Wednesday 12 August 2015

ಅವಳೊಳಗಿನ ನಾನು

ಆಕೆ ಗರ್ಭಿಣಿ. ಇನ್ನೇನು ದಿನ ತುಂಬುವುದರಲ್ಲಿತ್ತು. ನೀರು ನಿಂತಾಗಿನಿಂದ ಪಟ್ಟ ಕಷ್ಟ, ವಾಂತಿ, ಎಲ್ಲಾ ನಗಣ್ಯ ಅವಳಿಗೆ. ಕನ್ನಡಿ ಎದುರು ನಿಂತಾಗೆಲ್ಲಾ ವಿಕಾರವಾಗಿ ಕಾಣುತ್ತಿದ್ದ ದೇಹ, ದುಃಖ ತರುವ ಬದಲು ಅವಳ ಮುಖದಲ್ಲೊಂದು ನಗುವ ಗೆರೆಯನ್ನು ಬರೆಯುತ್ತಿತ್ತು.  ಒಳಗೆ ಪೋರ ಒದ್ದಾಗಲೆಲ್ಲಾ ಕಚಗುಳಿಯಿಟ್ಟ ಅನುಭವ.  ತನ್ನವನನ್ನು ಮತ್ತೆ ಮತ್ತೆ ಕರೆದು ಮಗುವ ಎದೆ ಬಡಿತವನ್ನು ಕೇಳಿಸುವ ತುಡಿತ.  ಒಂದೊಂದು ಹಣ್ಣು ತಿನ್ನುವಾಗಲೂ, ಹಣ್ಣಿನ ಬಣ್ಣವನ್ನು ತನ್ನ ಮಗುವಿನ ಕೆನ್ನೆಯ ಬಣ್ಣಕ್ಕೆ ಆರೋಪಿಸಿ ನಗುತ್ತಿತ್ತು ಜೀವ".
ಆದರೆ ವಿಜೃಂಭಿಸುವ ಉಸಿರನ್ನು, ಅನಂತ ತವಕದ ಮಧ್ಯೆ ನಾ ಹೇಗೆ ನುಸುಳಿದೆನೊ, ಒಳ ಸುಳಿದೆನೊ ಗೊತ್ತಿಲ್ಲ.  ಒಂದೇ ಸರ್ತಿಗೆ ಎಲ್ಲ ಅದಲು ಬದಲು.
ಅವಳೆಂದೂ ನನ್ನನ್ನು ಬಯಸಿ ಬಂದವಳಲ್ಲ, ಹತ್ತಿರವೂ ಸುಳಿದವಳಲ್ಲ. ಮಾತಾಡಿಸಿ ಮುದ್ದಾಡಿಯೂ ಇಲ್ಲನನ್ನ ಪರಿವೂ ಅವಳಿಗಿಲ್ಲದಂತೆ ಇದ್ದವಳು. ಅವಳೇ ನನ್ನ ಬಳಿ ಬಂದಳೋ, ಇಲ್ಲ ನಾನೆ ಅವಳ ಬಳಿ ಹೋದೆನೊ, ಒಟ್ಟಿನಲ್ಲಿ ನಮ್ಮಿಬ್ಬರ ದೇಹ ಒಂದಾಗಿದ್ದವು.  ನಾನು ಅವಳೊಳಗಿನವನೇ ಎನ್ನುವಷ್ಟು ಅವಳೊಳಗೆ ಬೆರೆತಿದ್ದೆ, ಅವಳೊಳಗಿರುವ ಇನ್ನೊಂದು ಜೀವವನ್ನೂ ಲೆಕ್ಕಿಸದೆ. ಈಗ ಆಕೆ ಮಗುವನ್ನೇನೋ ಹೆತ್ತಳು. ಆದರೆ ಬಾಣಂತಿಯ ಕಳೆಯಿರಲಿಲ್ಲ. ಒಣಗಿದ ಕಣ್ಣಲ್ಲಿ ಇದ್ದ ತುಸು ನೀರೂ ಬತ್ತಿದೆ. ಅದಕ್ಕೂ ಬೇಜಾರುಎಷ್ಟು ದಿನ ಜೊತೆ ನೀಡೀತು. ಗಂಡನಿಗೆ ಹೆಂಡತಿಯೀಗ ಕುರೂಪಿ, ಹತ್ತಿರ ಬರಲಾರದಷ್ಟು ಕ್ಷುಲ್ಲಕಳು. ಆದರೂ ಅವಳ ತಪ್ಪೇನಿತ್ತು ಇದರಲ್ಲಿ. ಅವಳನ್ನು ಬಯಸಿ ಹೋದವನು ನಾನಲ್ಲವೇ. "ಯಾರದೋ ತಪ್ಪಿಗೆ ಯಾರಿಗೋ ಯಾತನೆ".
ಅವಳ ಎದೆ ಹಾಲು ಮಗುವಿಗೆ ಕುಡಿಸದಂತೆ ಸಂಪೂರ್ಣ ನಿಷೇಧ. ಕಣ್ಣೆದುರಿಗೆ ಕಣ್ಣೂದಿಸಿಕೊಂಡು ಅಳುವ ಮಗುವಿಗೆ, ಎದೆಯಲ್ಲಿ ಒತ್ತರಿಸುವ ಪ್ರೀತಿಯನ್ನುಣಿಸದೆ, ಬಾಟಲಿಯ ಚೂರನ್ನು ತುರುಕಿದರೆ ತಡೆದೀತೆ ಜೀವ?
ಇನ್ನೆಷ್ಟು ದಿನ ಕಳೆದೀತು ಹಂಗಿನರಮನೆಯಲ್ಲಿ. ತವರಿಂದ ತಂದಿದ್ದ ಒಡವೆಗಳೆಲ್ಲ ಖರ್ಚಿಗೇ ಆಯಿತು.  ಉಳಿದದ್ದೊಂದು ಬಟ್ಟೆಯ ಗಂಟು.  ಮೊದಲೆಲ್ಲಾ ಎರಡೇ ಹೆಜ್ಜೆ ದೂರ ಅನಿಸುತ್ತಿದ್ದ ತವರಿನ ದಾರಿ ಈಗ ಮಾರು ದೂರ. ನಡೆಯುವ ಹೆಜ್ಜೆ ಸೋತಿದೆ. ಅವಳು ಅವಳಾಗಿಯೆ ಸೋತಳೆ. ಅಥವಾ ನನ್ನ ಇರುವಿಕೆ ಅವಳನ್ನು ಸೋಲಿಸಿತೆ? ಆಕೆ ಸೋಲುವುದನ್ನು ನೋಡಲಾಗುತ್ತಿಲ್ಲ. ಆದರೂ ಅವಳನ್ನು ಬಿಡಲಾಗುತ್ತಿಲ್ಲ. ಬಣ್ಣದ ಬಟ್ಟೆಯೊಂದನ್ನು ಆಕೆ ತಲೆಗೆ ದಿನವೆಲ್ಲ ಕಟ್ಟಿ ತಿರುಗುವುದು, ಬಾಣಂತನದ  ಸಂಭ್ರಮದ ಮೆರವಣಿಗೆಗಲ್ಲ, ಬದಲಿಗೆ ಬೋಳು ತಲೆಯನ್ನು ಅಪಹಾಸ್ಯದ ನಗುವಿಗೆ ಬಲಿಯಾಗದಂತೆ ಮುಚ್ಚಲು.
ಆಕೆಯ ಕಣ್ಣೀರಿನ ಕಾರಣ ನಾನು. ನಾನೊಬ್ಬ ಕೊಲೆಗಡುಕ. ಬೆಟ್ಟದಷ್ಟು ಕರುಣೆ ಕಣ್ಣಲ್ಲಿದ್ದರೂ ಕರ್ತವ್ಯಕ್ಕೆ ಕಟ್ಟುಬಿದ್ದ ಕಂದಾಚಾರಿ. ನಾನೊಬ್ಬ ಸಿಗರೇಟಿನಿಂದ ಹೊರಬಂದ ತ್ಯಾಜ್ಯ, ಹೊಗೆಯೆಂಬ ದುಷ್ಟ, ನತದ್ರಷ್ಟ. ನಾನಿದ್ದ ಹಾದಿಯನ್ನು ಹಾದದ್ದಷ್ಟೆ ಆಕೆ ಮಾಡಿದ್ದ ತಪ್ಪು. ಚಟ ಹಿಡಿದವನ ಖುಶಿಯ ಔತಣದ ಎಂಜಲೆಲೆಯಾಯ್ತು ಅವಳ ಬದುಕು.
ನಿಧಾನವಾಗಿ ನಾನವಳನ್ನು ಆವರಿಸಿದೆ. ಆಕೆಗೆ ಇದ್ದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ನನ್ನ ಸಾಮರ್ಥ್ಯದ ಎದುರು  ಚೂರು ಚೂರೆ ಹೋರಾಡಿದೊಡ್ಡ ಮಟ್ಟದಲ್ಲಿ ಸೋತಳು. ಆಕೆ ಆಗಲೆ ಕ್ಯಾನ್ಸರ್ ಗೆ ತುತ್ತಾದಳು. ಮುಂದೊಂದು ದಿನ ಅವಳು, ಅವಳೊಳಗಿನ ನಾನು ಜೊತೆಯಲ್ಲೇ ಮಣ್ಣಾದೆವು, ಅವಳ ಒಡಲ ಮಗುವಿನ ಮುಖವನ್ನೂ ನೋಡದೆ

ಪ್ರೀತಿ ಇಲ್ಲದ ಮೇಲೆ

ಒಲ್ಲದ ಮನಸ ಒಲಿಸುವುದೆಂತು
ಕಲಕಿದ ಉದಕವ ಕುಡಿಯುವುದೆಂತು
ಕಲ್ಲಿನ ಮೇಲೆ ಮಳೆ ಸುರಿದಂತೆ
ಇಲ್ಲದ ಪ್ರೀತಿಯಲಿದೆ ಬರಿ ಕೊರತೆ

ಪ್ರೀತಿ ಇಲ್ಲದ ಮೇಲೆ
ಮಳೆಯದು ಭುವಿಯನು ಅಪ್ಪುವುದೆಂತು
ಹುಲ್ಲದು ಹುಲ್ಲೆಯ ತಣಿಸುವುದೆಂತು
ಕಾಮನ ಬಿಲ್ಲಲಿ ಸೇರಿದ ಬಣ್ಣವು
ನೋಡುವ ಕಣ್ಣನು ಕುಣಿಸುವುದೆಂತು

ಪ್ರೀತಿಯೆ ಇಲ್ಲದ ಮೇಲೆ
ಬೆಳಕನು ಬೀರುವ ಕಿರಣದ ಕಂತೆ
ಗಾಳಿಗೆ ಒಯ್ಯಲು ಬೇಸರವಂತೆ
ಮಧುವನು ಹೊತ್ತಿಹ ಸುಮಗಳ ಸಂತೆ
ದುಂಬಿಯ ದೂರಕೆ ತಳ್ಳುವ ಚಿಂತೆ

ಆದರೂ ಪ್ರೀತಿಯಿಲ್ಲದ ಮೇಲೆ
ಹುಡುಕದಿರು ಒಲವಿರದ ಮನದಲ್ಲಿ ಮಮತೆ
ಅಳಿಸಿಬಿಡು ನೀ ಅತ್ತು ಬರೆದ ಕವಿತೆ
ಹೊರಡುತಿರು ಕಾಲ ಕರೆದೆಡೆಗೆ ತೊರೆದೆಲ್ಲ ಜಡತೆ

ಹಿಂತಿರುಗಿ ನೋಡದಿರು ಪ್ರೀತಿಸುವೆ ಮತ್ತೆ

ಕುವೆಂಪು

ಜಗದ ಜವನಿಕೆ ಸರಿಸಿ                  (ಜವನಿಕೆ = ಪರದೆ)
ಮಲೆಗೆ ಮೈಯಾನಿಸಿ                   (ಆನಿಸಿ = ಒರಗಿ)
ನವ ಉದಯದೊಳಾಡುವನ
ಬಾಲಲೀಲೆ

ಪದ ಪದಕೂ ಪದಕಟ್ಟಿ
ಪದದೆದೆಯ ಕದ ತಟ್ಟಿ
ಭಾವವನು ಬಸಿದವನ
ಭಾಷ್ಯಮಾಲೆ

ನವಿಲುಕಲ್ಲಲಿ ಕಂಡ           (ನವಿಲುಕಲ್ಲು = ಕುಪ್ಪಳ್ಳಿಯ ಒಂದು ಸ್ಥಳ)                  
ಸೂರ್ಯರಶ್ಮಿಯ ಹಿಂಡ
ಕಾವ್ಯದಲೆ ಮುತ್ತಿಟ್ಟ
ರಾಸಲೀಲೆ

ಕಪ್ಪಿಟ್ಟ ಮೋಡ ಬರಿ
ಕಾನನದ ಕಾಡ ಝರಿ
ಬಿದ್ದಿದ್ದ ನವಿಲು ಗರಿ
ಇವನ ಶಾಲೆ

ಇವನ ಭಾಗ್ಯವ ಅರಿತ
ಮೂರು ಮುಖದವ ಬೆವತ
ಸೋತು ಸತಿಯಲಿ ಪೇಳ್ದ
ಸಮರವೊಲ್ಲೆ

ರಸ ಋಷಿಯ ಧ್ಯಾನದಾ
ನೀರವತೆ ಸಂಧಿಸಿತು
ಅವನ ಕಂಠೀರವದ
ನಾದಲೀಲೆ

ಕವಿಶೈಲದಲಿ ಕುಳಿತು
ರವಿಯನೋದುತಲಂದು
ಕವಿಯಾದ ಮನುಜನಿವ
ವಿಶ್ವಪಥಿಕ…

ಕಾಲದ ಕರೆ

ಹಗಲು ರಾತ್ರಿಗಳಲ್ಲಿ
ನಿದ್ರೆ ಕಳೆದೆಚ್ಚೆತ್ತ ಮನ
ಮತ್ತೆ ನಿದ್ರೆಯನು ಬಯಸುತಿಹುದು

ಏನಾಗಬೇಕೆಂಬ ಬಯಕೆ
ಚಿಗುರುವ ಮೊದಲೆ
ಹೊದಿಕೆಯಡಿಯಲಿ ಹೇಡಿ ಗೊರೆಯುತಿಹುದು

ಸುಖ ಸ್ವಪ್ನಗಳಾಚೆಯಲಿ
ಬದುಕ ಬಯಸದ ಬದುಕು
ಸ್ಫೂರ್ತಿಯನು ಸವತಿಯೆಂದೆಣಿಸುತಿಹುದು

ಚೂರು ಬೆಳಕಲ್ಲಿಯು ತುಂಬ
ನೋಯುವ ಕಣ್ಣು
ನೆರಳಲ್ಲು ಕರಿಗಾಜು ಬೇಡುತಿಹುದು

ನಿಮಿಷ ಗಳಿಗೆಯ ಹಿಂದೆ
ಗಂಟೆ ನಿಮಿಷದ ಹಿಂದೆ
ಮೈಕೊಡವಿ ನಿಲದಂತೆ ನಡೆಯುತಿಹುದು

ಮನವೆ ನೀ ಸಹಕರಿಸಿ
ನಿದಿರೆಯನು ಸಂಹರಿಸಿ

ಕಣ್ಗಳಿಗೆ ಲಂಚವನು ಕೊಡಲುಬಹುದೆ?

ಅವಳ ನೋವು ನನ್ನ ಹಾಡು

ಬಣ್ಣ ಕಳಚಿದ ತನ್ನ
ಬದುಕ ಕತ್ತಲೆಯಲ್ಲೆ
ಕುಂಚವನದ್ದಿ
ನಿರ್ಜೀವ ಬೊಂಬೆಗೆ
ಬಣ್ಣ ಹಚ್ಚುತಿದ್ದಳು
ಕೊಂಡು ಹೋಗುವವನ
ನಿರ್ಜೀವ ನೋಟು ಇವಳ
ಬಾಳ ಕತ್ತಲೆಯ ಕೊಂಚ
ಓಡಿಸೀತೆ?
ಈಕೆ ಅಶೋಕ ವನದ ಸೀತೆಯಂತೆ
ಅವಳ ಜೀವ ರಾಮನಲ್ಲಿತ್ತು
ಇವಳ ಜೀವ ಕಣ್ಣೀರಿನಂತೆ ಮೆಲ್ಲ ಜಾರಿ
ಬೊಂಬೆಯ ಕಾಲಡಿ ಬಿತ್ತು
ಒಂದರೊತ್ತಿಗೊಂದು ಪಶುಗಳಂತೆ
ಭೂಮಿಗೆ ಬಿದ್ದ ಮಕ್ಕಳು ಮಗ್ಗುಲಲ್ಲಿ
ಹುಟ್ಟಿದ ತಾರೀಖಿನ ಲೆಕ್ಕವಿಲ್ಲ ತಾಯಿಗೆ
ಸರ್ಕಾರದಲ್ಲಿ ದಾಖಲೆಯಿಲ್ಲ
ಇವುಗಳ ಹುಟ್ಟಿಗೆ
ಅನ್ನವೊ ಮಣ್ಣೊ ಮಕ್ಕಳ
ಹೊಟ್ಟೆ ಸೇರಿದುದೇನೆಂಬುದು ಗೊತ್ತಿಲ್ಲ
ಬೊಂಬೆಯ ಮುಟ್ಟುವಾಗೊಮ್ಮೆ
ಕೈ ತೊಳೆಯುವುದನೊಂದು ಮರೆತಿಲ್ಲ
ಮಣ್ಣಿನ ಬೊಂಬೆಯಂದ ಅವಳ ಮಾಸಿದ
ಮೂಗುತಿಯನು ಅಣಕಿಸುತಿದೆ
ಅದರ ವಾರಸುದಾರ ಬರುವನೋ ಇಲ್ಲವೊ
ಅದೂ ತಿಳಿದಿಲ್ಲ.
ಬರುವವರೆಗು ಅವರಿಬ್ಬರದು ಸೀತೆಯ ಪಾಡೆ
ಬೊಂಬೆಯ ವಾರಸುದಾರನೆನ್ನಿ ಇಲ್ಲ ಅವಳ ಮೂಗುತಿಯದು
ಎರಡರದು ಒಂದೆ ಹಾಡೆ
ಬರೆದ ಬ್ರಹ್ಮನಿಗೆ ಕನಿಕರವಿಲ್ಲ

ಅರೆರೆ ಬೊಂಬೆಯನು ಹಿಡಿವ ಕೈ ಬದಲಾಯಿತು
ಮಗುವಿನ ಗಂಜಿಗೊಂದಿಷ್ಟು ಕಾಸಾಯಿತು.
ಆದರೆ ಮೂಗುತಿಯ ಗತಿ?

ಅದಿನ್ನೂ ಕಾಯುತಿದೆ ಅವಳವನಿಗಾಗಿ

ಮೋಡದ ಮುನಿಸು

ಉಸಿರುಗಟ್ಟಿ ಮುನಿಸಿಟ್ಟು ಕೊಂಡ ಮೋಡದ
ಮುಖ ಕಪ್ಪುಕಟ್ಟಿತ್ತು
ಗಮನಿಸಿದವರಾರಿಲ್ಲವೇನೊ ಪ್ರೀತಿ ತೋರಿ,
ಬಿಕ್ಕಿ ಅತ್ತೇ ಬಿಟ್ಟಿತು.

ಅಣ್ಣನ ಮೋಡದ ಮಳೆಹನಿಯೊಂದು ತನಗೇ ಬೇಕೆಂದು
ಬೆಳಿಗಿನಿಂದ ಹಟ ಹಿಡಿದಿತ್ತು,
ಓಡಿ ಹೋಗಿ ಕಸಿದುಕೊಳ್ಳಲೊಮ್ಮೆ ಅವನ ತಲೆಗಿವನ 
ತಲೆ ತಾಗಿ ಗುಡುಗಿತ್ತು

ಅಗಲದಾಕಾಶದ ಮೂಲೆಯೊಂದನು ಸೇರಿ
ಬರಿ ಅತ್ತದ್ದೆ ಆಯ್ತು,
ಅಣ್ಣ ಕೊಡಲಿಲ್ಲ ತಮ್ಮ ಬಿಡಲಿಲ್ಲ ಮುನಿಸಿಗೆ
ಬಣ್ಣ ಬದಲಾಯ್ತು

ತಮ್ಮ ಅತ್ತಿದ್ದಕ್ಕೆ ಸಣ್ಣ ಆ ಮುದ್ದು ಹನಿ 
ಅಣ್ಣನ ಕಣ್ಣಿಂದ ಬಿತ್ತು
ಇದ ಕಂಡು ಆಣ್ಣನಲಿಹ ಮತ್ತೊಂದು ಹನಿ ಅದನು
ಹಿಡಿಯಲು ಹೋಯ್ತು

ಇಬ್ಬರನು ಅಗಲಿದ ಮುದ್ದು ಹನಿಗಳು
ಕಡಲ ಪಾಲಾಯ್ತು
ಮೋಡಗಳಿಗೀಗ ನಗು ಉಕ್ಕಿ ಬಂತು
ಮತ್ತೆ ಬಣ್ಣ ಬದಲಾಯ್ತು

Tuesday 11 August 2015

ಕಂಡಿದ್ದು , ಕೇಳಿದ್ದು, ಅನಿಸಿದ್ದು

ಸ್ನೇಹಿತರೆ,

ಬೆಂಗಳೂರಿನಲ್ಲಿ ಸಂಬಂಧಗಳನ್ನು, ಸಂವೇದನೆಯನ್ನು ಹುಡುಕುವ ದಾರಿ ಸುಲಭವಲ್ಲ. ಅಲ್ಲಿ ನಿರಾಸೆಯೆ ಹೆಚ್ಚು. ಯಾರಿಗೂ ಇನ್ನೊಬ್ಬರಿಗೆ ಕೊಡಲು ಹೆಚ್ಚು ಸಮಯವಿಲ್ಲ. ಎಲ್ಲರದೂ, ಮರೀಚಿಕೆಯ ಹಿಂದಿನ ನಾಗಾಲೋಟವೆ.  ಸಂಬಂಧಗಳೆಲ್ಲ ಉಪಯೋಗಿಸಿ ಬಿಸಾಡುವ ಶ್ಯಾಂಪೂ ಬಾಟಲಿಯಂತೋ, ಕವರು ಬಿಚ್ಚಿ ಮೈ ಉಜ್ಜಿಕೊಂಡ ಸೋಪು, ವಾರ ೨ ವಾರದೊಳಗೆ ಮುಲಾಜಿಲ್ಲದೆ, ತಾನಿರಲೇ ಇಲ್ಲವೋ ಎಂಬಂತೆ ಕರಗಿ ಹೋಗುವಂತವೇ.
ಮೊದಲಿನ ಕಾಲದಲ್ಲಿ ಸಂಬಂಧಗಳ ಸ್ಟೇಟಸ್ ಹೇಗಿತ್ತೆಂದು ನನಗೆ ಹೇಳಲು ಬರುವುದಿಲ್ಲ. ಆಗ ನಾನಿರಲಿಲ್ಲ. ಹಿಂದಿನ ಜನ್ಮದ ಕನಸೂ ಬಿದ್ದ ನೆನಪಿಲ್ಲ.  ಕಾರಂತರೋ, ಕುವೆಂಪು ಅವರದ್ದೊ ಕಾದಂಬರಿಗಳನ್ನು ಓದಿಕೊಂಡು ಹೀಗಿದ್ದಿರಬಹುದೆಂದು ಊಹಿಸಬಹುದಷ್ಟೆ. ಮತ್ತು ಎಲ್ಲಾ ಕಾಲದ ಹಿರಿಯರು ಅವರ ಮೊಮ್ಮಕ್ಕಳಿಗೆ ಹೇಳುವ "ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪ" ಎಂಬ ಹಸಿ ಸುಳ್ಳನ್ನು ಕೇಳಿ, ಪರಿಸ್ಥಿತಿ ಇನ್ನೂ ಚಂದವಾಗಿಯೋ, ಇನ್ನೂ ದರಿದ್ರವಾಗಿಯೋ ಇದ್ದಿರಬೇಕೆಂದು ಅಜ್ಜಿಗೆ ಕಾಣದಂತೆ ಒಮ್ಮೆ ನಕ್ಕು ಬಿಡಬೇಕು.
ಸಂಬಂಧಗಳೆಲ್ಲಾ ಇರುವವರದು ಈ ಹಾಡಾದರೆ, ಸಂಬಂಧಗಳೇನೆಂಬುದೇ ಗೊತ್ತಿಲ್ಲದ ಬೀದಿ ಬದಿಯ ಮಕ್ಕಳದು ಇನ್ಯಾವುದೋ ಪಾಡು. ನಾನು ಕೆಲವರನ್ನು ಮಾತಾಡಿಸಿ ಕಂಡಿದ್ದೇನೆ. ಹಲವರು ಅಂತರ್ಮುಖಿಗಳಾಗಿರುತ್ತಾರೆ. ಇನ್ನು ಕೆಲವು ಮಕ್ಕಳು ತುಂಬಾ ಒರಟರು. ಇನ್ನು ಕೆಲವರು, ಪೆನ್ನೊ ಮ್ಯಾಜಿಕ್ ಪುಸ್ತಕ ಗಳನ್ನು ಮಾರುತ್ತಾ, ಅಣ್ಣಾ ಅಕ್ಕಾ ಎಂದು ಬಾಯಿಯೆದುರು ಕೈಯಿಟ್ಟು  ತುತ್ತನ್ನು ತೋರಿಸುತ್ತಾ, ಕಳೆ ಕಳೆದುಕೊಂಡ ಕಣ್ಣಿನಿಂದ ಒಂದು ಅನಾಥ ದೃಷ್ಟಿ ಬೀರುತ್ತಾರೆ. ನಾವುಗಳು ಒಂದೊ ಅವರ ಮುಖ ತಿರುಗಿ ನೋಡದೆ, ಸುತ್ತ ಯಾರೂ ಇಲ್ಲ ಎಂಬಂತೆ ಇದ್ದು ಬಿಡುತ್ತೇವೆ, ಇಲ್ಲಾ ನಾವು ಒಂದು ಒಳ್ಳೆಯ ಬದುಕನ್ನು ಬದುಕುತ್ತಿದ್ದೇವೆ, ಈ ಮಕ್ಕಳದು ಯಾವ ಜನ್ಮದ ಪಾಪವೋ ಛೇ!! ಎಂದು ಅವರ ಅವಸ್ಥೆ ನೋಡಲಾಗದೆ ಏನೂ ಮಾಡಲೂ ಆಗದೆ ಹಲ್ಲಿಯಂತೆ ಲೊಚಗುಟ್ಟುತ್ತೇವೆ.

ಇಷ್ಟೆಲ್ಲಾ ತಕರಾರುಗಳ ವೈರುಧ್ಯಗಳು ಬದುಕಲ್ಲಿ ಇದ್ದಾಗಿಯೂ ಬದುಕನ್ನು ನಂಬಲು ಕಲಿಸುವುದು ಯಾವುದು ಗೊತ್ತಾ? ನಾನು ೧೦ ರುಪಾಯಿಯ ಬೆಲೆಯ ಒಂದು ಪೆನ್ನಿಗೆ ಅಗತ್ಯವಿಲ್ಲದಿದ್ದರೂ , ಬದುಕಿನ ನೈಜ ಬಣ್ಣವನ್ನೇ ಕಳೆದುಕೊಂಡ ಮಾಸಲು ತಲೆಯ ಹುಡುಗನಿಗೆ ಏನೋ ದೊಡ್ಡ ಸಹಾಯ ಮಾಡುವವಳಂತೆ ಒಂದೇ ಪೆನ್ ಕೊಂಡು ೨೦ ರೂಪಾಯಿ ಕೊಟ್ಟು ಇಟ್ಟುಕೋ, ಅಡ್ಡಿಲ್ಲ ಅಂದಾಗ, ಅಪ್ಪ ಅಮ್ಮನ ಮುಖ ಕಾಣದ ಆ ಹುಡುಗ ಇಲ್ಲ ಬೇಡ ಇನ್ನೊಂದು ಪೆನ್ ತಗೊಳಿ ಎಂದು ಎಷ್ಟು ಹೇಳಿದರೂ ಕೇಳದೆ ನನ್ನ ಕೈಗೆ ಇನ್ನೊಂದು ಪೆನ್ ತೂರಿ ಧೀಮಂತವಾಗಿ ಮುಂದೆ ನಡೆದಾಗ!! ಅವನಿಗೆ ಈ ಸೌಜನ್ಯ ಯಾರು ಹೇಳಿ ಕೊಟ್ಟರು ಎಂದು ಅಚ್ಚರಿ ಪಡುವ ಸರದಿ ನನ್ನದು.   ನಮ್ಮ ಗರ್ವ ಇಳಿಯುವುದು ಯಾವಾಗ ಗೊತ್ತಾ? ಗಣಪತಿ ದೇವಸ್ಥಾನದೆದುರು ಪಾತ್ರೆ ತೊಳೆಯುವ ೭೦ ಹರೆಯದವಳನ್ನು ಕಂಡು ಉಪಯೋಗವಾಗುವುದಾದರೆ ಇಟ್ಟುಕೊಳ್ಳಿ ನನ್ನ ಹಳೆ ಬಟ್ಟೆ, ಮನೆಯ ಮಕ್ಕಳಿಗೆ ಎಂದಾಗ, ಅಜ್ಜಿ ಊರಲ್ಲಿ ೪ ಅನಾಥ ಮಕ್ಕಳಿವೆ  ನಾ ಹೋದಾಗ ಏನಾದರೂ ತಗಂಡು ಹೋಗ್ತಿರ್ತೇನೆ, ಇದೂ ಅವಕ್ಕಾಯಿತು, ದೇವರು ಒಳ್ಳೇದು ಮಾಡ್ಲಿ ನಿಂಗೆ ಎಂದು ಪ್ರಶಂಸೆಯ ಹಂಗಿಲ್ಲದೆ ಅಂದಾಗ!!

ಕಂಡಿದ್ದು , ಕೇಳಿದ್ದು, ಅನಿಸಿದ್ದು

ಸುಮಾರು ೨ ಗಂಟೆಯ ಹೊತ್ತು, ಸೂರ್ಯ ನೆತ್ತಿಯಲ್ಲಿದ್ದರೂ ಪ್ರಖರವಾಗಿರಲಿಲ್ಲ. ಮಂದಗಾಳಿಯೂ ಇದ್ದಿದ್ದಕ್ಕೆ ಕೂತು ಬಸ್ಗಾಗಿ ಕಾಯುವುದು ಹಿತವೇ ಎನಿಸಿತು. ಬಸವನಗುಡಿ ಕಡೆಗೆ ನನ್ನ ಸವಾರಿ ಹೊರಟಿತ್ತು. ಕಾಯುತ್ತಿದ್ದದ್ದು ಜಯನಗರ  9th blockನಲ್ಲಿ.  ಒಂದಷ್ಟು ಬೆಂಚಗಳಿದ್ದು, ಒಪ್ಪವಾಗಿದ್ದ ನಿಲ್ದಾಣವಾಗಿತ್ತದು. ಮಾಸಲು ಬಟ್ಟೆಯಲ್ಲಿ ಅತ್ತಿತ್ತ ಅಡ್ಡಾಡಿದ ಕುಳ್ಳು ವ್ಯಕ್ತಿಯೊಬ್ಬ ಕುಂಟುತ್ತಾ ಬಂದ. ಹರಕಲು ಮುರುಕಲು ಬಟ್ಟೆ ತೊಟ್ಟಿದ್ದ. ಅಸ್ತಮವಿತ್ತೇನೊ, ಅತ್ತಿತ್ತ ಓಡಾಡಿ ಕೊನೆಗೊಂದು ಬೆಂಚಿನ ಬಳಿ ಬಂದು ಅಸ್ತಮಾದ ಔಷಧಿ ಸೇವಿಸಿದ. ಆ ಬೆಂಚಿನ ಮುಂದೆ ಅಷ್ಟು ಹೊತ್ತು ನಿಂತರೂ ಕುಳಿತುಕೊಳ್ಳದೆ ಮತ್ತೆ ಕುಂಟುತ್ತಾ ಬಂದು ನೆಲದ ಮೇಲೆ ಕುಳಿತ. ಊಹ್ಞೂ !!! ನನಗೆ ಅವನ ಭಾವ ಅರ್ಥವಾಗಲೆ ಇಲ್ಲ. ಅವನ ನಿಷ್ಠುರವಾದ ಕಣ್ಣುಗಳು ಏನನ್ನೂ ಹೇಳಲಿಲ್ಲ. ಬಹುಷಃ ತಾನು ಇಷ್ಟಕ್ಕೇ ಯೋಗ್ಯ ಎಂಬ ಅಳುಕೊ ಅಥವಾ ನೆಲವೇ ಹಿತವೆಂಬ ಸರಳತೆಯೋ! ಅವನಿಗೆ ಅದೊಂದು ಯೋಚಿಸುವ ವಿಷಯವೇ ಅಲ್ಲವಾಗಿತ್ತೇನೋ. ಪೊಳ್ಳು ಪ್ರತಿಷ್ಟೆ ಅಭಿಮಾನಗಳ ಅಬ್ಬರದಲೆಗಳ ಬದುಕುಗಳ ನಡುವಲ್ಲಿ ಬದುಕುವ ನನಗೆ ಬಹುಷಃ ಒಂದು ನಿಮಿಷ ಬೇರೆ ಯೋಚನೆಗಳಿಗೆಲ್ಲಾ ರಜಾ ಕೊಟ್ಟು ಚಿಂತಿಸುವ ವಸ್ತುವಾಗಿತ್ತದು.

**
ಅಲ್ಲಿ ಕುಳಿತ ಅರ್ಧ ಗಂಟೆಯಲ್ಲಿ ನಾನು ಕಂಡಷ್ಟು ಕುರುಡರನ್ನು ಎಲ್ಲೂ ಕಂಡಿರಲಿಲ್ಲವೇನೊ, ಅಡಿಗಡಿಗೆ ಮನಸ್ಸು ಕರಗುತ್ತಿತ್ತು.
೩ ಜನ ಹುಡುಗಿಯರು ಎಲ್ಲಿಗೋ ಹೋಗುವ ಅವಸರದಲ್ಲಿದ್ದರು. ಬಸ್ಸೊಂದು ವೇಗವಾಗಿ ಬಂದು ರಿವರ್ಸ್ ತೆಗೆದುಕೊಳ್ಳುವ ತವಕದಲ್ಲಿತ್ತು. ಬಸ್ ನಿಲ್ದಾಣದ ಆಫೀಸಿನಲ್ಲಿದ್ದ ಅಧಿಕಾರಿಯೊಬ್ಬ, ಅವರನ್ನು ಕಂಡು "ನೋಡ್ಕೊಂಡ್ ಹೋಗ್ರಮ್ಮ" ಅಂದ. ಅಷ್ಟೂ ಜನರು ಕುರುಡಿಯರೆಂದು ನನಗೆ ಗೊತ್ತಾದಾಗ ಅವನ ಒಳ್ಳೆಯತನದ ಮಾತುಗಳು, ಅವರ ಬದುಕು ಆಡಿದ ವ್ಯಂಗ್ಯದಂತೆ ಕಂಡಿತು ನನಗೆ.
**

ಇವೆಲ್ಲವುಗಳಲ್ಲಿ ಮನಸ್ಸು ಭಾರವಾಗುತ್ತಿದ್ದಂತೆ, ಇನ್ನೊಬ್ಬ ಕುರುಡನನ್ನು ಯಾರೋ ಪುಣ್ಯಾತ್ಮರು ಕೈ ಹಿಡಿದು ಕರೆದುಕೊಂಡು ಬಂದು ಕೆಳಗೆ ಕೂರಿಸಿದರು. ಕೂತಲ್ಲೇ ನನ್ನ ತಲೆ ಎಲ್ಲೆಲ್ಲೋ ಓಡಿತು. ಕುರುಡನೊಬ್ಬನಿಗೆ ಒಂದು ಬಣ್ಣವನ್ನು ಹೇಳುವುದಾದರೆ ಹೇಗೆ ಹೇಳಬೇಕಾಗಬಹುದು. ಹೇಳಿದರೂ ಆತ ಯಾವ ಮಟ್ಟಕ್ಕೆ ಅರ್ಥ ಮಾಡಿಕೊಳ್ಳಬಲ್ಲ, ಅನ್ನೊ ಹುಚ್ಚು ಪ್ರಶ್ನೆಗಳು ಏಳುವಾಗ, ಬಸವನಗುಡಿಗೆ ಹೋಗುವ ೬೦ ಎ ಬಂದಿತು. ಅಲ್ಲಿ ಕುಳಿತಿದ್ದ ಕುರುಡನಿಗೆ ಅದೆ ಬಸ್ಗೆ ಹೋಗಬೇಕೆಂಬುದನ್ನು ತಿಳಿದುಕೊಂಡು ಬಸ್ ಹತ್ತಿಸಿ ಮುಂದಿನ ಸೀಟಿನಲ್ಲಿ ಕುಳಿತೆ. ಸ್ವಲ್ಪ ಹೊತ್ತಿಗೆ ಹಿರಿಯರಿಬ್ಬರು ಹತ್ತಿ ಒಬ್ಬರು ಅವನ ಪಕ್ಕದವನನ್ನು ಏಳಿಸಿ ಕೂತರು, ಇನ್ನೊಬ್ಬರು ಸೀಟು ಸಿಗದೆ, ಇವನ ಮೇಲೆ ರೇಗಲು ಶುರು ಮಾಡಿದರು. " ಸೀನಿಯರ್ ಸಿಟಿಜನ್ಗೆ ಸೀಟ್ ಬಿಟ್ಕೊಡಪ್ಪ, ನಿಂಗೆ ಹೇಳ್ತಿರೋದು" ಅಂದು ಮತ್ತೆ ಮತ್ತೆ ಹೇಳಿದ್ದೆಲ್ಲೊ ನನ್ನ ಕಿವಿಗೆ ಬಿದ್ದು, “ಆತ ಬ್ಲೈಂಡ್ ಸರ್ ಬಿಟ್ಬಿಡಿ” ಅಂದು ನನ್ನ ಸೀಟಿನಿಂದೆದ್ದೆ. ಸ್ವಲ್ಪ ಸಮಾಧಾನವಾಯ್ತು ಆ ಜೀವಕ್ಕೆ. ಸ್ವಲ್ಪ ಹೊತ್ತಲ್ಲೆ, ಅವನ ಪಕ್ಕದ ಸೀಟ್ ಖಾಲಿ ಆದ್ದರಿಂದ, ನಾನು ಸದ್ದಿಲ್ಲದೆ ಅವನ ಪಕ್ಕ ಕುಳಿತುಕೊಂಡೆ. ಒಂದೇ ಒಂದು ಮಾತು ಆಡಲಿಲಿಲ್ಲ.  ಆತ "ಮೇಡಮ್ ಬಸ್ ಸೆಟಲೈಟ್ ಒಳಗೆ ಹೋಗುತ್ತಾ" ಅಂದ. ಈಗ ಮಿಕ ಮಿಕ ನೋಡುವ ಸರದಿ ನನ್ನದು, ಸೀನಿಯರ್ ಸಿಟಿಜನ್ ರೇಗಿದ್ದು ತಪ್ಪಲ್ಲ. ಆತನ  ಎರಡೂ ಕಣ್ಣುಗಳು ಸಾಮಾನ್ಯನ ಕಣ್ಣುಗಳಂತೆ ಚೆನ್ನಾಗಿದ್ದವು. ಕುರುಡ ಅನ್ನೋದನ್ನ ಊಹಿಸ್ಲಿಕ್ಕೂ ಸಾಧ್ಯವಿಲ್ಲ. ಆದರೆ ವಾಸ್ತವದಲ್ಲಿ ಆತ ಕುರುಡನೇ ಆಗಿದ್ದ. ಕಣ್ಣಿನ ಗೊಂಬೆಗಳು ಗಾಢ ಕತ್ತಲೆಯಿಂದ ಒಂದು ಸಲ ಬೆಳಕನ್ನು ಕಾಣಬಹುದೇ ಅನ್ನೋ ಚಡಪಡಿಕೆಯಲ್ಲಿ ಕುಣಿಯುತ್ತಿದ್ದವು. ಮುಗ್ಧ ಮುಖ ಕಂಡು ಕರುಳು ಚುರುಕ್ ಎಂದಿತು. ಅವನ ಗ್ರಹಣ ಶಕ್ತಿಗೆ ಬೆರಗಾಗಿ ಕೇಳಿದೆ "ನಾನು ಇಲ್ ಕೂತಿದ್ದು ಅದ್ ಹೆಂಗ್ ಗೊತ್ತಾಯ್ತು ನಿಮ್ಗೆ?" . ಅದೇನು ದೊಡ್ಡ ವಿಷಯಾನೆ ಅಲ್ಲ ಅನ್ನೋ ಹಾಗೆ ಆತ, "ಗೊತ್ತಾಗತ್ತೆ" ಅಂತ ಮಗುವಿನಂತೆ ನಕ್ಕ, ಅವನ ನಗು ಹೇಗಿದ್ದೀತೆಂಬ ಕಲ್ಪನೆಯೂ ಇಲ್ಲದೆ.

ಕನ್ನಡ

ಕನ್ನಡ ಕನ್ನಡ ಕನ್ನಡವೆನ್ನಲು
ಹಿರಿಕಿರಿಯರಲೂ ಹುರುಪು ಸದಾ
ಕನ್ನಡ ಕೇಳಲು ಕೃಷ್ಣನ ಕೊಳಲಲೂ
ರಾಧೆಯೂ ಕೇಳದ ಸವಿ ನಿನದ

ಕದಂಬ ಕಟ್ಟಿದ ಕನ್ನಡ ದೇಗುಲ
ಚಿರನೂತನವಿದು ಚಿರಂತನ
ಕನ್ನಡ ಕಂದನ ಕಾಡುವ ತೊದಲು
ಕನ್ನಡ ದೇವಿಗೆ ನುಡಿ ನಮನ

ಕಬ್ಬಿಗರೆದೆಯಲಿ ಸಿಹಿ ಕೋಲಾಹಲ
ಕನ್ನಡದಿಂಚರ ಸಂಚರಿಸೆ
ಕಾದಿದೆ ಕನ್ನಡ ಪಂಪ ಕುಮಾರರು
ಮತ್ತೆ ಕನ್ನಡದಿ ಸಂಭವಿಸೆ

        ಕನ್ನಡ ತಾಯಿಯ ಹೆಮ್ಮೆಯ ಮಕ್ಕಳ
        ದುಡಿತದ ತುಡಿತವು ಚಿರಂತನ
        ತುಂಬಿದ ಜೇನಿನ ಗೂಡಿನ ಹಾಡೇ
        ನಮ್ಮೆದೆಯೊಳಗಿನ ಧೀಂತನನ

ಅಡಿಗಡಿಗೇ ದುಡಿ ಕನ್ನಡಕೇ ಮಡಿ
ಎಂದಿದೆ ಕನ್ನಡದೆದೆ ಹುಯಿಲು
ಸಾವಿರ ಸೂರ್ಯರ ಮುಂಜಾವಿನವೋಲ್
ಕುಣಿಯಲು ಕನ್ನಡದಾ ನವಿಲು

ಒಂಟಿ ಲ್ಯಾಂಟೀನ

ಹಳೆ ಪ್ರೀತಿಗೊಂದು ಚಂದದ
ನೆನಪಿನ ಅಂಗಿ ಹೊಲಿದೆ
ಒಳ ತುರುಕಲಿಲ್ಲ ಪ್ರೀತಿ
ಗೊತ್ತಾಗಲಿಲ್ಲ ಪ್ರೀತಿ ಆಕಾರ ಬದಲಿಸಿದ ರೀತಿ

ನನಗೇನು ಹಸಿವೆಗೆ ಕೂಳಿಲ್ಲವೆ
ಮಾತಿಗೆ ಆಳಿಲ್ಲವೆ
ಮಳೆಗೆ ಸೂರಿಲ್ಲವೆ
ಒರಗಿ ಬಿಕ್ಕಳಿಸಿ ಅಳಲು ತೋಳಿಲ್ಲವಷ್ಟೆ

ಭೂಮ್ಯಾಕಾಶಗಳ ಮಧ್ಯೆ ಒಬ್ಬಳೇ ನಿತ್ತು
ನೋಡುವುದ ಕಲಿತಿರುವೆ
ಮಗುವಂತೆ ಸೋತು
ಒಂಟಿ ಲ್ಯಾಂಟೀನದ ಸುತ್ತ
ಪತಂಗಗಳೆಷ್ಟಿದ್ದರೇನು
ಬೆಳಕು ಸೋಲುವುದೆ
ಎಣ್ಣೆ ತೀರಿದ ಬಳಿಕ ಲ್ಯಾಂಟೀನ ಒಂಟಿ

Tuesday 4 August 2015

ಬರೆಯದ ಗೀತೆ

ಹಾಡ ಮರೆತ ವೇಳೆಯಲ್ಲಿ
ಹುಟ್ಟಿದಂತ  ಹಾಡಿದು 
ಭಾವನೆಗಳೇ ಇಲ್ಲದೇನೆ 
ಗೀಚಿದಂತ  ಸಾಲಿದು 
            ತಂತಿ ಮುರಿದ ವೀಣೆಯಿಂದ 
ಹೊರಳಿದಂತ ಸ್ವರವಿದು 
ಚಂದಮಾಮನಿರದ ಬಾನ
ನೋಡಿ ಉಲಿದ ಪದವಿದು 
 ಬರೆಯಲಾಗದಂತ ಹಾಡೇ 
ಸ್ಫೂರ್ತಿ  ಹಾಡಿಗೆ 
ಬರದ ಸ್ವರಗಳಲ್ಲಿ ಹಾಡಿ 
ಕೇಳಿಸಲಿ ಯಾರಿಗೆ 
            ಹಾಡುತ್ತಿದ್ದ ಕೋಗಿಲೆಯದು 
ಕೇಳಿ  ಹಾಡನು 
ಹಾಡುವುದನು ಮರೆತು ಮತ್ತೆ 
ಹಿಡಿಯಿತು ಮೌನದ ಜಾಡನು 
 ತೇಲಿ ಬರಲು  ಹಾಡು 
ಮಂದ ಮಾರುತ ಸೋತಿತು 
ಸುಡುವ ಸೂರ್ಯ ತೆರೆಗೆ ಸರಿದ 

ಮತ್ತೆ ಕತ್ತಲಾಯಿತು 

ಪ್ರೀತಿಯ ಪ್ರತಿಯಾಗಿ ಒಂದಷ್ಟು ಪ್ರಶ್ನೆ

  ಹದಿಹರೆಯದ ಹರಿವಾಣದಲ್ಲಿ, ಆಸೆ ಬಯಕೆಗಳೆಂಬ ವೀಳ್ಯವನ್ನಿಟ್ಟು ಮೆಲ್ಲುವ ಮನಸ್ಸುಗಳಿಗೆಲ್ಲಾ, ಇದು ಮೋಜಿರಬಹುದು. ರುಚಿ ಹೆಚ್ಚೆಂದು ಅತಿಯಾಗಿ ಸುಣ್ಣದ ಲೇಪವಿಟ್ಟು ತಿಂದರೆ, ಮುಂದಾಗುವುದೇ ಅನಾಹುತ.
ಮನುಷ್ಯನ ಜೀವನದ ಅತಿಮುಖ್ಯ ಘಟಕವೇ ಹದಿಹರೆಯ. ಜೀವನದ ಆರಂಭ ಅಂತ್ಯ ಎಲ್ಲವೂ ಇಲ್ಲೆ. ಒಲ್ಲೆ ಎಂದರೂ ಕೇಳದ ಹೃದಯ, ಮೃದುವಾದ ಮಾತಿಗೆ ಮನಸೋಲುತ್ತದೆ. ಅವಳ ಕಿರುನೋಟ ಇವನ ಹೃದಯದಲಿ ಕಾಣದ ಆಸೆಯ ಊರಿನ ಕದ ಬಡಿಯುತ್ತದೆ. ಇವನ ಒಂದು ಮೆಲುನುಡಿ, ವಿಶ್ವಾಸ ಪೂರಿತ ಸಂಭಾಷಣೆ ಅವಳ ಹೃದಯದ ಜೋಪಡಿಯನ್ನು ಅರಮನೆಯ ಎತ್ತರಕ್ಕೇರಿಸುತ್ತದೆ. 
            
ವಾಸ್ತವದಲ್ಲಿ ಹೃದಯವೊಂದು, ಕೈ ಕಾಲಿನಂತೆ ಅಗತ್ಯವಾದ ಅಂಗ. ಮಿಡಿತ ಹುಟ್ಟುವುದು ಹೃದಯದಲ್ಲೆಂಬುದು ಕವಿಗಳ ಧೋರಣೆ. ಆದರೆ  ಮಿಡಿತ ಶುರುವಾಗಿದೆ ಎಂದು ಹೃದಯಕ್ಕೆ ತಿಳಿಸಲು ಮೆದುಳು  ಮಹಾರಾಯ ಅದನ್ನು ಗ್ರಹಿಸಿರಬೇಕಲ್ಲವೇ?. ಹಾಗಾದರೆ ಪ್ರೀತಿ ಹುಟ್ಟುವುದು ಮನದಲ್ಲೋ ಮೆದುಳಲ್ಲೊ?
            
ಪ್ರೀತಿ ಕಾರಣಗಳಿಂದ  ಹುಟ್ಟಿದ್ದಲ್ಲ. ಹಾಗೆ ಹುಟ್ಟಿದರೆ ಅದು ಪ್ರೀತಿಯೇ ಅಲ್ಲ ಎಂಬುದು ಬಲ್ಲವರ ನುಡಿ. ಹಾಗಾದರೆ ಎಷ್ಟೋ ಕೋಟಿ ಜೋಡಿಗಳ ನಡುವೆ ಒಲವು ಚಿಗುರೊಡೆಯಲು ಯಾವ ಕಾರಣಗಳು ಇರಲಿಲ್ಲವೇ?ಕಾರಣಗಳಿಂದ  ಬುಗಿಲೆದ್ದ ಪ್ರೀತಿಗೆ ಬಲು ಬೇಗ ಮರಣ ಖಚಿತವೇ?
            
ಕವಿಯನ್ನೇ ಕವನ ಬಲಿ ತೆಗೆದುಕೊಳ್ಳುವುದೆಂದರೆ  ಇದೆಬರೆಯ ಹೊರಟ, ನನಗೆ ನನ್ನ ಲೇಖನ ನೂರಾರು ಪ್ರಶ್ನೆ ಕೇಳಿ ದಿಕ್ಕು ತಪ್ಪಿಸುತ್ತಿದೆ. ಉತ್ತರ ಅವರವರ ಅನುಭವಕ್ಕೆ ಬಿಟ್ಟಿದ್ದು ಎಂಬ ಧೋರಣೆ ನನ್ನದು.
ನಮ್ಮ ಕಲೆ, ಸಾಹಿತ್ಯಗಳು ಪ್ರೀತಿಯನ್ನು ಇಷ್ಟೇಕೆ  ವೈಭವೀಕರಿಸುತ್ತವೆ? ಅಂತಹ ವೈಭವ ನಿಜವಾದ ಪ್ರೀತಿಯ ಧ್ಯೋತಕವೇ?
            
ಪ್ರೀತಿ ಎಂಬುದು ಒಬ್ಬ, ಇನ್ನೊಂದು ಜೀವವನ್ನು ತನ್ನದೇ ಪ್ರತಿರೂಪ ಎಂದು ತಿಳಿದು ಬಯಸುವ, ಗೌರವಿಸುವ, ಪೊರೆಯುವ, ಪ್ರೀತಿಸುವ ಪರಿಕಲ್ಪನೆ.  ಭಾವನೆ ಬಲವಾಗುತ್ತಾ  ಎರಡು ಜೀವಗಳು ಜೊತೆಯಾಗಿದ್ದರೆ, ಪರಿಪೂರ್ಣತೆ ಒದಗುವ ಅಪೂರ್ವ ಅನುಭವ ಸ್ಥಿರವಾಗುತ್ತದೆ. ಅಲ್ಲಿ ನಿಷ್ಕಾಮ, ನಿಷ್ಕಲ್ಮಶ ಮನಸ್ಸುಗಳ ಮಿಳಿತ, ಏಕತಾನತೆಯೇ ಪ್ರತಿರೂಪಿತವಾಗಿ ಬಿಂಬಿತವಾಗುತ್ತದೆ.
            
ಉಸಿರೆಳೆದುಕೊಳ್ಳದೆ ಬರೆದ  ಸಾಲುಗಳ ನಂತರ  ಲೇಖನಿಗೊಂದು ವಿರಾಮದ ಅಗತ್ಯವಿದೆ.
             
ಪ್ರೀತಿಯ ಪ್ರಣತಿ ಬೆಳಗುವಾಗ, ಅದರ ಪ್ರಕಾಶಮಾನವಾದ ಬೆಳಕಿಗಾಗಿ ಒಬ್ಬರು ಎಣ್ಣೆಯಾಗಿ ತೇಯ್ದು, ಇನ್ನೊಬ್ಬರು ಬತ್ತಿಯಾಗಿ ಬತ್ತಿದರೆ,  ಬೆಳಕ ಹೊನಲಲ್ಲಿ  ಸ್ವಾರ್ಥವೆಲ್ಲ ಕಪ್ಪು ಹೊಗೆಯಾಗಿ ಹರಿದು ಕೊನೆಗೆ ಇಲ್ಲವಾಗುತ್ತದೆ. ಇಲ್ಲವಾದರೆ ಬದುಕೆಂಬ ಹಣತೆಯ ಸುತ್ತಲೂ ಬರೀ ಕತ್ತಲು.