Tuesday, 4 August 2015

ಬರೆಯದ ಗೀತೆ

ಹಾಡ ಮರೆತ ವೇಳೆಯಲ್ಲಿ
ಹುಟ್ಟಿದಂತ  ಹಾಡಿದು 
ಭಾವನೆಗಳೇ ಇಲ್ಲದೇನೆ 
ಗೀಚಿದಂತ  ಸಾಲಿದು 
            ತಂತಿ ಮುರಿದ ವೀಣೆಯಿಂದ 
ಹೊರಳಿದಂತ ಸ್ವರವಿದು 
ಚಂದಮಾಮನಿರದ ಬಾನ
ನೋಡಿ ಉಲಿದ ಪದವಿದು 
 ಬರೆಯಲಾಗದಂತ ಹಾಡೇ 
ಸ್ಫೂರ್ತಿ  ಹಾಡಿಗೆ 
ಬರದ ಸ್ವರಗಳಲ್ಲಿ ಹಾಡಿ 
ಕೇಳಿಸಲಿ ಯಾರಿಗೆ 
            ಹಾಡುತ್ತಿದ್ದ ಕೋಗಿಲೆಯದು 
ಕೇಳಿ  ಹಾಡನು 
ಹಾಡುವುದನು ಮರೆತು ಮತ್ತೆ 
ಹಿಡಿಯಿತು ಮೌನದ ಜಾಡನು 
 ತೇಲಿ ಬರಲು  ಹಾಡು 
ಮಂದ ಮಾರುತ ಸೋತಿತು 
ಸುಡುವ ಸೂರ್ಯ ತೆರೆಗೆ ಸರಿದ 

ಮತ್ತೆ ಕತ್ತಲಾಯಿತು 

ಪ್ರೀತಿಯ ಪ್ರತಿಯಾಗಿ ಒಂದಷ್ಟು ಪ್ರಶ್ನೆ

  ಹದಿಹರೆಯದ ಹರಿವಾಣದಲ್ಲಿ, ಆಸೆ ಬಯಕೆಗಳೆಂಬ ವೀಳ್ಯವನ್ನಿಟ್ಟು ಮೆಲ್ಲುವ ಮನಸ್ಸುಗಳಿಗೆಲ್ಲಾ, ಇದು ಮೋಜಿರಬಹುದು. ರುಚಿ ಹೆಚ್ಚೆಂದು ಅತಿಯಾಗಿ ಸುಣ್ಣದ ಲೇಪವಿಟ್ಟು ತಿಂದರೆ, ಮುಂದಾಗುವುದೇ ಅನಾಹುತ.
ಮನುಷ್ಯನ ಜೀವನದ ಅತಿಮುಖ್ಯ ಘಟಕವೇ ಹದಿಹರೆಯ. ಜೀವನದ ಆರಂಭ ಅಂತ್ಯ ಎಲ್ಲವೂ ಇಲ್ಲೆ. ಒಲ್ಲೆ ಎಂದರೂ ಕೇಳದ ಹೃದಯ, ಮೃದುವಾದ ಮಾತಿಗೆ ಮನಸೋಲುತ್ತದೆ. ಅವಳ ಕಿರುನೋಟ ಇವನ ಹೃದಯದಲಿ ಕಾಣದ ಆಸೆಯ ಊರಿನ ಕದ ಬಡಿಯುತ್ತದೆ. ಇವನ ಒಂದು ಮೆಲುನುಡಿ, ವಿಶ್ವಾಸ ಪೂರಿತ ಸಂಭಾಷಣೆ ಅವಳ ಹೃದಯದ ಜೋಪಡಿಯನ್ನು ಅರಮನೆಯ ಎತ್ತರಕ್ಕೇರಿಸುತ್ತದೆ. 
            
ವಾಸ್ತವದಲ್ಲಿ ಹೃದಯವೊಂದು, ಕೈ ಕಾಲಿನಂತೆ ಅಗತ್ಯವಾದ ಅಂಗ. ಮಿಡಿತ ಹುಟ್ಟುವುದು ಹೃದಯದಲ್ಲೆಂಬುದು ಕವಿಗಳ ಧೋರಣೆ. ಆದರೆ  ಮಿಡಿತ ಶುರುವಾಗಿದೆ ಎಂದು ಹೃದಯಕ್ಕೆ ತಿಳಿಸಲು ಮೆದುಳು  ಮಹಾರಾಯ ಅದನ್ನು ಗ್ರಹಿಸಿರಬೇಕಲ್ಲವೇ?. ಹಾಗಾದರೆ ಪ್ರೀತಿ ಹುಟ್ಟುವುದು ಮನದಲ್ಲೋ ಮೆದುಳಲ್ಲೊ?
            
ಪ್ರೀತಿ ಕಾರಣಗಳಿಂದ  ಹುಟ್ಟಿದ್ದಲ್ಲ. ಹಾಗೆ ಹುಟ್ಟಿದರೆ ಅದು ಪ್ರೀತಿಯೇ ಅಲ್ಲ ಎಂಬುದು ಬಲ್ಲವರ ನುಡಿ. ಹಾಗಾದರೆ ಎಷ್ಟೋ ಕೋಟಿ ಜೋಡಿಗಳ ನಡುವೆ ಒಲವು ಚಿಗುರೊಡೆಯಲು ಯಾವ ಕಾರಣಗಳು ಇರಲಿಲ್ಲವೇ?ಕಾರಣಗಳಿಂದ  ಬುಗಿಲೆದ್ದ ಪ್ರೀತಿಗೆ ಬಲು ಬೇಗ ಮರಣ ಖಚಿತವೇ?
            
ಕವಿಯನ್ನೇ ಕವನ ಬಲಿ ತೆಗೆದುಕೊಳ್ಳುವುದೆಂದರೆ  ಇದೆಬರೆಯ ಹೊರಟ, ನನಗೆ ನನ್ನ ಲೇಖನ ನೂರಾರು ಪ್ರಶ್ನೆ ಕೇಳಿ ದಿಕ್ಕು ತಪ್ಪಿಸುತ್ತಿದೆ. ಉತ್ತರ ಅವರವರ ಅನುಭವಕ್ಕೆ ಬಿಟ್ಟಿದ್ದು ಎಂಬ ಧೋರಣೆ ನನ್ನದು.
ನಮ್ಮ ಕಲೆ, ಸಾಹಿತ್ಯಗಳು ಪ್ರೀತಿಯನ್ನು ಇಷ್ಟೇಕೆ  ವೈಭವೀಕರಿಸುತ್ತವೆ? ಅಂತಹ ವೈಭವ ನಿಜವಾದ ಪ್ರೀತಿಯ ಧ್ಯೋತಕವೇ?
            
ಪ್ರೀತಿ ಎಂಬುದು ಒಬ್ಬ, ಇನ್ನೊಂದು ಜೀವವನ್ನು ತನ್ನದೇ ಪ್ರತಿರೂಪ ಎಂದು ತಿಳಿದು ಬಯಸುವ, ಗೌರವಿಸುವ, ಪೊರೆಯುವ, ಪ್ರೀತಿಸುವ ಪರಿಕಲ್ಪನೆ.  ಭಾವನೆ ಬಲವಾಗುತ್ತಾ  ಎರಡು ಜೀವಗಳು ಜೊತೆಯಾಗಿದ್ದರೆ, ಪರಿಪೂರ್ಣತೆ ಒದಗುವ ಅಪೂರ್ವ ಅನುಭವ ಸ್ಥಿರವಾಗುತ್ತದೆ. ಅಲ್ಲಿ ನಿಷ್ಕಾಮ, ನಿಷ್ಕಲ್ಮಶ ಮನಸ್ಸುಗಳ ಮಿಳಿತ, ಏಕತಾನತೆಯೇ ಪ್ರತಿರೂಪಿತವಾಗಿ ಬಿಂಬಿತವಾಗುತ್ತದೆ.
            
ಉಸಿರೆಳೆದುಕೊಳ್ಳದೆ ಬರೆದ  ಸಾಲುಗಳ ನಂತರ  ಲೇಖನಿಗೊಂದು ವಿರಾಮದ ಅಗತ್ಯವಿದೆ.
             
ಪ್ರೀತಿಯ ಪ್ರಣತಿ ಬೆಳಗುವಾಗ, ಅದರ ಪ್ರಕಾಶಮಾನವಾದ ಬೆಳಕಿಗಾಗಿ ಒಬ್ಬರು ಎಣ್ಣೆಯಾಗಿ ತೇಯ್ದು, ಇನ್ನೊಬ್ಬರು ಬತ್ತಿಯಾಗಿ ಬತ್ತಿದರೆ,  ಬೆಳಕ ಹೊನಲಲ್ಲಿ  ಸ್ವಾರ್ಥವೆಲ್ಲ ಕಪ್ಪು ಹೊಗೆಯಾಗಿ ಹರಿದು ಕೊನೆಗೆ ಇಲ್ಲವಾಗುತ್ತದೆ. ಇಲ್ಲವಾದರೆ ಬದುಕೆಂಬ ಹಣತೆಯ ಸುತ್ತಲೂ ಬರೀ ಕತ್ತಲು.
                                                                                                                                   




ಪ್ರೀತಿ ಅಲ್ಪಾಯುಷಿ

ಅವನ ಕೊಳಲ ದನಿಯಂತಿದ್ದವಳು
ಅದೇಕೆ ಬಿಮ್ಮನೆ ಮುನಿಸಿಕೊಂಡಳು

ನದಿಯ ನೀರಿನ ಕಣವೊಂದು
ನಭದಿಂದ ಸುರಿವ ಮಳೆ ಹನಿಯೊಂದು
ಸೂರ್ಯನ ರಶ್ಮಿಯ ಕಿರಣವೊಂದು
ನಮ್ಮದಲ್ಲವೆಂದು ಒತ್ತೊತ್ತಿಹೇಳಿ
ಸೂಚಿಸಿದನೇ ಅವನು ತನ್ನ ಪ್ರೀತಿ
ನಿನ್ನೊಬ್ಬಳಿಗಲ್ಲವೆಂದು?

ಮುನಿಸಿಕೊಂಡರೂ ಮುದ್ದುಗರೆಯದೆ
ಸರಸಕ್ಕೂ ಸನಿಹ ಸರಿಯದೆ
ಕೊಳಲನೂದಿ ಕರುವ ಕರೆದ ಗೊಲ್ಲ
ಹೇಳದೆಯೆ ಹೇಳಿದನೆ
ಕಾದಿರುವಳು ಭಾಮೆ ನಿನ್ನಂತೆ ಎಂದು?

ಅವನ ತೊಯ್ದ ತುಂಗೆ ಅವಳತ್ತ ಹರಿಯಲಿಲ್ಲ
ಸೋಕಲಿಲ್ಲ ಅವನುಸಿರು ಅವಳ ಗಲ್ಲ
ನಡುವೆ ಸಂಭಾಷಣೆಯಿಲ್ಲ ಮೌನವೇ ಎಲ್ಲ
ಇದರರ್ಥವೇನು ಮಾಧವ

ಮೌನ ಪ್ರಿಯವೆಂದೋ ಇಲ್ಲ ರಾಧೆ ಅಪ್ರಿಯವೆಂದೋ??


 ಕವನದ ರಾಧೆ, ಕೃಷ್ಣ, ಭಾಮೆಯರು ಆಧುನಿಕ ಒಲವಿನ ಒದ್ದಾಟಕ್ಕೆ ಸಿಕ್ಕ ಪ್ರತಿಮೆಗಳಷ್ಟೆ...

Tuesday, 7 July 2015

ಅಲೆಯಿಲ್ಲದ ಕಡಲು

ಹೆರಿಗೆಗೆ ಬೆರಳಲ್ಲಿ ಲೆಕ್ಕಹಾಕುವಷ್ಟೇ ದಿನ ಬಾಕಿ ಇದ್ದದ್ದು. ಇನ್ನೊಂದು ಬೆರಳು ಮಡಚುವ ಹೊತ್ತಿಗೆ ಹೊನ್ನಣ್ಣ ಯಾಕೆ ಬರಲಿಲ್ಲ ಎಂದು ತಲೆಯೆತ್ತಿ ಕಂಡಳು.  ಕೊಂಚ ದಿನಗಳಿಂದ  ಮಳೆಗೆ ತಂತಿ ತುಂಡಾಗಿ ಕರೆಂಟು ಕೈ ಕೊಟ್ಟಿತ್ತು. ಸಣ್ಣಗೆ ದೀಪ ಆಗಲೋ ಈಗಲೋ ತನ್ನ ಸಾವು ಎಂದು ಕೊನೆಯ ನಿಮಿಷದ ಹೊಯ್ದಾಟದಲ್ಲಿದ್ದಂತೆ ಕಂಡಿತು. ಬೆಳಕು ಮಂದವಾಗಿದ್ದರೂ, ಕರೆಂಟಿನ ಕೇಕೆಗಿಂತ ಇದುವೇ ಹಿತ ಎನಿಸುತ್ತಿತ್ತು. ಭ್ರಮ ನಿರಸನಳಂತೆ, ಒಮ್ಮೆ ಗಂಡನ ಮುಖ ನೆನಪಾಗಿ ಮನಸ್ಸು ತಂಪಾಗಿ ಕೆನ್ನೆ ಕೆಂಪಾದರೆ, ಇನ್ನೊಮ್ಮೆ ಸಾಲು ಸೈನಿಕರಂತೆ ಕಿಚ್ಚಿನೊಟ್ಟಿಗೆ ಕೆಚ್ಚಿನಿಂದ ಹೋರಾಡಿ ಪ್ರಾಣ ಬಿಡುವ ಪುಟ್ಟ ಪುಟ್ಟ ಹಾತೆಗಳು, ಪತಂಗಗಳನ್ನು ಕಂಡು ಮನಸ್ಸು ತುಡಿಯುತ್ತಿತ್ತು, ದೀಪದ ಮಂದ ಬೆಳಕಿನೊಟ್ಟಿಗೆ, ಸಣ್ಣಗೆ ಮಿಡಿಯುತ್ತಿತ್ತು. ಎಷ್ಟಾದರೂ, ಅವಳ ಅವನು ಇರುವುದು ಗಡಿಯಲ್ಲಲ್ಲವೇ.
 ದೂರದಲ್ಲಿ ಗಾಳಿಯಲ್ಲಿ ಭಾರವಾದ ಹೆಜ್ಜೆ ಕಿತ್ತಿಡುತ್ತಾ ಹೊನ್ನಣ್ಣನ ಆಕೃತಿ ಬರುವುದು ಕಂಡಿತು. ಕಣ್ಣು ಅರಳಿತು. ಪಕ್ಕನೆ ಏಳಲಾಗಲಿಲ್ಲ. ಅಲ್ಲಿಂದಲೇ ತಂದೆಯನ್ನ ಶಾಲೆಯ ಬುಡದಲ್ಲಿ ಕಂಡ ಪುಟ್ಟ ಹೆಣ್ಣಿನಂತೆ, ಕೈ ಬೀಸಿದಳು. ಹೊನ್ನಣ್ಣನ ಹೆಜ್ಜೆ ಇನ್ನೂ ಭಾರವಾಯಿತು. ಈ ಒಂದು ದಿನ ವರ್ತಮಾನದಿಂದ ಅಳಿಸಿ ಹೋಗಿದ್ದರೆ!! ಅನ್ನಿಸಿತು, ಕಾಲ ಮೀರಿತ್ತು. ಬಂದವನು ಜಗಲಿಯಲ್ಲಿ ಮಳೆಯನ್ನು ನೋಡುತ್ತ ಕುಳಿತ. ಒಳಬಂದು ಆ ನಿರೀಕ್ಷೆಯ ಕಣ್ಣುಗಳಿಗೆ ಬಣ್ಣ ತುಂಬುವ ಅವನ ಶಕ್ತಿಯೆಲ್ಲಾ ಆ ಮಳೆಯಲ್ಲಿ ಕೊಚ್ಚಿ ಹೋಗಿತ್ತು. "ಹೊಯ್ ಹೊನ್ನಣ್ಣ ಒಳಗ್ ಬಾ ಮರೆ, ಎರ್ಡ್ ಗಂಜಿ ಉಣ್ಣಲಾ?, ಕುಟ್ಬಜ್ಜಿ ಮಾಡಿದಿ. ಕುಟ್ಬಜ್ಜಿಗೆ ಎಳಿ ಕರಿನ್ ಕಣಗೆ ಚಂಗ್ ಹಾರ್ಕಂಡ್ ಬಂದ್ ಬಟ್ಲ್ ಮುಂದ್ ಕೂಕಂತಿದ್ದೆ ಇವತ್ತೆಂತ ಆಯ್ತ್? ಹೊನ್ನಣ್ಣ ಓ ಹೊನ್ನಣ್ಣ" ಊಹ್ಞೂ ಮಾತಿಲ್ಲ!! ನಿಧಾನಕ್ಕೆ ಅವಳೆ ಅವನ ಜಂಗು ಮುಟ್ಟಿದಾಗ ಹೌಹಾರಿದ. ಪುಣ್ಯ!! ಕತ್ತಲೆಗೆ ಕೆಲವನ್ನು ಮುಚ್ಚಿಡುವ ಶಕ್ತಿ ಇದೆ, ಅದರಲ್ಲಿ ಕಣ್ಣೀರೂ ಒಂದು.
“ಇವತ್ತ್ ಐತ್ವಾರ, ನೀ ಎಂತೊ ಮರ್ತೆ!!” ಅಂದ ಪ್ರಶ್ನೆಗೆ ಆತ ಉತ್ತರವನ್ನು ಹುಡುಕೇ ಇರಲಿಲ್ಲ. ಓದದೇ ಬಂದ ಮಗು ಪ್ರಶ್ನೆ ಪತ್ರಿಕೆ ಕಂಡು ಅತ್ತಂತಿತ್ತು. ಆದರೆ ಅವಳಿಗೆ ಕಣ್ಣೀರು ಕಾಣಿಸಲಿಲ್ಲ. "ಊಟಕ್ಕೆ ಎಂತ ಮಾಡಿದಿ" ಅಂದ. ಹೊನ್ನಣ್ಣ, ಹೀಗೆ ಹೇಳಿದ್ದು ಕೇಳಿಸದಿದ್ದಂತೆ ಮೊದಲೆಂದೂ ಇದ್ದಿದ್ದೇ ಇಲ್ಲ. ಆದರೂ ಹೊಟ್ಟೆ ಹಸಿದಿರಬೇಕೆಂದು ಮೊದಲು ಇಕ್ಕಿದಳು. ಆಕೆ ಮತ್ತೇನಾದರೂ ಕೇಳಬಹುದೆಂದು, “ಇಲ್ದೆ ಇವತ್ತ್ ಕಾಗ್ದ ಬರ್ಲ. ಬರ್ಕಿದಿತ್, ಜೋರ್ ಮಳಿ ಅಲ್ದ ಅದಕ್ಕೆ ನಾಳೆ ನಾಡ್ದ್ರಂಗ್ ಬಪ್ಪುಕು ಸಾಕ್. ಅಂತ ಯಾವ್ ಯುದ್ವೂ ಇಲ್ಲ ಅಂತ್ ಬರ್ದಿದ್ದ ಅಲ ಅನಂತ, ಹೋದ್ ಸುರಿಗೆ". ತುಡಿದ ಹೃದಯಕ್ಕೆ ಅಷ್ಟೇ ಸಾಕಿತ್ತು. ಆಕೆಗೆ ನಂಬಿಕೆಯೆ ಜೀವನ,  ಎಷ್ಟು ಬೇಕಾದರು ನಂಬುತ್ತಿದ್ದಳು, ನಂಬಿಕೆಯಲ್ಲೇ ಕಾಯುತ್ತಿದ್ದಳು ಶಬರಿಯಂತೆ. ಅಷ್ಟಲ್ಲ ದಿದ್ದರೆ ಒಬ್ಬ ಸೈನಿಕನ ಕೈ ಹಿಡಿಯೊ ಧೈರ್ಯ ಇರುತ್ತಿರಲಿಲ್ಲವೇನೋ. ಅವನ ಕೆಲಸದ ಬಗ್ಗೆ ಹೆಮ್ಮೆಯೂ ಇತ್ತು. ಆದರೆ ಅವಳ ಆದರ್ಶ ಕನಸುಗಳ ಮಧ್ಯೆ ಇದು ವರೆಗೆ ಸುಳಿಯದ ಘಟನೆ ಒಂದೆ, "ಸಾವು!!". ಅದರ ವಿಷಯ ನಾಲ್ಕು ಜನ ಮಾತಾಡುತ್ತಿದ್ದರೂ ಆಕೆ ಅತ್ತ ಸುಳಿಯುತ್ತಿರಲಿಲ್ಲ. ಒಂದು ಸಾವಿನ ಮನೆಗೂ ಹೋಗುತ್ತಿರಲಿಲ್ಲ. ಅದರ ಬಗ್ಗೆ ಕೇಳಿಸಿಕೊಳ್ಳುತ್ತಿರಲಿಲ್ಲ. ಅದರ ಅಸ್ಥಿತ್ವ ಅವಳಿಗೆ ಹಿಡಿಸುತ್ತಿರಲಿಲ್ಲ. ಅಸಲಿ ಹಿಡಿಸುವುದಾದರು ಯಾರಿಗೆ? ಸದ್ಯಕ್ಕೆ ಹೊನ್ನಣ್ಣ ಪರಿಸ್ಥಿತಿ ನಿಭಾಯಿಸಿದ್ದ. ಆತ ಅವಳ ದೊಡ್ಡಪ್ಪನ ಮಗನಂತೆ. ಯಾರೋ ಅಂದಿದ್ದರು, ಇವರಿರಬ್ಬರು ಇಲ್ಲಿಯವರೆಗೆ ಅದನ್ನೇ ನಂಬಿಕೊಂಡು ಬಂದಿದ್ದಾರೆ. ಇಬ್ಬರೂ ಬೆಳೆದಿದ್ದು ಅನಾಥಾಶ್ರಮದಲ್ಲಿ.
ಹಿಂದಿನ ಭಾನುವಾರದ ಪತ್ರವನ್ನ ತೆಗೆಸಿ ಮತ್ತೆ ಓದಿಸಿದಳು. ಹೊನ್ನಣ್ಣನಿಗೆ ಮಧ್ಯೆ ಗಂಟಲು ಬಿಗಿಯುತ್ತಿತ್ತು. ಸಲೀಸಾಗಿ ಬರೆದು ಉಜ್ಜುವ ದೇವರ ಕೈಗೊಂದಷ್ಟು ಹಿಡಿ ಹಿಡಿ ಶಾಪ ಹಾಕಿದ. ಬಾಯಿಬಿಟ್ಟು ಅಳಲಾರದ ಪರಿಸ್ಥಿತಿ. ಇವತ್ತು ಎಂದಿನ ಪರಿಸ್ಥಿತಿಗೆ ವ್ಯತಿರಿಕ್ತವಾಗಿ ಅವಳ ನಗು ಅವನನ್ನು ಹಿಂಡುತ್ತಿತ್ತು. ಊಟ ಮಾಡಿಕೊಂಡು ದಿಂಬಿಗೆ ಒರಗಿ ಬಲೂನಿನಂತಾಗಿದ್ದ ತನ್ನ ಪುಟ್ಟ ಕಂದಮ್ಮನನ್ನು ಹೊತ್ತಿದ್ದ ಹೊಟ್ಟೆ ಸವರಿದಳು. ಮಳೆಯ ಹನಿಯೊಂದಿಗೆ ಧ್ವನಿ ಬೆರೆಸಿ ನೂರು ಕನಸುಗಳು, ಕಣ್ಣಿನ ಪರದೆಯ ಮೇಲೆ ದ್ರಶ್ಯಾವಳಿಗಳಾದವು. ಪೂರ್ತಿ ಮಡಚಲು ಮರೆತಿದ್ದ ಬೆರಳನ್ನು ಮಲಗುವ ಮುನ್ನ ಮರೆಯದೆಯೆ ಮಡಚಿದಳು. ಹೊನ್ನಣ್ಣ ಬಂದಿದ್ದ ಕಾಗದವನ್ನು ಹರಿದು ನೀರಲ್ಲಿ ಬಳಿಯಲು ಬಿಟ್ಟ.
ಮಾರನೆಯ ದಿನ ಇವಳನ್ನು ಸೇರಿಸಿದ ಹತ್ತಿರದ ಹೆರಿಗೆ ಆಸ್ಪತ್ರೆಗೆ ಓಡಿ ಬಂದ ಹೊನ್ನಣ್ಣ. ಪ್ರಶ್ನೆ ಪತ್ರಿಕೆಗೆ ಉತ್ತರ ತಯಾರಿತ್ತು. ಕೈಲಿ ಹಿಡಿದ ಅವನೇ ಬರೆದ ಕಾಗದ ಓದಿದ. "ಅವ ಕ್ಷೇಮ ಅಂತೆ, ಆದ್ರೆ ಬಪ್ಪುಕಾಪುದು ಮುಂದಿನ ಡಿಸಂಬರಿಗಂತೆ, ಮಗು ಗಂಡಾರೆ ಭರತ್ ಅಂತ,  ಹೆಣ್ಣಾರೆ ಭಾರತಿ ಅಂತ ಹೆಸ್ರಿಡಿ ಅಂದಿದ. ಅಷ್ಟ್ರ್ ಮಟ್ಟಿಗೆ ದೇಶ ಪ್ರೇಮ ಕಾಣ್ ನಿನ್ ಗಂಡ್ನಿಗೆ" ಎಂದು ಹುಟ್ಟಿಸಿಕೊಂಡು ನಗೆಯಾಡಿ ಎತ್ತೆತ್ತಲೋ ನೋಡಿದ, ಅವಳತ್ತ ನೋಡಲಾಗದೆ. ಭರತ, ಭಾರತಿ, ಡಿಸೆಂಬರ್ ಎಂಬುದಷ್ಟೆ ಅವಳ  ಸ್ಮೃತಿಗೆ ತಟ್ಟಿದ್ದು, ಉಳಿದದ್ದು ಕೇಳುವುದರೊಳಗೆ ಅರಿವಳಿಕೆಯ ಮಂಪರಲ್ಲಿ, ಕಣ್ಣು ಅರ್ಧ ಮುಚ್ಚಿ ಹೊನ್ನಣ್ಣ ಒಂದು ಬಿಂದುವಿನಷ್ಟೆ ಕಂಡ, ಕಾಣ ಕಾಣುತ್ತಾ ಬಿಂದು ದೂರ ಸರಿಯಿತು. ಬಿಂದುವಿನ ಕಣ್ಣೀರು ಬಿಂದಿಗೆಯಷ್ಟು ಚೆಲ್ಲಿತು.

****
ಹೊನ್ನಣ್ಣ ಈಗ ಹಣ್ಣಾಗಿದ್ದಾನೆ. ಕೈ ಸೋತಿದೆ. ಮನಸ್ಸೂ ಕೂಡ. ಅವನ ಕೈಯಾಗಿ ಎಳೆ ಭರತನಿದ್ದಾನೆ. ಭಾನುವಾರ ಬೆಳಿಗ್ಗೆ ಇಬ್ಬರೂ ಕೂಡಿ ಕೆರೆದಂಡೆಯಲ್ಲಿ ಕುಳಿತು ದಂಡಿಯಾಗಿ ಪ್ರೀತಿ ಸುರಿಸಿ  ಪತ್ರ ಬರೆಯುತ್ತಾರೆ.  ಸಂಜೆ ಅವಳೆದುರು ಇಲ್ಲದ ಸಂಭ್ರಮದಿಂದ ಓದುತ್ತಾರೆ. ಆಕೆ ಮತ್ತೆ ಕಾಯುತ್ತಾಳೆ ಮುಂದಿನ ಡಿಸೆಂಬರಿಗಾಗಿ, ಬಾರದ ನಾಳೆಗಾಗಿ. ಹಣೆಯಲ್ಲಿ ಕುಂಕುಮ ಸಣ್ಣಗೆ ಕೊಂಕು ನಗೆಯಾಡುತ್ತದೆ.

ಕುಂದ ಕನ್ನಡ ಪದಗಳ ಅರ್ಥ:

ಉಣ್ಣಲಾ - ಊಟ ಮಾಡ ಬಹುದಲ್ಲಾ
ಕುಟ್ಬಜ್ಜಿ - ಒಂದು ಬಗೆಯ ಕಾಯಿ ಚಟ್ನಿ, ಅದನ್ನ ಕುಟ್ಟಿ ಮಾಡ್ತಿದ್ದಿದ್ದರಿಂದ ಕುಟ್ಟಿದ ಬಜ್ಜಿ ಅನ್ನೊ ಹೆಸರು
ಎಳಿ ಕರು - ಎಳೆಯ ಕರು
ಚಂಗ್ - ನೆಗೆಯುವುದು
ಹಾರ್ಕಂಡ್ - ಹಾರಿಕೊಂಡು
ಬಟ್ಲು - ಊಟ ಮಾಡುವ ತಾಟು(ಇಲ್ಲಿ ಅದನ್ನ ತಟ್ಟೆ ಅನ್ನಲಾಗತ್ತೆ)
ಜಂಗು - ಹೆಗಲು
ಐತ್ವಾರ - ಆದಿತ್ಯವಾರ , ಭಾನುವಾರ
ಬರ್ಕಿದಿತ್ - ಬರ್ಬೇಕಿತ್ತು
ನಾಡ್ದ್ರಂಗೆ - ನಾಡಿದ್ದರಲ್ಲಿ
ಬಪ್ಪುಕು ಸಾಕ್ - ಬರ್ಬಹುದು
ಹೋದ್ ಸುರಿಗೆ - ಹೋದ ಸಲ
ಬಳಿಯಲು - ಹರಿಯುವ ನೀರಲ್ಲಿ ತೇಲಿ ಬಿಡಲು,
ಬಪ್ಪುಕಾಪುದು- ಬರ್ಲಿಕ್ಕೆ ಆಗೋದು
ಗಂಡಾರೆ - ಗಂಡಾದ್ರೆ
ಕಾಣ್ - ನೋಡು

Thanks and Regards,

Bhavya

Thursday, 2 July 2015

ಹೆಸರಿಲ್ಲದವನು


ಸುಕ್ಕುಗಟ್ಟಿದ ಕೆನ್ನೆ, ಹೆರಳು ಕಾಣದು ಎಣ್ಣೆ                            
ಅವನ ಬದುಕಿಗೆ ಸಾಕ್ಷಿ ಬರಿಯ ನಿನ್ನೆ
ಮೊನ್ನೆಯೆಂಬುದೂ ನಿನ್ನೆ, ನಿನ್ನೆಯೆಂದರು ನಿನ್ನೆ
ನಾಳೆಯೆಂಬುದು ಅವಗೆ ಬರಿಯ ಸೊನ್ನೆ

ಮನಸು ಎಂಬುದು ಒಂದು ಇದೆಯೆಂಬುದನು ಬಲ್ಲ
ಎಲ್ಲಿರುವುದೆಂಬುದರ ಪರಿವೆಯಿಲ್ಲ
ರಾತ್ರಿ ಹಗಲುಗಳಲ್ಲಿ ಭೇದ ಹೆಚ್ಚಿರಲಿಲ್ಲ
ಹಗಲು ಬಾನದು ಚೊಕ್ಕ ಚುಕ್ಕೆಯಿಲ್ಲ

ದೇವಮಂದಿರದೆದುರು ಜೀವಮಂದಿರ ಹೊರೆಯೆ
ಕಾದಿಹುದು ಬಡಜೀವ ತಗಡುತಟ್ಟೆ
ಒಳಗಿರುವ ಪರಮಶಿವ ಪರಿಪರಿಯಲೀ ಮೀಯೆ
ಬೆನ್ನಿಗಂಟಿತ್ತಿಲ್ಲಿ ಬಡವನ್ಹೊಟ್ಟೆ

ಕತೆಯಲ್ಲಿ ಕಂಡರಿತ ತಿರುಕನಂತಿವನಲ್ಲ
ಹಗಲು ಗನಸಿರಲಿಲ್ಲ ವಯಸು ಇಲ್ಲ
ಅಡಿಗಡಿಗೆ ಕೂಡಿಡುವ ಅನಿವಾರ್ಯತೆಯು ಇಲ್ಲ
ತಲೆಯೂರೆ ನಿದಿರೆಗೆ ಕೊರತೆಯಿಲ್ಲ

ಹಗಲು ಕಂಡಿಹ ಹಾದಿಯಲಿ ಇರುಳು ನಡೆದಿರಲು
ಮೌನ ಎದುರಲಿ ಇತ್ತು, ಮಸಣವಿತ್ತು
ಮಸಣದಾ ಮನೆಯೊಳಗೆ ಜೀವ ಬತ್ತುತ ಬಿತ್ತು
ಹಳೆ ತಿರುಕನಾ ಗೋರಿ ಕೆಲದಲಿತ್ತು

ಧನ್ಯವಾದಗಳು,

ಭವ್ಯ

Wednesday, 24 June 2015

ನನ್ನದಾವುದು


ಮಲಗಿದ್ದ ರಾತ್ರಿಯಲಿ ಮನೆಯಿತ್ತು, ಬನವಿತ್ತು
ಜೊತೆಗೂಡಿ ಬಿಡಿಸಿದ್ದ ನೂರಾರು ಒಗಟಿತ್ತು
ಮಕ್ಕಳಿದ್ದವು ಅಲ್ಲೆ ಪಕ್ಕ ಇದ್ದಳು ನಲ್ಲೆ
ಕಾಣದಿರೊ ನಾಳೆಗಳ ಕಂಡಿದ್ದೆ ಕನಸಲ್ಲೆ

 
ಆಗಸದಿ ಮಳೆಯಿತ್ತು, ಸೂರ್ಯ ಮಂಕಾಗಿತ್ತು
ಗುಡುಗು ಸಿಡಿಲೆಲ್ಲವುಗಳಾ ಜಾತ್ರೆ ನೆರೆದಿತ್ತು
ಭುವಿಯೊಳಾಕಾಶವನು ನೆಲೆಗೊಳಿಸುವಾತುರದಿ
ವ್ಯೋಮ ವಾರಿಧಿಗೆನ್ನ ಬದುಕು ಕರೆದೊಯ್ದಿತ್ತು


ಕೈಗೆ ಸಿಕ್ಕಿದನೆಲ್ಲಾ  ಆಯುತ್ತ ನಡೆನಡೆಗೆ
ತುರುಕಿದೆನು ಚಂದಿರನ ತಾರೆಗಳ ಜೋಳಿಗೆಗೆ
ಮುರುಕು ಮಳೆರಾಯನನು ತಿರುತಿರುಗೊ ಗಾಳಿಯನು
ಬಿಡಲಿಲ್ಲ ಬದಿಗಿದ್ದ ಹಾಲುದಾರಿಗಳನ್ನು

 
ಭೂಮಿಗಿಳಿಯಲು ಮತ್ತೆ ಜೀವಕಳೆ ಇನಿತಿಲ್ಲ
ವನವಿಲ್ಲ ಮನೆಯಿಲ್ಲ ಮಡದಿ ಮಕ್ಕಳು ಇಲ್ಲ
ಮಾರುದ್ದ ನಡೆದರೂ ಮುಖವಿರದ ಮೂಳೆಗಳು
ಬಾಯ್ಬಿಟ್ಟು ನಗುವಾಗ ಬಾಯ್ತುಂಬ ಕತೆಗಳು

 
ಮರುಮರಳ ಗಾಡಿನಲಿ ಮರುಳು ನಾನಲೆದಿರುವೆ
ಹೂತಿರುವೆ ಚಂದಿರನ ತಾರೆಗಳ ಮರಳಡಿಯೆ
ಉಸಿರುಗಟ್ಟುತ ಬಿಕ್ಕಿ ಸತ್ತ ಮಳೆರಾಯನನು
ಮಣ್ಣು ಮಾಡಿದೆ ಕೊನೆಯ ಮರದ ಕೆಳಗೆ

ಕಣ್ಣು



ಕಾಡಿಗೆಯ ಬಣ್ಣದಲಿ ಕಣ್ರೆಪ್ಪೆ ಅದ್ದುತಲಿ
ಅದ್ಭುತವ ಬರೆದವನು ಅವನು ತಾನು
ದೋಣಿಯೊಳಗಡೆಯೆಲ್ಲ ಬೆಳದಿಂಗಳನು ಚೆಲ್ಲಿ
ನಡುವೆ ಕರಿ ಕುಂಚದಲಿ ಬೊಟ್ಟಿಟ್ಟನು

ಒಮ್ಮೊಮ್ಮೆ ಕೋಲ್ಮಿಂಚು ಒಮ್ಮೊಮ್ಮೆ ಸವಿಸಂಚು
ಒಮ್ಮೊಮ್ಮೆ ಕಾರ್ಮೋಡ ಕವಿಯುದಿಲ್ಲಿ
ಬಾನೂರಿಗಿಂತಲೂ ಮಳೆ ಹೆಚ್ಚಿ ಮುಖ ತೊಯ್ದು
ಕಾಡಿಗೆಯ ಝರಿಯೊಂದು ಹರಿವುದಿಲ್ಲಿ

ಕಂದಮ್ಮ ನಗುವಾಗ ತವರನ್ನು ಕಂಡಾಗ
ಕಾಣಲೇ ಬೇಕು ಆ ಕಣ್ಣ ಬೆಳಕು
ಬದುಕು ಬರಡಾದಾಗ, ತನ್ನ ತನ ಸತ್ತಾಗ
ಕುತ್ತು ಬರುವುದು ಕಣ್ಣ ಹನಿಯ ಜಲಕೂ

ಸೋತಾಗ ಮೇಲೆತ್ತೊ ಕೈಗಳನು ಹುಡುಕುವುದು
ಬೆಳದಿಂಗಳಲಿ, ತುಡಿವ ಮನಸೊಂದನು
ನಕ್ಕಾಗ ಜೊತೆ ನಗುವ ಮುಖವನ್ನು ಹುಡುಕುವುದು
ಕಳೆದುಹೋಗಲು ತನ್ನ ತನವೊಂದನು

ಕಣ್ಣು ಮುಚ್ಚಲು ನೂರು ಕನಸುಗಳು ಮನ ಪಟದಿ
ಕಣ್ತೆರೆಯಲಿನ್ನೂರು ಮುನ್ನೂರದು
ಜಗದ ಜಾತ್ರೆಯಲಿ ಕೊಡು ಕೊಳ್ಳುವಿಕೆಗಳು ಮುಗಿದು 
ಕಣ್ಣು ಮುಚ್ಚಲು ಬದುಕು ಹಿಂದುಳಿವುದು