Wednesday 24 June 2015

ನನ್ನದಾವುದು


ಮಲಗಿದ್ದ ರಾತ್ರಿಯಲಿ ಮನೆಯಿತ್ತು, ಬನವಿತ್ತು
ಜೊತೆಗೂಡಿ ಬಿಡಿಸಿದ್ದ ನೂರಾರು ಒಗಟಿತ್ತು
ಮಕ್ಕಳಿದ್ದವು ಅಲ್ಲೆ ಪಕ್ಕ ಇದ್ದಳು ನಲ್ಲೆ
ಕಾಣದಿರೊ ನಾಳೆಗಳ ಕಂಡಿದ್ದೆ ಕನಸಲ್ಲೆ

 
ಆಗಸದಿ ಮಳೆಯಿತ್ತು, ಸೂರ್ಯ ಮಂಕಾಗಿತ್ತು
ಗುಡುಗು ಸಿಡಿಲೆಲ್ಲವುಗಳಾ ಜಾತ್ರೆ ನೆರೆದಿತ್ತು
ಭುವಿಯೊಳಾಕಾಶವನು ನೆಲೆಗೊಳಿಸುವಾತುರದಿ
ವ್ಯೋಮ ವಾರಿಧಿಗೆನ್ನ ಬದುಕು ಕರೆದೊಯ್ದಿತ್ತು


ಕೈಗೆ ಸಿಕ್ಕಿದನೆಲ್ಲಾ  ಆಯುತ್ತ ನಡೆನಡೆಗೆ
ತುರುಕಿದೆನು ಚಂದಿರನ ತಾರೆಗಳ ಜೋಳಿಗೆಗೆ
ಮುರುಕು ಮಳೆರಾಯನನು ತಿರುತಿರುಗೊ ಗಾಳಿಯನು
ಬಿಡಲಿಲ್ಲ ಬದಿಗಿದ್ದ ಹಾಲುದಾರಿಗಳನ್ನು

 
ಭೂಮಿಗಿಳಿಯಲು ಮತ್ತೆ ಜೀವಕಳೆ ಇನಿತಿಲ್ಲ
ವನವಿಲ್ಲ ಮನೆಯಿಲ್ಲ ಮಡದಿ ಮಕ್ಕಳು ಇಲ್ಲ
ಮಾರುದ್ದ ನಡೆದರೂ ಮುಖವಿರದ ಮೂಳೆಗಳು
ಬಾಯ್ಬಿಟ್ಟು ನಗುವಾಗ ಬಾಯ್ತುಂಬ ಕತೆಗಳು

 
ಮರುಮರಳ ಗಾಡಿನಲಿ ಮರುಳು ನಾನಲೆದಿರುವೆ
ಹೂತಿರುವೆ ಚಂದಿರನ ತಾರೆಗಳ ಮರಳಡಿಯೆ
ಉಸಿರುಗಟ್ಟುತ ಬಿಕ್ಕಿ ಸತ್ತ ಮಳೆರಾಯನನು
ಮಣ್ಣು ಮಾಡಿದೆ ಕೊನೆಯ ಮರದ ಕೆಳಗೆ

ಕಣ್ಣು



ಕಾಡಿಗೆಯ ಬಣ್ಣದಲಿ ಕಣ್ರೆಪ್ಪೆ ಅದ್ದುತಲಿ
ಅದ್ಭುತವ ಬರೆದವನು ಅವನು ತಾನು
ದೋಣಿಯೊಳಗಡೆಯೆಲ್ಲ ಬೆಳದಿಂಗಳನು ಚೆಲ್ಲಿ
ನಡುವೆ ಕರಿ ಕುಂಚದಲಿ ಬೊಟ್ಟಿಟ್ಟನು

ಒಮ್ಮೊಮ್ಮೆ ಕೋಲ್ಮಿಂಚು ಒಮ್ಮೊಮ್ಮೆ ಸವಿಸಂಚು
ಒಮ್ಮೊಮ್ಮೆ ಕಾರ್ಮೋಡ ಕವಿಯುದಿಲ್ಲಿ
ಬಾನೂರಿಗಿಂತಲೂ ಮಳೆ ಹೆಚ್ಚಿ ಮುಖ ತೊಯ್ದು
ಕಾಡಿಗೆಯ ಝರಿಯೊಂದು ಹರಿವುದಿಲ್ಲಿ

ಕಂದಮ್ಮ ನಗುವಾಗ ತವರನ್ನು ಕಂಡಾಗ
ಕಾಣಲೇ ಬೇಕು ಆ ಕಣ್ಣ ಬೆಳಕು
ಬದುಕು ಬರಡಾದಾಗ, ತನ್ನ ತನ ಸತ್ತಾಗ
ಕುತ್ತು ಬರುವುದು ಕಣ್ಣ ಹನಿಯ ಜಲಕೂ

ಸೋತಾಗ ಮೇಲೆತ್ತೊ ಕೈಗಳನು ಹುಡುಕುವುದು
ಬೆಳದಿಂಗಳಲಿ, ತುಡಿವ ಮನಸೊಂದನು
ನಕ್ಕಾಗ ಜೊತೆ ನಗುವ ಮುಖವನ್ನು ಹುಡುಕುವುದು
ಕಳೆದುಹೋಗಲು ತನ್ನ ತನವೊಂದನು

ಕಣ್ಣು ಮುಚ್ಚಲು ನೂರು ಕನಸುಗಳು ಮನ ಪಟದಿ
ಕಣ್ತೆರೆಯಲಿನ್ನೂರು ಮುನ್ನೂರದು
ಜಗದ ಜಾತ್ರೆಯಲಿ ಕೊಡು ಕೊಳ್ಳುವಿಕೆಗಳು ಮುಗಿದು 
ಕಣ್ಣು ಮುಚ್ಚಲು ಬದುಕು ಹಿಂದುಳಿವುದು

ಮಳೆ

ಮಳೆಯ ಧಾರೆಯ ಕರೆಯ
ಕಿವಿಗೊಟ್ಟು ಕೇಳಿ
ರಾಧೆ ಬಂದಳು ಹೊರಗೆ
ಸಂಭ್ರಮವ ತಾಳಿ

ಒಂದೊಂದು ಹನಿಮುತ್ತು
ಕೆನ್ನೆಯನು ಸವರಿ
ಕೊಂಚನಾಚಿಸಿತವಳ
ಮುಗಿಲಿಂದ ಜಾರಿ

ಮಾಧವನು ನೋಡಿದರೆ
ಗದರಿಯಾನೆಂದು
ತಾಕಿದನು ಮಳೆರಾಯ
ಒಂದೊಂದೆ ಬಿಂದು

ಒಂದು ಬಿಂದುವಿಗೊಂದು
ಸಂದ ನೆನಪೆಲ್ಲ
ಕಾರ್ಮೋಡದಂತಾಗಿ
ಕಾಡಿದನು ನಲ್ಲ

ನನ್ನ ತಪ್ಪಿರಲಿಲ್ಲ
ಅವನದಿರಲಿಲ್ಲ
ಬಿಟ್ಟು ಹೋದನು ಏಕೆ
ಹಿಂದೆ ಬರಲಿಲ್ಲ

ಒಡಲಲ್ಲೆ ಒರಲುತಿರೆ
ಸ್ವರ ಬರಲೆ ಇಲ್ಲ
ಮಳೆಯಹನಿ ಮುಖ ತೊಯ್ದು
ಅತ್ತ ಗುರುತಿಲ್ಲ