Tuesday, 11 August 2015

ಕಂಡಿದ್ದು , ಕೇಳಿದ್ದು, ಅನಿಸಿದ್ದು

ಸ್ನೇಹಿತರೆ,

ಬೆಂಗಳೂರಿನಲ್ಲಿ ಸಂಬಂಧಗಳನ್ನು, ಸಂವೇದನೆಯನ್ನು ಹುಡುಕುವ ದಾರಿ ಸುಲಭವಲ್ಲ. ಅಲ್ಲಿ ನಿರಾಸೆಯೆ ಹೆಚ್ಚು. ಯಾರಿಗೂ ಇನ್ನೊಬ್ಬರಿಗೆ ಕೊಡಲು ಹೆಚ್ಚು ಸಮಯವಿಲ್ಲ. ಎಲ್ಲರದೂ, ಮರೀಚಿಕೆಯ ಹಿಂದಿನ ನಾಗಾಲೋಟವೆ.  ಸಂಬಂಧಗಳೆಲ್ಲ ಉಪಯೋಗಿಸಿ ಬಿಸಾಡುವ ಶ್ಯಾಂಪೂ ಬಾಟಲಿಯಂತೋ, ಕವರು ಬಿಚ್ಚಿ ಮೈ ಉಜ್ಜಿಕೊಂಡ ಸೋಪು, ವಾರ ೨ ವಾರದೊಳಗೆ ಮುಲಾಜಿಲ್ಲದೆ, ತಾನಿರಲೇ ಇಲ್ಲವೋ ಎಂಬಂತೆ ಕರಗಿ ಹೋಗುವಂತವೇ.
ಮೊದಲಿನ ಕಾಲದಲ್ಲಿ ಸಂಬಂಧಗಳ ಸ್ಟೇಟಸ್ ಹೇಗಿತ್ತೆಂದು ನನಗೆ ಹೇಳಲು ಬರುವುದಿಲ್ಲ. ಆಗ ನಾನಿರಲಿಲ್ಲ. ಹಿಂದಿನ ಜನ್ಮದ ಕನಸೂ ಬಿದ್ದ ನೆನಪಿಲ್ಲ.  ಕಾರಂತರೋ, ಕುವೆಂಪು ಅವರದ್ದೊ ಕಾದಂಬರಿಗಳನ್ನು ಓದಿಕೊಂಡು ಹೀಗಿದ್ದಿರಬಹುದೆಂದು ಊಹಿಸಬಹುದಷ್ಟೆ. ಮತ್ತು ಎಲ್ಲಾ ಕಾಲದ ಹಿರಿಯರು ಅವರ ಮೊಮ್ಮಕ್ಕಳಿಗೆ ಹೇಳುವ "ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪ" ಎಂಬ ಹಸಿ ಸುಳ್ಳನ್ನು ಕೇಳಿ, ಪರಿಸ್ಥಿತಿ ಇನ್ನೂ ಚಂದವಾಗಿಯೋ, ಇನ್ನೂ ದರಿದ್ರವಾಗಿಯೋ ಇದ್ದಿರಬೇಕೆಂದು ಅಜ್ಜಿಗೆ ಕಾಣದಂತೆ ಒಮ್ಮೆ ನಕ್ಕು ಬಿಡಬೇಕು.
ಸಂಬಂಧಗಳೆಲ್ಲಾ ಇರುವವರದು ಈ ಹಾಡಾದರೆ, ಸಂಬಂಧಗಳೇನೆಂಬುದೇ ಗೊತ್ತಿಲ್ಲದ ಬೀದಿ ಬದಿಯ ಮಕ್ಕಳದು ಇನ್ಯಾವುದೋ ಪಾಡು. ನಾನು ಕೆಲವರನ್ನು ಮಾತಾಡಿಸಿ ಕಂಡಿದ್ದೇನೆ. ಹಲವರು ಅಂತರ್ಮುಖಿಗಳಾಗಿರುತ್ತಾರೆ. ಇನ್ನು ಕೆಲವು ಮಕ್ಕಳು ತುಂಬಾ ಒರಟರು. ಇನ್ನು ಕೆಲವರು, ಪೆನ್ನೊ ಮ್ಯಾಜಿಕ್ ಪುಸ್ತಕ ಗಳನ್ನು ಮಾರುತ್ತಾ, ಅಣ್ಣಾ ಅಕ್ಕಾ ಎಂದು ಬಾಯಿಯೆದುರು ಕೈಯಿಟ್ಟು  ತುತ್ತನ್ನು ತೋರಿಸುತ್ತಾ, ಕಳೆ ಕಳೆದುಕೊಂಡ ಕಣ್ಣಿನಿಂದ ಒಂದು ಅನಾಥ ದೃಷ್ಟಿ ಬೀರುತ್ತಾರೆ. ನಾವುಗಳು ಒಂದೊ ಅವರ ಮುಖ ತಿರುಗಿ ನೋಡದೆ, ಸುತ್ತ ಯಾರೂ ಇಲ್ಲ ಎಂಬಂತೆ ಇದ್ದು ಬಿಡುತ್ತೇವೆ, ಇಲ್ಲಾ ನಾವು ಒಂದು ಒಳ್ಳೆಯ ಬದುಕನ್ನು ಬದುಕುತ್ತಿದ್ದೇವೆ, ಈ ಮಕ್ಕಳದು ಯಾವ ಜನ್ಮದ ಪಾಪವೋ ಛೇ!! ಎಂದು ಅವರ ಅವಸ್ಥೆ ನೋಡಲಾಗದೆ ಏನೂ ಮಾಡಲೂ ಆಗದೆ ಹಲ್ಲಿಯಂತೆ ಲೊಚಗುಟ್ಟುತ್ತೇವೆ.

ಇಷ್ಟೆಲ್ಲಾ ತಕರಾರುಗಳ ವೈರುಧ್ಯಗಳು ಬದುಕಲ್ಲಿ ಇದ್ದಾಗಿಯೂ ಬದುಕನ್ನು ನಂಬಲು ಕಲಿಸುವುದು ಯಾವುದು ಗೊತ್ತಾ? ನಾನು ೧೦ ರುಪಾಯಿಯ ಬೆಲೆಯ ಒಂದು ಪೆನ್ನಿಗೆ ಅಗತ್ಯವಿಲ್ಲದಿದ್ದರೂ , ಬದುಕಿನ ನೈಜ ಬಣ್ಣವನ್ನೇ ಕಳೆದುಕೊಂಡ ಮಾಸಲು ತಲೆಯ ಹುಡುಗನಿಗೆ ಏನೋ ದೊಡ್ಡ ಸಹಾಯ ಮಾಡುವವಳಂತೆ ಒಂದೇ ಪೆನ್ ಕೊಂಡು ೨೦ ರೂಪಾಯಿ ಕೊಟ್ಟು ಇಟ್ಟುಕೋ, ಅಡ್ಡಿಲ್ಲ ಅಂದಾಗ, ಅಪ್ಪ ಅಮ್ಮನ ಮುಖ ಕಾಣದ ಆ ಹುಡುಗ ಇಲ್ಲ ಬೇಡ ಇನ್ನೊಂದು ಪೆನ್ ತಗೊಳಿ ಎಂದು ಎಷ್ಟು ಹೇಳಿದರೂ ಕೇಳದೆ ನನ್ನ ಕೈಗೆ ಇನ್ನೊಂದು ಪೆನ್ ತೂರಿ ಧೀಮಂತವಾಗಿ ಮುಂದೆ ನಡೆದಾಗ!! ಅವನಿಗೆ ಈ ಸೌಜನ್ಯ ಯಾರು ಹೇಳಿ ಕೊಟ್ಟರು ಎಂದು ಅಚ್ಚರಿ ಪಡುವ ಸರದಿ ನನ್ನದು.   ನಮ್ಮ ಗರ್ವ ಇಳಿಯುವುದು ಯಾವಾಗ ಗೊತ್ತಾ? ಗಣಪತಿ ದೇವಸ್ಥಾನದೆದುರು ಪಾತ್ರೆ ತೊಳೆಯುವ ೭೦ ಹರೆಯದವಳನ್ನು ಕಂಡು ಉಪಯೋಗವಾಗುವುದಾದರೆ ಇಟ್ಟುಕೊಳ್ಳಿ ನನ್ನ ಹಳೆ ಬಟ್ಟೆ, ಮನೆಯ ಮಕ್ಕಳಿಗೆ ಎಂದಾಗ, ಅಜ್ಜಿ ಊರಲ್ಲಿ ೪ ಅನಾಥ ಮಕ್ಕಳಿವೆ  ನಾ ಹೋದಾಗ ಏನಾದರೂ ತಗಂಡು ಹೋಗ್ತಿರ್ತೇನೆ, ಇದೂ ಅವಕ್ಕಾಯಿತು, ದೇವರು ಒಳ್ಳೇದು ಮಾಡ್ಲಿ ನಿಂಗೆ ಎಂದು ಪ್ರಶಂಸೆಯ ಹಂಗಿಲ್ಲದೆ ಅಂದಾಗ!!

No comments:

Post a Comment