Tuesday 26 April 2016

ದ್ವೀಪ- 'ನಾಗಿ'

ದ್ವೀಪ ಹುಟ್ಟುವುದೇ ಸುತ್ತುವರಿದ ನೀರಿನಿಂದ. ನಿರಂತರವಾಗಿ ಜೊತೆಗಿದ್ದರೂ ದ್ವೀಪಕ್ಕೆ ತನ್ನ ಸುತ್ತಲಿನ ನದಿ/ ಸಾಗರದ ಆಳದ ಪರಿಚಯ ಅಷ್ಟಕ್ಕಷ್ಟೇ. ಪೂರ್ತಿ ಪರಿಚಯವಾಗಲು ಪ್ರವಾಹವೇ ಆಗಬೇಕೇನೊ.. ಹೆಣ್ಣಿನ ಜೀವನಕ್ಕೂ ಇದಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಆಕೆ ನಿರಂತರವಾಗಿ ಹರಿವ ಜೀವನದಿ. ಅಂತರಾಳವೆಲ್ಲ ಬರಿ ತನ್ನವರಿಗಾಗಿ ತುಡಿಯುತ್ತದೆ. ಮನೆ , ಬದುಕು ಅಂತಲೇ ಹೋರಾಡುತ್ತಿರುತ್ತದೆ. ಏನಾದರು ಬಯಕೆ ಇರುವುದಾದರೆ ಒಂದೆ , ನನ್ನವರಿಗೆ ನನ್ನ ಹೋರಾಟ ಅರ್ಥವಾಗಿದ್ದರಾಗುತ್ತಿತ್ತು!!! ಎನ್ನುವ ಸಣ್ಣ ಆಸೆ.  ಕಾಲ ದೇಶಗಳನ್ನು ಮೀರಿ ಇದು ಎಂದೆಂದಿಗು ಹಸಿರಾಗಿರುವ ಸತ್ಯ. ಇಂತಹ ಒಂದು ಸೂಕ್ಷ್ಮ ಸಂವೇದನೆಯ ಪ್ರತಿಮೆಯೇ ದ್ವೀಪ ಎನ್ನುವ ಕಲಾತ್ಮಕ ಚಿತ್ರ.    
ದ್ವೀಪ ಚಿತ್ರವನ್ನು ನಮ್ಮಲ್ಲಿ ಎಲ್ಲರೂ ಕಂಡಿರಲಿಕ್ಕೆ ಸಾಕು. ನೋಡಿರದವರು ನೋಡಲೇ ಬೇಕಾದ ಚಿತ್ರ. ಸೀತಾ ಪರ್ವತ ಎನ್ನುವ ಚಂದವಾದ ಊರು ಮುಳುಗಡೆ ಆಗಿಯೇ ಹೋಗುತ್ತದೆ ಎಂಬ ಪರಿಸ್ಥಿತಿಯಲ್ಲೂ ಹೇಗೆ ಪ್ರಕೃತಿಯ ಜೊತೆಗಿನ ನಿರಂತರ ಹೋರಾಟದಲ್ಲಿ ನಾಗಿ ತನ್ನ ಕುಟುಂಬವನ್ನು ಬಾಳಿ ಬದುಕಿದ ಮನೆಯಲ್ಲೇ ಉಳಿಸಿಕೊಳ್ಳುತ್ತಾಳೆ ಎನ್ನುವುದೇ ಕತೆಯ ಹಂದರ.
ಊರಿಗೆ ಊರೇ ಮುಳುಗಡೆಗೆ ಹೆದರಿ, ಗುಳೆ ಹೊರಟಾಗ ಎಂತ ಗಟ್ಟಿ ಎದೆಯಾದರು ಅಲ್ಲಿ ನಿಲ್ಲಲು ಹೆದರೀತು, ಅಂತಹ ಪರಿಸ್ಥಿತಿಯೇ ನಾಗಿಯನ್ನು ಗಟ್ಟಿಗಿತ್ತಿಯಾಗಿ ತೋರುವುದು. ನಾಗಿ ಒಂಥರ ಪರಿಸ್ಥಿತಿಯ ಕೈಗೊಂಬೆ ತನ್ನ ಮನೆಯವರು ಊರು ಬಿಟ್ಟು ಬರಲು ಒಪ್ಪದೇ ಹೋದಾಗ ಇರುವ ಅವಕಾಶದಲ್ಲೇ  ಜೀವನವನ್ನು ಪೂರ್ಣ ಅನುಭವಿಸುವವಳು ,ಕನಸು ಕಾಣುವ ಹಂಬಲದವಳು. ಊರಿನ ಕೊನೆಯ ಮನೆಯವರು ಊರು ಬಿಟ್ಟು ದೋಣಿಯಲ್ಲಿ ನದಿ ದಾಟಿ ಹೋಗುವಾಗ, ಅವಳ ಮನಸಲ್ಲಿ ಏನೇನು ಓಡುತ್ತಿದ್ದಿತ್ತೊ  ಭಾವುಕಳಾಗಿ ಮತ್ತೆ ಮನುಷ್ಯರ ಭೇಟಿ ಆಗುತ್ತದೋ ಇಲ್ಲವೋ ಎಂದು ,ಅವರು ಮರೆಯಾಗುವವರೆಗೂ ಕಂಡು ಮನೆಗೆ ಬಂದಿದ್ದಳು.  ಹಾಗಂತ ನಾಗಿಯ ಪಾತ್ರ ಪೂರ್ತಿ ಅಸಹಾಯಕ ಪಾತ್ರವೂ ಅಲ್ಲ. ಗಂಡ ಗಣಪ ಒಳ್ಳೆಯವನೇ. ಆದರೆ ಅವನದ್ದು ತನ್ನ ತಂದೆಯ ಮಾತನ್ನು ತೆಗೆದು ಹಾಕಲಾರದ ಪರಿಸ್ಥಿತಿ. ತನ್ನ ಕುಲದ ಆಚರಣೆಯನ್ನು ಬಿಡಲಾರದ ಮನಸ್ಥಿತಿ. ಬೇರೆ ಯಾವ ದಾರಿಯೂ ಇಲ್ಲದಾಗ ಆ ಸಂಸಾರ, ಭವಿಷ್ಯ ಗೊತ್ತಿರದ ಊರಲ್ಲೇ ಬದುಕು ಕಳೆಯಲು ಹೊರಡುತ್ತದೆ. ಜೊತೆಗೆ ಅವಳ ತಾಯಿ ಕಳಿಸಿದ ಪ್ರಾಯದ ಹುಡುಗನೊಬ್ಬ ಸಹಾಯಕ್ಕೆಂದು ಅವರ ಜೊತೆ ಹೊರಡುತ್ತಾನೆ.  ಆಗ ಮುಳುಗುತ್ತಿರುವ ಬದುಕಲ್ಲಿ ಮುಳುಗಡೆಗಿಂತ ಹಿರಿದಾಗಿ, ಕಾಡುವ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಇಷ್ಟು ವರ್ಷ ಜೊತೆಗಿದ್ದ ಹೆಂಡತಿ ನಾಗಿ ಗಣಪನಿಗೆ ಅಪರಾಧಿಯಂತೆ ಕಾಣಲು ಶುರುವಾಗುತ್ತಾಳೆ. ಹೆಣ್ಣು ಜೀವನವಿಡೀ ತಾನು ಒಳ್ಳೆಯವಳೇ ಎಂದು ಸಾಭೀತು ಮಾಡಲು ಕೆಲವು ಸಂಬಂಧಗಳನ್ನು ಕಳಚಿಕೊಳ್ಳಲೇಬೇಕು. ಹರಿವನದಿ ತಾನು ಹೊತ್ತುಕೊಂಡು ಬಂದ ಹೂವು ಹಣ್ಣು ಮರಳುಗಳಲ್ಲಿ ಕೆಲವನ್ನು ಅಲ್ಲಲ್ಲೇ ಬಿಟ್ಟು ಬರುವಂತೆ. ಕೊನೆಗೆ ಅವಳಿಗೆ ಗಂಡ, ಅವನ ಕೋಪ, ಅವನ ಖುಷಿಗಳೇ ಮುಖ್ಯವಾಗಬೇಕೆಂಬ ನಿಯಮಕ್ಕೆ ನಾಗಿ ಆಗಾಗ ತಲೆಕೊಡುತ್ತಾಳೆ.
ಸುತ್ತ ಯಾರು ಇರದಾಗ ಕಣ್ಣು ಹಾಯಿಸಿದಲ್ಲೆಲ್ಲ ಬರಿ ಕಾಡು, ನೀರೇ ಕಾಣಿಸುವ ಊರು ಆ ಹೆಣ್ಣಿನ ಹೊಟ್ಟೆಯಲ್ಲಿ ಎಂತಹ ದಿಗಿಲು ಹುಟ್ಟಿಸಿರಬಹುದು.  ಅದರೊಟ್ಟಿಗೆ ಮಳೆಯ ಆರ್ಭಟ ಹೆಚ್ಚಾದಂತೆ ಗಂಡ ಹೆಂಡತಿಯ ಮನದೊಳಗೂ ಬಿರುಕು, ಸಿಡಿಲಿನ ಚಿತ್ತಾರದಂತೆ ಮೂಡತೊಡಗುತ್ತದೆ. ಎಲ್ಲಾ ಅನಿಶ್ಚಿತತೆಗಳ ಮಧ್ಯವೂ , ಬದುಕು ಮುಳುಗುವ ಹೊತ್ತಿಗೂ ಗಂಡ ಹಟ ಹಿಡಿದು ಕುಳಿತೇ ಬಿಡುತ್ತಾನೆ. ನೀರು ಏರಿದಂತೆಲ್ಲ ಸೀತಾ ಪರ್ವತದಲ್ಲಿ ಕಣ್ಣಿಗೆ ಕಾಣದೆ ಕಾಡುತ್ತಿದ್ದ ವ್ಯಾಘ್ರ ಹುಲಿ ಕೇಳುವಿಕೆಗೆ ನಿಲುಕಲು ಶುರುವಾಗುತ್ತದೆ. ಆ ಹುಲಿ ಅವಳೊಳ ಬದುಕಿನ ಹೋರಾಟದ ಅಬ್ಬರದ ಪ್ರತೀಕದಂತೆ ಕಾಣುತ್ತದೆ. ನಾಗಿ ಸೋಲುವುದೇ ಇಲ್ಲ ಯಾಕೆಂದರೆ ಅವಳಿಗೆ ಬದುಕುವ ಕನಸು ಕಂಡಷ್ಟೇ ಗೊತ್ತು. ರಾತ್ರಿಯಿಡೀ ಹೋರಾಡಿ ಮನೆಯ ಸುತ್ತೆಲ್ಲ ಬೆಂಕಿ ಮಾಡಿ ಹಚ್ಚಿ ಹೇಗೊ ಹುಲಿ ಮನೆ ಹೊಕ್ಕದಂತೆ ನೋಡಿಕೊಳ್ಳುತ್ತಾಳೆ. ಕಡಾ ಖಂಡಿತವಾಗಿ ಮುಳುಗೇ ಮುಳುಗುತ್ತದೆ ಎಂದು ಇಲಾಖೆಯವರು ಹೇಳಿದ್ದ ಸೀತಾ ಪರ್ವತ ಇನ್ನು ಜೀವಂತವಾಗಿ ಮತ್ತೆ ಹೊಸ ಮುಂಜಾನೆಯನ್ನು ಕಂಡಾಗ ನಾಗಿ ಮತ್ತು ಗಣಪನ ಎದೆಯಲ್ಲಿ ಹೊಸ ಜೀವ ಪಡೆದ ಅನುಭವ. ಇಬ್ಬರೂ ಸೀತಾ ಪರ್ವತದ ಮಂಟಪದ ಹತ್ತಿರ ಹೋಗಿ ಮತ್ತೆ ಹೊಸ ಕಣ್ಣಿಂದ ಊರನ್ನು ನೋಡತೊಡಗುತ್ತಾರೆ. ನಾಗಿಯ ಬಗೆಗಿನ ವ್ಯಘ್ರತೆಯೆಲ್ಲ ಗಣಪನಲ್ಲಿ ಕರಗಿರುತ್ತದೆ. ನಾಗಿಯ ಕಣ್ಣಲ್ಲಿ ಎಲ್ಲೋ ಒಂದು ಸಣ್ಣ ನಿರೀಕ್ಷೆ ಮೂಡಿ ತನ್ನ ಹೋರಾಟದ ಬಗೆಗೆ ಹೆಮ್ಮೆ ಎನಿಸುತ್ತದೆ.  ಆದರೆ ಅವಳ ಹೋರಾಟವೆಲ್ಲ ದೈವ ಪ್ರೇರಣೆಯ ನಿಮಿತ್ತದಂತೆ ಗಣಪನಿಗೆ ಕಂಡಾಗ, ನಾಗಿಗೆ ಕಾಲಡಿಯ ಸೀತಾಪರ್ವತ ನೀರೊಳಗಿನ ಪ್ರಪಾತದಲ್ಲಿ ಉಸಿರುಗಟ್ಟಿ ಬಿಕ್ಕಿದಂತಾಗುತ್ತದೆ. ಏನೂ ಆಗೇ ಇಲ್ಲವೆಂಬಂತೆ ಗಣಪ ಮನೆ ಕಡೆ ಹೊರಡುತ್ತಾನೆ.

Thanks and Regards,

Bhavya