ನಾ ಹುಟ್ಟಿದ ಒಂದು ಪುಟ್ಟ ಊರು. ಆ ಊರಿನಲ್ಲಿಯ ಮನೆಗಳೆಲ್ಲ ನನಗೆ ಪರಿಚಿತ. ಬಹುಶ: ಇದೊಂದು ಆಧುನಿಕ ಜಗತ್ತಿನ ಕಲ್ಪನೆಗೆ ದೂರವಾದ ಸಂಗತಿ. ನನ್ನೂರು ಎಂದು ಸ್ವಾರ್ಥದಿಂದ ಹೇಳಿದ್ದು, ಅಲ್ಲಿಯವರೆಲ್ಲ ನನ್ನವರು ಎಂಬ ಆತ್ಮೀಯತೆಯಿಂದ.
ನನ್ನಲ್ಲಿ ಕವಿತ್ವ ಎಂಬುದೇನಾದರು ಹುಟ್ಟಿದ್ದರೆ ಅದನ್ನು ಬೆಳೆಸಿದ್ದು ನನ್ನ ಅಜ್ಜಿ ಮನೆ ಇರುವ ಕಿರಿದಾದ ಗ್ರಾಮ, ಕುರ್ಪಾಡಿ. ತಲೆ ಎತ್ತಿದರೆ ಹಚ್ಚ ಹಸಿರು ಚಲ್ಲಿ ನಿಂತ ಕಾಡುಗಳ ಸಾಲು, ಅವು ಹೊತ್ತು ನಿಂತ ಸ್ವಚ್ಛ ಉಸಿರಿನ ಸ್ವಸ್ಥ ಗ್ರಾಮ.
ಆಧುನಿಕತೆಯ ಅಬ್ಬರದ ನಿಕಟ ಪರಿಚಯವಿಲ್ಲದ್ದಕ್ಕೋ ಏನೋ ಈ ಗ್ರಾಮ ಇನ್ನೂ ನನ್ನ ಮನಸ್ಸಿಗೆ ಬಲು ಹತ್ತಿರ. ಮುಗ್ಧತೆಯ ರೂವಾರಿ, ಪ್ರಕೃತಿಯಮ್ಮನ ಪುಟ್ಟ ಮರಿ, ಎಂತಹವರನ್ನೂ ಕವಿಯಾಗಿಸಬಲ್ಲ ಧೀಮಂತ ಗುರು.
ಈಗಲೂ ನಾ ಹುಟ್ಟಿದ ಹಳೆಮನೆಯ ಮೆಟ್ಟಿಲಲ್ಲೊಮ್ಮೆ ಕಾಲೂರಿ ಕೂತಾಗ, ನಾ ಆಡಿದ ಗೊಂಬೆಯಾಟಗಳ ನೆನಪಾಗುತ್ತದೆ. ಪೆನ್ಸಿಲ್, ರಬ್ಬರ್ ಗಾಗಿ ಧರಣಿ ಕೂತು ಕೊನೆಗೆ ಸಿಕ್ಕಾಗ ಗೆದ್ದೆ ಎಂದು ಉಬ್ಬಿದ ಪ್ರತಿ ನಿಮಿಷವೂ ನೆನಪಿನಲ್ಲಿದೆ. ಅದೇ ಮೆಟ್ಟಿಲ ಮೇಲೆ ಕೂತು ಓದುತ್ತಿದ್ದ ಬಾಲಮಂಗಳ, ತುಂತುರು ಬಾಲ್ಯವನ್ನು ಇನ್ನಷ್ಟು ಚಂದವಾಗಿಸಿತ್ತು.
ಹಾಲು ಹಲ್ಲು ಉದುರಿದಾಗ ಹಾಲುಗಲ್ಲದ ಮೇಲೆ ಒತ್ತರಿಸಿ ಬಂದ ಕಣ್ಣೀರ ನೆನಪಿದೆ, ಹಿರಿಯರನ್ನನುಸರಿಸಿ 40 ರ ಹರೆಯದ ಹೆಂಗಸರನ್ನೆಲ್ಲಾ ಅಕ್ಕ ಎಂದು ಕರೆಯುತ್ತಿದ್ದ ನಮಗೆ ಆಂಟೀ ಪದದ ಪರಿಚಯ ಅಷ್ಟು ಬೇಗ ಆಗಿರಲಿಲ್ಲ.
ಒಂದೊಮ್ಮೆ ಅಕ್ಕ ಎನಿಸಿಕೊಳ್ಳುತ್ತಿದ್ದ ಹೆಂಗಸರ ನೆರೆಗೂದಲು, ಸಂದ ಮಳೆಗಾಲಗಳ ಕಥೆ ಹೇಳುತ್ತಿತು. ಆಗ ಜೀವಕ್ಕೆ ಹತ್ತಿರವಾಗಿದ್ದ ಸಂಬಂಧಗಳು ಈಗ ಅತಿ ದೂರದವು. ಮತ್ತೆನೀತೋ ಹೊಸ ಸಂಬಂಧಗಳನ್ನು ಹೊತ್ತು ಸಾಗುತ್ತಿದೆ ಬದುಕು.
ಜಗತ್ತನ್ನು ಹೊಸ ನಿಲುವಿಂದ ನೋಡುವ ಕಣ್ಣು ಹೊತ್ತು ಮತ್ತೊಮ್ಮೆ ಹಳೇ ಜಗಲಿಯ ಮೆಟ್ಟಿಲಲ್ಲಿ ಕೂತು ನೋಡಿದೆ. ಬದುಕಿನ ಬಣ್ಣ ಬದಲಾಗುತ್ತಿದ್ದ ಪರಿ ಅರ್ಥವಾಗುತ್ತಾ ಹೋಯಿತು. ಜೋಕಾಲಿಯಾಡುತ್ತಿದ್ದ ಬೀಳಿನ ಮರಗಳ ಮಧ್ಯೆ ನಿತ್ತು ನೋಡಿದೆ. ಹಾಗೆ ಮರಗಳನ್ನು ಸವರಬೇಕೆನಿಸಿತು. ಸವರಲು ಪ್ರತಿಸ್ಪಂದನದ ಅನುಭವ ನೀಡಿತು.
ಕಣ್ಣರಳಿಸಿ
ಕಂಡಾಗೆಲ್ಲ ಆ ಅಂಗಳದಲ್ಲಿ ಅಲ್ಲಲ್ಲಿ ಕುಳಿತು ಆಡುತ್ತಿದ್ದ ನನ್ನ ಪುಟ್ಟ ಜೀವ
ಕಾಣುತ್ತದೆ.ಮತ್ತೆ ಮತ್ತೆ ನನ್ನ ಕಂಗಳು ಅರಸುತ್ತವೆ ಕಳೆದ ಬಾಲ್ಯವನ್ನು, ಕಾಲ
ತೆಗೆದುಕೊಂಡ ಮುಗ್ಧತೆಯನ್ನು
ReplyDeleteನಿಮ್ಮ ಅಜ್ಜಿ ಮನೆ ಹಾಗೂ ಸುತ್ತಮುತ್ತಲಿನ ವಾತಾವರಣ ತುಂಬಾ ಚೆನ್ನಾಗಿದೆ. ನೀವು ಪುಣ್ಯ ಮಾಡಿದ್ರಿ ಅನ್ಸುತ್ತೆ. ನಿಮ್ಮ ಸುಂದರ ಬಾಲ್ಯದ ನೆನಪುಗಳನ್ನು, ಆಡಿದ ಆಟಗಳನ್ನು ನೆನೆದು ಸಂತೋಷ ಪಡಬಹುದು. ಎಲ್ಲರಿಗೂ ಅಂತಹ ಭಾಗ್ಯ ಇರುವುದಿಲ್ಲ. ನಮಗೆ ಅಂತಹ ವಾತಾವರಣದಲ್ಲಿ ಯಾವ ಸ್ನೇಹಿತರೂ ಇಲ್ಲ, ಸಂಭಂದಿಕರೂ ಇಲ್ಲ. ಅಂತಹ ಮದುರ ಕ್ಷಣಗಳನ್ನು ಅನುಭವಿಸದ ನನ್ನ ಈ ಜೀವನ ವ್ಯರ್ಥ.