Wednesday 21 August 2013

ಹೇಗಾಯಿತೋ ಹೀಗೆ

            ಮನದ ಮೂಲೆಯಲ್ಲೊಂದು ಚಂದದ ಮೋಡ ಕಟ್ಟಿದಾಗಲೇ ತಿಳಿದಿತ್ತು, ಮಳೆ ಬರುವ ಸೂಚನೆ ಇದೆಂದು. ಆದರದು ಭಾವ ವೃಷ್ಟಿಯ ಸೃಷ್ಟಿ ಎಂದು ತಿಳಿದದ್ದು, ಭಾವಕ್ಕೊಂದು ರೂಪ ಕೊಟ್ಟಾಗ, ಮಿಡಿದ ಮನಸ್ಸುಗಳಿಂದ.

               ಮಾತು ಮರೆತ ಹೊತ್ತು, ಜೊತೆಯಾಗುವುದು ಬರಹದ ನಂಟು. ಕೊಂಚ ಖುಷಿ, ಕೊಂಚ ದುಃಖ, ಮತ್ತೊಂದಿಷ್ಟು ಏನೂ  ಇಲ್ಲದ ಭಾವ, ಇದನ್ನೆಲ್ಲ ಹೇಳ ಹೊರಟರೆ, ಕೇಳುವ ಕಿವಿಗಳು ಸೋಲಬಹುದು, ಅಥವಾ ಮಾತಿಗೆ ಬರ ಬರಲೂ ಬಹುದು. ಲೇಖನಿಯ ಜೀವದಲ್ಲಿ, ಶಾಯಿಯ ಅತ್ಮನಿರುವ ತನಕ, ಬದುಕೆಂಬ ಹಾಳೆಯ ತುಂಬಾ ಬರೀ ಬರಹಗಳೆ.

               ಬರೆದಷ್ಟು ಬದುಕು ಸುಂದರವೆನಿಸುವುದಕ್ಕೋ ಏನೋ ಬರೆಯುವುದೆಂದರೆ ನನಗೆ ಪ್ರಾಣ. ಬರೆದದ್ದನ್ನು ಅಜ್ಜಿಗೋ, ಅಮ್ಮನಿಗೋ , ತೋರುವ ತನಕ ತವಕ. ಗಮಕ, ತಾಳ, ಮೇಳಗಳ ಹಂಗಿಲ್ಲದೆ, ನನ್ನ ಬರವಣಿಗೆ ಹುಟ್ಟಿದ್ದು, ಅಜ್ಜಿ ಮನೆಯ ದೇವರ  ಕೋಣೆಯಲ್ಲಿ ಭಜನೆ ಮಾಡುವಾಗ. ದೇವರೇ  ಕಿವಿ ಮುಚ್ಚಿಕೊಳ್ಳುವಂತೆ, ಬರದ ರಾಗದಲ್ಲಿ, ಬರೆಯದೆಯೇ ಮನದಲ್ಲೇ ಬೆಸೆದ,  ಬಿರಿದ ಹಾಡ ಎಸಳನ್ನು ಬಿಡಿಸುತ್ತ ಬೆಳೆದೆ.

               ಆಗಿನ್ನೂ ಪೆನ್ಸಿಲ್ ಹಿಡಿಯುತ್ತಿದ್ದ ಕಾಲ, ಪೆನ್ಸಿಲ್ ಮೊನೆ ಸವೆದರೂ ಬಿಡದೆ, ಮೊನೆ ಮಾಡಿ ಚೂಪಾಗಿಸಿ ಪುಟ್ಟ ಗುಬ್ಬಿ, ಕಾಗೆಗಳ ಕಾಲಂತೆ  ಚಿಕ್ಕ ಚಿಕ್ಕ ಕವನ, ಮಾವ ಉಪಯೋಗಿಸಿ ಎಸೆದ ಡೈರಿಯಲ್ಲಿ ಸದ್ದಿಲ್ಲದೇ ಗೀಚುತ್ತಿದ್ದೆ.

                ಗದ್ದೆಯಂಚಲ್ಲಿ ಕೂತು, ಹಕ್ಕಿ ಬಾನಲ್ಲಿ ಚುಕ್ಕೆಯಾಗುವರೆಗೂ ದಿಟ್ಟಿಸಿ, ಮೋಡದಲ್ಲಿ ಕಲ್ಪನೆಯ ಚಿತ್ರವ ಮನದಲ್ಲೇ ಸೃಷ್ಟಿಸಿ, ಬೆಳದಿಂಗಳಿಗೂ, ನೇಸರನಿಗೂ ಮದುವೆ ಮಾಡುವ ಮುಗ್ಧತನ ತೋರುತ್ತಿದ್ದೆ.

                ಎಲ್ಲಾ ಮುಗ್ಧತೆಗೂ ಮರಳುತನಕ್ಕೂ ಎಲ್ಲೆ, ಮುಗಿಲ ದಿಗಂತವೆ. ಒಮ್ಮೊಮ್ಮೆ ಅರಿವಿಲ್ಲದೆಯೇ ಬಂದು ಬೀಳುವುದು ಭಾವುಕತೆ, ಪದಗಳ ತೋಳ ತೆಕ್ಕೆಗೆ. ಎಲ್ಲ ಅತಿವೃಷ್ಟಿ, ಅನಾವೃಷ್ಟಿಯ ಒಟ್ಟು ಮೊತ್ತವೇ ನನ್ನ ಭಾವವೃಷ್ಟಿ.
            

4 comments:

  1. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ, ಲೇಖನವನ್ನು ಕನ್ನಡದಲ್ಲಿಟ್ತು ಇದನ್ನ ದಯವಿಟ್ಟು ಮುಂದುವರೆಸು. ನನ್ನ ಕಡೆಇಂದ ಶುಭ ಹಾರೈಕೆ.

    ReplyDelete
  2. ಖಂಡಿತಾ ನಿಖಿಲ್. ಧನ್ಯವಾದಗಳು :)

    ReplyDelete
  3. Sogasagide. Shubhavagali :)

    ReplyDelete