ಉಸಿರುಗಟ್ಟಿ ಮುನಿಸಿಟ್ಟು ಕೊಂಡ ಮೋಡದ
ಮುಖ ಕಪ್ಪುಕಟ್ಟಿತ್ತು
ಗಮನಿಸಿದವರಾರಿಲ್ಲವೇನೊ ಪ್ರೀತಿ ತೋರಿ,
ಬಿಕ್ಕಿ ಅತ್ತೇ ಬಿಟ್ಟಿತು.
ಅಣ್ಣನ ಮೋಡದ ಮಳೆಹನಿಯೊಂದು ತನಗೇ ಬೇಕೆಂದು
ಬೆಳಿಗಿನಿಂದ ಹಟ ಹಿಡಿದಿತ್ತು,
ಓಡಿ ಹೋಗಿ ಕಸಿದುಕೊಳ್ಳಲೊಮ್ಮೆ ಅವನ ತಲೆಗಿವನ
ತಲೆ ತಾಗಿ ಗುಡುಗಿತ್ತು
ಅಗಲದಾಕಾಶದ ಮೂಲೆಯೊಂದನು ಸೇರಿ
ಬರಿ ಅತ್ತದ್ದೆ ಆಯ್ತು,
ಅಣ್ಣ ಕೊಡಲಿಲ್ಲ ತಮ್ಮ ಬಿಡಲಿಲ್ಲ ಮುನಿಸಿಗೆ
ಬಣ್ಣ ಬದಲಾಯ್ತು
ತಮ್ಮ ಅತ್ತಿದ್ದಕ್ಕೆ ಸಣ್ಣ ಆ ಮುದ್ದು ಹನಿ
ಅಣ್ಣನ ಕಣ್ಣಿಂದ ಬಿತ್ತು
ಇದ ಕಂಡು ಆಣ್ಣನಲಿಹ ಮತ್ತೊಂದು ಹನಿ ಅದನು
ಹಿಡಿಯಲು ಹೋಯ್ತು
ಇಬ್ಬರನು ಅಗಲಿದ ಆ ಮುದ್ದು ಹನಿಗಳು
ಕಡಲ ಪಾಲಾಯ್ತು
ಮೋಡಗಳಿಗೀಗ ನಗು ಉಕ್ಕಿ ಬಂತು
ಮತ್ತೆ ಬಣ್ಣ ಬದಲಾಯ್ತು
No comments:
Post a Comment