Saturday 21 December 2013

ಯಾಕಿಷ್ಟು ಅವಸರ


                ಎಡೆಯಿಲ್ಲದೆ ಶ್ರಮಿಸುತ್ತಿದ್ದ, ಬಿಡುವಿಲ್ಲದೆ ಮೈಲಿಗಟ್ಟಲೆ ಕ್ರಮಿಸುತ್ತಿದ್ದ ನನ್ನ ಯೋಚನೆಗಳಿಗೆ ಹಾಕಿಕೊಂಡ ಪ್ರಶ್ನೆ ಇದು. ಹೆಜ್ಜೆ ಹೆಜ್ಜೆಗೂ ಲಜ್ಜೆಗೇಡಿ ಬುದ್ಧಿ ಲಾಭನಷ್ಟಗಳ ತರ್ಕದಲಿ ತೊಡಗಿ ಬದುಕಿನ ಮಾರುಕಟ್ಟೆಯಲ್ಲಿ ಸಮಯವನ್ನು ಇನ್ನಿಲ್ಲದಂತೆ ಅತಿ ಬೆಲೆಗೆ ಮಾರಿಕೊಳ್ಳಲು ಹವಣಿಸುತ್ತದೆ.

                ಆಗಾಗ ಮಿತಿಮೀರಿದ ವೇಗದ ಪಥಕ್ಕೊಂದು ಅಲ್ಪವಿರಾಮ ಹಾಕಿ, ಒಂದಷ್ಟು ಮೌನವನ್ನು ಬಾಚಿ, ನೆಟ್ಟ ನೋಟದಲಿ ನಮ್ಮ ಸುತ್ತ ದಿಟ್ಟಿಸಿದರೆ, ಯಾಂತ್ರಿಕ ಲೋಕದ ಆಚೆಗಿನ ಬದುಕು ತೆರೆದುಕೊಳ್ಳುತ್ತದೆ. ನಾವಾಡುತ್ತಿದ್ದ ಮನೆಯ ಜಗಲಿ ಮುದಿಯಾಗಿ ಪೇಲವವಾಗಿದೆ, ಅಮ್ಮನ ಮುಖದಲ್ಲಿ ಸುಕ್ಕು, ನಾವೆಷ್ಟು ವರ್ಷಗಳಾಯ್ತು ಅಮ್ಮನನ್ನು ಇಷ್ಟು ಹತ್ತಿರದಿಂದ ಸರಿಯಾಗಿ ನೋಡಿ ಎಂಬುದನ್ನು ಚುಚ್ಚಿ ಹೇಳುತ್ತದೆ, ಅಪ್ಪ ಈಗ ಬುದ್ಧಿ ಕಲಿಸುವ ಮೇಷ್ಟ್ರಂತೆ ಕಾಣದೆ, ಒಬ್ಬ ಒಳ್ಳೆ ಸ್ನೇಹಿತನಾಗಲು ಹವಣಿಸುವ ಭಾವ ಕಣ್ತುಂಬಿಸುತ್ತದೆ.

             ಸುತ್ತಲಿನ ಜಗತ್ತಿಗೆ ಅಂಟಿದ ಭಾವುಕತೆಯ ಸರಪಳಿಯ ಅನನ್ಯ ಕೊಂಡಿಯ ಭಾಗ ಈ ಬದುಕು. ಒಬ್ಬನೇ ಬದುಕುತ್ತೇನೆ ಯಾರ ಹಂಗಿಲ್ಲದೆ ಎಂಬ ಹಕ್ಕು ಯಾರಿಗೂ ಇಲ್ಲ ಇಲ್ಲಿ.

              ಒಂಚೂರು ಕಳೆದು ಹೋಗುವುದು ಆರೋಗ್ಯಕರವೇ. ಮಗುವ ನಗುವನ್ನು ಕಂಡಾಗ ಮಗುವಾಗುವ ಜೀವ, ಹಕ್ಕಿಯ ಹಾರಾಟದಲ್ಲೊಂದು ಸ್ವಾತಂತ್ರ್ಯದ ಅನುಭವ ಪಡೆಯುವ ಖುಷಿ, ಸಿಪಾಯಿಗಳಂತೆ ಗರ್ವತೋರಿ ನಡೆವ ಇರುವೆಯ ಸಾಲಿನ ಮಧ್ಯೆ ಬೆರಳಿಟ್ಟು ಚದುರಿಸುವ ತುಂಟ ಕ್ರೌರ್ಯ, ಮೊದಲೆಲ್ಲ ನೀರ ಒಳ ಹೊಕ್ಕು ರಾಡಿ ಮಾಡಿದ ಕೆರೆಯ ತಟದಲ್ಲಿ ಶಾಂತವಾಗಿ ಕೂತು ಸೂರ್ಯಾಸ್ತ ನೋಡುತ್ತಾ ಎಲ್ಲೋ ಮರೆತ ಹಾಡನ್ನು ಗುನುಗುವ ಹೊತ್ತು, ಎಲ್ಲೋ ಕೇಳಿದ ಗಂಟೆಯ ನಾದಕ್ಕೆ ಅರಿವಿಲ್ಲದಂತೆ ಮುಗಿಯುವ ಕೈ, ಎಷ್ಟೇ ಮುಂದುವರಿದ ಸಮಾಜದ ನಡುವಿದ್ದರೂ, ಸದಾ ಮನಸ್ಸನ್ನು ಹಸಿರಾಗಿ ಮಗುವಾಗಿಡುವ ಸ್ವರ್ಗ ಸಮಾನವಾದ  ಅಜ್ಜಿಮನೆ, ಆ ಪುಟ್ಟ ಗ್ರಾಮ, ಅದರ ಜೊತೆ ಬೆಸೆದ ಮುಗ್ಧ ನೆನಪು, ಇವಲ್ಲವೇ ಬದುಕನ್ನು ಪೂರ್ತಿಯಾಗಿಸಬಲ್ಲವು.
             
                 ಯಾಕೋ ಗೊತ್ತಿಲ್ಲ ಎಲ್ಲಿಂದ ಶುರುಮಾಡಿದರೂ ನನ್ನ ಬರವಣಿಗೆ ಅಜ್ಜಿ ಮನೆಯ ಹಿತ್ತಲನ್ನೊಮ್ಮೆ ಹಾದು ಹೋಗಿಯೇ ಹೋಗುತ್ತದೆ.
                 ಪ್ರತಿಯೊಬ್ಬನೂ ನಾಳಿನ ಖುಷಿಗಾಗಿ ಇಂದು ದುಡಿಯುತ್ತಾನೆ, ಮುನ್ನಡೆಯುತ್ತಾನೆ. ನಡೆಯುವ ಭರದಲ್ಲಿ ಇಂದಿನ ಪುಟ್ಟ ಖುಷಿಗಳು ಅವನ ಕಾಲಡಿ ಧೂಳಾಗಬಾರದು. ಪ್ರತಿ ಕ್ಷಣವನ್ನು ಅನುಭವಿಸಿ ಬದುಕ ಬಲ್ಲವ ನಿಜವಾದ ಕಲೆಗಾರ.

                 ಬೆಳದಿಂಗಳ ರಾತ್ರಿಯಲಿ, ತೆರೆದ ಬಾನಡಿ ಮಲಗಿ, ಚುಕ್ಕೆಗಳನ್ನೆಣಿಸಲು ಯಾವ ಸಾಧನೆಯ ಅಗತ್ಯ ಇಲ್ಲ ಅಥವಾ ಯಾರ ಅಪ್ಪಣೆಯೂ ಬೇಕಿಲ್ಲ.
                 ನಿಜವಾದ ಯಶಸ್ಸು ಹಣ, ಅಥವಾ  ಅಂತಸ್ತಿಂದ ಅಳೆಯುವಂತದಲ್ಲ.  ಸುಂದರವಾದ ಕ್ಷಣಗಳನ್ನು ಹುಟ್ಟು ಹಾಕುವ, ಇರುವುದನ್ನು ಅನುಭವಿಸಿ, ಹಂಚಿ ಹರಡುವ, ಮನಗಳ ನಡುವಿದ್ದು ಅಂತಹ ಬದುಕು ಕಟ್ಟುವುದೇ ಸಾರ್ಥಕತೆ

Saturday 23 November 2013

ನಕ್ಷತ್ರವಿರದ ಬಾನು

                                                                                

ಒಂದು ಮುಸ್ಸಂಜೆ ಹೊತ್ತು
ಮಂಜು ಹನಿಯುತ್ತಿತ್ತಾಗ
ನಕ್ಷತ್ರವನರಸಲು ಹೊರಗೆ ಬಂದೆ
ಆಗಸದಲಿ ಕಂಡುದು ಚಂದ್ರನೊಂದೇ

ಯಾವೂರ ಜಾತ್ರೆಯೊ ಆಕಾಶದಲ್ಲಿ
ಮತ್ತಾರದೋ ಮದುವೆ ಸಂಭ್ರಮದಲ್ಲಿ
ಯಾವ ನಕ್ಷತ್ರದ ಹುಟ್ಟು ಹಬ್ಬವೋ ಇಂದು
ಆಕಾಶ ತೊರೆದಿವರು ಹೊರಟುದೆಲ್ಲಿ

ಮಳೆಯಾಗ ನಿಂತಿತ್ತು, ಮಂಜೆಲ್ಲ ಕರಗಿತ್ತು
ತಾರೆ ತೋರಣವೊಂದು ಮಿನುಗುತ್ತಿತ್ತು
ಮೆಲ್ಲ ಜಾರುತಲೊಂದು ತಾರೆ
ಆಕಾಶದಿಂ ಭುವಿಗೆ ಜಾರಿ ಬಿತ್ತು

ಹಿರಿಯನೊಬ್ಬನನು ಅಗಲಿದ ನೋವಿಗೇನೋ
ಸುರಿಸಿದವು ಮತ್ತೆ ಅಶ್ರು ಪುಷ್ಪ
ಮನವಾಗ ಮುದುಡಿತು, ಮಳೆ ಮೈಯ ನೆನೆಸಿತು
ನೆನೆದು ನಕ್ಕಿತು ಮನ ವಿಧಿಯ ಕಲ್ಪ

Saturday 16 November 2013

ಬದುಕಿನ ಬಣ್ಣ

                                      
                                      


ಆ ಸುಂದರ ಕ್ಷಣಗಳವು
ದಿನಗಳವು ಮರಳಿ ಮತ್ತೆ ಬಾರದವು
ಅರಳಿದವು ಮನಗಳಿವು
ನೆನೆದು ಮಗುಗಳಾದವು

       ದಾರಿಯಲ್ಲಿ ಬಿದ್ದ ಹರಿದ
       ಮುರಿದ ಆಟಿಕೆಗಳ ಹೆಕ್ಕುತ್ತಿದ್ದ
      ದಿನಗಳವು ಕ್ಷಣಗಳವು
      ಮತ್ತೆ ಮರಳಿ ಬರದವು

ಅಪ್ಪ ತಂದ ಸೈಕಲನ್ನು ಅಣ್ಣ
ಮೆಲ್ಲ ಕಲಿಯುವಾಗ, ಹಿಡಿದು ಜಗ್ಗಿ
ತಳ್ಳಿ ಬಿದ್ದ ಮುದ್ದು
ಕ್ಷಣಗಳವು ದಿನಗಳವು

    ಅಣ್ಣ ಇಲ್ಲದಾಗ ಸದ್ದು
    ಆಗದಂತೆ ಕದ್ದು ನಾನೇ
    ಎದ್ದು ಬಿದ್ದು ಸೈಕಲ್ ಹೊಡೆದು
    ಹರುಷಗೊಂಡ ದಿನಗಳವು ಕ್ಷಣಗಳವು

ನನ್ನ ಅಣ್ಣ ನನ್ನ ಬದುಕ ಬಣ್ಣ
ಅವನ ಕಣ್ಣ ಮರೆಯಲೆನ್ನ
ಜೀವ ನಿಲ್ಲದು, ಕಾಣದಿರೆ
ಅವನ ಚಣ ಅಳುವು ಬರುವುದು

   ಮದುವೆಯಾದ ಮರುಗಳಿಗೆ,
   ಅವನ ತೊರೆಯೊ ಕ್ಷಣವದೆನ್ನ
   ಕಿತ್ತು ತಿಂದಿತು, ಸೈಕಲನ್ನು ತೋರಲೆನ್ನ
   ಹ್ರದಯ ನಕ್ಕಿತು,


Friday 27 September 2013

ಕಂಬನಿ

                                


          ತಟ್ಟನೆ ಕಣ್ಣ ಹನಿಯೊಂದು ಹೊರಳಿ
ದಿಂಬಿನಂತರಾಳವನು ಮುತ್ತಿಕ್ಕಿತು.
ಮತ್ತಿನಿತೂ ಯೋಚಿಸದೆ ಮರುಗಿ ಮರಳಿ
ಕಣ್ಣ ಕೊಳದಾಚೆಗೆ ಸಂಚರಿಸಿತು.


           ನಿನ್ನ ಋಣವಿದ್ದಿತೇನೋ ಈ ನೀರ ಹನಿಗೆ
ಕಾದಿತ್ತು ನೀ ಎನ್ನ ಅಳಿಸುವ ವರೆಗೆ
ತಲೆಯಿಟ್ಟು ಒರಗಲು ದಿಂಬಿನಾ ಎದೆಗೆ
ಕಾದಿತ್ತು ಕಣ್ಣೀರು ಹೊರಡಲು ಹೊರಗೆ


           ಕಣ್ಣಗಲಿದ ಹನಿಯು ಮರಳಿ ಎಂದು ಬರದು
ಎಂದು ನೆಲದಲಿದ್ದ ಬಿಂದುವೋ ಅದು
ಮರಳಿದೆ ಮತ್ತೆ ಮಣ್ಣ ಕುಲಕ್ಕಿಂದು
ಕಣ್ಣೀರು ಕರಗಿತು ಉಳಿದುದು ಕಲೆಯ ಬಿಂದು

Sunday 22 September 2013

ಮೋಡವದು ಕರಗಿ ಪ್ರೀತಿ ಹನಿಯಾದಾಗ

                      


       ಜಿನುಗುವ ತುಂತುರು ಹನಿಗಳಲಿ
          ಗೀತೆಯ ಗುನುಗುತ ಪ್ರೀತಿಯಲಿ
           ತೋಚಿದ ಸ್ವರಗಳ ಬಾಚುತಲಿ
                   ಪದ ಹುಡುಕಿದೆ ನಿನ್ನಾ ಕಣ್ಗಳಲಿ
                   
                    ಚುಕ್ಕಿಗಳಿಡದೆಯೆ ರಂಗೋಲಿ
               ಬಿಡಿಸುತ ನಿನ್ನಯ ಹೃದಯದಲಿ
          ಬಣ್ಣವ ತುಂಬುವ ತವಕದಲಿ
      ಕಾದಿಹೆ , ತುಸು ನಾಚಿಕೆ ಕಣ್ಣಲ್ಲಿ
     
      ಭೂಮಿಗೆ ಎರಗಲು ಮೊದಲ ಮಳೆ
         ಮಣ್ಣ ಸುಗಂಧದ ಚಂದ ಸೆಲೆ
                ನಾ ಇಳೆ , ನೀ ಮಳೆ, ಬಾ ಒಮ್ಮೆಲೆ
                    ಹೊಮ್ಮಿಸಿ ನನ್ನಲಿ ಹೊಸತು ಕಳೆ

                ಕೃಷ್ಣನ ಕೊಳಲಿನ ದನಿಯ ಪರಿ
               ಕಾಡಿಸಿ ನನ್ನನು ಕೂಗಿ ಕರಿ
          ಮಾತಲಿ ಒಲವಿನ ಮಧುವ ಸುರಿ
    ಜಗವೆಲ್ಲವನು ಮರೆಸಿ ಮರಿ

Sunday 15 September 2013

ಅವಳು

                                                      

                            

                                              
                 ಅವಳು ಹುಣ್ಣಿಮೆಯನ್ನು ಹೋಲುವುದಿಲ್ಲ, ಮಾಯಾಂಗನೆಯ ಮುಖವದಲ್ಲ, ಮಾತು ಮಾತಿಗೆ ಮುತ್ತುದುರುವಂತೆ ನಗುವ ಸುರಸುಂದರಿಯು ಅಲ್ಲ, ಅವಳ ಕಂಡು ಮಾರುಹೋಗಿ, ಸಿಗದೆ ಮರುಗುವರೇನೂ ಇಲ್ಲ. ಕವಿಗಳ ಕಲ್ಪನೆಯ ಹೆಣ್ಣಲ್ಲ, ಕುರಿತು ಬರೆದರು ಓದಿ ತಿಳಿಯಬಲ್ಲವಳಲ್ಲ.
                ಆಕೆ ಮುಗ್ಧೆ, ಹಾಗೆಂದು ಏನೂ ಅರಿಯದವಳಲ್ಲ. ಆಕಳೊಂದು ಕರುವನ್ನು ಹೆತ್ತಾಗ ಖುದ್ದಾಗಿ ಹೆರಿಗೆಯ ನೋವನ್ನನುಭವಿಸಿದವಳು, ಚಿಗುರುವ ಗುಲಾಬಿ ಗಿಡದಲ್ಲಿ ತನ್ನ ಬಾಲ್ಯ ಕಂಡವಳು, ಮನ ನೊಂದಾಗ ಬಿಕ್ಕಳಿಸದೆ ತೋಟದ ಬಾಳೆ ಮರವನ್ನು ದಿಟ್ಟಿಸಿದವಳು. ತುಳಸಿ ಗಿಡವನ್ನು ದೇವರೆಂದವಳು, ಬೀಜವೊಂದು ಮೊಳಕೆಯೊಡೆದಾಗ ಅದರಲ್ಲಿ ಜೀವಾಂಕುರದ ಭಾವ ಕಂಡು, ಅದನ್ನು ಬಿತ್ತಿ, ಜೀವವನ್ನೆರೆದವಳು, ಮುಂಜಾನೆಯೊಡನೆ ಅರಳುವಳು, ಮುಸ್ಸಂಜೆಯೊಡನೆ ಮುದುಡುವಳು.
               ಇಂಥ ಮನಸುಳ್ಳವಳು ಅಲ್ಲೆಲ್ಲೋ ಬೆಟ್ಟದಲ್ಲೋ, ಬಯಲಲ್ಲೋ, ಸುತ್ತ ಗುಡ್ಡದಲ್ಲೋ, ದಟ್ಟಡವಿಯಲ್ಲೋ ಕಳೆದು ಹೋದವಳಲ್ಲ. ನಮ್ಮೆಲ್ಲರ ಮಧ್ಯ ತನ್ನನ್ನೇ ಕಳೆದು ಕೊಂಡವಳು, ತನ್ನತನವ ಹುಡುಕುವ ಪ್ರಯತ್ನದಲ್ಲಿ ಸೋತವಳು.
               ಬರುವಾಗಲೇ ಬಂಧವನ್ನು ಜೊತೆಗೆ ತಂದವಳು, ಅಮ್ಮನಿಗೆ ಹಲವು ಸಲ ತಾಯಾಗುವಳು. ಕಂದಮ್ಮನ ಮಡಿಲಲ್ಲಿ ಮಗುವಂತೆ ಮಲಗುವಳು. ಸ್ವಚ್ಛ ಮನಸ್ಸಿನ ಇಚ್ಛೆ ಅರಿಯುವ ಬಾಳ ಸಂಗಾತಿ ಇವಳು.
               ಅದೆಂತಹುದೋ ನೋವು ಆ ಒಡಲಲ್ಲಿ, ದುಃಖವನೆಲ್ಲ ನುಂಗಿ, ತನ್ನವರಿಗಾಗಿ ನಗುವನ್ನು ಹೆರುವಳು. ಮತ್ತೆ ಮತ್ತೆ ಒತ್ತರಿಸಿ ಬಂದ ದುಃಖ ಅದುಮಿ ಸಂತೋಷದ ಮುಖವಾಡ ಧರಿಸುವಳು.

                ಪದಾರ್ಥಗಳ ಬೆಲೆ ಹೆಚ್ಚಾದಾಗ, ರಸ್ತೆಯಂಚಲ್ಲಿ ನಿಂತು ಸೆರಗು ಸಿಕ್ಕಿಸಿಕೊಂಡು ದೊಡ್ಡ ದನಿಯಲ್ಲಿ ಜಗಳ ತೆಗೆದ ಅವಳ ಕೋಪದ ಮುಖ ಕಂಡು, ಛೀ ಎಂದವರೇ ಹೆಚ್ಚು, ಅವಳಂತರಾಳ ಅರಿಯದೆ. ಇವರಿಗೇನು ಗೊತ್ತು ಆಕೆ ಕುಡುಕ ಗಂಡನನ್ನು ಸಹಿಸಿಕೊಂಡು, ಮೂರು ಮಕ್ಕಳ ಜವಾಬ್ದಾರಿ ಗಂಡಸಂತೆ ಹೊತ್ತವಳೆಂದು. ಆ ದನಿಯಲ್ಲಿನ ಮೌನದ ಭಾವ ಅರಿಯದೆ, ಅಪಾರ್ಥ ಮಾಡಿಕೊಳ್ಳುವವರೇ ಹೆಚ್ಚು. ಆ ಕಣ್ಣುಗಳು ಅರಸುತ್ತವೆ ಸಂತೈಸುವ ಮನವನ್ನು, ಕಣ್ಣೊರೆಸುವ ಕೈಗಳನ್ನು.

Monday 2 September 2013

ಇದು ಪ್ರೀತಿಯೋ, ಸ್ವಾರ್ಥವೋ??

                                      


              ಕೆಲವೊಮ್ಮೆ ಅನಿಸುವುದು, ಕಾಯುವ ಹೊತ್ತು, ನಮಗೆ ನಮ್ಮೊಂದಿಗಿರಲು ದೊರೆಯುವ ಅವಕಾಶವೆಂದು. ಆ ಅವಕಾಶ ಅನುಭವಕ್ಕೂ ಕಾರಣವಾಗಬಹುದು.
             ಅಂದೊಮ್ಮೆ, ರಸ್ತೆಯಂಚಲ್ಲಿ ಕೂತು, ನನ್ನ ಹೊತ್ತೊಯ್ಯುವ ಗಾಡಿಗಾಗಿ ಕಾಯುತ್ತಿದ್ದೆ. ಕಾಯುವುದು ಕಾದ ಕಬ್ಬಿಣದ ಮೇಲೆ ಕೂತಂತೆ ಅನಿಸುವ ನನ್ನಂತವಳಿಗೆ ಅಂದೇಕೋ ಹಾಗನಿಸಲಿಲ್ಲ. ಕಾಯುವುದು ಖುಷಿ ಎನಿಸುತ್ತಿತ್ತು. ಮುದ ನೀಡುತ್ತಿತ್ತು. ಕಾರಣವಿಷ್ಟೇ, ನಾ ಕೂತ ರಸ್ತೆಯಂಚಲ್ಲಿದ್ದ, ಹೂ ಮಾರುವವಳ ಮುದ್ದು ಕುರಿಮರಿಯ ಕರಾಮತ್ತು.
            ಅದರೊಡತಿಗೋ ಅದರೊಂದಿಗಿನ ಮಾತು ಕತೆಯೇ ಜೀವನವೇನೋ ಎನಿಸುವಷ್ಟು, ಅದರ ಮೇಲೆ ಮುದ್ದು, ಮತ್ತೊಂದಿಷ್ಟು ಹುಸಿ ಮುನಿಸು. ಒಮ್ಮೆ ಪ್ರೀತಿಯಿಂದ ತುತ್ತಿಡುವಳು, ಇನ್ನೊಮ್ಮೆ " ಇನ್ನೇನು ತಿನ್ಬೇಡ, ಬರೀ ತಿಂಡಿ ತಿನ್ದ್ಕೊಂಡೆ ಬದ್ಕು " ಎಂದು ಬೈಯುವಳು. ಒಟ್ಟಿನೊಳಗೆ ಆ ನೋಟ ಕಣ್ಣಿಗೆ ಹಬ್ಬ ಎನಿಸುವಷ್ಟು ಖುಷಿ ತಂದಿತ್ತು.
            ಅವಳೆದೆಯ ಪ್ರೀತಿಯನ್ನು ನನ್ನ ಮನ ಒಳಗೊಳಗೆ ಅಭಿಮಾನದಿಂದ ನೋಡಿ ನಲಿದಿತ್ತು. ಸುತ್ತಲಿನ ಪರಿವಿಲ್ಲದಂತೆ,  ಅವಳಾಡುತ್ತಿದ್ದ ಮಾತಿಗೆ ನಕ್ಕು ಸುಮ್ಮನಿರುತ್ತಿತ್ತು.
             ಅಡಿಕೆ ಮರದಾಕೃತಿಯ ದೇಹವೊಂದು ಬೀಡಿಯ ಹೊಗೆಯನ್ನು, ಬೀದಿಗೆ ಬಿಡುತ್ತಾ, ಗುಡಿಸಲೊಳಗಿಂದ  ಪ್ರತ್ಯಕ್ಷವಾಯಿತು. ಆಕೆಯ ಗಂಡನಿರಬಹುದೋ ಎಂದು ಊಹಿಸಿ, ಕುಳಿತೆ. ಕುರಿಮರಿ ಇದ್ಯಾವ "ಪರಿವಿರದೆ", "ಪರದೆಯಿರದ"("ಬಟ್ಟೆ ಇರದ"  ಎಂಬ ಅರ್ಥದಲ್ಲಿ ಬಳಸಿದ್ದೇನೆ.) ತನ್ನ ದೇಹವನ್ನು ಆಚೀಚೆ ಒಯ್ಯುತ್ತ, ಕಟ್ಟಿದ್ದ ಗೂಟಕ್ಕೆ ತನ್ನ "ಪರಿದಿಯೊಳಗೆ" ಪ್ರದಕ್ಷಿಣೆ ಹಾಕುತ್ತಿತ್ತು.
            ಹೊರ ಬಂದ ಯಜಮಾನ, ಬೀಡಿಯ ತುಂಡನ್ನು ಎಸೆಯಲು ಮನಸ್ಸಿಲ್ಲದೆ, ತನ್ನ ಕಿವಿಯ ಸಂದಿಯಲ್ಲಿ ತುರುಕಿಸಿಟ್ಟ. ಒಂದು ಕೈಯಲ್ಲಿ ಮಾಸಿದ ಲುಂಗಿಯ ತುದಿ, ಇನ್ನೊಂದು ಕೈಯಲ್ಲಿ ಕುರಿಮರಿಯ ಕುಣಿಕೆಯನ್ನು ಹಿಡಿದು, ನಡೆಯುತ್ತ ಹೊರಟ. ಆ ದೃಶ್ಯ ಕಂಡು, ಸಿರಿವಂತರ "ವಾಕಿಂಗ್" ಎಂಬ ಪದ ನೆನಪಿಗೆ ಬಂದು, ಒಳಗೊಳಗೆ ನಕ್ಕೆ.
            ಬಡವರ ಪ್ರೀತಿ ನನ್ನ ಮನ ತಣಿಸಿತ್ತು. ಗೌರವ ಭಾವ ಇನ್ನಷ್ಟು ಬಲಿಯಿತು. ಆತ್ಮೀಯತೆಯಿಂದ ಮನೆ ಒಡತಿಯನ್ನು ಮಾತಾಡಿಸುವ ಮನಸ್ಸಾಗಿ, ಏನೊಂದೂ ತೋಚದೆ ಮೊದಲ ಮಾತಿಗೆ ಪ್ರಶ್ನೆಯನ್ನೆಸೆಯುತ್ತ ಕೇಳಿದೆ. "ಅಮ್ಮ ಒಂದೇ ಒಂದು ಕುರಿಮರಿಯನ್ನೇಕೆ ಸಾಕಿದ್ದೀರಿ??" ಧ್ವನಿಯ ತುಂಬಾ ಆತ್ಮೀಯತೆಯ ನಗುವಿತ್ತು.
          ಉತ್ತರ ನನ್ನ ಕಲ್ಪನಾ ಲೋಕಕ್ಕೆ ಬೆಂಕಿ ಹಚ್ಚಿತ್ತು. " ಬರೋ ಜಾತ್ರೆಗೆ ಬಲಿ ಕೊಡೋಕೆ" ಎಂದಳಾಕೆ. ಮುಖದಲ್ಲಿನಿತು ನಗುವಿಲ್ಲದೆ. ಮತ್ತೊಮ್ಮೆ ಕಟುಕನ ಪ್ರೀತಿ ಕ್ರೌರ್ಯದಲ್ಲಿ ಕೊನೆಯಾದುದನ್ನು ಕಂಡು ಮನ ಭಾವವಿಲ್ಲದೆ ಬೆತ್ತಲಾಯಿತು. ಸುತ್ತೆಲ್ಲ ಕತ್ತಲಾಯಿತು...