Monday 12 January 2015

ಅ”ಗಮ್ಯ”

                                                  
                 ಅ”ಗಮ್ಯ”
              ನನ್ನಷ್ಟಕ್ಕೆ ಶೂನ್ಯವನ್ನ ದಿಟ್ಟಿಸುತ್ತಿದ್ದ ನನಗೆ ಮುಖದಲ್ಲಾಗುತ್ತಿದ್ದ ಭಾವದ ಬದಲಾವಣೆಯ ಕಿಂಚಿತ್ತೂ ಅರಿವಿರಲಿಲ್ಲತಲೆಯಲ್ಲಿ ಮೂಟೆಗಟ್ಟಲೆ ತರ್ಕ ನಡೆದಿತ್ತು. ಹಾದು ಹೋದವರಿಬ್ಬರು ಕಂಡು ನಕ್ಕಿದ್ದೂ ಆಯ್ತು. ನಾನಾಗ ನಡು ರಸ್ತೆಯಲ್ಲಿದ್ದೆ ಎಂಬ ಯೋಚನೆಯು ಬಂದಿರಲಿಲ್ಲ ನನ್ನ ತಲೆಗೆ. ನಾ ಮಾಯೆಯೊ ನನ್ನೊಳು ಮಾಯೆಯೊ ತಿಳಿಯದೆ ನಾನೂ ನಕ್ಕೆ. ತಿರು ತಿರುಗಿ ಮತ್ತದೇ ಗೊಂದಲದ ಹುತ್ತದೊಳಗೆ ಪ್ರಶ್ನೆ ಬುಸುಗುಡುತ್ತಿತ್ತು. ಹೇಗೋ ನಡೆದು ಬಸ್ ನಿಲ್ದಾಣ ತಲುಪಿದೆ. ಖಾಲಿ ಕೂತಿದ್ದ ಬೆಂಚೊಂದು ನನ್ನನ್ನು ಕಾಯುತ್ತಿತ್ತು.

೩೦ ವರ್ಷಗಳ ಹಿಂದೆ ಒಲ್ಲದ ಮನಸ್ಸಿಂದ ಇಂಜಿನಿಯರಿಂಗ್ ಪದವಿ ಪಡೆದು  ಖಾಸಗಿ ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿ ಬೆಂಗಳೂರಿನ ಬಾಯೊಳಗೆ ಬಂದಾಗ ಹಣ ಗಳಿಸಿ ಇನ್ನೊಂದೆರಡು ವರ್ಷಗಳೊಳಗೆ ಊರಿಗೆ ಹೋಗಿ ವ್ಯವಸಾಯ ಮಾಡಬೇಕೆಂಬ ಮಹದಾಸೆ ಇತ್ತು ಮನಸ್ಸಲ್ಲಿ. ಅದಕ್ಕೆಂದೆ ಪರವೂರಾದ ಬೆಂಗಳೂರನ್ನು ಬಾಡಿಗೆ ನೆಲದಂತೆಯೇ ಕಂಡೆ, ಇಂದೂ ಕಾಣುತ್ತಿದ್ದೇನೆ. ಹಾಗಾಗಿಯೇ ಬಾಡಿಗೆಯ ಊರು ಬೇಡಾಗಿದೆ. ಆದರೆ ಬದುಕಿನ ಬೇರುಗಳು ಆಗಲೇ ನೆಲದಲ್ಲಿ ಕಿತ್ತು ತೆಗೆದರೆ ಜೀವವೇ ಹೋಗುವಂತೆ ಹೂತುಹೋಗಿವೆ.
            ಕೆಲಸಕ್ಕೆ ಸೇರಿದ ಮೊದಲೆರಡು ವರ್ಷ ಅದಮ್ಯ ಆತ್ಮ ವಿಶ್ವಾಸವಿತ್ತು. ಮಿತವ್ಯಯದಿಂದ ಒಂದಷ್ಟು ಉಳಿಸಿದೆ. ಅಪ್ಪ ಅಮ್ಮನಲ್ಲಿ ನನ್ನ ಬಹುಕಾಲದ ಕನಸನ್ನು ತೋಡಿಕೊಂಡಾಗ ಅವರೇನು ಖುಷಿ ಪಟ್ಟಂತೆ ಕಾಣಲಿಲ್ಲ. ಒಬ್ಬರ ಜೀವನ ಇನ್ನೊಬ್ಬರ ಕನಸಾಗಿರಬಹುದು ಎಂಬಂತೆ, ಅವರಂತೆ ಹಳ್ಳಿಗೆ ಹೋಗಿ ತಂಗಾಳಿಯ ತಂಪಲ್ಲಿ ಕೂತು ನಾ ನೆಟ್ಟ ಪೈರು ತೆನೆ ತುಂಬುವುದನ್ನು ಕಾಣುವ ಆಸೆ ನನ್ನದಾಗಿದ್ದರೆ ನನ್ನಂತೆ ಪಟ್ಟಣದಲ್ಲಿನ ಐಷಾರಾಮ ಅವರ ಕನಸಾಗಿತ್ತೇನೊ. ಅವರನ್ನು ದೂರುವುದಿಲ್ಲ ಪಾಪ ಅನುಭವಿಸದ ಜೀವನ ಯಾವಾಗಲೂ ಮನುಷ್ಯನನ್ನು ಸೆಳೆಯುವುದು ಜಾಸ್ತಿ. ನಾನು ಊರಿಗೆ ಬರುತ್ತೇನೆಂದಾಗ ನೋವಾದರೂ ತೋರಿಸಿಕೊಳ್ಳದೆ ಅಪ್ಪ ಅಂದರು, ಇನ್ನೊಂದು ವರ್ಷ ಇದ್ದರೆ ಇನ್ನೊಂದೊ ಎರಡೊ ಲಕ್ಷ ಉಳಿಸಬಹುದಲ್ಲ. ನನಗೂ ಹೌದೆನಿಸಿತು. ಇನ್ನೊಂದು ಗದ್ದೆಯನ್ನು ದುಡ್ಡಲ್ಲಿ ಕೊಳ್ಳಬಹುದು ಎಂದುಕೊಂಡೆ.

ಆಗ ನಾನು ಏನನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ಒಂದು ಹನಿ ಯೋಚನೆಯೂ ಇರಲಿಲ್ಲ ನನಗೆ. ಹಾಗೆ ಹೇಳಿ ವರ್ಷಗಳೆರೆಡು ಕಳೆದವು. ನನ್ನ ಕನಸು ಒಂಚೂರು ಮಸುಕಾಗಲಿಲ್ಲ. ಇನ್ನೊಮ್ಮೆ ಹೊರಡುವ ತಯಾರಿ ಮಾಡಿದೆ. ಮ್ಯಾನೇಜರ್ ನಾನು ಪ್ರಮೋಷನ್ ಗೆ " ಮೋಸ್ಟ್ ಎಲಿಜಿಬಲ್ ಕ್ಯಾಂಡಿಡೇಟ್" ಆಗಿರೋದ್ರಿಂದ  ಹೊತ್ತಲ್ಲಿ ಕೆಲಸ ಬಿಡೋದು ಬುದ್ಧಿವಂತರ ಲಕ್ಷಣ ಅಲ್ಲವೇ ಅಲ್ಲ ಎಂದರು. ಜಾಲದಿಂದ ಪಾರಾಗುತ್ತಿದ್ದೆನೇನೊ, ಆದರೆ ಅದೇ ಆಫೀಸಿನಲ್ಲೊಂದು ಪಾಶಕ್ಕೆ ಸಿಲುಕಿದ್ದೆ. ಅದೇ ಪ್ರೀತಿಯ ಪ್ರೇಮಪಾಶ. ಅವಳು ನನ್ನೊಟ್ಟಿಗೆ ಕೆಲಸ ಮಾಡುತ್ತಿದ್ದಳು. ಒಬ್ಬರನ್ನೊಬ್ಬರು ಪರಸ್ಪರ ಒಪ್ಪುವಾಗಲೇ ಹೇಳಿದ್ದೆ ನನ್ನ ಕನಸೇನೆಂದು. ಆಗ ಸರಿ ಅಂದಿದ್ದಳು. ಆದರೆ ಈಗ ಹೊಸರಾಗ ತೆಗೆದಳು. ವಿಚಾರ ಮನೆಯಲ್ಲಿ ಹೇಳಿದಾಗ ಮನೆಯವರು ಮದುವೆಗೆ ಕೂಡಲೇ ಸಮ್ಮತಿಸಿದರು. ಈಗ ಅವರಿಗೆ ಪ್ರೇಮವಿವಾಹವನ್ನು ವಿರೋಧಿಸುವುದಕ್ಕಿಂತ ನನ್ನ ವ್ಯವಸಾಯದ ಹುಚ್ಚು ಬಿಡಿಸುವುದು ಅಗತ್ಯವಾಗಿತ್ತು. ಆದರೆ ಪ್ರೀತಿ ನನ್ನ ಕನಸುಗಳಿಗೆ ಕೊಳ್ಳಿ ಇಡುವಂತೆ ಆಡಿದ ಮಾತ್ಯಾಕೋ ಮನಸ್ಸನ್ನು ಅತೀವ ಚುಚ್ಚಿದವು. ಬಿಟ್ಟು ಬಿಡುವ ಮದುವೆ ವಿಚಾರ, ನನ್ನ ಕನಸಿಗೆ ಅದು ಪೂರಕವಾಗಿಲ್ಲ ಅಂದುಕೊಂಡೆ. ಸ್ವಲ್ಪ ದಿನ ಅವಳಿಂದ ದೂರವೂ ಇದ್ದೆಆದರೆ ಹೇಳಿಕೇಳಿ ಪ್ರಕೃತಿ ಪ್ರೇಮಿ ನಾನು. ಒಂದು ಹೆಣ್ಣಿನ ಮನಸನ್ನು ಹೇಗೆ ನೋಯಿಸಿಯೇನು? ಮುಖ್ಯವಾಗಿ ವರ್ಷಗಳ ಪ್ರೀತಿ ಸಂಬಂಧ ಹೇಗೆ ದೂರವಾಗಲು ಬಂದೀತು? ಮತ್ತೆ ಮಾತಾಡಿಸಿದೆ. ಪ್ರೀತಿ ಕುರುಡು ಎಂಬುದು ಮತ್ತೊಮ್ಮೆ ಸಾಭೀತಾಯಿತು. ಆಕೆಯೂ ಒಪ್ಪಿ ನಮ್ಮ ಮದುವೆಯ ಅತ್ಯಂತ ಸುಂದರವಾದ ಇನ್ನೊಂದೆರಡು ವರ್ಷವನ್ನು ಇಲ್ಲಿ ಕಳೆದು ಹೋಗುವ ಎಂದಳು.

ಅವಳ ಕೆನ್ನೆಯ ಗುಳಿಯಲ್ಲಿ ಕಳೆದು ಹೋದ ನನಗೆ, ಗುಳಿಕೆನ್ನೆ ನೋಡುತ್ತಾ ಇನ್ನೆರೆಡು ವರ್ಷ ಕಳೆಯುವುದು ಕಷ್ಟವೇ ?ಅನ್ನಿಸಿತು. ಅಂತು ಮದುವೆ ಮುಗಿಯಿತು. ನಾ ಎಣಿಸಿದಂತೆ ಇಬ್ಬರ ಸಂಬಳದಲ್ಲಿ ಅತಿ ಹೆಚ್ಚು ಉಳಿಸಬಹುದು ಎಂಬ ಎಣಿಕೆಗೆ ವಿರುದ್ಧವಾಗಿ ಮೊದಲು ಗದ್ದೆ ಕೊಳ್ಳಲು ಕೂಡಿಟ್ಟ ಹಣವೂ ನಮ್ಮ ದರ್ಬಾರಲ್ಲಿ ಕರಗಿ ಹೋಯಿತು. ನನ್ನ ಕನಸೀಗ ಕಾಲಿಗೆ ಪೆಟ್ಟು ಬಿದ್ದು ಕುಂಟುತ್ತಿತ್ತು. ಆದರೂ ಬದುಕಿತ್ತು. ಎರಡೆನೆಯ ವರ್ಷಕ್ಕೆ ಕಾಲಿಟ್ಟಾಗ ಲೋಕ ನಿಯಮದಂತೆ ನಾನು ತಂದೆಯಾಗುತ್ತಿದ್ದೆ. ಪ್ರೀತಿ ಪ್ರತಿ ಕ್ಷಣವೂ ನಾನು ಅವಳ ಬಳಿಯೇ ಇರಬೇಕೆಂದು ಬಯಸುತ್ತಿದ್ದಳು. ಮುಖ್ಯವಾಗಿ ಅವಳು ಭಾರ ಎತ್ತದಂತೆ ಹೆಚ್ಚು ನಡೆಯದಂತೆ ನೋಡಿಕೊಳ್ಳಬೇಕೆಂದು ಡಾಕ್ಟರ್ ಕಣ್ಣಗಲಿಸಿ ಹೇಳಿದ್ದರು ಅಥವಾ ಹೆದರಿಸಿದ್ದರು ಎನ್ನಬಹುದು. ಪರಿಸ್ಥಿತಿಯಲ್ಲಿ ಅವಳನ್ನು ಕರೆದುಕೊಂಡು ಹೋಗುವುದು  ಅಥವಾ ಬಿಟ್ಟು ಹೋಗುವುದು ಎರಡೂ ನ್ಯಾಯ ಸಮ್ಮತವಲ್ಲ. ಅವಳ ಗರ್ಭದ ಕೂಸು ಚೆನ್ನಾಗಿಯೇ ಬೆಳೆಯುತ್ತಿತ್ತು, ಆದರೆ ನನ್ನ ಕನಸಿನ ಕೂಸು ಅತೀವ ಸೊರಗಿತ್ತು. ನಾನೀಗ ಮೂಕ ಪ್ರೇಕ್ಷಕನಂತಾಗಿದ್ದೆ. ಖೆಡ್ಡಾಕ್ಕೆ ಬೀಳುವಾಗ ತಿಳಿಯಲಿಲ್ಲ, ಆದರೀಗ ನನ್ನ ಭವಿಷ್ಯ ಮೋಡಕಟ್ಟಿದ ಮುಗಿಲಾಗಿದೆ. ಎಲ್ಲಾ ಮಸುಕು. ಆದರೂ ನಾನು ಕೈಲಾಗದವ. ಕೃಷಿಯ ವಿಷಯ ತೆಗೆದಾಗಲೆಲ್ಲಾ ಪ್ರೀತಿ ಕಣ್ಣೀರು ತೆಗೆದು ಬಾಯಿ ಮುಚ್ಚಿಸುತ್ತಿದ್ದಳು. ಮೊದಲ ಮಗು ಆದ ಮೇಲೆ ಎರಡನೆಯದು. ಈಗ ಅವೆರಡೂ ಬೆಳೆದು ಮದುವೆಗೆ ಸಿದ್ಧವಾಗಿವೆ.
ನನ್ನ ತಲೆಕೂದಲು ನೆರೆತಿದೆ. ಆದರೆ ವ್ಯತ್ಯಾಸವೇನಿಲ್ಲ, ಪ್ರಶ್ನೆ ಪತ್ರಿಕೆ ಅದೆ, ಆದರು ಉತ್ತರ ಹುಡುಕಲು ಸೋತಿದ್ದೇನೆ. ಆದರು ಆಗೊಮ್ಮೊ ಈಗೊಮ್ಮೊ  ನನ್ನದೆಯ ಕನಸು ಎಲ್ಲೋ ಕ್ಷೀಣವಾಗಿ ಉಸಿರಾಡಿದ ಸದ್ದು ಕೇಳುತ್ತಿದೆ. ಈಗ ಭುಜದೆತ್ತರಕ್ಕೆ ಬೆಳೆದ ಒಬ್ಬ ಮಗ, ಒಬ್ಬಳು ಮಗಳ ಜವಾಬ್ದಾರಿಯುತ ತಂದೆ ನಾನು. ಆದರೆ ನಾನ್ಯಾವಾಗ ಜವಾಬ್ದಾರಿ ಹೊತ್ತಿರಲಿಲ್ಲಕನಸನ್ನು ಪಣವಿಟ್ಟರೂ ನನ್ನ ತ್ಯಾಗದ ಬಗ್ಗೆ ಚೂರು ಹೆಮ್ಮೆ ಅನ್ನಿಸಿತುಒಳಗೆ ಕೊರಗಂತು ಇದ್ದೇ ಇತ್ತು. ಇಷ್ಟೆಲ್ಲಾ ಯೋಚಿಸಿ ಆಗುವಾಗ ನಾ ಕೂತಿದ್ದ ಬಸ್ ನಿಲ್ದಾಣದಿಂದ ನನ್ನನ್ನು ಮನೆ ತಲುಪಿಸಬೇಕಾದ ಎಲ್ಲಾ ಬಸ್ ಗಳು ಹೋಗಿದ್ದವು. ಸಂದರ್ಭಕ್ಕೂ ನನ್ನ ಜೀವನಕ್ಕೂ ಎಷ್ಟು ಸಾಮ್ಯವಿದೆ. ನನ್ನನ್ನು ನನ್ನತನಡೆಗೆ ತಲುಪಿಸುವ ದಾರಿಯು ಮುಚ್ಚಿದೆ ಅನ್ನಿಸಿತು. ಆಳವಾದ ನಿಟ್ಟುಸಿರಿನ ಶಬ್ದಕ್ಕೆ ಎದೆ ಬಡಿತವೂ ಜೊತೆಯಾಯಿತು. ಗಂಟೆ ಕಂಡರೆ ೧೦:೪೦. ಒಂದು ಆಟೋದ ಸುಳಿವೂ ಇಲ್ಲ. ಆಕಾಶ ನೋಡುತ್ತಾ ಚಂದ್ರನಿಗೂ ಚುಕ್ಕಿಗಳಿಗೂ ನಡುವೆ ಗೆರೆ ಎಳೆಯ ತೊಡಗಿದೆ. ಚಂದ್ರ ಓಡುತ್ತಲೇ ಇದ್ದ ಗೆರೆಗಳ ಅಳತೆಯನ್ನು ಮೀರಿ. ಪ್ರಶಾಂತ ಮೌನವನ್ನು ಸೀಳಿದ ಒಂದು ಬಸ್ ನನ್ನತ್ತ ಬಂತು, ಮುಖದಲ್ಲೀಗ ಅರ್ಧಚಂದ್ರಾಕಾರದ ನಗು. ಪಕ್ಕನೆ ಏನೋ ಹೊಳೆದಂತಾಯಿತು. ಬಸ್ಸು ಹತ್ತಿ ಹತ್ತು - ಹನ್ನೆರೆಡು ಕರೆಮಾಡಿದೆ. ಚಂದ್ರಾಕಾರ ಮುಖದಲ್ಲಿನ್ನೂ ಹಾಗೇ ಇತ್ತು. ಇನ್ನು ಎಂದೆಂದಿಗೂ ಇರಬಹುದೇನೋ ಅನ್ನುವ ಕುರುಹು ಸಿಕ್ಕಿತು.

ಮಾರನೆ ದಿನ ರಜೆ ಹಾಕಿದೆ. ಒಂದು ಘಳಿಗೆಯೂ ಮನೆಯಲ್ಲಿರಲಿಲ್ಲ. ಎಲ್ಲವೂ ವ್ಯವಸ್ಥಿತವಾಗಿದೆ ಅನ್ನಿಸಿದ ಮೇಲೆ ಕೊಂಚ ತಣಿದೆ. ಅದರ ಮಾರನೆಯ ದಿನ ಸಿದ್ಧಾಪುರದ ಬಳಿಯ ದಟ್ಟ ಹಳ್ಳಿಯೊಂದನ್ನು ಬಂದು ತಲುಪಿದೆ. ಕಣ್ಣು ರಾತ್ರಿಯ ಪ್ರಯಾಣದ ಬಗ್ಗೆತಲೆಕೆಡಿಸಿಕೊಳ್ಳದೆ ತುಂಬಿಕೊಳ್ಳಬಹುದಾದಷ್ಟು ಹಸಿರು ಚಿತ್ರಗಳನ್ನು ಕಣ್ತುಂಬಿಕೊಂಡಿತು. ಆಕಾಶದ ನೀಲಿಯೊಂದನ್ನು ಬಿಟ್ಟರೆ ಅಲ್ಲಿದ್ದುದು ಹಸಿರು ಬಣ್ಣದ ಏಕತಾನತೆಯೊಂದೆ. ಪ್ರಕೃತಿ ನನ್ನನ್ನು ಕರೆಸಿಕೊಳ್ಳಲು ಇಷ್ಟು ತಡಮಾಡಿತು ಅನಿಸಿದರೂ, ತುಂಬಾ ತಡವಾಗಲಿಲ್ಲವಲ್ಲ ಎಂದು ಸಮಾಧಾನವಾಯಿತು. ಅಪ್ಪನ ಸ್ನೇಹಿತರೊಬ್ಬರಿಗೆ ನಿನ್ನೆಯೆ ಕರೆ ಮಾಡಿ ಇಲ್ಲಿ ಎಕ್ರೆ ಜಾಗ ಕೊಂಡು, ತಾತ್ಕಾಲಿಕಕ್ಕಾದರು ಒಂದು ಚಿಕ್ಕ ಮನೆಯನ್ನು ಗೊತ್ತು ಮಾಡಿಕೊಂಡು, ಮಾಡಬೇಕಿದ್ದ ಇತರ ವ್ಯವಸ್ಥೆಗಳೊಂದಿಗೆ ಒಂದೆರಡು ಜೊತೆ ಬಟ್ಟೆಯೊಟ್ಟಿಗೆ ಊರು ಬಿಟ್ಟಿದ್ದು ನನಗೇ ಇನ್ನು ನಂಬಲಾಗುತ್ತಿಲ್ಲ. ಆಫೀಸಿಗೆ ರಾಜಿನಾಮೆಯನ್ನು ಬರೆದು ಕಳಿಸುವುದರೊಂದಿಗೆ, ನಾನು ಇಂತಲ್ಲಿದ್ದೇನೆ, ಕರೆಯುವ ಪ್ರಯತ್ನ ಮಾಡಬೇಡಿ ಎಂತಲೂ ಮನೆಗೆ ಪತ್ರ ಬರೆದೆ. ಮಕ್ಕಳ ಮದುವೆಗೆ ಬೇಕಾದ್ದೆಲ್ಲವನ್ನು ಕೂಡಿಟ್ಟು, ಹೆಂಡತಿಗು ಹೆತ್ತವರಿಗು ಸಾಕಷ್ಟು ಬರೆದಿಟ್ಟು ನನಗೆ ಬೇಕಾದ್ದಷ್ಟು ಹಣವನ್ನು ಮಾತ್ರ ಇಟ್ಟುಕೊಂಡು ಒಂದು ಆಳನ್ನು ಹುಡುಕಿಕೊಂಡು ಮೊದಲೆ ಗೊತ್ತು ಮಾಡಿದ ಮನೆ ಸೇರಿದೆ. ಆಳು ಕೆಂಪ, ಹೆಂಡತಿ ಮಕ್ಕಳು ಯಾರು ಇಲ್ಲದ ನಂಬಿಕಸ್ತ. ತಲೆಯಲ್ಲೊಂದು ಹಾಳೆ, ಸೊಂಟದಲ್ಲೊಂದು ಕತ್ತಿ ನೆನಪಾದರೆ ಊದಲು ಒಂದು ಕೊಳಲು ಇವುಗಳೇ ಅವನ ಆಯುಧ. ಅವನಿಗೆ ಜೊತೆಗಾರ ನಾಯಿ ಕರಿಯ ನನಗೆ ಬಹು ಬೇಗ ಆಪ್ತರಾದರು.ನಾನು ಕೊಂಡ ಹೊಲ ಗದ್ದೆಗಳನ್ನು ಬೆಳಿಗ್ಗೆ ಎದ್ದು ಸುತ್ತುವುದು ನನ್ನ ಮತ್ತು ಕರಿಯನ ಅಭ್ಯಾಸವಾಗಿತ್ತು. ಅಷ್ಟರಲ್ಲಿ ಕೆಂಪನ ಕಪ್ಪು ಚಾ ತಯಾರಿರುತ್ತಿತ್ತು. ಮುಂದೆ ಒಂದು ವಾರ ಇಡೀ ಊರನ್ನು ಸುತ್ತಿ ಪರಿಚಯವಾಗಲು ಹವಣಿಸಿದೆ. ಜೊತೆಗೆ ಕೆಂಪ ಇದ್ದರೆ ಹತ್ತಾಳಿನ ಬಲ. ದಿನಾಲು ಕೂತು ಮುಂದಿನ ಕೆಲಸಗಳ ಬಗ್ಗೆ, ಆಳುಗಳನ್ನು ಗೊತ್ತು ಮಾಡುವ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದೆವು. ೧೫ ದಿನಗಳಲ್ಲಾಗಲೆ ಕೆಂಪ ನಂಬಿಕಸ್ತ ಒಕ್ಕಲಿನ ಮನೆಗಳನ್ನು ಗೊತ್ತು ಮಾಡಿಕೊಂಡು ಬಂದ. ಅವರು ಮುಂದೆ ಇಲ್ಲೆ ಅಕ್ಕ ಪಕ್ಕದಲ್ಲಿ ಸಂಸಾರ ಹೂಡುವುದೆಂದು ತೀರ್ಮಾನವಾಯಿತು. ಅವರ ಸಂಬಳವನ್ನು ಗೊತ್ತು ಮಾಡಿಯಾಯಿತು. ಇದರಲ್ಲೆಲ್ಲ ಕೆಂಪ ನಿಪುಣ, ಯಾವ ಕೆಲಸಕ್ಕೆ ಎಷ್ಟು ಕೊಡುವುದು ಎಂಬ ಲೆಕ್ಕವನ್ನೆಲ್ಲ ಅವನೇ ಹೇಳುತ್ತಿದ್ದ. ಹೊರಗಿನ ಪ್ರಪಂಚದ ಹೊಟ್ಟೆಬಾಕತನದ, ಅನಾಗರಿಕವಾಗಿ ಹಗಲುದರೋಡೆ ಮಾಡುವ ಪ್ರವೃತ್ತಿ ಇಲ್ಲಿನ ಮಂದಿಗಿರಲಿಲ್ಲ. ಇವರು ಅಲ್ಪ ತೃಪ್ತರುಆಳುಗಳಿಗೆ ಓದುವ ವಯಸ್ಸಿನ ಚಿಕ್ಕ ಮಕ್ಕಳಿದ್ದವು. ಇವಕ್ಕೆ ಮುಂದೆ ನಾನೆ ಪುರುಸೊತ್ತಾದಾಗಲೆಲ್ಲ ಮರದ ಕೆಳಗೆ ಪಾಠ ಮಾಡಲು ಶುರು ಮಾಡಿದೆ. ಬಡ ಜೀವಗಳಿಗೇನೊ ಸಂಭ್ರಮ ತಮ್ಮ ಮಕ್ಕಳು ಒಂದೆರಡು ತಮಗರ್ಥವಾಗದ "ಇಂಗ್ಲೀಸಿ"ನಲ್ಲಿ ಏನೊ ಅಂದಾಗ. ನಡುವೆ ಮನೆಯಿಂದ ಬರುವಷ್ಟು ಬೆದರಿಕೆಯ ಪತ್ರಗಳು ಬಂದವು. ಮೊಬೈಲ್ ನೆಟ್ ವರ್ಕ್ ಇಲ್ಲದ್ದನ್ನು ಅದೆಷ್ಟು ಸಲ ನೆನೆದು ಖುಷಿಪಟ್ಟೆನೋ ಕಾಣೆ. ನಾನೂ ತಿರುಗಿ ಬರೆದೆ. ಜೀವನದ ಪ್ರತಿ ಕ್ಷಣವನ್ನು ನಿಮ್ಮೆಲ್ಲರಿಗಾಗಿ ಕಳೆದಿದ್ದೇನೆ. ಇನ್ನು ಕೆಲವು ವರ್ಷಗಳಾದರೂ ನನ್ನ ಜೀವನದ ಮೇಲಿನ ಪೂರ್ತಿ ಹಕ್ಕನ್ನು ನನಗೆ ಕೊಡಿ. ಅತೀ ತಡವಾಗಿ ಬದುಕೊಂದನ್ನು ಆರಿಸಿಕೊಂಡಿದ್ದೇನೆ, ಬದುಕಲು ಬಿಡಿ. ಧರ್ಮಪತ್ನಿಯಾದ ಪ್ರೀತಿಯಲ್ಲಿ ವಿನಂತಿಸುವುದಿಷ್ಟೆ. ನನ್ನಿಂದಾದ ಕರ್ತವ್ಯವನ್ನೆಲ್ಲ ಪತಿಯಾಗಿ ನಿಷ್ಠೆಯಿಂದ ಮಾಡಿದ್ದೇನೆ. ನಿನ್ನನ್ನು ಬಿಟ್ಟಿರುವುದು ನನಗೂ ಅತೀವ ಕಷ್ಟ. ಆದರೆ ನನ್ನ ಕನಸಿನ ಸಲುವಾಗಿ ನಿನ್ನನ್ನು ಬಲಿಕೊಡಲಾರೆ. ಸ್ವಂತ ಇಚ್ಛೆಯಿಂದ ಬರುವುದಾದರೆ ನನ್ನ ಮನೆ ಬಾಗಿಲು ಯಾವಾಗಲೂ ತೆರೆದಿದೆ. ಇಲ್ಲಿರುವ ಖುಷಿಯನ್ನು ಅರಿತವರು ಮಾತ್ರ ಬಲ್ಲರು. ಮಕ್ಕಳು ಆಗಲೇ ಅವರ ಸಂಗಾತಿಗಳನ್ನು ಹುಡುಕಿಕೊಂಡಿದ್ದಾರೆ. ಮದುವೆಗೆ ಒಬ್ಬ ಹೆಮ್ಮೆಯ ಅಪ್ಪನಾಗಿ ಬಂದೇ ಬರುವೆ.
                                                                                                                  ಇಂತೀ ನಿನ್ನವ,
                                                                                                                    ಸಂತೋಷ
ಬರುವಳೆಂಬ ನಿರೀಕ್ಷೆ ಇರಲಿಲ್ಲ ಆದರೆ ಒಂದು ತಿಂಗಳ ನಂತರ ಒಂದು ಮುಂಜಾನೆ ನಮ್ಮ ಕರಿಯ ರಸ್ತೆ ನೋಡಿ ಜೋರಾಗಿ ಬೊಗಳುತ್ತಿದ್ದ. ಎದ್ದು ರಸ್ತೆಯೆಡೆ ದಿಟ್ಟಿಸಿದಾಗ ನನ್ನ ಹೆಂಡತಿಯನ್ನು ಹೋಲುವ ದೇಹ ನಡೆದು ಬರುತ್ತಿತ್ತು. ಜೊತೆಗೆ ಮಕ್ಕಳಿದ್ದರು. ಕೈಯಲ್ಲಿ ಒಬ್ಬರದಾಗುವಷ್ಟು ಲಗ್ಗೇಜ್ ಇತ್ತು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಪ್ರೀತಿ ಮತ್ತೆ ನನ್ನ ಪರಿಧಿಯೊಳಗೆ ಬಂದಾಗಿತ್ತು. ಒಕ್ಕಲ ಮಕ್ಕಳು, ಹೆಂಗಸರು  ಕಣ್ಣು ಕಣ್ಣು ಬಿಟ್ಟು ಕಂಡರು. ಪ್ರೀತಿ ಮಗುವೊಂದರ ಗಲ್ಲವನ್ನು ಪ್ರೀತಿಯಿಂದ ಸವರಿ ನಕ್ಕಳು. ಮಗು ನಾಚಿತು. ನನ್ನದು ಸರಿಯಾದ ಆಯ್ಕೆ ಎಂಬುದು ಇಷ್ಟು ವರ್ಷಗಳ ನಂತರ ಅನ್ನಿಸಿತು. ಸುಮ್ಮನೆ ನಕ್ಕೆ. ಇನ್ನೊಂದು ವಾರಕ್ಕೆ ಮಕ್ಕಳು ಮರಳಿದರು. ಮುಂದೆ ನನ್ನ ಚಂದದ ಊರು ನನ್ನ ಮಕ್ಕಳ ಮೊಮ್ಮಕ್ಕಳ ನೆಚ್ಚಿನ ಬೇಸಿಗೆ ತಾಣವಾಯಿತು.
ಧನ್ಯವಾದಗಳು,
ಭವ್ಯ