದ. ಈಗ ಮಿಕ ಮಿಕ ನೋಡುವ ಸರದಿ ನನ್ನದು, ಸೀನಿಯರ್ ಸಿಟಿಜನ್ ರೇಗಿದ್ದು ತಪ್ಪಲ್ಲ. ಆತನ  ಎರಡೂ ಕಣ್ಣುಗಳು ಸಾಮಾನ್ಯನ ಕಣ್ಣುಗಳಂತೆ ಚೆನ್ನಾಗಿದ್ದವು. ಕುರುಡ ಅನ್ನೋದನ್ನ ಊಹಿಸ್ಲಿಕ್ಕೂ ಸಾಧ್ಯವಿಲ್ಲ. ಆದರೆ ವಾಸ್ತವದಲ್ಲಿ ಆತ ಕುರುಡನೇ ಆಗಿದ್ದ. ಕಣ್ಣಿನ ಗೊಂಬೆಗಳು ಗಾಢ ಕತ್ತಲೆಯಿಂದ ಒಂದು ಸಲ ಬೆಳಕನ್ನು ಕಾಣಬಹುದೇ ಅನ್ನೋ ಚಡಪಡಿಕೆಯಲ್ಲಿ ಕುಣಿಯುತ್ತಿದ್ದವು. ಮುಗ್ಧ ಮುಖ ಕಂಡು ಕರುಳು ಚುರುಕ್ ಎಂದಿತು. ಅವನ ಗ್ರಹಣ ಶಕ್ತಿಗೆ ಬೆರಗಾಗಿ ಕೇಳಿದೆ "ನಾನು ಇಲ್ ಕೂತಿದ್ದು ಅದ್ ಹೆಂಗ್ ಗೊತ್ತಾಯ್ತು ನಿಮ್ಗೆ?" . ಅದೇನು ದೊಡ್ಡ ವಿಷಯಾನೆ ಅಲ್ಲ ಅನ್ನೋ ಹಾಗೆ ಆತ, "ಗೊತ್ತಾಗತ್ತೆ" ಅಂತ ಮಗುವಿನಂತೆ ನಕ್ಕ, ಅವನ ನಗು ಹೇಗಿದ್ದೀತೆಂಬ ಕಲ್ಪನೆಯೂ ಇಲ್ಲದೆ.

No comments:

Post a Comment