Saturday 21 December 2013

ಯಾಕಿಷ್ಟು ಅವಸರ


                ಎಡೆಯಿಲ್ಲದೆ ಶ್ರಮಿಸುತ್ತಿದ್ದ, ಬಿಡುವಿಲ್ಲದೆ ಮೈಲಿಗಟ್ಟಲೆ ಕ್ರಮಿಸುತ್ತಿದ್ದ ನನ್ನ ಯೋಚನೆಗಳಿಗೆ ಹಾಕಿಕೊಂಡ ಪ್ರಶ್ನೆ ಇದು. ಹೆಜ್ಜೆ ಹೆಜ್ಜೆಗೂ ಲಜ್ಜೆಗೇಡಿ ಬುದ್ಧಿ ಲಾಭನಷ್ಟಗಳ ತರ್ಕದಲಿ ತೊಡಗಿ ಬದುಕಿನ ಮಾರುಕಟ್ಟೆಯಲ್ಲಿ ಸಮಯವನ್ನು ಇನ್ನಿಲ್ಲದಂತೆ ಅತಿ ಬೆಲೆಗೆ ಮಾರಿಕೊಳ್ಳಲು ಹವಣಿಸುತ್ತದೆ.

                ಆಗಾಗ ಮಿತಿಮೀರಿದ ವೇಗದ ಪಥಕ್ಕೊಂದು ಅಲ್ಪವಿರಾಮ ಹಾಕಿ, ಒಂದಷ್ಟು ಮೌನವನ್ನು ಬಾಚಿ, ನೆಟ್ಟ ನೋಟದಲಿ ನಮ್ಮ ಸುತ್ತ ದಿಟ್ಟಿಸಿದರೆ, ಯಾಂತ್ರಿಕ ಲೋಕದ ಆಚೆಗಿನ ಬದುಕು ತೆರೆದುಕೊಳ್ಳುತ್ತದೆ. ನಾವಾಡುತ್ತಿದ್ದ ಮನೆಯ ಜಗಲಿ ಮುದಿಯಾಗಿ ಪೇಲವವಾಗಿದೆ, ಅಮ್ಮನ ಮುಖದಲ್ಲಿ ಸುಕ್ಕು, ನಾವೆಷ್ಟು ವರ್ಷಗಳಾಯ್ತು ಅಮ್ಮನನ್ನು ಇಷ್ಟು ಹತ್ತಿರದಿಂದ ಸರಿಯಾಗಿ ನೋಡಿ ಎಂಬುದನ್ನು ಚುಚ್ಚಿ ಹೇಳುತ್ತದೆ, ಅಪ್ಪ ಈಗ ಬುದ್ಧಿ ಕಲಿಸುವ ಮೇಷ್ಟ್ರಂತೆ ಕಾಣದೆ, ಒಬ್ಬ ಒಳ್ಳೆ ಸ್ನೇಹಿತನಾಗಲು ಹವಣಿಸುವ ಭಾವ ಕಣ್ತುಂಬಿಸುತ್ತದೆ.

             ಸುತ್ತಲಿನ ಜಗತ್ತಿಗೆ ಅಂಟಿದ ಭಾವುಕತೆಯ ಸರಪಳಿಯ ಅನನ್ಯ ಕೊಂಡಿಯ ಭಾಗ ಈ ಬದುಕು. ಒಬ್ಬನೇ ಬದುಕುತ್ತೇನೆ ಯಾರ ಹಂಗಿಲ್ಲದೆ ಎಂಬ ಹಕ್ಕು ಯಾರಿಗೂ ಇಲ್ಲ ಇಲ್ಲಿ.

              ಒಂಚೂರು ಕಳೆದು ಹೋಗುವುದು ಆರೋಗ್ಯಕರವೇ. ಮಗುವ ನಗುವನ್ನು ಕಂಡಾಗ ಮಗುವಾಗುವ ಜೀವ, ಹಕ್ಕಿಯ ಹಾರಾಟದಲ್ಲೊಂದು ಸ್ವಾತಂತ್ರ್ಯದ ಅನುಭವ ಪಡೆಯುವ ಖುಷಿ, ಸಿಪಾಯಿಗಳಂತೆ ಗರ್ವತೋರಿ ನಡೆವ ಇರುವೆಯ ಸಾಲಿನ ಮಧ್ಯೆ ಬೆರಳಿಟ್ಟು ಚದುರಿಸುವ ತುಂಟ ಕ್ರೌರ್ಯ, ಮೊದಲೆಲ್ಲ ನೀರ ಒಳ ಹೊಕ್ಕು ರಾಡಿ ಮಾಡಿದ ಕೆರೆಯ ತಟದಲ್ಲಿ ಶಾಂತವಾಗಿ ಕೂತು ಸೂರ್ಯಾಸ್ತ ನೋಡುತ್ತಾ ಎಲ್ಲೋ ಮರೆತ ಹಾಡನ್ನು ಗುನುಗುವ ಹೊತ್ತು, ಎಲ್ಲೋ ಕೇಳಿದ ಗಂಟೆಯ ನಾದಕ್ಕೆ ಅರಿವಿಲ್ಲದಂತೆ ಮುಗಿಯುವ ಕೈ, ಎಷ್ಟೇ ಮುಂದುವರಿದ ಸಮಾಜದ ನಡುವಿದ್ದರೂ, ಸದಾ ಮನಸ್ಸನ್ನು ಹಸಿರಾಗಿ ಮಗುವಾಗಿಡುವ ಸ್ವರ್ಗ ಸಮಾನವಾದ  ಅಜ್ಜಿಮನೆ, ಆ ಪುಟ್ಟ ಗ್ರಾಮ, ಅದರ ಜೊತೆ ಬೆಸೆದ ಮುಗ್ಧ ನೆನಪು, ಇವಲ್ಲವೇ ಬದುಕನ್ನು ಪೂರ್ತಿಯಾಗಿಸಬಲ್ಲವು.
             
                 ಯಾಕೋ ಗೊತ್ತಿಲ್ಲ ಎಲ್ಲಿಂದ ಶುರುಮಾಡಿದರೂ ನನ್ನ ಬರವಣಿಗೆ ಅಜ್ಜಿ ಮನೆಯ ಹಿತ್ತಲನ್ನೊಮ್ಮೆ ಹಾದು ಹೋಗಿಯೇ ಹೋಗುತ್ತದೆ.
                 ಪ್ರತಿಯೊಬ್ಬನೂ ನಾಳಿನ ಖುಷಿಗಾಗಿ ಇಂದು ದುಡಿಯುತ್ತಾನೆ, ಮುನ್ನಡೆಯುತ್ತಾನೆ. ನಡೆಯುವ ಭರದಲ್ಲಿ ಇಂದಿನ ಪುಟ್ಟ ಖುಷಿಗಳು ಅವನ ಕಾಲಡಿ ಧೂಳಾಗಬಾರದು. ಪ್ರತಿ ಕ್ಷಣವನ್ನು ಅನುಭವಿಸಿ ಬದುಕ ಬಲ್ಲವ ನಿಜವಾದ ಕಲೆಗಾರ.

                 ಬೆಳದಿಂಗಳ ರಾತ್ರಿಯಲಿ, ತೆರೆದ ಬಾನಡಿ ಮಲಗಿ, ಚುಕ್ಕೆಗಳನ್ನೆಣಿಸಲು ಯಾವ ಸಾಧನೆಯ ಅಗತ್ಯ ಇಲ್ಲ ಅಥವಾ ಯಾರ ಅಪ್ಪಣೆಯೂ ಬೇಕಿಲ್ಲ.
                 ನಿಜವಾದ ಯಶಸ್ಸು ಹಣ, ಅಥವಾ  ಅಂತಸ್ತಿಂದ ಅಳೆಯುವಂತದಲ್ಲ.  ಸುಂದರವಾದ ಕ್ಷಣಗಳನ್ನು ಹುಟ್ಟು ಹಾಕುವ, ಇರುವುದನ್ನು ಅನುಭವಿಸಿ, ಹಂಚಿ ಹರಡುವ, ಮನಗಳ ನಡುವಿದ್ದು ಅಂತಹ ಬದುಕು ಕಟ್ಟುವುದೇ ಸಾರ್ಥಕತೆ