Monday 11 August 2014

ಹಂಗು

ಬಿಚ್ಚಿಟ್ಟ ಓಲೆಗಳು,
ಕುಳಿತಲ್ಲೆ ಮಲಗಿವೆ
ಬಾಗಿಲಿಗೆ ಅಲೆದಲೆದು
ಗೆಜ್ಜೆಗಳು ಸೋತಿವೆ

ಕೆನ್ನೆಯ ಕೆಂಪಿಗೆ
ಕಣ್ಣ ಕಾಡಿಗೆ ಬೆರೆತು
ಅವ ಬರುವ ದಾರಿಗೆ
ಹೂವಾಗಿವೆ

ಮಾತು ಮೌನದ
ನಡುವೆ ತವಕದೇಣಿಯ ಹಾಕಿ
ಹೃದಯ ಬಡಿತವು ಏರಿ
ಇಳಿಯುತ್ತಿದೆ

ಪಾತ್ರದೊಟ್ಟಿಗೆ ಅತ್ತು
ನಗುವ ಪ್ರೇಕ್ಷಕನಂತೆ
ಹಳದಿ ಬಣ್ಣದ ಸೀರೆ
ಮಿಡುಕುತ್ತಿದೆ

ಮಲಗಿದ್ದ ಓಲೆಗಳು
ಮೈಮುರಿದು ನೋಡುತಿವೆ
ಅವಳಿಗೀಗೆಮ್ಮ
ಹಂಗಿಲ್ಲವೆ

ಹಂಗು ಇಹುದೇಕಿನ್ನು
ಅವನು ತಂದಿಹ ಓಲೆ
ಅವಳ ಮುಖ ಮುದ್ರಿಕೆಯ
ಸಿಂಗರಿಸಿವೆ

ಭಾವ ಅರ್ಥ ಆಗದೇ ಇದ್ದ ಪಕ್ಷದಲ್ಲಿ ಕೆಳಗಿನ ಸಾರಾಂಶ ಓದಿ :p

ಸಾರಾಂಶ
ಅವಳನ್ನು ಸಿಂಗರಿಸಬೇಕಾದ ಓಲೆ, ಯಾರದೋ ದಾರಿ ಕಾದು ಸಾಕಾಗಿ ನಿದ್ದೆ ಹೋಗಿದೆ, ಕಾಲಿನ ಗೆಜ್ಜೆ ಅವ ಬಂದನೋ ಎಂದು ಬಾಗಿಲಿಗು ಒಳಗೂ ಸುತ್ತಿ ಸುಸ್ತಾಗಿದೆ
ಅವನು ಬರದೇ ಇದ್ದುದು ನೋಡಿ ಈಕೆ ಕೊಂಚ ಅತ್ತಿರಬಹುದೇನೊ, ಆಗಲೆ ಕೆನ್ನೆಯ ಬಣ್ಣಕ್ಕು ಕಣ್ಣ ಕಾಡಿಗೆಗು ಸಂಧಾನವಾಗಿ, ಆ ಹನಿಯೊಂದೊಂದೂ ಅವನ ಹಾದಿಗೆ ಹೂವಾಗಿದೆ
ಚಡಪಡಿಕೆ ಹೆಚ್ಚಾಗಿದೆ
ಅವಳ ಸೀರೆ, ಅವಳ ಓಡಾಟಕ್ಕೆ ತಕ್ಕಂತೆ ಮುದುರುತ್ತಿದ್ದೆ, ನಲಿಯುತ್ತಿದೆ.
ಆಗ ಒಮ್ಮೆಲೆ ಮೈಮುರಿದು ಎಚ್ಚೆತ್ತ ಓಲೆಗಳು, ನಿತ್ತು ನೋಡುತ್ತವೆ, ಆಕೆಗೆ ಇವುಗಳ ಹಂಗೇ ಇಲ್ಲದಂತಿದ್ದಾಳೆ. ಅವನು ಬಂದಿದ್ದಾನೆ, ಬಂದವನು ಹೊಸದೊಂದು ಓಲೆಯನ್ನು ಉಡುಗೊರೆಯಾಗಿ ತಂದಿದ್ದಾನೆ. ಇನ್ನು ಅವಳಿಗೇಕೆ ಆ ಮಲಗಿರುವ ಓಲೆಗಳ ಹಂಗು??