Monday 5 March 2018

ಉತ್ತರ ಕಾಂಡ - ಇದು ಸೀತೆಯ ಕತೆ

                                     ಉತ್ತರ ಕಾಂಡ 

                                                       BY S L Bhyrappa

             


ಓಡುವ ಯುಗದಲ್ಲಿ ಓದುವ ಹವ್ಯಾಸ ತೀರಾ ದುರ್ಲಭ , ಹತ್ತಿರ ಹತ್ತಿರ ಅಸಾಧ್ಯವೆಂಬಂತಾಗಿದೆ.  ಅದರ ಮಧ್ಯವು ಬಸ್ಸೋ, ಓಲಾವೋ , ಉಬರೋ ಇಲ್ಲ ಆಟೋದಲ್ಲಿ ಕೂತಾಗ ರಪ ರಪ ಪುಟಗಳನ್ನ ತೆರೆದು ಪ್ರೀತಿಯಿಂದ ಓದಿಸಿಕೊಂಡವಳು ಸೀತೆ. ಹೌದು ಇದು ಸೀತೆಯ ಕಥೆ. ಯಾಕೆಂದರೆ ಉತ್ತರಕಾಂಡವನ್ನು ಓದುವುದೆಂದರೆ ಸೀತೆಯನ್ನು ಓದಿದಂತೆ. ಸಾಮಾನ್ಯವಾಗಿ ನಾವೆಲ್ಲಾ ಓದಿದ, ಕೇಳಿದ, ನಮ್ಮ ಮಕ್ಕಳಿಗೆ ಹೇಳಿದ ರಾಮಾಯಣವೆಲ್ಲವು ರಾಮನನ್ನೇ ಕೇಂದ್ರವಾಗಿರಿಸಿದಂತ ಕತೆಗಳು. ಇದಕ್ಕೆ ಬೇರೆಯದೇ ಆದ ರೂಪ ಕೊಟ್ಟ ಭೈರಪ್ಪನವರಿಗೆ ನನ್ನ ಅನಂತ ಧನ್ಯವಾದಗಳು. 

       ಸೀತೆ ಭಾರತೀಯ ನಾರಿಯರಿಗೆಲ್ಲ ಆದರ್ಶ ಮಹಿಳೆ, ತಾಳ್ಮೆಯ ಪ್ರತಿರೂಪ. ಕಷ್ಟ ಪಡುವವರಿಗೆ ಹೆಚ್ಚು ಕಷ್ಟ ಎಂಬುದು ಸೀತೆಯ ವಿಷಯದಲ್ಲೂ ಸುಳ್ಳಲ್ಲ. ಇಡೀ ರಾಮಾಯಣದ ಅವಧಿಯಲ್ಲಿ, ಪ್ರತಿ ಹೆಜ್ಜೆಯಲ್ಲೂ, ಸೀತೆಗೆ ಏನೆನಿಸಿರಬಹುದು ಎನ್ನುವುದನ್ನು ನಾವು ಯೋಚಿಸುವ ಗೋಜಿಗೆ ಹೋಗುವುದಿಲ್ಲ.  ಉತ್ತರ ಕಾಂಡಕ್ಕೆ ಆಕೆಯ ಭಾವನೆಗಳೇ, ಮನದ ಮಾತುಗಳೇ ಜೀವಾಳ.  ರಾಮನ ಪ್ರತಿ ನೆರಳಂತೆ ನಿಂತ ಆಕೆ ರಾಮನಿಗೆ ಎಲ್ಲೋ ಕಡಿಮೆ ಅರ್ಥವಾದಳ ? ಇಲ್ಲ ಆಕೆಯ ಭಾವನೆಗಳಿಗಿಂತ ಆತನ ತತ್ವ , ಆದರ್ಶಗಳು ಹೆಚ್ಚಿನದ್ದಾಗಿತ್ತಾ ಎಂಬುದು ಓದಿನುದ್ದಕ್ಕೂ ಓದುಗನಿಗೆ ಕಾಡುತ್ತಲೇ ಹೋಗುತ್ತದೆ. 
        ರಾಮ ಕಾಡಿಗೆ ಹೊರಟಾಗಿನಿಂದ ನೊಂದ ಜೀವಗಳು ಒಂದೆರೆಡಲ್ಲ, ಆತನ ತಾಯಿಯ, ತಂದೆಯ , ಪ್ರಜೆಗಳ ಆರ್ತನಾದವೆಲ್ಲವು ಮಲತಾಯಿ ಕೈಕೇಯಿಯ ಕೋಪ, ಆಣತಿಗಳ ಮುಂದೆ ತೃಣವಾಗುತ್ತದೆ.  ಸೀತೆಯಲ್ಲಿ ಹೇಳುವ ಕೇಳುವ ಯಾವ ಕ್ರಮವನ್ನು ಇಟ್ಟುಕೊಳ್ಳಲಿಲ್ಲ ಆತ. ಆಕೆಯ ಹಠಕ್ಕೆ ಕಟ್ಟು ಬಿದ್ದಷ್ಟೇ ಆಕೆಯನ್ನ ಜೊತೆಗೆ ಕರೆದುಕೊಂಡು ಹೋದ. ಜೀವನವನ್ನು ಕಠಿಣವಾಗಿಸಿಕೊಂಡು ಜೊತೆ ನಡೆದ ಲಕ್ಷ್ಮಣ ,ಸೀತೆಗೂ ಯಾವ ಆಯ್ಕೆಯನ್ನು ಉಳಿಸದೆ ಹೋದ.  ಈ ಕತೆಗಳೆಲ್ಲ ನಮಗೆಲ್ಲ ಗೊತ್ತಿರುವುದೇ ಆದರೂ, ಎಲ್ಲೂ ಓದಿದ ಕತೆಯನ್ನೇ ಮತ್ತೆ ಓದುತ್ತಿದ್ದೇನೆ ಎನಿಸುವುದೇ ಇಲ್ಲ. ಸೀತೆ ರಾಮನ ಮನಸ್ಸಿನ ಒಳ ಹೊರಗನ್ನು ತಿಳಿದವಳಾದರು, ಕೆಲವೊಮ್ಮೆ ಆತ ಮೂರನೆಯವನಂತೆ ಕಾಣುತ್ತಾನೆ, ನಿರ್ಲಿಪ್ತನಾಗುತ್ತಾನೆ. ನಮಗೂ ಅಪರಿಚಿತನಾಗುತ್ತಾನೆ. ಸೀತೆ ಜೊತೆ ನಮ್ಮನ್ನು ಅಳಿಸುತ್ತಾರೆ ಭೈರಪ್ಪನವರು. ಪೂರ್ತಿ ಕತೆ ಗೊತ್ತಿದ್ದವರಿಗೂ ಮುಂದೇನಾಗಬಹುದೆಂಬ ಕುತೂಹಲ ಹುಟ್ಟಿಸುತ್ತಾರೆ. ಅಷ್ಟು ತತ್ವ ಪಾಲಿಸುವ ರಾಮ ಮಾಡಿದ ಕೆಲವೊಂದು ತಪ್ಪುಗಳಿಗೆ ಸಮಾಧಾನವನ್ನು ಸೀತೆಯಿಂದಲೇ ಕೇಳಿಸುತ್ತಾರೆ. ರಾಮ ಕೆಲವಕ್ಕೆ ಉತ್ತರಿಸಲಾಗದೆ ನಿರುತ್ತರನಾಗುತ್ತಾನೆ. 
       ಎಲ್ಲಕ್ಕಿಂತಲೂ  ಹೆಚ್ಚು  ಲೆಕ್ಕಕ್ಕೆ ಬರುವುದು ಮಾತು. ಅದರಿಂದಲೇ ಎಲ್ಲಾ ಸಂಬಂಧಗಳ ಹುಟ್ಟು ಮತ್ತು ಸಾವು ಎಂಬುದನ್ನು ಹೇಳದೆಯೇ ಹೇಳುತ್ತದೆ ಕತೆ. ಮಾತಿಲ್ಲದೆಯೇ ಕತೆಯ ಕೊನೆಯಾಗುತ್ತದೆ. ಸಂಬಂಧಗಳ ಕೊಲೆಯಾಗುತ್ತದೆ. ಕತೆ ಹೇಳಿ ಮೌನವಾದ ಮೇಲು ಸೀತೆ ನನ್ನನ್ನು ಕಾಡುತ್ತಲೇ ಇದ್ದಾಳೆ.  ಆಕೆಗೆ ನಾವಾದರೂ ಅಷ್ಟು ಹಕ್ಕನ್ನು ಕೊಡಬೇಡವೇ ?