Wednesday 2 July 2014

ಕನಸು

                                         
                            
          ಅದೊಂದು ಕನಸುಗಳ ಸಂತೆ, ಅಲ್ಲಿ ಯಾವ ಬಣ್ಣದ ಕನಸುಗಳನ್ನು ಯಾರು ಬೇಕಾದರೂ ಬೆಲೆ ಕೊಟ್ಟು ಕೊಂಡುಕೊಳ್ಳಬಹುದಿತ್ತು. ವಾರಕ್ಕೆ ಒಂದು ಸಲ ಮಾತ್ರ ಆ ಸಂತೆ ನಡೆಯುತ್ತಿದ್ದುದು. ದೂರದೂರುಗಳಿಂದೆಲ್ಲಾ ಆ ಸಂತೆಗೆ ಜನ ದೌಡಾಯಿಸುತ್ತಿದ್ದರು. ನಾ ಮುಂದು ತಾ ಮುಂದು ಎನ್ನುತ್ತಾ ಕನಸುಗಳ ವ್ಯಾಪಾರದಲ್ಲಿ ತೊಡಗುತ್ತಿದ್ದರು.
ಕನಸಿನ ವ್ಯಾಪಾರವೇನು ಕಮ್ಮಿ ಇರಲಿಲ್ಲ. ಅದಕ್ಕೆ ಸಾಕಷ್ಟು ನಿಯಮಗಳಿದ್ದವು. ಒಂದೊಂದು ಕನಸಿನ ಬೆಲೆಯು ಆ ದಿನದ ಮುಂಜಾವಿನಿಂದಲೆ ನಿಗದಿಯಾಗುತ್ತಿತ್ತು. ಆ ಬೆಲೆಗಿಂತ ಒಂದು ರೂಪಾಯಿ ಹೆಚ್ಚಿಗೆ ದರದಲ್ಲಿ ಮಾರ ಹೊರಟರೂ, ಎಲ್ಲ ವ್ಯಾಪಾರಿಗಳು ಆ ವ್ಯಾಪಾರಿಯ ಎಲ್ಲಾ ಕನಸುಗಳನ್ನು ನಾಶ ಮಾಡಬಹುದಿತ್ತು. ಕಟ್ಟಳೆಗಳು ಸಮರ್ಥವಾಗಿ ಜಾರಿಗೆ ಬರುತ್ತಲಿದ್ದದ್ದರಿಂದ ಎಲ್ಲರು ನಿಷ್ಠೆಯಿಂದಿದ್ದರು.
           ಕನಸಿನ ಸಂತೆಯೆಂಬುದು ಆ ಊರಲ್ಲಿ ಸಣ್ಣ ಸ್ವರ್ಗವನ್ನೇ ಸೃಷ್ಠಿಸುತ್ತಿತ್ತು. ಎಲ್ಲೆಲ್ಲೂ ಬಣ್ಣಗಳು. ಎಲ್ಲೆಲ್ಲೂ ಖುಷಿ. ಸದ್ದು, ಗದ್ದಲ, ಗೌಜು. ಇಲ್ಲಿ ವರ್ತಕರಾಗಲು ವಯಸ್ಸಿನ ಮಿತಿ ಇರಲಿಲ್ಲ. ಎಷ್ಟೋ ಹುಡುಗರು ಮನ ಬಂದಂತೆ ಬದುಕಲು ಅಪ್ಪ ಅಮ್ಮ ದುಡ್ಡು ಕೊಡದೇ ಇದ್ದಾಗ ಮನೆಯವರ ಕಣ್ಣು ತಪ್ಪಿಸಿ, ಈ ಜಾತ್ರೆಯಲ್ಲಿ ಎಷ್ಟೋ ಸುಂದರ ಕನಸ್ಸುಗಳನ್ನು ಮಾರಿಕೊಂಡಿದ್ದಾರೆ. ಅಪಪೋಲಿ ಕನಸುಗಳನ್ನು ಮಾರಿದ ಯುವಕರಿಗೇನು ಕಮ್ಮಿ ಇಲ್ಲ. ಆದರೆ ಕನಸನ್ನು ಒಂದು ಸಲ ಮಾರಿದರೆ ಬೇಕೆಂದರೂ ಆತ ಆ ಕನಸ್ಸನ್ನು ಮತ್ತೆಂದೂ ಕಾಣಲಾರ, ಮತ್ತೆ ಎಷ್ಟು ಬೆಲೆ ತೆತ್ತರೂ ಹಿಂದೆ ಪಡೆಯಲಾರ, ಇದು ಆ ಜಗತ್ತಿನ ನಿಯಮವಾಗಿತ್ತು.  ಆದ್ದರಿಂದ ಎಷ್ಟೋ ಯುವಕರು ಆತುರಾತುರವಾಗಿ ಮಾರಿಕೊಂಡ ಬದುಕಿನ ಸುಂದರ ಕನಸುಗಳಿಂದ ವಂಚಿತರಾಗಿ ಬದುಕುತ್ತಿದ್ದರು. ಆ ಕನಸಿನ ನೆನಪೂ ಇರದಷ್ಟು ಮಾಸಿ ಹೋಗುತ್ತಿತ್ತು ಅವರ ಮನಸ್ಸಿನಿಂದ.
ಕನಸನ್ನು ಕೊಳ್ಳುವ ವರೆಗೂ ವರ್ತಕನ ಕನಸಾಗಿರುವ ಅವು, ಕೊಂಡ ನಂತರ ಕೊಂಡವನ ಸ್ವಂತದ್ದಾಗಿ ಬದಲಾಗುತ್ತಿದ್ದವು. ಜಾಗ್ರತೆಯಿಂದ ಪ್ರತಿಯೊಬ್ಬರೂ ಸುಂದರ ಕನಸುಗಳನ್ನಷ್ಟೇ ಆಯ್ದು ಕೊಳ್ಳುತ್ತಿದ್ದರು.
           ಆ ದಿನ ಸಂತೆಯ ರಂಗಲ್ಲೊಂದು ಸಾತ್ವಿಕ ಕಳೆಯಿತ್ತು. ಯಾವುದೋ ಸೌಮ್ಯ ಲಹರಿ ಅಲ್ಲೆಲ್ಲಾ ಓಡಾಡಿದಂತಿತ್ತು. ಎಲ್ಲರ ಮನದಲ್ಲೂ ಖುಷಿ ದ್ವಿಗುಣವಾಗಿತ್ತು. ಸಂಭ್ರಮ ಮುಗಿಲೇರಿತ್ತು. ಆದರು ಯಾರಿಗು ಆ ಖುಷಿಯ ಕಾರಣ ತಿಳಿದಿರಲಿಲ್ಲ. ಆದರೆ ಅಂದು ಕಣ್ಣಿಗೆ ಕಾಣಬಹುದಾಗಿದ್ದ ಒಂದೇ ಬದಲಾವಣೆಯೆಂದರೆ ಸಂತೆಯ ಮೂಲೆಯಲ್ಲಿ ಕಟ್ಟಿದ್ದ ಕುರುಡು ಲ್ಯಾಂಟೀನದ ಕೆಳಗೆ ತನ್ನ ಕನಸ್ಸೊಂದನ್ನು ಹೊತ್ತು ಮಾರಲು ಹವಣಿಸುತ್ತಿದ್ದ ಒಬ್ಬ ಮಧ್ಯ ವಯಸ್ಸಿನ ಸನ್ಯಾಸಿ. ನೋಡಿದ ಜನರೆಲ್ಲಾ ಹುಬ್ಬೇರಿಸುವವರೇ. ಇವನೆಲ್ಲಿಯ ಕಳ್ಳ ಸನ್ಯಾಸಿ, ಸನ್ಯಾಸಿಗಳಿಗೆಲ್ಲಾದರೂ ಕನಸಿರುವುದುಂಟೇ ಎಂದುದು ಸಾಮಾನ್ಯರ ತಾತ್ಸಾರ.
            ಸನ್ಯಾಸಿಯ ಕನಸ್ಯಾವುದೋ ಕಂಡವರಾರು! ತಾತ್ಸಾರಕ್ಕೆ ತಾನೇಕೆ ಗುರಿಯಾಗುತ್ತಿದ್ದೇನೆ ಎಂಬುದು ತಿಳಿಯುತ್ತಿರಲಿಲ್ಲ ಅವನಿಗೆ. “ಅಷ್ಟಕ್ಕು ನನ್ನ ಕನಸ್ಸೇನು ಲೌಕಿಕವಾದುದಲ್ಲ. ಕೋಟಿ ತೇಜ ಪುಂಜಗಳ ಸಾಕ್ಷಾತ್ಕಾರದ ಕನಸು. ನಾನು ಅತ್ತಲೇ ಹೆಜ್ಜೆ ಹಾಕುತ್ತಿದ್ದೆ. ನನ್ನ ಕನಸಿನ ಸಾಕ್ಷಾತ್ಕಾರಕ್ಕೆ ಇನ್ನೇನು ಒಂದು ಹಗಲು ಜಾರುವುದಷ್ಟೆ ಬಾಕಿಯಿತ್ತು. ತುಂಬಾ ವೇಗವಾಗಿ ಆ ಎಡೆಗೆ ಹೆಜ್ಜೆ ಹಾಕುತ್ತಿದ್ದೆ. ಒಂದೊಂದು ಕಿರಣವನ್ನು ಕಣ್ತುಂಬಿಸಿಕೊಳ್ಳುವ ಆತುರದಲ್ಲಿತ್ತು ಮನ. ಇಷ್ಟು ವರ್ಷ ಬೆಟ್ಟ ಗುಡ್ಡವನ್ನು ಹಾವುಗೆಯನ್ನೂ ಹಾಕದೆ ಅಲೆದುದ್ದಕ್ಕೆ ಇಂದು ರಾತ್ರಿ ಫಲ ಉಣ್ಣುವೆನು. ಅನಂತ ಸುಖದ ತೊಟ್ಟಿಲಲ್ಲಿ ಒಂದಷ್ಟು ಹೊತ್ತು ನನ್ನನ್ನಿಟ್ಟು ಪ್ರಕೃತಿ ತೂಗುವಳು. ಇಂದು ರಾತ್ರಿ ಮಹಾ ತೇಜಪುಂಜವೊಂದು ಆಕಾಶದಲ್ಲಿ ಹುಟ್ಟಿ, ತನ್ನ ಪ್ರತಿ ಕಿರಣದಲ್ಲೊಂದೊಂದು ಬಣ್ಣ ಸ್ಫುರಿಸಿ, ಮಹಾ ಶಕ್ತಿಯಾಗಿ ಮಿಂಚಿ ಮರೆಯಾಗುವ ನನ್ನ ಕನಸಿನ ಕೂಸು ಜೀವ ತಳೆಯುವ ಒಂದು ಅಧ್ಭುತ ಪುಳಕಮತ್ತೆ ಆತನಲ್ಲಿ ರೋಮಾಂಚನ ತಂದಿತು.” ಆದರೆ ಅಂತ ಅಧ್ಭುತವನ್ನು ಒಂದು ಮಗುವಿನ ಕಾರಣಕ್ಕೆ ನಾನೇಕೆ ಮಾರಲು ಹೊರಟಿರುವೆ? “ ಮಗುವಿನ ಮುಖ ನೆನಪಾಗಿ ತಾನೇ ಮಂತ್ರಮುಗ್ಧನಾಗಿ ಮಾತಾಡಿಕೊಂಡ. " ತಾಯಿ ನನ್ನ ಹೆಜ್ಜೆಗೆ ಅಡ್ಡ ಬಂದು ಗೋಗರೆದ ಹೃದಯ ಕಲಕುವ ಕ್ಷಣ ನನ್ನೆಲ್ಲ ಕನಸಿಗೆ ಬೆಂಕಿ ಹಾಕಬೇಕೆನಿಸಿತು. ಇಷ್ಟು ವರ್ಷ  ಕಾಡನ್ನು ಅಲೆದರು, ಮಗುವಿಗೆ ಅಂಟಿದ ಬೇನೆಯನ್ನು ಗುಣಪಡಿಸುವ ಸಣ್ಣ ವಿಧ್ಯೆಯೂ ನನಗೊಲಿದಿಲ್ಲ. ಆಕೆ ನಾನು ಮಹಾಪುರುಷನೆಂದು ನಂಬಿ ನನ್ನ ಮೊರೆ ಹೋಗಿದ್ದಳು. ಕೊನೆಯ ಪಕ್ಷ ಆಕೆಯ ಆಸ್ಪತ್ರೆಯ ಖರ್ಚಿಗೆ ನನ್ನ ಬಳಿ ಬಿಡಿಗಾಸಾದೂ ಇದ್ದಿದ್ದರೆ!" ಮತ್ತೆ ಪ್ರಶ್ನಿಸಿಕೊಂಡು ತಲೆ ತಗ್ಗಿಸಿ ಕುಗ್ಗಿತು ಸನ್ಯಾಸಿಯ ಜೀವ. "ಮತ್ತೆ ಮತ್ತೆ ತಾಯಿಯ ಆರ್ತನಾದ ಕೇಳಿತು. ಎದೆಯಲ್ಲಿ ಅಗಾಧವಾಗಿ ಚುಚ್ಚಿದರೂ ಅಸಹಾಯಕನಾಗಿ ಮುನ್ನಡೆದೆ. ಅವಳು ಅಲ್ಲೇ ಬಿಕ್ಕುತ್ತಿದ್ದಳು.
           “೧೦ ಹೆಜ್ಜೆಯ ಅಂತರದಲ್ಲಿ ಜನರು ಯಾವುದೋ ಅಯೋಮಯ ಬಣ್ಣಗಳನ್ನು ಹಿಡಿದು ಸಾಲಾಗಿ ನಿಂತಿದ್ದು ಕಂಡಿತು. ಲೋಕ ಸಹಜವಾದ ಕುತೂಹಲದಿಂದ ಹಿರಿಯನೊಬ್ಬನನ್ನು ಕೇಳಿ ನೋಡಿದೆ. ಆತ ಇದು ಕನಸುಗಳ ಮಾರುಕಟ್ಟೆ ಸಂಜೆಯೆ ವ್ಯಾಪರ ಎಂದನು. ಯೋಚಿಸಲು ವರೆಗೂ ಯಾವ ದಾರಿಯೂ ಇರದಿದ್ದ ನನಗೆ ಈಗ ಮಾನವೀಯ ನೆಲೆಯಲ್ಲಿ ನಿತ್ತು ನನ್ನದೇ ಬಿಂಬಗಳು ಪ್ರಶ್ನಿಸಹತ್ತಿದ್ದವು. ಯಾವುದು ನಿನ್ನ ಸಾಧನೆ? ಒಂದೇ ಒಂದು ಜೀವಿಗೂ ಪ್ರಯೋಜನವಾಗದೆ ಬದುಕಿದ್ದೆಕಾಡುಮೇಡು ಸುತ್ತಿದ್ದೆ? ಅಥವಾ ಕನಸಲ್ಲಿ ಕಂಡ ಶಕ್ತಿಯ ದರ್ಶನಕ್ಕೆ ಹೊರಟಿದ್ದೆ? ಪ್ರಶ್ನೆಗಳಿಗೆ ಉತ್ತರ ಹುಡುಕುವ ಮೊದಲೇ ನನ್ನ ಮುಂದಿದ್ದ ಸಾಲು ಕರಗಿ ನಾನು ಮೊದಲನೆಯವನಾಗಿದ್ದೆ. ಒಬ್ಬರನ್ನೊಬ್ಬರು ತಳ್ಳಿಕೊಳ್ಳುತ್ತಿದ್ದ ಜನ ನನ್ನ ಕಾಲ್ಗಳ ಇಚ್ಛೆಯನ್ನು ಮೀರಿ ನನ್ನನ್ನು ಸಾಲಿನಲ್ಲಿ ಮುಂದೆ ತಳ್ಳಿದರು. ಅಲ್ಲಿದ್ದ ಅಧಿಕಾರಿ ನನ್ನ ಕನಸನ್ನು ಬಿಚ್ಚಿ ನೋಡಿ ಬೆಲೆ ನಿಗದಿ ಪಡಿಸಿ ಮುಂದಕ್ಕೆ ತಳ್ಳಿದ್ದ ಲೌಕಿಕ ಪ್ರಪಂಚವೇಕೆ ಹೀಗೆ. ಬೇಕೋ ಬೇಡವೊ ಎಂಬ ಗೋಜೂ ಇಲ್ಲದೆ ಯಾವುದಕ್ಕೋ ತಳ್ಳಿ ಖುಷಿ ನೋಡುತ್ತದೆ. ಈಗ ಉಳಿದದ್ದು  ನನ್ನ ತೀರ್ಮಾನವಷ್ಟೆ ಕನಸನ್ನೊ ಅಥವ ವಾಸ್ತವವನ್ನು ಆರಿಸುವುದೋ ಎಂದು.            ಏನಾದರಾಗಲಿ ನನ್ನ ಕನಸನ್ನು ಕೊಳ್ಳಲು ಯಾರು ಬರದಿದ್ದರೆ ನನ್ನ ದಾರಿ ನನ್ನದು, ಲೌಕಿಕದಲ್ಲಿ ಸಿಲುಕಿ ಹಾಕಿಕೊಳ್ಳಲಾರೆ" ಎನ್ನುತ್ತಾ, ಅರಿವಿಲ್ಲದಂತೆ ಈ ಲೌಕಿಕದ ಕಗ್ಗಂಟಿನ ಒಂದು ಎಳೆಯಾಗಿ ಸಿಕ್ಕಿ ಹಾಕಿ ಕೊಂಡಿದ್ದ.  "ಕೂತ ಮರು ಘಳಿಗೆಯಲ್ಲೇ ಒಬ್ಬ ದರಿದ್ರನಂತೆ ಕಾಣುತ್ತಿದ್ದ ಯುವಕ ನನ್ನ ದಾರಿಯನ್ನು ಹಾದು ಮತ್ತೆ ಹಿಂದೆ ಬಂದು ನನ್ನ ಕನಸನ್ನು ಕೊಳ್ಳಬಹುದೇ ಎಂದು ಕೇಳಿದಮನಸ್ಸು ಸಂಧಿಗ್ಧತೆಯತ್ತ ವಾಲಿತು. ಆದರೆ ನನ್ನ ಕನಸ್ಸನ್ನು ಕೊಳ್ಳಲು ಒಬ್ಬ ಯುವಕನೇ ಆಗಬೇಕು. ಕನಸು ಅವನ ಬದುಕಿನ ದಿಕ್ಕನ್ನೇ ಬದಲಾಯಿಸಬಹುದು" ಎಂದು ಸನ್ಯಾಸಿ ದೃಡ ಮನಸ್ಸು ಮಾಡಿ ಮಾರಿಯೇ ಬಿಟ್ಟ.
             ಆ ರಾತ್ರಿ ಅಲೌಕಿಕ ಸುಖದ ಮತ್ತಲ್ಲಿರಬೇಕಾಗಿದ್ದ ಸನ್ಯಾಸಿ ಹೀಗೆ ಸಿಕ್ಕಿಹಾಕಿಕೊಂಡು ನರಳುತ್ತಿದ್ದ. ಮತ್ತೆ ೧೦ ಹೆಜ್ಜೆ ಹಿಂದೆ ಬಂದು ತಾಯಿಯನ್ನು ಕರೆದು , ಊರಿನ ವೈದ್ಯರತ್ತ ಹೆಜ್ಜೆ ಹಾಕಿದ. ಕಂದ ಬದುಕಿದರೆ ಕನಸ್ಸನ್ನು ಮಾರಿದ್ದಕ್ಕೊಂದು ಬೆಲೆ ಬಂದೀತು. ಇಲ್ಲದಿದ್ದರೆ ಬದುಕು ಮತ್ತಷ್ಟು ಅರ್ಥಹೀನವಾಗುವುದು ಎಂಬ ಮಾನವ ಸಹಜ ಭಯ ಮೊದಲುಗೊಟ್ಟಿತು. ಆತ್ಮ ವಿಮರ್ಶೆಗೆ ಸಮಯವಿದಲ್ಲವೆಂಬ ಸಮಯ ಪ್ರಜ್ನೆಯು ಇತ್ತು ಚಿಕಿತ್ಸೆಗೆಂದು ಒಳಹೋದ ವೈದ್ಯರು ಎಷ್ಟು ಹೊತ್ತಾದರು ಹೊರ ಬರದಿದ್ದಾಗ ತಾಯಿಯ ಆತಂಕ ಹೆಚ್ಚಾಗುತ್ತಿತ್ತು. ಸನ್ಯಾಸಿ ಸಮಾಧಾನ ಹೇಳಲು ತಿಳಿಯದವನಾಗಿ ಕಂಗೆಟ್ಟ. ಮನಸ್ಸನ್ನು ಸಮಸ್ಥಿತಿಗೆ ತರುವ ಯೋಗ ಮುದ್ರೆಯಲ್ಲಿ ಕುಳಿತ, ಚಡಪಡಿಸುವ ಮನಸು ಕೈಗೆ ಸಿಗದೆ ಕಾಡಿಸುತ್ತಿತ್ತು. ಧೈರ್ಯ ಮಾಡಿ ತನ್ನ ಕನಸು ನುಚ್ಚು ನೂರಾದ್ದನ್ನು ನೋಡಿಯೇ ಬಿಡುವೆ ಎಂದು ಅಪ್ಪಣೆಯನ್ನೂ ಕೇಳದೆ ವಾರ್ಡಿಗೆ ನುಗ್ಗಿ ಬಿಟ್ಟ ಸನ್ಯಾಸಿ, ನೇರ ಮಗುವಿನ ಮುಖವನ್ನು ದೃಷ್ಟಿಸಿ, ಕೈಯ ನಾಡಿ ಮಿಡಿತವನ್ನು ನೋಡಲು ಮಗು ನಿಧಾನ ಕಣ್ತೆರೆಯಿತು.
               ಅಲ್ಲಿದ್ದ ವೈದ್ಯರು ಒಂದು ನಿಮಿಷಕ್ಕಾಗಿ ಕಾದು ನಿತ್ತಿದ್ದರು, ಕಣ್ಣು ತೆರೆಯುವ ಕ್ಷಣಕ್ಕಾಗಿ ಉಸಿರು ಹಿಡಿದು ನಿಂತಿದ್ದರು. ಈಗ ಸನ್ಯಾಸಿ ಮುಟ್ಟಿದಾಗ ಖಂಡಿತವಾಗಿಯೂ ಅಲ್ಲೊಂದು ಅದ್ಭುತ ನಡೆದದ್ದು ಎಲ್ಲರ ಗಮನಕ್ಕೆ ಬಾರದೇ ಇರಲಿಲ್ಲ. ಮಗು ಮತ್ತೆ ಉಸಿರಾಡಿತ್ತು. ಸನ್ಯಾಸಿಯ ಕಣ್ಣು ಕೋರೈಸುವಷ್ಟು ಬೆಳಕಿತ್ತು ಪುಟ್ಟ ಕಣ್ಣುಗಳಲ್ಲಿ. ಎಷ್ಟೋ  ಕಿರಣಗಳ ಬಣ್ಣಗಳಿದ್ದವು ಮುಗ್ಧ ನಗುವಲ್ಲಿ, ತನಗರಿವಿಲ್ಲದಂತೆ ಆತನ ಎರಡೂ ಕೈಗಳು ಮುಗಿದಿದ್ದವು. ಶಿರ ಬಾಗಿತ್ತು.

3 comments: