ಕನ್ನಡ ಕನ್ನಡ ಕನ್ನಡವೆನ್ನಲು
ಹಿರಿಕಿರಿಯರಲೂ
ಹುರುಪು ಸದಾ
ಕನ್ನಡ ಕೇಳಲು ಕೃಷ್ಣನ ಕೊಳಲಲೂ
ರಾಧೆಯೂ ಕೇಳದ ಸವಿ ನಿನದ
ಕದಂಬ
ಕಟ್ಟಿದ ಕನ್ನಡ ದೇಗುಲ
ಚಿರನೂತನವಿದು
ಚಿರಂತನ
ಕನ್ನಡ
ಕಂದನ ಕಾಡುವ ತೊದಲು
ಕನ್ನಡ
ದೇವಿಗೆ ನುಡಿ ನಮನ
ಕಬ್ಬಿಗರೆದೆಯಲಿ
ಸಿಹಿ ಕೋಲಾಹಲ
ಕನ್ನಡದಿಂಚರ
ಸಂಚರಿಸೆ
ಕಾದಿದೆ ಕನ್ನಡ ಪಂಪ ಕುಮಾರರು
ಮತ್ತೆ ಕನ್ನಡದಿ ಸಂಭವಿಸೆ
ಕನ್ನಡ ತಾಯಿಯ ಹೆಮ್ಮೆಯ ಮಕ್ಕಳ
ದುಡಿತದ ತುಡಿತವು ಚಿರಂತನ
ತುಂಬಿದ ಜೇನಿನ ಗೂಡಿನ ಹಾಡೇ
ನಮ್ಮೆದೆಯೊಳಗಿನ ಧೀಂತನನ
ಅಡಿಗಡಿಗೇ
ದುಡಿ ಕನ್ನಡಕೇ ಮಡಿ
ಎಂದಿದೆ
ಕನ್ನಡದೆದೆ ಹುಯಿಲು
ಸಾವಿರ
ಸೂರ್ಯರ ಮುಂಜಾವಿನವೋಲ್
ಕುಣಿಯಲು
ಕನ್ನಡದಾ ನವಿಲು
No comments:
Post a Comment