Saturday 22 February 2014

ಹೀಗೊಂದು ಪ್ರೇಮ ಪ್ರಯಾಣ

ದುರ್ಗಾಂಬ ೭ ನಂಬರಿನ ಬಸ್ ಹತ್ತಿ ಕಣ್ಣರಳಿಸಿ ಕುಳಿತಿದ್ದ ಸುಬ್ಬನ ಕಣ್ಣಲ್ಲಿ ಕುತೂಹಲ, ಆಸೆ. ಪ್ರೇಮಿಗಳ ದಿನಾಚರಣೆಯ ಹಿಂದಿನ ದಿನವಾದ ಇಂದು, ತನಗೊಬ್ಬಳು ಮನ ಒಪ್ಪುವ ಚದುರೆ ಸಿಗುವಳೇನೋ ಎಂಬ ಆಸೆ ಸವಿಭಾಷೆ. ಕಾಲು ನೀಡಿಸಿಕೊಂಡು, ೫ ನಂಬರಿನ ಸೀಟಿನಲ್ಲಿ ಕುಳಿತು ಬಸ್ಸು ಹತ್ತಿ ಇಳಿಯುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದ. ತನ್ನ ಪಕ್ಕದ ಸೀಟಲ್ಲಿ ಒಬ್ಬ ಸುಂದರ ಯುವತಿ ಕುಳಿತರೆ, ಆಹಾ! ಎಂದು ಮನದಲ್ಲೇ ಮಂಡಿಗೆ ಮೇಯುತ್ತಿದ್ದ.  
ಬಸ್ಸು ಹೊರಡಲು, ಇನ್ನೂ ೨೦ ನಿಮಿಷ ಸಮಯವಿತ್ತು. ಕಿಟಕಿಯ ಹೊರಗೆ ಬಾಗಿ ನೋಡಿದ. "ಥೂ ಎಲ್ಕಂಡ್ರು ಗಂಡ್ ಜನ್ಮವೇ ನನ್ನ್ ಹಣಿಬರಕ್ಕೆ", ಎಂದು ಹಣೆಬರಹವನ್ನು ಹಳಿದುಕೊಂಡ. 
  ೫ ನಿಮಿಷದ ಬಳಿಕ, ಒಬ್ಬ ಹಣ್ಣು ಮುದಿಯಾದ ಅಜ್ಜ ಕೋಲೂರಿಕೊಂಡು ಬಂದು ತನ್ನ ಸೀಟು ಯಾವುದೆಂದು ತಿಳಿಯದಾಗ ಬಗ್ಗಿ, ಸುಬ್ಬನ ಕಡೆಗೆ ಟಿಕೆಟ್ ತೋರಿಸಿ 'ಹ್ವಾಯ್ ಇದ್ ಎಲ್ ಬತ್ತ್ ಅಂದ್ಹೇಳಿ ಒಂಚೂರ್ ಕಂಡ್ ಹೇಳಿ ಮರ್ರೆ. ಕಣ್ ಸ್ವಲೂಪ ಮಂದ ಆಯಿತೆ' ಎಂದ, ಬಾಯಿಂದ ಎಲೆ, ಅಡಿಕೆ, ಮಾರುತಿಯ, ಮಿಶ್ರಣ ಸುಬ್ಬನ ಮೂಗಿಗೆ ಚಂಡಮಾರುತವನ್ನೇ ತಂದಿತ್ತು. ಮೆಲುವಾದ ಹಾಡಿನ ಮೋಡಿಯ ಗುಂಗಲ್ಲಿದ್ದ ಸುಬ್ಬನ ಮನ್ಮಥ ಲಹರಿಗೆ, ಕಲ್ಲು ಬಿಸಾಕಿದಂತಾಗಿ, ಸಿಟ್ಟಿನ ಧ್ವನಿಯಲ್ಲಿ, 'ಎಂಥ ಮರ್ರೆ ನಿಮ್ದ್ ಕರ್ಕೆರಿ, ಕಂಡಕ್ಟ್ರನ್ನ ಕೇಣಿ", ಎಂದು ಸಾಗು ಹಾಕಿದ. ಅಜ್ಜಯ್ಯನಿಗೆ ಅವಮಾನವಾಗಿ, ಬಾಯಲ್ಲಿ ಮಾರುತಿಯ ಅಗೆತದ ವೇಗ ಜೋರಾಗಿ, ಕಂಡಕ್ಟ್ರಕಡೆಗೆ ಮುಖ ಮಾಡಿ, ಕೊನೆಗೆ ಸುಬ್ಬನ ಹಿಂದಿನ ಸೀಟಲ್ಲೇ ಸ್ಥಾಪಿತವಾಯಿತು ದೇಹ.  
ಇನ್ನೈದು ನಿಮಿಷದಲ್ಲಿ ಬಸ್ಸಿನ ಸೀಟುಗಳು ಭರದಿಂದ ತುಂಬಿದ್ದನ್ನು ಕಂಡು ತನ್ನ ಕನಸಿನ ಜಯಪ್ರದ, ಇವತ್ತೂ ಸಿಗುವುದಿಲ್ಲ ಎಂಬುದು ಸುಬ್ಬನಿಗೆ ಖಾತ್ರಿಯಾಗಿದ್ದಕ್ಕೆ ಸರಿಯಾಗಿ, ಮೊಬೈಲಿನಲ್ಲಿ 'ಈ ಸಂಜೆ ಯಾಕಾಗಿದೆ' ಎಂದು ಸೋನು ನಿಗಮ್ ಆಳುತ್ತಿದ್ದ. ಸುಬ್ಬ ಸೀಟಿನಲ್ಲಿ ತೆಪ್ಪಗೆ ಮುದುರಿದ.  ಮೈಸೂರು suburban ಇಂದ, ಹೊರಟ ಬಸ್ ಕುಂದಾಪುರದ ಕಡೆಗೆ ಮುಖ ಮಾಡಿತ್ತು.  
ಸುಬ್ಬನಿಗೆ ಉಳಿದ ಕಟ್ಟಕಡೆಯ ಓಯಸಿಸ್ BMH stop. ಅಲ್ಲಿ ಯಾರಾದರೂ ಹತ್ತಿದರೆ ಉಂಟು ಇಲ್ಲದಿದ್ದರೆ ಇಲ್ಲ. ಸುಬ್ಬ ಗಟ್ಟಿ ನಿರ್ಧಾರ ಮಾಡಿದ. ಪಕ್ಕದ ಸೀಟ್ ಇನ್ನೂ ಖಾಲಿಯೇ ಇತ್ತು. ಕೊನೆಗೂ ಬಂತು BMH. ಯಾರಿಗುಂಟು ಯಾರಿಗಿಲ್ಲ, ಕೊನೆಗೂ ಒಂದು ಸುಂದರವಾದ ಹೆಣ್ಣು ಜೀವದ ಅದೃಷ್ಟ ಇತ್ತೆಂದಾಯ್ತು ಆ ಬಸ್ಸಿಗೆ. ಸುಬ್ಬನಿಗೆ ಹಬ್ಬ. ಬಾಯಿ ಮುಚ್ಚಲು ಮರೆತು, ಸೋಡಾ ಗ್ಲಾಸ್ ತೆಗೆದು ಕರ್ಚೀಫ್ನಿಂದ ಉಜ್ಜಿ ಮತ್ತೆ ಹಾಕಿಕೊಂಡು ನೋಡಿದ. ಒಮ್ಮೆ ತನ್ನ ಪಕ್ಕದ ಸೀಟನ್ನು , ಇನ್ನೊಮ್ಮೆ ಅವಳನ್ನು ದಿಟ್ಟಿಸಿದ.  
ಬಂದವಳು ಸುಬ್ಬನ ಪಕ್ಕದ ಸೀಟನ್ನೊಮ್ಮೆ ನೋಡಿದಳು. ಸುಬ್ಬನ ಮೈಯಲ್ಲೆಲಾ ಪುಳಕ. ಮನಸ್ಸೊಳಗೆ 'ಕೋಡಿಯ ಬಾಬಣ್ಣನಿಗೆ' ಮಂಗಳಾರತಿ ಮಾಡಿದ, ಗಂಟೆಯ ಸದ್ದು ಶುರು ಆಗುವುದರ ಒಳಗೆ, ಮುಂದೆ ಇದ್ದ ಸೀಟಲ್ಲಿ ದೊಪ್ಪೆಂದು ಕೂತಳು. ಸುಬ್ಬ ಗಾಳಿ ತೆಗೆದ ಟಯರ್ ನಂತಾದ. ಹುಡುಗಿ ಅಲ್ಲದಿದ್ದರೂ ಅವಳ ಸೆಂಟಿನ ವಾಸನೆಯಾದರೂ ಇದೆಯಲ್ಲ ಎಂದು ತೃಪ್ತಿ ಪಟ್ಟ. ಆದರೂ ಕಿಡಿಗೇಡಿ ಮನಸ್ಸು, ವಯಸ್ಸು, ಆದದ್ದಾಗಲಿ ಮಾತಾಡಿಸಿ ಬಿಡುವ, ಆದರೆ 'ಎಂತ ಮಾತಾಡುದ್? ಕುಂದಾಪ್ರ ಕನ್ನಡ ಬತತ್ತೊ ಇಲ್ದೊ, ಕುಂದಾಪ್ರ ಕನ್ನಡ ಮಾತಾಡ್ರೆ ಕಡಿಗ್ ಅವ್ಳ್ ನಗಾಡ್ರೆ?' ಹುಚ್ಚು ಕೋಡಿ ಮನಸ್ಸಿನ ತುಂಬಾ ಪ್ರಶ್ನೆಯ ಅಲೆಗಳು ಎದ್ದಿದ್ದವು.  

         ಕೂಡಿಸಿ, ಕಳೆದು, ಗುಣಿಸಿ, ಬಾಗಿಸಿ, ಲೆಕ್ಕಾಚಾರ ಹಾಕಿದ ಮೇಲೆ 'ನೀರು ಉಂಟಾ' ಎಂದು ಕೇಳುವುದೆಂದು ತೀರ್ಮಾನಿಸಿದ. ಬಾಬಣ್ಣನನ್ನು ಮನಸಾರೆ ಪ್ರಾರ್ಥಿಸಿ, 'ನೀರಲ್ಲಾರು ಹಾಕ್, ಹಾಲಲ್ಲಾರು ಹಾಕ್' ಎಂದುಕೊಂಡು ಸೀಟಿಂದ ಮುಂದೆ ಒರಗುತ್ತಾ, 'ಹೋಯ್ ಇವರೇ, ನೀರು ಉಂಟಾ' ಎಂದು ತಡೆದು ತಡೆದು ಮಾತಾಡಿದ. ೨ ನಿಮಿಷ ಕಾದ. ಉತ್ತರ ಇಲ್ಲ. 'ಈ ಹೆಣ್ಣಿಗ್ ಮದ ಹೌದ್' ಎಂದುಕೊಳ್ಳುತ್ತಾ, ಸರಿಯಾಗಿ ನಿತ್ತು ನೋಡಿದ. 'ಅಯ್ಯಯ್ಯಬ್ಯ' ಎಂದು ಉದ್ಗಾರ ತೆಗೆದ. 'ಕಾಂಬುದೆಂತ, ಹೆಣ್ಣಿಗೆ ಗೊರ್ಕಿ!! '
ಹೀಗಾಗಿ ಸುಬ್ಬನ ಪ್ರೇಮ ಪ್ರಸಂಗ ಸ್ಟಾರ್ಟ್ ಆಗದ, ಆದರೂ ಅಲ್ಲಲ್ಲಿ ನಿತ್ತು ಹೋಗುವ ಗುಜರಿ ಲಾರಿಯಂತಾಗಿತ್ತು. ಆಸೆಯೆಲ್ಲ ನೀರ್ದೋಸೆಯಾಗಿ ಸುಬ್ಬ ಹಿಂದೆ ಒರಗಿ, ಭವಿಷ್ಯದ ಚಿಂತೆಯಲ್ಲಿ ತೊಡಗಿದ. ನಿದ್ದೆ ಹತ್ತಲಿಲ್ಲ. ಬಸ್ಸು ಮಾತ್ರ ಮಡಿಕೇರಿ ಘಾಟಿ ಹತ್ತಿತು. 

                                                        ೨ 

ಹಿಂದಿನಿಂದ ಯಾರೋ ಇವಳನ್ನು ತುಂಬಾ ವೇಗವಾಗಿ ಹಿಂಬಾಲಿಸುತ್ತಿದ್ದರು. ಇವಳು ನಡೆದಷ್ಟೇ ವೇಗವಾಗಿತ್ತು ಅವಳ ಉಸಿರಾಟದ ಏರಿಳಿತವೂ. ಆಕೆ ಓಡಿದರೆ ನೆರಳೂ ಓಡಿತು, ಏನಾದರಾಗಲಿ ಎಂದು ನಿತ್ತರೆ, ಅದೂ ನಿತ್ತಿತು. ಆದರೆ ಹಿಂತಿರುಗಿ ನೋಡುವ ಧೈರ್ಯ ಮಾತ್ರ ಆಗಲಿಲ್ಲ ಇವಳಿಗೆ. ಮತ್ತೆ ನಡೆದಳು. ಈ ಬಾರಿ ತುಂಬಾ ಹತ್ತಿರವಿತ್ತು ಆ ನೆರಳು. ಇನ್ನು ತಡೆಯಲಾಗದೆ ಹಿಂತಿರುಗಿ ಕಣ್ಮುಚ್ಚಿ ಜೋರಾಗಿ ಹೊಡೆದೇ ಬಿಟ್ಟಳು. ಕಣ್ಬಿಟ್ಟಾಗ ಅವಳ ಕೈಗೆ, ಸುಬ್ಬನ ಕೆನ್ನೆ ಬಲಿಯಾಗಿತ್ತು. ಸುಬ್ಬನಿಗೆ ಆಗುಂಬೆ ಘಾಟಿಯಿಂದ ಬಿದ್ದಂಗಾಯ್ತು. ಸ್ಪರ್ಶ ಹಿತವೆನಿಸಿದರೂ, ಪೆಟ್ಟು ಬಲವಾಗಿತ್ತು. 'ತಾನು ನೀರು ಕೇಳಿದ್ದಕ್ಕೆ ಸಿಟ್ಟಿನಿಂದ ಇಷ್ಟು ಹೊತ್ತು ಬಿಟ್ಟು ಹೊಡೆದಳೆ? ನಾನು ಆಸೆ ಬುರುಕ ಎಂದು ತಿಳಿದು ಹೊಡೆದಳೆ ಅಥವಾ ಗಾಢವಾಗಿ ಯೋಚಿಸುತ್ತಾ, ಏನಾದರೂ ಚೇಷ್ಟೆ ಮಾಡಿದೆನೆ?', ತನ್ನ ಮೇಲಿನ ಸಂಪೂರ್ಣ ನಂಬಿಕೆ ಕಳೆದುಕೊಂಡ ಸುಬ್ಬ ಬೆವರಿದ. ಅತ್ತ ಅವಳು ನಿದ್ದೆಯಿಂದ ಎಚ್ಚರವಾದಳು, ಏನು ಮಾಡಲು ತೋಚದೆ, 'sorry, I am extremely sorry' ಎಂದು ಮತ್ತೆ ಸಾವರಿಸಿಕೊಂಡು ಕೂತಳು. ಸುಬ್ಬನ ತಲೆಯ ಮೇಲೆ ನಕ್ಷತ್ರ ಇನ್ನೂ ಕಾಣುತ್ತಲೆ ಇತ್ತು. ಸುಧಾರಿಸಿಕೊಂಡು ಕೂತ ಸುಬ್ಬ. ಹೊತ್ತು ಹೋಗುತ್ತಿತ್ತು. ಬಸ್ಸೂ ಅವರನ್ನು ಹೊತ್ತು ಘಾಟಿ ಇಳಿಯುತ್ತಿತ್ತು.
          ಸುಬ್ಬ ಜಾಗದ ಉಪದ್ರವಿರಬೇಕೆಂದು ಖಾಲಿಯಿದ್ದ ತನ್ನ ಪಕ್ಕ ಇದ್ದ ನತದೃಷ್ಟ ಸೀಟಿಗೆ ಸ್ಥಾನ ಪಲ್ಲಟ ಮಾಡಿದ.  ಹಿಂದಿನ ಸೀಟಿನ ಅಜ್ಜನ ಗೊರಕೆ ವಾದ್ಯ, ಮುಂದಿನ ಸೀಟಿನ ಹುಡುಗಿಯ ಪೆಟ್ಟಿನ ತಬಲ, ಒಟ್ಟಾರೆ ಆ ರಾತ್ರಿ, ಸುಬ್ಬನ ಜೀವನದ ಮರೆಯಲಾಗದ 'ಸಂಗೀತ ರಸಯಾತ್ರೆ'ಯಾಗಿತ್ತು. ಮೊಬೈಲ್‌ನಲ್ಲಿ ಪ್ಲೇ ಲಿಸ್ಟ್ ಮುಂದುವರಿದು, ' ಯಾರಿಗ್ ಹೇಳಣಾ ನಮ್ ಪ್ರೋಬ್ಲಮ್ಮೂ, ಹುಡುಗರ ನೋವಿಗೆ ಇಲ್ಲ ಮುಲಾಮು', ಎಂಬ situational songನೊಂದಿಗೆ ಸುಬ್ಬನ ಹೊಟ್ಟೆ ಉರಿಸಿತು. ಊರು ಸೇರಿದರೆ ಸಾಕಾಗಿತ್ತು ಸುಬ್ಬನಿಗೆ. 'ಜೀವ ಉಳ್ದ್ರೆ ಬೆಲ್ಲ ಬೇಡಿ ತಿನ್ಲಕ್ಕ್ ಮಗಾ' ಎಂದು ಸುಬ್ಬನ ಅಜ್ಜಿ ಸುಬ್ಬಿ ಹೇಳಿದ ನೆನಪು ಸುಬ್ಬಂಗೆ. ಸುಬ್ಬನಿಗೆ ಪಿತ್ರಾರ್ಜಿತವೆಂದು ಬಂದಿದ್ದು, ಅಜ್ಜನ ಹೆಸರು ಮಾತ್ರ.  

ನೋಡು ನೋಡುತ್ತಿದ್ದಂತೆ, ಇನ್ನೊಂದು ಪಟಾಕಿ ಶಬ್ದ. ಗೊತ್ತಿಲ್ಲದೆ ಸುಬ್ಬನ ಕೈ ಕೆನ್ನೆ ಮುಟ್ಟಿಕೊಂಡು, 'ನಾನವನಲ್ಲ' ಎಂಬುದನ್ನು ಖಾತ್ರಿ ಪಡಿಸಿಕೊಂಡಿತು. ನೋಡುತ್ತಾನೆ ಹುಡುಗಿಯ ಪಕ್ಕದ ಸೀಟಿನವ ಕೆನ್ನೆ ಮುಟ್ಟಿಕೊಳ್ಳುತ್ತಿದ್ದಾನೆ. ಈಗ ಸುಬ್ಬನಿಗೆ ಸ್ವಲ್ಪ ಆತ್ಮ ಬಲ, ವಿಶ್ವಾಸ ಬಂತು. ಹುಡುಗಿಯ ಸುತ್ತಮುತ್ತ ಇದ್ದವರಿಗೆ ಶಿವರಾತ್ರಿ ಖಾತ್ರಿ ಎಂಬುದೂ ಗಮನಕ್ಕೆ ಬಂತು. 'ಮಲಗಿದ್ದವರನ್ನು ಹೀಗೆ ಹೊಡೆದು ಏಳಿಸುವುದು ಇದು ಯಾವ ನ್ಯಾಯ ಮರ್ರೆ?' ಅವನಿಗೆ ಪ್ರಶ್ನಿಸಿಕೊಂಡ. ಉತ್ತರ ಬೇಕಿರಲಿಲ್ಲ. ಆದರೆ ಹುಡುಗಿಯ ಬಗ್ಗೆ ಕನಿಕರ ಹುಟ್ಟದೆ ಇರಲಿಲ್ಲ.  
ಮೊದಲ ಬಾರಿಗೆ ಹುಡುಗಿಯನ್ನು ಸ್ವಾರ್ಥ ಬಿಟ್ಟು ಮಾತಾಡಿಸಬೇಕೆನಿಸಿತು. 'ಏನಾದರೂ ತೊಂದರೆಯಾ?' ಎಂದು ಕೇಳಿದ. ಹುಡುಗಿ ಅವಮಾನದಿಂದ ತಲೆ ತಗ್ಗಿಸಿದಳು. ಅವನ ಕಣ್ಣನ್ನು ದಿಟ್ಟಿಸಲಾಗದೆ ಚೂರು ತಲೆಯಲ್ಲಾಡಿಸಿ ಹೌದೆಂದಳು. ಏನು ಎಂದು ಕೇಳುವ ಮನಸ್ಸಾದರೂ ಅಧಿಕ ಪ್ರಸಂಗವಾಗುತ್ತದೆಂದು ಭಾವಿಸಿ ಸುಮ್ಮನಾದ. ಅವಳೇ ಮುಂದುವರಿದು ನನಗೆ ಪ್ರತಿ ರಾತ್ರಿ ಒಂದೇ ಕನಸು ಬೀಳುತ್ತದೆ. ಯಾರೋ ಹಿಂಬಾಲಿಸಿದಂತೆ, ಹಿಂದೆಯೋ ಮುಂದೆಯೋ ಪಕ್ಕದಲ್ಲೋ ಸರಿದಂತಾಗುತ್ತದೆ. ನಾನು ಎದುರಿಸಿ ಹೊಡೆಯದೆ ಮುಂದೆ ಹೋಗುವುದಿಲ್ಲ. ಈ ಹೊಡೆತಕ್ಕೆ ಹೆದರಿ ಮನೆಯವರೆಲ್ಲ ನಾ ಮಲಗುವ ಕೋಣೆಯಿಂದ ದೂರ ಇರುತ್ತಾರೆ’. ಮುಜುಗರ ಮುಖದಲ್ಲಿ ಅಚ್ಚಾಗಿತ್ತು. ತಲೆ ಎತ್ತಲಿಲ್ಲ. ಸುಬ್ಬನಿಗೆ ಅಯ್ಯೋ ಎನಿಸಿತು. ಇದೆ ಕಾರಣಕ್ಕೆ ಇನ್ನೂ ಮದುವೆಯಾಗದೆ ಇರಬಹುದೇನೋ ಅನಿಸಿದ್ದು ಮಾತ್ರ ಸುಳ್ಳಲ್ಲ. 
          ಸುಬ್ಬಣ್ಣನಿಗೆ ಗೋಪಾಲ್ ಚಿಕ್ಕಪ್ಪಯ್ನಿಗೆ ತನ್ನ ಎದುರಲ್ಲೇ ಬಾಬಣ್ಣನ ಗುಡಿಯಲ್ಲಿ ಇಂತದ್ದೊಂದು ಭಯಕ್ಕೆ ಸಟ್ಟಗ ಕಾಸಿ, ನೀರಿನಲ್ಲಿಟ್ಟು ಚುಂಯ್ ಎನಿಸಿದ ಮುಷ್ಟ ನೆನಪಾಗಿ ಹುಡುಗಿಗೆ ಸಭ್ಯನಂತೆ ಬಾಬಣ್ಣನ ಗುಡಿಯ ಅಡ್ರೆಸ್ಸ್ ಹೇಳಿದ. ಕಿಟಕಿಯಿಂದ ಕಳ್ಳ ಬೆಳಕು ಆಗಲೇ ಆಕೆಯ ಮುಖವನ್ನು ಮುತ್ತಿಕ್ಕುತ್ತಿತ್ತು. ಹುಡುಗಿ ನಾಚುತ್ತಾ 'ನೀವೂ ಬನ್ನಿಯಲ್ಲ ಒಟ್ಟಿಗ್ ಹೋಯ್ ಬಪ್ಪ' ಅಂದಳು. ಸುಬ್ಬ ಕರಗಿ ಇಬ್ಬನಿಯಾದ. ಮನದೊಳಗೆ ಕಬ್ಬಿಗನಾದ. ಮೊಬೈಲಿನಲ್ಲಿ 'ಇಬ್ಬನಿ ತಬ್ಬಿದ ಇಳೆಯಲಿ' ಕೇಳುತ್ತಾ ಹಾಗೆ ನೋಡಿದ. ಕ್ಯಾಲೆಂಡರ್ ಫೆಬ್ರವರಿ ೧೪ ಎಂದು ನಗುತ್ತಾ ಹಾರೈಸಿತು.

ಕೆಲವು ಪದಗಳ ಅರ್ಥ :
ನೀಡಿಸಿಕೊಂಡು- ಚಾಚಿ
ಬತ್ತ್ - ಬರುತ್ತೆ
ಕರ್ಕೇರಿ- ರಗಳೆ, ಉಪದ್ರ
ಕೇಣಿ - ಕೇಳಿ
ಕೋಡಿಯ ಬಾಬಣ್ಣ- ಕೋಡಿ ಎಂಬ ಊರಿನ ನನ್ನ ಕಲ್ಪನೆಯ ದೈವ
ಬತತ್ತೊ- ಬರುತ್ತೋ
ಕಡಿಗ್- ಆಮೇಲೆ
ಮದ- ಕೊಬ್ಬು
ಅಯ್ಯಯ್ಯಬ್ಯ- ಆಶ್ಚರ್ಯ ಸೂಚಕ ಉದ್ಗಾರ
ಸಟ್ಟಗ ಕಾಸಿ, ನೀರಿನಲ್ಲಿಟ್ಟು ಚುಂಯ್ ಎನಿಸಿದ ಮುಷ್ಟ- ಮಕ್ಕಳು ಹೆದರಿದರೆ ರೀತಿ ಮುಷ್ಟ ಮಾಡುವ ಪದ್ಧತಿ ಈಗಲೂ ಹಳ್ಳಿಗಳಲ್ಲಿ ಪ್ರಸ್ತುತ.
ಸಟ್ಟಗ- ದೋಸೆ ಏಳಿಸುವ ಸಲಕರಣೆ

5 comments:

  1. ಒಂದು ಒಳ್ಳೆಯ ಕಥೆಯ ಜೊತೆಜೊತೆಗೆ ಕುಂದಾಪುರದ ಕನ್ನಡದ ಸೊಗಡನ್ನ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಬರೆಯುತ್ತಿರಿ.

    ReplyDelete
  2. ಭಾಳ ಇಷ್ಟ ಆತು ಮಾರ್ರೆ ... ಕುಂದಾಪ್ರ ಕನ್ನಡ ಕೇಳೋದೇ ಒಂದ್ ಮಜಾ. ಹೋಯ್ ಇಷ್ಟಾ ಆಯ್ತ್ . ಇದನ್ನ ಬಳಸ್ಕಂಬುಕೆ ಪ್ರಕಟ ಮಾಡುಕೆ ಅಡ್ಡಿ ಇಲ್ಯಲ್ದ ಮತ್ತೆ ... ಹಾಂ ನಿಮ್ದೆ ಹೆಸರಲ್ಲೇ

    ReplyDelete