Tuesday 7 July 2015

ಅಲೆಯಿಲ್ಲದ ಕಡಲು

ಹೆರಿಗೆಗೆ ಬೆರಳಲ್ಲಿ ಲೆಕ್ಕಹಾಕುವಷ್ಟೇ ದಿನ ಬಾಕಿ ಇದ್ದದ್ದು. ಇನ್ನೊಂದು ಬೆರಳು ಮಡಚುವ ಹೊತ್ತಿಗೆ ಹೊನ್ನಣ್ಣ ಯಾಕೆ ಬರಲಿಲ್ಲ ಎಂದು ತಲೆಯೆತ್ತಿ ಕಂಡಳು.  ಕೊಂಚ ದಿನಗಳಿಂದ  ಮಳೆಗೆ ತಂತಿ ತುಂಡಾಗಿ ಕರೆಂಟು ಕೈ ಕೊಟ್ಟಿತ್ತು. ಸಣ್ಣಗೆ ದೀಪ ಆಗಲೋ ಈಗಲೋ ತನ್ನ ಸಾವು ಎಂದು ಕೊನೆಯ ನಿಮಿಷದ ಹೊಯ್ದಾಟದಲ್ಲಿದ್ದಂತೆ ಕಂಡಿತು. ಬೆಳಕು ಮಂದವಾಗಿದ್ದರೂ, ಕರೆಂಟಿನ ಕೇಕೆಗಿಂತ ಇದುವೇ ಹಿತ ಎನಿಸುತ್ತಿತ್ತು. ಭ್ರಮ ನಿರಸನಳಂತೆ, ಒಮ್ಮೆ ಗಂಡನ ಮುಖ ನೆನಪಾಗಿ ಮನಸ್ಸು ತಂಪಾಗಿ ಕೆನ್ನೆ ಕೆಂಪಾದರೆ, ಇನ್ನೊಮ್ಮೆ ಸಾಲು ಸೈನಿಕರಂತೆ ಕಿಚ್ಚಿನೊಟ್ಟಿಗೆ ಕೆಚ್ಚಿನಿಂದ ಹೋರಾಡಿ ಪ್ರಾಣ ಬಿಡುವ ಪುಟ್ಟ ಪುಟ್ಟ ಹಾತೆಗಳು, ಪತಂಗಗಳನ್ನು ಕಂಡು ಮನಸ್ಸು ತುಡಿಯುತ್ತಿತ್ತು, ದೀಪದ ಮಂದ ಬೆಳಕಿನೊಟ್ಟಿಗೆ, ಸಣ್ಣಗೆ ಮಿಡಿಯುತ್ತಿತ್ತು. ಎಷ್ಟಾದರೂ, ಅವಳ ಅವನು ಇರುವುದು ಗಡಿಯಲ್ಲಲ್ಲವೇ.
 ದೂರದಲ್ಲಿ ಗಾಳಿಯಲ್ಲಿ ಭಾರವಾದ ಹೆಜ್ಜೆ ಕಿತ್ತಿಡುತ್ತಾ ಹೊನ್ನಣ್ಣನ ಆಕೃತಿ ಬರುವುದು ಕಂಡಿತು. ಕಣ್ಣು ಅರಳಿತು. ಪಕ್ಕನೆ ಏಳಲಾಗಲಿಲ್ಲ. ಅಲ್ಲಿಂದಲೇ ತಂದೆಯನ್ನ ಶಾಲೆಯ ಬುಡದಲ್ಲಿ ಕಂಡ ಪುಟ್ಟ ಹೆಣ್ಣಿನಂತೆ, ಕೈ ಬೀಸಿದಳು. ಹೊನ್ನಣ್ಣನ ಹೆಜ್ಜೆ ಇನ್ನೂ ಭಾರವಾಯಿತು. ಈ ಒಂದು ದಿನ ವರ್ತಮಾನದಿಂದ ಅಳಿಸಿ ಹೋಗಿದ್ದರೆ!! ಅನ್ನಿಸಿತು, ಕಾಲ ಮೀರಿತ್ತು. ಬಂದವನು ಜಗಲಿಯಲ್ಲಿ ಮಳೆಯನ್ನು ನೋಡುತ್ತ ಕುಳಿತ. ಒಳಬಂದು ಆ ನಿರೀಕ್ಷೆಯ ಕಣ್ಣುಗಳಿಗೆ ಬಣ್ಣ ತುಂಬುವ ಅವನ ಶಕ್ತಿಯೆಲ್ಲಾ ಆ ಮಳೆಯಲ್ಲಿ ಕೊಚ್ಚಿ ಹೋಗಿತ್ತು. "ಹೊಯ್ ಹೊನ್ನಣ್ಣ ಒಳಗ್ ಬಾ ಮರೆ, ಎರ್ಡ್ ಗಂಜಿ ಉಣ್ಣಲಾ?, ಕುಟ್ಬಜ್ಜಿ ಮಾಡಿದಿ. ಕುಟ್ಬಜ್ಜಿಗೆ ಎಳಿ ಕರಿನ್ ಕಣಗೆ ಚಂಗ್ ಹಾರ್ಕಂಡ್ ಬಂದ್ ಬಟ್ಲ್ ಮುಂದ್ ಕೂಕಂತಿದ್ದೆ ಇವತ್ತೆಂತ ಆಯ್ತ್? ಹೊನ್ನಣ್ಣ ಓ ಹೊನ್ನಣ್ಣ" ಊಹ್ಞೂ ಮಾತಿಲ್ಲ!! ನಿಧಾನಕ್ಕೆ ಅವಳೆ ಅವನ ಜಂಗು ಮುಟ್ಟಿದಾಗ ಹೌಹಾರಿದ. ಪುಣ್ಯ!! ಕತ್ತಲೆಗೆ ಕೆಲವನ್ನು ಮುಚ್ಚಿಡುವ ಶಕ್ತಿ ಇದೆ, ಅದರಲ್ಲಿ ಕಣ್ಣೀರೂ ಒಂದು.
“ಇವತ್ತ್ ಐತ್ವಾರ, ನೀ ಎಂತೊ ಮರ್ತೆ!!” ಅಂದ ಪ್ರಶ್ನೆಗೆ ಆತ ಉತ್ತರವನ್ನು ಹುಡುಕೇ ಇರಲಿಲ್ಲ. ಓದದೇ ಬಂದ ಮಗು ಪ್ರಶ್ನೆ ಪತ್ರಿಕೆ ಕಂಡು ಅತ್ತಂತಿತ್ತು. ಆದರೆ ಅವಳಿಗೆ ಕಣ್ಣೀರು ಕಾಣಿಸಲಿಲ್ಲ. "ಊಟಕ್ಕೆ ಎಂತ ಮಾಡಿದಿ" ಅಂದ. ಹೊನ್ನಣ್ಣ, ಹೀಗೆ ಹೇಳಿದ್ದು ಕೇಳಿಸದಿದ್ದಂತೆ ಮೊದಲೆಂದೂ ಇದ್ದಿದ್ದೇ ಇಲ್ಲ. ಆದರೂ ಹೊಟ್ಟೆ ಹಸಿದಿರಬೇಕೆಂದು ಮೊದಲು ಇಕ್ಕಿದಳು. ಆಕೆ ಮತ್ತೇನಾದರೂ ಕೇಳಬಹುದೆಂದು, “ಇಲ್ದೆ ಇವತ್ತ್ ಕಾಗ್ದ ಬರ್ಲ. ಬರ್ಕಿದಿತ್, ಜೋರ್ ಮಳಿ ಅಲ್ದ ಅದಕ್ಕೆ ನಾಳೆ ನಾಡ್ದ್ರಂಗ್ ಬಪ್ಪುಕು ಸಾಕ್. ಅಂತ ಯಾವ್ ಯುದ್ವೂ ಇಲ್ಲ ಅಂತ್ ಬರ್ದಿದ್ದ ಅಲ ಅನಂತ, ಹೋದ್ ಸುರಿಗೆ". ತುಡಿದ ಹೃದಯಕ್ಕೆ ಅಷ್ಟೇ ಸಾಕಿತ್ತು. ಆಕೆಗೆ ನಂಬಿಕೆಯೆ ಜೀವನ,  ಎಷ್ಟು ಬೇಕಾದರು ನಂಬುತ್ತಿದ್ದಳು, ನಂಬಿಕೆಯಲ್ಲೇ ಕಾಯುತ್ತಿದ್ದಳು ಶಬರಿಯಂತೆ. ಅಷ್ಟಲ್ಲ ದಿದ್ದರೆ ಒಬ್ಬ ಸೈನಿಕನ ಕೈ ಹಿಡಿಯೊ ಧೈರ್ಯ ಇರುತ್ತಿರಲಿಲ್ಲವೇನೋ. ಅವನ ಕೆಲಸದ ಬಗ್ಗೆ ಹೆಮ್ಮೆಯೂ ಇತ್ತು. ಆದರೆ ಅವಳ ಆದರ್ಶ ಕನಸುಗಳ ಮಧ್ಯೆ ಇದು ವರೆಗೆ ಸುಳಿಯದ ಘಟನೆ ಒಂದೆ, "ಸಾವು!!". ಅದರ ವಿಷಯ ನಾಲ್ಕು ಜನ ಮಾತಾಡುತ್ತಿದ್ದರೂ ಆಕೆ ಅತ್ತ ಸುಳಿಯುತ್ತಿರಲಿಲ್ಲ. ಒಂದು ಸಾವಿನ ಮನೆಗೂ ಹೋಗುತ್ತಿರಲಿಲ್ಲ. ಅದರ ಬಗ್ಗೆ ಕೇಳಿಸಿಕೊಳ್ಳುತ್ತಿರಲಿಲ್ಲ. ಅದರ ಅಸ್ಥಿತ್ವ ಅವಳಿಗೆ ಹಿಡಿಸುತ್ತಿರಲಿಲ್ಲ. ಅಸಲಿ ಹಿಡಿಸುವುದಾದರು ಯಾರಿಗೆ? ಸದ್ಯಕ್ಕೆ ಹೊನ್ನಣ್ಣ ಪರಿಸ್ಥಿತಿ ನಿಭಾಯಿಸಿದ್ದ. ಆತ ಅವಳ ದೊಡ್ಡಪ್ಪನ ಮಗನಂತೆ. ಯಾರೋ ಅಂದಿದ್ದರು, ಇವರಿರಬ್ಬರು ಇಲ್ಲಿಯವರೆಗೆ ಅದನ್ನೇ ನಂಬಿಕೊಂಡು ಬಂದಿದ್ದಾರೆ. ಇಬ್ಬರೂ ಬೆಳೆದಿದ್ದು ಅನಾಥಾಶ್ರಮದಲ್ಲಿ.
ಹಿಂದಿನ ಭಾನುವಾರದ ಪತ್ರವನ್ನ ತೆಗೆಸಿ ಮತ್ತೆ ಓದಿಸಿದಳು. ಹೊನ್ನಣ್ಣನಿಗೆ ಮಧ್ಯೆ ಗಂಟಲು ಬಿಗಿಯುತ್ತಿತ್ತು. ಸಲೀಸಾಗಿ ಬರೆದು ಉಜ್ಜುವ ದೇವರ ಕೈಗೊಂದಷ್ಟು ಹಿಡಿ ಹಿಡಿ ಶಾಪ ಹಾಕಿದ. ಬಾಯಿಬಿಟ್ಟು ಅಳಲಾರದ ಪರಿಸ್ಥಿತಿ. ಇವತ್ತು ಎಂದಿನ ಪರಿಸ್ಥಿತಿಗೆ ವ್ಯತಿರಿಕ್ತವಾಗಿ ಅವಳ ನಗು ಅವನನ್ನು ಹಿಂಡುತ್ತಿತ್ತು. ಊಟ ಮಾಡಿಕೊಂಡು ದಿಂಬಿಗೆ ಒರಗಿ ಬಲೂನಿನಂತಾಗಿದ್ದ ತನ್ನ ಪುಟ್ಟ ಕಂದಮ್ಮನನ್ನು ಹೊತ್ತಿದ್ದ ಹೊಟ್ಟೆ ಸವರಿದಳು. ಮಳೆಯ ಹನಿಯೊಂದಿಗೆ ಧ್ವನಿ ಬೆರೆಸಿ ನೂರು ಕನಸುಗಳು, ಕಣ್ಣಿನ ಪರದೆಯ ಮೇಲೆ ದ್ರಶ್ಯಾವಳಿಗಳಾದವು. ಪೂರ್ತಿ ಮಡಚಲು ಮರೆತಿದ್ದ ಬೆರಳನ್ನು ಮಲಗುವ ಮುನ್ನ ಮರೆಯದೆಯೆ ಮಡಚಿದಳು. ಹೊನ್ನಣ್ಣ ಬಂದಿದ್ದ ಕಾಗದವನ್ನು ಹರಿದು ನೀರಲ್ಲಿ ಬಳಿಯಲು ಬಿಟ್ಟ.
ಮಾರನೆಯ ದಿನ ಇವಳನ್ನು ಸೇರಿಸಿದ ಹತ್ತಿರದ ಹೆರಿಗೆ ಆಸ್ಪತ್ರೆಗೆ ಓಡಿ ಬಂದ ಹೊನ್ನಣ್ಣ. ಪ್ರಶ್ನೆ ಪತ್ರಿಕೆಗೆ ಉತ್ತರ ತಯಾರಿತ್ತು. ಕೈಲಿ ಹಿಡಿದ ಅವನೇ ಬರೆದ ಕಾಗದ ಓದಿದ. "ಅವ ಕ್ಷೇಮ ಅಂತೆ, ಆದ್ರೆ ಬಪ್ಪುಕಾಪುದು ಮುಂದಿನ ಡಿಸಂಬರಿಗಂತೆ, ಮಗು ಗಂಡಾರೆ ಭರತ್ ಅಂತ,  ಹೆಣ್ಣಾರೆ ಭಾರತಿ ಅಂತ ಹೆಸ್ರಿಡಿ ಅಂದಿದ. ಅಷ್ಟ್ರ್ ಮಟ್ಟಿಗೆ ದೇಶ ಪ್ರೇಮ ಕಾಣ್ ನಿನ್ ಗಂಡ್ನಿಗೆ" ಎಂದು ಹುಟ್ಟಿಸಿಕೊಂಡು ನಗೆಯಾಡಿ ಎತ್ತೆತ್ತಲೋ ನೋಡಿದ, ಅವಳತ್ತ ನೋಡಲಾಗದೆ. ಭರತ, ಭಾರತಿ, ಡಿಸೆಂಬರ್ ಎಂಬುದಷ್ಟೆ ಅವಳ  ಸ್ಮೃತಿಗೆ ತಟ್ಟಿದ್ದು, ಉಳಿದದ್ದು ಕೇಳುವುದರೊಳಗೆ ಅರಿವಳಿಕೆಯ ಮಂಪರಲ್ಲಿ, ಕಣ್ಣು ಅರ್ಧ ಮುಚ್ಚಿ ಹೊನ್ನಣ್ಣ ಒಂದು ಬಿಂದುವಿನಷ್ಟೆ ಕಂಡ, ಕಾಣ ಕಾಣುತ್ತಾ ಬಿಂದು ದೂರ ಸರಿಯಿತು. ಬಿಂದುವಿನ ಕಣ್ಣೀರು ಬಿಂದಿಗೆಯಷ್ಟು ಚೆಲ್ಲಿತು.

****
ಹೊನ್ನಣ್ಣ ಈಗ ಹಣ್ಣಾಗಿದ್ದಾನೆ. ಕೈ ಸೋತಿದೆ. ಮನಸ್ಸೂ ಕೂಡ. ಅವನ ಕೈಯಾಗಿ ಎಳೆ ಭರತನಿದ್ದಾನೆ. ಭಾನುವಾರ ಬೆಳಿಗ್ಗೆ ಇಬ್ಬರೂ ಕೂಡಿ ಕೆರೆದಂಡೆಯಲ್ಲಿ ಕುಳಿತು ದಂಡಿಯಾಗಿ ಪ್ರೀತಿ ಸುರಿಸಿ  ಪತ್ರ ಬರೆಯುತ್ತಾರೆ.  ಸಂಜೆ ಅವಳೆದುರು ಇಲ್ಲದ ಸಂಭ್ರಮದಿಂದ ಓದುತ್ತಾರೆ. ಆಕೆ ಮತ್ತೆ ಕಾಯುತ್ತಾಳೆ ಮುಂದಿನ ಡಿಸೆಂಬರಿಗಾಗಿ, ಬಾರದ ನಾಳೆಗಾಗಿ. ಹಣೆಯಲ್ಲಿ ಕುಂಕುಮ ಸಣ್ಣಗೆ ಕೊಂಕು ನಗೆಯಾಡುತ್ತದೆ.

ಕುಂದ ಕನ್ನಡ ಪದಗಳ ಅರ್ಥ:

ಉಣ್ಣಲಾ - ಊಟ ಮಾಡ ಬಹುದಲ್ಲಾ
ಕುಟ್ಬಜ್ಜಿ - ಒಂದು ಬಗೆಯ ಕಾಯಿ ಚಟ್ನಿ, ಅದನ್ನ ಕುಟ್ಟಿ ಮಾಡ್ತಿದ್ದಿದ್ದರಿಂದ ಕುಟ್ಟಿದ ಬಜ್ಜಿ ಅನ್ನೊ ಹೆಸರು
ಎಳಿ ಕರು - ಎಳೆಯ ಕರು
ಚಂಗ್ - ನೆಗೆಯುವುದು
ಹಾರ್ಕಂಡ್ - ಹಾರಿಕೊಂಡು
ಬಟ್ಲು - ಊಟ ಮಾಡುವ ತಾಟು(ಇಲ್ಲಿ ಅದನ್ನ ತಟ್ಟೆ ಅನ್ನಲಾಗತ್ತೆ)
ಜಂಗು - ಹೆಗಲು
ಐತ್ವಾರ - ಆದಿತ್ಯವಾರ , ಭಾನುವಾರ
ಬರ್ಕಿದಿತ್ - ಬರ್ಬೇಕಿತ್ತು
ನಾಡ್ದ್ರಂಗೆ - ನಾಡಿದ್ದರಲ್ಲಿ
ಬಪ್ಪುಕು ಸಾಕ್ - ಬರ್ಬಹುದು
ಹೋದ್ ಸುರಿಗೆ - ಹೋದ ಸಲ
ಬಳಿಯಲು - ಹರಿಯುವ ನೀರಲ್ಲಿ ತೇಲಿ ಬಿಡಲು,
ಬಪ್ಪುಕಾಪುದು- ಬರ್ಲಿಕ್ಕೆ ಆಗೋದು
ಗಂಡಾರೆ - ಗಂಡಾದ್ರೆ
ಕಾಣ್ - ನೋಡು

Thanks and Regards,

Bhavya

Thursday 2 July 2015

ಹೆಸರಿಲ್ಲದವನು


ಸುಕ್ಕುಗಟ್ಟಿದ ಕೆನ್ನೆ, ಹೆರಳು ಕಾಣದು ಎಣ್ಣೆ                            
ಅವನ ಬದುಕಿಗೆ ಸಾಕ್ಷಿ ಬರಿಯ ನಿನ್ನೆ
ಮೊನ್ನೆಯೆಂಬುದೂ ನಿನ್ನೆ, ನಿನ್ನೆಯೆಂದರು ನಿನ್ನೆ
ನಾಳೆಯೆಂಬುದು ಅವಗೆ ಬರಿಯ ಸೊನ್ನೆ

ಮನಸು ಎಂಬುದು ಒಂದು ಇದೆಯೆಂಬುದನು ಬಲ್ಲ
ಎಲ್ಲಿರುವುದೆಂಬುದರ ಪರಿವೆಯಿಲ್ಲ
ರಾತ್ರಿ ಹಗಲುಗಳಲ್ಲಿ ಭೇದ ಹೆಚ್ಚಿರಲಿಲ್ಲ
ಹಗಲು ಬಾನದು ಚೊಕ್ಕ ಚುಕ್ಕೆಯಿಲ್ಲ

ದೇವಮಂದಿರದೆದುರು ಜೀವಮಂದಿರ ಹೊರೆಯೆ
ಕಾದಿಹುದು ಬಡಜೀವ ತಗಡುತಟ್ಟೆ
ಒಳಗಿರುವ ಪರಮಶಿವ ಪರಿಪರಿಯಲೀ ಮೀಯೆ
ಬೆನ್ನಿಗಂಟಿತ್ತಿಲ್ಲಿ ಬಡವನ್ಹೊಟ್ಟೆ

ಕತೆಯಲ್ಲಿ ಕಂಡರಿತ ತಿರುಕನಂತಿವನಲ್ಲ
ಹಗಲು ಗನಸಿರಲಿಲ್ಲ ವಯಸು ಇಲ್ಲ
ಅಡಿಗಡಿಗೆ ಕೂಡಿಡುವ ಅನಿವಾರ್ಯತೆಯು ಇಲ್ಲ
ತಲೆಯೂರೆ ನಿದಿರೆಗೆ ಕೊರತೆಯಿಲ್ಲ

ಹಗಲು ಕಂಡಿಹ ಹಾದಿಯಲಿ ಇರುಳು ನಡೆದಿರಲು
ಮೌನ ಎದುರಲಿ ಇತ್ತು, ಮಸಣವಿತ್ತು
ಮಸಣದಾ ಮನೆಯೊಳಗೆ ಜೀವ ಬತ್ತುತ ಬಿತ್ತು
ಹಳೆ ತಿರುಕನಾ ಗೋರಿ ಕೆಲದಲಿತ್ತು

ಧನ್ಯವಾದಗಳು,

ಭವ್ಯ