Wednesday 12 February 2014

ಮಲೆನಾಡಿನ ಚಿತ್ರಗಳು- ನಾ ಕಂಡ ಬಗೆ


                                                 
                   ಈ ವಾರವಷ್ಟೇ ಮಲೆನಾಡ ಕ್ಷೇತ್ರ ಸಂದರ್ಶನಕ್ಕೆ ಹೋಗಿದ್ದೆ. ಅದೂ ಒಂದು ರೂಪಾಯಿಯ ಖರ್ಚಿಲ್ಲದಂತೆ. ಪುಟ್ಟ ಪುಟ್ಟಪ್ಪ ಅರ್ಥಾತ್ ಕುವೆಂಪುವಿನ ಮುಗ್ಧ ಆಟ ಪಾಠಗಳ ಸವಿ ನೋಡಿದೆ. ಇನ್ನೂ ನನ್ನ ಮಾತಿನ ಅರ್ಥ ನಿಮಗಾಗದಿದ್ದರೆ ಕುವೆಂಪುವಿನ ಪುಸ್ತಕ ಓದಿದೆ ಎನ್ನಬೇಕಾಗುತ್ತದೆ.
                   ೧೨೦ ಪುಟಗಳಿಗೆ ಮೀರದ ಆದರೆ ನೂರು ವರ್ಷಕ್ಕೆ ಬೇಕಾಗುವ ಸಿಹಿ ಮಿಡಿತಗಳ ಬುತ್ತಿ ಕಟ್ಟಿ ಕೊಡುವ ಜೀವಂತ ಚಿತ್ರ "ಮಲೆನಾಡಿನ ಚಿತ್ರಗಳು" ಪುಸ್ತಕ.
                    ಓದ ಓದುತ್ತಾ ಅಲ್ಲಿನ ಪ್ರತಿಯೊಂದು ಪಾತ್ರಗಳೂ ಜೀವಂತವಾಗಿ ಬಂದು 'ಇವರೆನ್ನೆಲ್ಲೋ ನೋಡಿದ್ದೇನೆ' ಎಂಬ ಭ್ರಮೆ ಹುಟ್ಟಿಸುತ್ತವೆ. ನೀವು ಹಳ್ಳಿಯ ಜೀವನವನ್ನು ಸ್ವಲ್ಪ ಸಮಯಕ್ಕಾದರೂ ಅನುಭವಿಸಿದ್ದಲ್ಲಿ, ಆ ಮುದ್ದು ಕ್ಷಣಗಳು ಮೃದುವಾಗಿ ಎದೆಗೊದೆಯದೆ ಇರಲಾರವು. ಹುಟ್ಟು ಪಟ್ಟಣಿಗರಾಗಿದ್ದರೆ ಕ್ಷಣಕ್ಕಾದರೂ ಮಲೆನಾಡ ಬದುಕು ನಿಮ್ಮನ್ನು ಸ್ವಲ್ಪವಾದರೂ ಹಂಗಿಸಿ ಅಣುಕಿಸಿ ತಮಾಷೆ ನೋಡುವುದು.
                    ಮೆಲು ಹಾಸ್ಯ ಮುದ ನೀಡುತ್ತದೆ. ಅಲ್ಲಲ್ಲಿ ಕುವೆಂಪು ಪ್ರಕೃತಿಗೆ ಮಣಿದು ಕ್ಷಣಕಾಲವಾದರೂ ಮೈಮರೆತು ವರ್ಣಿಸದೆ ಮುಂದೆ ಹೋಗಲಾರರು.
                     'ಬೇಟೆಗಾರನಿಗೆ ಬೇಟೆಯಾಗದಿದ್ದರೂ ಕಬ್ಬಿಗನಿಗೆ ಬೇಟೆಯಾಯಿತು.', 'ಗಗನದಲ್ಲಿ ತುಂಡು ಮೋಡಗಳು ತುಂಟ ಹುಡುಗರಂತೆ  ತಿಂಗಳನ್ನು ಸುಮ್ಮನೆ ಕಾಡುತ್ತಿದ್ದವು','ಮೌನವನ್ನೇ ಮಲಗಿಸುವ ಜೋಗುಳದಂತಹ ಸವಿದನಿ' ಎಂಬ ಉದ್ಗಾರ ಮನ ತುಂಬುತ್ತವೆ.  ಬದುಕನ್ನು ಸ್ವಾರ್ಥದಾಚೆಗೂ ತೆರೆದುಕೊಳ್ಳುವ ಉದಾರತೆ ಕಲಿಸುತ್ತವೆ. ಓದುಗನನ್ನು ನೇರ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿಸುವ ಪರಿ, ಆತನನ್ನು ಲೇಖನದ ಭಾಗವಾಗಿ ಮುನ್ನಡೆಸುವ ರೀತಿ ಕಚಗುಳಿಯಿಡುತ್ತದೆ.
                    'ಊರಿಗೆ ಅರಸನಾದರೂ ತಾಯಿಗೆ ಮಗ' ಎಂಬಂತೆ ಎಂತಹ ಸಾಧಕ, ಕವಿ, ಲೇಖಕನಾದರೂ, ಆತನಿಗೊಂದು ತುಂಟ ಬಾಲ್ಯ' ಇದ್ದೇ ಇರುತ್ತದೆ. ಅದರ ಸಾಮೀಪ್ಯದ ಒಂದು ನೋಟ ಈ ಪುಸ್ತಕ.
                     ಮಲೆನಾಡಿನ ಗಿರಿಯ ಸಾಲು, ಒಂದೊಂದು ಹಕ್ಕಿಯ ಉಲಿ, ಹಸಿ ನೆಲದ ಮೇಲಿನ ಪ್ರಾಣಿಯ ಹೆಜ್ಜೆಯ ಗುರುತು, ಈಡಿನ ಗುಂಡು, ಸೂರ್ಯಾಸ್ತ, ಚಂದ್ರೋದಯ, ಹಿತ್ತಲ ತೋಟ, ಬಣ್ಣ ಬದಲಿಸುವ ಮೋಡ, ಬದಲಿಸಿದ ಮೋಡದ ಬಣ್ಣಕ್ಕೆ ಬದಲಾಗುವ ಪ್ರಕೃತಿಯ ಭಾವ-ಬಣ್ಣ, ಆಳುಗಳು ಮತ್ತವರ ಬಡತನ, ಬಡತನದಲ್ಲೂ  ಅರಳುವ ಕತೆ, ನಗು, ಜೀವನದ ಪುನಶ್ಚೇತನ, ಅಭ್ಯಂಜನ, ಅತೀ ತುಂಟತನ, ಎಷ್ಟೋ ಆತ್ಮೀಯರ ಸಾವಿನ ನೋವು, ಆ ಸಾವಿನ ಹಿಂದೆ ಮರೆಯಾಗದ ನೆನಪು, ಪ್ರಕೃತಿ ಅಂದಕ್ಕೆ ಮಾರುಹೋಗಿ  ಮೂರ್ಛೆ ಹೋಗುವ ಮಾತು, ಬೆಳಗು- ಬೈಗು, ಬೇಟೆ, ದಂಡೆ ಒಲೆಯಲ್ಲಿ ಕಳ್ಳತನದಲ್ಲಿ ಸುಡುವ ಹಲಸಿನ ಬೀಜ, ತೋಟದಾಚೆಯ  ಭೂತ , ರಾತ್ರಿ ಕಂಡ  ರಾಮ-ರಾವಣರ ಯಕ್ಷಗಾನ ಪ್ರಸಂಗ, ಇವೆ, ಇವೆ ಈ ಪುಸ್ತಕದ ಉಸಿರಾಟ. ಓದುವ ನಮ್ಮ ಕಣ್ಣಾಲಿಗಳು ತೇವವಾಗುತ್ತವೆ. ಬರೆದ ಮನವದೆಂತು ನೆನೆಯಿತೋ ಆ ಕಳೆದ ಬದುಕನ್ನು.
                   ತಮಗೆ ಕಲಿಸಲು ಬರುತ್ತಿದ್ದ ಐಗಳು ಆಧುನಿಕತೆಯ ಹೊಡೆತಕ್ಕೆ ಸಿಲುಕಿ "ಮೇಷ್ಟೈ"ಗಳಾದ್ದು, ಕತೆಗಾರ ಮಂಜಣ್ಣನಿಗೆ ತಾನು ಯಜಮಾನನಾಗಿದ್ದರೆ, ಕತೆ ಹೇಳುವ ಕೆಲಸವೊಂದೇ ಕೊಡುತ್ತಿದ್ದೆ ಎಂದ ಬಾಲ ಕುವೆಂಪು ಜಗತ್ತಿಗೆ ಕತೆ ಹೇಳುತ್ತಾ ಅಬಾಲ ವೃದ್ಧರ 'ಪ್ರೀತಿಯ ಕತೆಯಾಗಿ' ಉಳಿದರು


No comments:

Post a Comment