Saturday 15 September 2018

ಧಾರಾವಾಹಿಗಳು ಸಮಾಜವನ್ನು ತಿದ್ದಬಹುದೇ ?

           ಧಾರಾವಾಹಿಗಳು ಎಂದ ತಕ್ಷಣ ನೆನಪಾಗುವುದೇ, ದಾರಿ ಕಾಣುವಷ್ಟು ಉದ್ದಕ್ಕೂ ಚಾಚಿ ಮಲಗಿರುವ ರೈಲು ಕಂಬಿಗಳು.  ಏನೇ  ಆಗಲಿ ಏನೇ ಹೋಗಲಿ ಅವು ವರ್ಷವಿಡೀ ಅಲ್ಲೇ ಇರುತ್ತವೆ. ನೀವು ಇರುವಲ್ಲಿಂದ ಹಿಂದೆ ಎಷ್ಟು ಉದ್ದವಾಗಿತ್ತೋ ಮುಂದೂ ಅಷ್ಟೇ ಉದ್ದವಾಗಿ ತಣ್ಣಗೆ ಮುಂದೆ ಹೋಗುತ್ತಲೇ ಇರುತ್ತವೆ. ಅದರ ಮೇಲೆ ಆಗಾಗ ರೈಲಿನಂತೆ ಬರುವ ಜಾಹಿರಾತುಗಳು ಕೂಡ. ಅದೇ ರೈಲು ಮತ್ತೆ ಮತ್ತೆ ಅದೇ ಹಳಿಯ ಮೇಲೆ ಬಂದಂತೆ ಬರುತ್ತಲೇ ಇರುತ್ತವೆ. 

            ಇಂತಹ ವರ್ಷಾನುಗಟ್ಟಲೆ ಎಗ್ಗಿಲ್ಲದೆ ಓಡುವ ಧಾರಾವಾಹಿಗಳ ಮೊದಲ ಟಾರ್ಗೆಟ್ ಮನೆಯ ಅಮ್ಮಂದಿರು, ಅಜ್ಜಿಯಂದಿರು ಮತ್ತು ಕೆಲವೊಮ್ಮೆ ಈ ಹೆಂಗಸರಿಂದ ರಿಮೋಟು ವಶಪಡಿಸಿಕೊಳ್ಳಲಾರದೆ ಸೋಲುವ ಗಂಡಸರು.  ಧಾರಾವಾಹಿಯ ದೆಸೆಯಿಂದ ಆಗುವ ಅವಾಂತರಗಳು ಒಂದೆರೆಡಲ್ಲ.  ಪಾಯಿಖಾನೆಯಲ್ಲಿ ತೊಳೆಸಿಕೊಳ್ಳಲು ಕುಳಿತ ಮಗು ಅಮ್ಮ ಬರುವುದನ್ನು ಕಾದು ಕಾದು ತಾನೇ ತೊಳೆದು ಕೊಂಡು ಬರುವ ಪರಿಸ್ಥಿತಿಯಾಗುತ್ತದೆ. ಒಲೆ ಮೇಲೆ ಇಟ್ಟ ಹಾಲು ಉಕ್ಕಿ ಝರಿಯಾಗಿ ಹರಿಯುತ್ತದೆ. ಎಲೆ ಅಡಿಕೆ ತಿನ್ನುವ ಅಜ್ಜಿ ಧಾರಾವಾಹಿಯ ದೆಸೆಯಿಂದ ಅಡಿಕೆ ಎಂದು ಬಾಯಿಗೆ ಸುಣ್ಣ ಹಾಕಿ ಸುಟ್ಟುಕೊಂಡದ್ದು ಇದೆ.  ನನ್ನಮ್ಮ,  'ಅಕ್ಕ' ಎನ್ನುವ ಧಾರಾವಾಹಿ ನೋಡುವಾಗಲೇ ನಾನು ಕಾಲ್ ಮಾಡಿದರೆ ಅವರ ಸಂಕಟ ಹೇಳ ತೀರದು. ಅಕ್ಕನಿಗೆ ಕಿರುಕುಳ ಕೊಟ್ಟವರಿಗೆ ಒಂದಷ್ಟು ಹಿಡಿ ಶಾಪವನ್ನು ಫೋನ್ ಅಲ್ಲಿಯೇ ಹಾಕುತ್ತಾರೆ. ಇತ್ತ ನನ್ನೊಟ್ಟಿಗೂ ಮಾತಾಡಲಾರದೆ  ಅತ್ತ ಅಕ್ಕನ ಮಾತೂ ಕೇಳಿಸದೇ ಒದ್ದಾಡುತ್ತಿರುತ್ತಾರೆ . ನಾನೇ ಕನಿಕರ ತೋರಿ 'ಅರ್ಧ ಗಂಟೆ ಬಿಟ್ಟ್ ಫೋನ್ ಮಾಡ್ತೆ ಅಮ್ಮ. ಈಗ ಫೋನ್ ಇಡ್ತೇ' ಅಂದಿದ್ದುಂಟು.ಅವಾಂತರಗಳ ಬಗ್ಗೆ ಹೇಳ ಹೋದರೆ ಲಿಸ್ಟು  ದಾರಾವಾಹಿಗಳಂತೆಯೇ ಉದ್ದವಾಗುತ್ತದೆ.   

         ಪ್ರತಿಯೊಂದು ಧಾರಾವಾಹಿಯು ಸದ್ದಿಲ್ಲದೆ ಜನಜೀವನದ ಮೇಲೆ  ಸಾಕಷ್ಟು ಪರಿಣಾಮ ಉಂಟು ಮಾಡುತ್ತವೆ. ಗೊತ್ತೋ ಗೊತ್ತಿಲ್ಲದೆಯೋ ಜನ ಧಾರಾವಾಹಿಯ ಪಾತ್ರಗಳ ಕುರಿತು ಆಗಾಗ ಯೋಚಿಸುತ್ತಾರೆ ಮತ್ತು ಅನುಸರಿಸುತ್ತಾರೆ. ಧಾರಾವಾಹಿಗಳು ಹಿರಿಯರನ್ನಷ್ಟೇ ಅಲ್ಲದೆ ಅವರ ಪಕ್ಕದಲ್ಲಿ ತಂಟೆ ಮಾಡುತ್ತಾ ಕೂರುವ ತುಂಟರನ್ನು ಸಹ ಪ್ರಭಾವಿಸುತ್ತದೆ.  ಹಾಗಾದರೆ ಜನ ಜೀವನ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರವೇನು?

           ಮನೆಯಲ್ಲಿ ಸಂಜೆಯಾಯಿತೆಂದರೆ ಎಲ್ಲೇ ಇದ್ದರು ಟಿವಿ ಮುಂದೆ ಹಾಜರಾಗುವ ಮನೆ ಮಂದಿಯೆಲ್ಲ  ಧಾರಾವಾಹಿಯಲ್ಲಿ ನಡೆಯುವ ಪ್ರತಿಯೊಂದು ಪಾತ್ರಗಳನ್ನೂ ತಾವೇ ಅನುಭವಿಸಿ ನೋಡುತ್ತಾರೆ. ಪಾತ್ರಗಳ ಜೊತೆ ಅತ್ತು ನಕ್ಕು ತಮ್ಮದೇ ದೃಷ್ಟಿಯಿಂದ ವಿಶ್ಲೇಷಿಸುತ್ತಾರೆ. 

       ನಾ ಕಂಡಂತೆ  ದಿನಸೀ ಅಂಗಡಿಯಲ್ಲಿ ನಿಂತಾಗ, ದಾರಿಯಲ್ಲಿ ಆಕಸ್ಮಾತ್ ಸಿಕ್ಕಾಗ, ಸುಮ್ಮನೆ ವಾಕ್ ಹೊರಟಾಗ ಹುಟ್ಟುವ ಎಲ್ಲ ಮಾತುಗಳಲ್ಲಿ ಧಾರಾವಾಹಿಯ ವಿಷಯ ಹಾಸು ಹೊಕ್ಕಾಗಿರುತ್ತದೆ. ಹಾಗಾಗಿ ಧಾರಾವಾಹಿಗಳು ತಮ್ಮ ಮೇಲಿನ ಸಮಾಜ ತಿದ್ದುವ ಜವಾಬ್ದಾರಿಯನ್ನು ತಳ್ಳಿ ಹಾಕುವಂತಿಲ್ಲ. ಹಾಗೆ ತಮ್ಮ ಟಿ.ರ್.ಪಿ ಗೋಸ್ಕರ ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುವಂತಿಲ್ಲ. 

          ಈಗಿನ ಧಾರಾವಾಹಿಗಳಲ್ಲಿ ಅತಿ ಆಡಂಬರದ ಜೀವನ ಶೈಲಿ, ವಸ್ತ್ರ ವಿನ್ಯಾಸಗಳನ್ನು ಅತಿ ಮುಖ್ಯವೆಂಬಂತೆ ಬಿಂಬಿಸಲಾಗುತ್ತದೆ.  ಎರೆಡು ಗಂಡ , ಎರೆಡು ಹೆಂಡತಿ ಅನ್ನೋ ಕಾನ್ಸೆಪ್ಟ್ ಇಲ್ಲದೆ ಧಾರಾವಾಹಿಗಳನ್ನು ಮಾಡಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ದಿನದ ಇಪ್ಪತ್ನಾಲ್ಕು ಗಂಟೆಯೂ ಕೆಲವು ಪಾತ್ರಗಳು ಬರೀ ಗಾಸಿಪ್ ನಲ್ಲಿ, ಇಲ್ಲವಾದರೆ ಯಾವುದಾದರೂ ಮನೆ ಹಾಳು ಮಾಡುವ ಕೆಲಸದಲ್ಲಿಯೇ ತೊಡಗಿರುತ್ತವೆ. ಇವೆಲ್ಲವುಗಳ ಮಧ್ಯೆ ನನ್ನಲ್ಲಿ ಹುಟ್ಟುವ ಪ್ರಶ್ನೆ ಇವರೆಲ್ಲ ನಮ್ಮಂತೆ ಅಡಿಗೆ , ಊಟ, ಸ್ನಾನ  ಹೋಗಲಿ , ಮುಟ್ಟಿದರೆ ಕಳಚಿ ಬೀಳಬಹುದಾದಷ್ಟು ದಪ್ಪದ  ಮೇಕಪ್ಪಿನ ಕವಚ ಇವಕ್ಕೆಲ್ಲಾ ಸಮಯ ಯಾವಾಗ ಸಿಗುತ್ತದೆ?

              ಕೆಲವಂತೂ ಮೂಢನಂಬಿಕೆಗಳನ್ನು, ಅತಿ ಮಾನುಷ ಶಕ್ತಿಗಳನ್ನು ಪರಿಣಾಮಕಾರಿಯಾಗಿ ತೋರಿಸಿ, ನೋಡುವ ವ್ಯಕ್ತಿಯಲ್ಲಿ ಇನ್ನಷ್ಟು ಮೂಢನಂಬಿಕೆಗಳನ್ನು ಹುಟ್ಟಿಹಾಕುತ್ತವೆ. ದುರಂತವೆಂದರೆ ನಾವಾಗಲಿ, ಇಲ್ಲ ಅಂತಹ ಧಾರಾವಾಹಿಗಳಲ್ಲಿ ಪಾತ್ರ ಮಾಡುವವರಾಗಲಿ ಅಥವಾ ಟಿವಿ ಚಾನೆಲ್ಲಿನ ನಿರ್ವಾಹಕರಾಗಲಿ  ಇವನ್ನೆಲ್ಲಾ ಪ್ರಶ್ನಿಸುವ ಗೋಜಿಗೆ ಹೋಗುವುದೇ ಇಲ್ಲ. ಪ್ರಶ್ನಿಸಿದರೂ ಮೊದಲು ಮನೆಯವರಿಂದಲೇ ಬೈಸಿಕೊಳ್ಳಬೇಕಾಗುತ್ತದೆ. 

              ಹಾಗಂತ ಧಾರಾವಾಹಿಗಳಲ್ಲಿ ಏನು ಒಳ್ಳೆಯದಿಲ್ಲವೇ ಇಲ್ಲ ಅಂತಲೂ ಇಲ್ಲ. ಅದು ಎಷ್ಟೋ ಜನರಿಗೆ ಕೆಲಸ ನೀಡಿ ಒಂದು ಒಳ್ಳೆಯ ಬದುಕನ್ನು ಕಟ್ಟಿಕೊಟ್ಟಿದೆ .  ಕೆಲ ವೀಕ್ಷಕರಿಗೆ ಸ್ವಲ್ಪ ಸಮಯದ ನಿರಾಳತೆಯನ್ನೂ ಕೊಡುತ್ತದೆ.  ಕೆಲವು ಧಾರಾವಾಹಿಗಳು ಮೊನ್ನೆಯ ಗಣೇಶ ಚತುರ್ಥಿಗೆ ಪರಿಸರ ಸ್ನೇಹಿ ಗಣೇಶನನ್ನು ಇಡುವ ಮೂಲಕ ಒಳ್ಳೆಯ ಸಂದೇಶವನ್ನು ನೀಡಿದವು. ಆದರೂ ನನ್ನ ಪ್ರಕಾರ ಧಾರಾವಾಹಿಗಳನ್ನು ಬರೆಯುವವರು, ನಿರ್ದೇಶಕ, ನಿರ್ಮಾಪಕರು ಸಮಾಜದ ಕುರಿತಾದ ಕಾಳಜಿಯನ್ನು ತಲೆಯಲ್ಲಿರಿಸಿಕೊಂಡು ಕೆಲಸ ಮಾಡಬೇಕು. ಜನರಿಗೆ ಪರಿಸರದ ಬಗ್ಗೆ, ನಮ್ಮ ಸಂಸ್ಕೃತಿಯ ಬಗ್ಗೆ ಮತ್ತು ಅದರ ವಿಶಾಲತೆಯ ಬಗ್ಗೆ  , ಶಿಸ್ತಿನ ಬಗೆಗಿನ ಅರಿವು ಮೂಡಿಸುವಂತ, ಹಳ್ಳಿಯ ಬದುಕಿನ ಬಗ್ಗೆ, ಪಟ್ಟಣ ಹೋಗುತ್ತಿರುವ ದಾರಿಯ ಬಗ್ಗೆ, ಜೀವನದ ಗುರಿಗಳ ಬಗ್ಗೆ ಎಳೆಯನ್ನು ಹೊಂದಿರುವ ಕಥಾನಕಗಳನ್ನು ಆರಿಸಿ ಮುತುವರ್ಜಿ ವಹಿಸಬೇಕು. ಈ ಮಾತು ಸಿನೆಮಾಕ್ಕೂ ಹಾಗು ವಾರ್ತೆ ಮತ್ತಿತರ ಕಾರ್ಯಕ್ರಮಗಳಿಗೂ ಅನ್ವಯಿಸುತ್ತದೆ. 

Thanks and Regards,
Bhavya