Monday, 5 March 2018

ಉತ್ತರ ಕಾಂಡ - ಇದು ಸೀತೆಯ ಕತೆ

                                     ಉತ್ತರ ಕಾಂಡ 

                                                       BY S L Bhyrappa

             


ಓಡುವ ಯುಗದಲ್ಲಿ ಓದುವ ಹವ್ಯಾಸ ತೀರಾ ದುರ್ಲಭ , ಹತ್ತಿರ ಹತ್ತಿರ ಅಸಾಧ್ಯವೆಂಬಂತಾಗಿದೆ.  ಅದರ ಮಧ್ಯವು ಬಸ್ಸೋ, ಓಲಾವೋ , ಉಬರೋ ಇಲ್ಲ ಆಟೋದಲ್ಲಿ ಕೂತಾಗ ರಪ ರಪ ಪುಟಗಳನ್ನ ತೆರೆದು ಪ್ರೀತಿಯಿಂದ ಓದಿಸಿಕೊಂಡವಳು ಸೀತೆ. ಹೌದು ಇದು ಸೀತೆಯ ಕಥೆ. ಯಾಕೆಂದರೆ ಉತ್ತರಕಾಂಡವನ್ನು ಓದುವುದೆಂದರೆ ಸೀತೆಯನ್ನು ಓದಿದಂತೆ. ಸಾಮಾನ್ಯವಾಗಿ ನಾವೆಲ್ಲಾ ಓದಿದ, ಕೇಳಿದ, ನಮ್ಮ ಮಕ್ಕಳಿಗೆ ಹೇಳಿದ ರಾಮಾಯಣವೆಲ್ಲವು ರಾಮನನ್ನೇ ಕೇಂದ್ರವಾಗಿರಿಸಿದಂತ ಕತೆಗಳು. ಇದಕ್ಕೆ ಬೇರೆಯದೇ ಆದ ರೂಪ ಕೊಟ್ಟ ಭೈರಪ್ಪನವರಿಗೆ ನನ್ನ ಅನಂತ ಧನ್ಯವಾದಗಳು. 

       ಸೀತೆ ಭಾರತೀಯ ನಾರಿಯರಿಗೆಲ್ಲ ಆದರ್ಶ ಮಹಿಳೆ, ತಾಳ್ಮೆಯ ಪ್ರತಿರೂಪ. ಕಷ್ಟ ಪಡುವವರಿಗೆ ಹೆಚ್ಚು ಕಷ್ಟ ಎಂಬುದು ಸೀತೆಯ ವಿಷಯದಲ್ಲೂ ಸುಳ್ಳಲ್ಲ. ಇಡೀ ರಾಮಾಯಣದ ಅವಧಿಯಲ್ಲಿ, ಪ್ರತಿ ಹೆಜ್ಜೆಯಲ್ಲೂ, ಸೀತೆಗೆ ಏನೆನಿಸಿರಬಹುದು ಎನ್ನುವುದನ್ನು ನಾವು ಯೋಚಿಸುವ ಗೋಜಿಗೆ ಹೋಗುವುದಿಲ್ಲ.  ಉತ್ತರ ಕಾಂಡಕ್ಕೆ ಆಕೆಯ ಭಾವನೆಗಳೇ, ಮನದ ಮಾತುಗಳೇ ಜೀವಾಳ.  ರಾಮನ ಪ್ರತಿ ನೆರಳಂತೆ ನಿಂತ ಆಕೆ ರಾಮನಿಗೆ ಎಲ್ಲೋ ಕಡಿಮೆ ಅರ್ಥವಾದಳ ? ಇಲ್ಲ ಆಕೆಯ ಭಾವನೆಗಳಿಗಿಂತ ಆತನ ತತ್ವ , ಆದರ್ಶಗಳು ಹೆಚ್ಚಿನದ್ದಾಗಿತ್ತಾ ಎಂಬುದು ಓದಿನುದ್ದಕ್ಕೂ ಓದುಗನಿಗೆ ಕಾಡುತ್ತಲೇ ಹೋಗುತ್ತದೆ. 
        ರಾಮ ಕಾಡಿಗೆ ಹೊರಟಾಗಿನಿಂದ ನೊಂದ ಜೀವಗಳು ಒಂದೆರೆಡಲ್ಲ, ಆತನ ತಾಯಿಯ, ತಂದೆಯ , ಪ್ರಜೆಗಳ ಆರ್ತನಾದವೆಲ್ಲವು ಮಲತಾಯಿ ಕೈಕೇಯಿಯ ಕೋಪ, ಆಣತಿಗಳ ಮುಂದೆ ತೃಣವಾಗುತ್ತದೆ.  ಸೀತೆಯಲ್ಲಿ ಹೇಳುವ ಕೇಳುವ ಯಾವ ಕ್ರಮವನ್ನು ಇಟ್ಟುಕೊಳ್ಳಲಿಲ್ಲ ಆತ. ಆಕೆಯ ಹಠಕ್ಕೆ ಕಟ್ಟು ಬಿದ್ದಷ್ಟೇ ಆಕೆಯನ್ನ ಜೊತೆಗೆ ಕರೆದುಕೊಂಡು ಹೋದ. ಜೀವನವನ್ನು ಕಠಿಣವಾಗಿಸಿಕೊಂಡು ಜೊತೆ ನಡೆದ ಲಕ್ಷ್ಮಣ ,ಸೀತೆಗೂ ಯಾವ ಆಯ್ಕೆಯನ್ನು ಉಳಿಸದೆ ಹೋದ.  ಈ ಕತೆಗಳೆಲ್ಲ ನಮಗೆಲ್ಲ ಗೊತ್ತಿರುವುದೇ ಆದರೂ, ಎಲ್ಲೂ ಓದಿದ ಕತೆಯನ್ನೇ ಮತ್ತೆ ಓದುತ್ತಿದ್ದೇನೆ ಎನಿಸುವುದೇ ಇಲ್ಲ. ಸೀತೆ ರಾಮನ ಮನಸ್ಸಿನ ಒಳ ಹೊರಗನ್ನು ತಿಳಿದವಳಾದರು, ಕೆಲವೊಮ್ಮೆ ಆತ ಮೂರನೆಯವನಂತೆ ಕಾಣುತ್ತಾನೆ, ನಿರ್ಲಿಪ್ತನಾಗುತ್ತಾನೆ. ನಮಗೂ ಅಪರಿಚಿತನಾಗುತ್ತಾನೆ. ಸೀತೆ ಜೊತೆ ನಮ್ಮನ್ನು ಅಳಿಸುತ್ತಾರೆ ಭೈರಪ್ಪನವರು. ಪೂರ್ತಿ ಕತೆ ಗೊತ್ತಿದ್ದವರಿಗೂ ಮುಂದೇನಾಗಬಹುದೆಂಬ ಕುತೂಹಲ ಹುಟ್ಟಿಸುತ್ತಾರೆ. ಅಷ್ಟು ತತ್ವ ಪಾಲಿಸುವ ರಾಮ ಮಾಡಿದ ಕೆಲವೊಂದು ತಪ್ಪುಗಳಿಗೆ ಸಮಾಧಾನವನ್ನು ಸೀತೆಯಿಂದಲೇ ಕೇಳಿಸುತ್ತಾರೆ. ರಾಮ ಕೆಲವಕ್ಕೆ ಉತ್ತರಿಸಲಾಗದೆ ನಿರುತ್ತರನಾಗುತ್ತಾನೆ. 
       ಎಲ್ಲಕ್ಕಿಂತಲೂ  ಹೆಚ್ಚು  ಲೆಕ್ಕಕ್ಕೆ ಬರುವುದು ಮಾತು. ಅದರಿಂದಲೇ ಎಲ್ಲಾ ಸಂಬಂಧಗಳ ಹುಟ್ಟು ಮತ್ತು ಸಾವು ಎಂಬುದನ್ನು ಹೇಳದೆಯೇ ಹೇಳುತ್ತದೆ ಕತೆ. ಮಾತಿಲ್ಲದೆಯೇ ಕತೆಯ ಕೊನೆಯಾಗುತ್ತದೆ. ಸಂಬಂಧಗಳ ಕೊಲೆಯಾಗುತ್ತದೆ. ಕತೆ ಹೇಳಿ ಮೌನವಾದ ಮೇಲು ಸೀತೆ ನನ್ನನ್ನು ಕಾಡುತ್ತಲೇ ಇದ್ದಾಳೆ.  ಆಕೆಗೆ ನಾವಾದರೂ ಅಷ್ಟು ಹಕ್ಕನ್ನು ಕೊಡಬೇಡವೇ ?

Thursday, 9 February 2017

ರಿಯಲ್ ಎಸ್ಟೇಟ್

ಉದ್ದುದ್ದ ಮನೆಗಳು ಅಡ್ಡಡ್ಡ ಮನೆಗಳು
ಬರಿ ಭಾರಿ ಸಾಮಾನು ಇಲ್ಲಿಲ್ಲ ಜನರು
ಪಿಸುಮಾತು ಅಲ್ಲಿಲ್ಲ ಕಿಟಕಿಯಲಿ ಧೂಳು
ತೆರೆದು ಮುಚ್ಚುವರಿಲ್ಲ ಅವುಗಳಿಗೂ ಬೋರು

ಬಾನ ಚುಂಬಿಸುವಂತ ಆಸೆ ಹೊತ್ತವರು
ಇಂಚಿಂಚು ಜಾಗದಲೂ ಗೋಡೆ ಕಟ್ಟಿದರು
ಗಾಳಿ ಬರದಿದ್ದರೂ ಕಿಟಕಿಗಳನಿಟ್ಟರು
ವಾಸ್ತು ನೋಡುತ ಕಲ್ಲ ಮೇಲೆ ಕಲ್ಲಿಟ್ಟರು

ಅರಚಿದವು ಅಡಿಪಾಯ ತಾಳಲಾರೆನು ಗಾಯ
ಗಾಳಿ ಬೆಳಕಿಗೆ ಕಿರಿಚಿದಾ ಕಿಟಕಿ ನಿರುಪಾಯ
ಕೆಮ್ಮಲಾರದೆ ಬಿರಿದು ಗೋಡೆ ತಾ ಬಿಡೆ ಬಾಯ
ಮನೆ ಕಟ್ಟಿದಾ ಮೇಸ್ತ್ರಿ , ಇಂಜಿನಿಯರ್ ಮಾಯಾ

Regards,

Bhavya

Tuesday, 26 April 2016

ದ್ವೀಪ- 'ನಾಗಿ'

ದ್ವೀಪ ಹುಟ್ಟುವುದೇ ಸುತ್ತುವರಿದ ನೀರಿನಿಂದ. ನಿರಂತರವಾಗಿ ಜೊತೆಗಿದ್ದರೂ ದ್ವೀಪಕ್ಕೆ ತನ್ನ ಸುತ್ತಲಿನ ನದಿ/ ಸಾಗರದ ಆಳದ ಪರಿಚಯ ಅಷ್ಟಕ್ಕಷ್ಟೇ. ಪೂರ್ತಿ ಪರಿಚಯವಾಗಲು ಪ್ರವಾಹವೇ ಆಗಬೇಕೇನೊ.. ಹೆಣ್ಣಿನ ಜೀವನಕ್ಕೂ ಇದಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಆಕೆ ನಿರಂತರವಾಗಿ ಹರಿವ ಜೀವನದಿ. ಅಂತರಾಳವೆಲ್ಲ ಬರಿ ತನ್ನವರಿಗಾಗಿ ತುಡಿಯುತ್ತದೆ. ಮನೆ , ಬದುಕು ಅಂತಲೇ ಹೋರಾಡುತ್ತಿರುತ್ತದೆ. ಏನಾದರು ಬಯಕೆ ಇರುವುದಾದರೆ ಒಂದೆ , ನನ್ನವರಿಗೆ ನನ್ನ ಹೋರಾಟ ಅರ್ಥವಾಗಿದ್ದರಾಗುತ್ತಿತ್ತು!!! ಎನ್ನುವ ಸಣ್ಣ ಆಸೆ.  ಕಾಲ ದೇಶಗಳನ್ನು ಮೀರಿ ಇದು ಎಂದೆಂದಿಗು ಹಸಿರಾಗಿರುವ ಸತ್ಯ. ಇಂತಹ ಒಂದು ಸೂಕ್ಷ್ಮ ಸಂವೇದನೆಯ ಪ್ರತಿಮೆಯೇ ದ್ವೀಪ ಎನ್ನುವ ಕಲಾತ್ಮಕ ಚಿತ್ರ.    
ದ್ವೀಪ ಚಿತ್ರವನ್ನು ನಮ್ಮಲ್ಲಿ ಎಲ್ಲರೂ ಕಂಡಿರಲಿಕ್ಕೆ ಸಾಕು. ನೋಡಿರದವರು ನೋಡಲೇ ಬೇಕಾದ ಚಿತ್ರ. ಸೀತಾ ಪರ್ವತ ಎನ್ನುವ ಚಂದವಾದ ಊರು ಮುಳುಗಡೆ ಆಗಿಯೇ ಹೋಗುತ್ತದೆ ಎಂಬ ಪರಿಸ್ಥಿತಿಯಲ್ಲೂ ಹೇಗೆ ಪ್ರಕೃತಿಯ ಜೊತೆಗಿನ ನಿರಂತರ ಹೋರಾಟದಲ್ಲಿ ನಾಗಿ ತನ್ನ ಕುಟುಂಬವನ್ನು ಬಾಳಿ ಬದುಕಿದ ಮನೆಯಲ್ಲೇ ಉಳಿಸಿಕೊಳ್ಳುತ್ತಾಳೆ ಎನ್ನುವುದೇ ಕತೆಯ ಹಂದರ.
ಊರಿಗೆ ಊರೇ ಮುಳುಗಡೆಗೆ ಹೆದರಿ, ಗುಳೆ ಹೊರಟಾಗ ಎಂತ ಗಟ್ಟಿ ಎದೆಯಾದರು ಅಲ್ಲಿ ನಿಲ್ಲಲು ಹೆದರೀತು, ಅಂತಹ ಪರಿಸ್ಥಿತಿಯೇ ನಾಗಿಯನ್ನು ಗಟ್ಟಿಗಿತ್ತಿಯಾಗಿ ತೋರುವುದು. ನಾಗಿ ಒಂಥರ ಪರಿಸ್ಥಿತಿಯ ಕೈಗೊಂಬೆ ತನ್ನ ಮನೆಯವರು ಊರು ಬಿಟ್ಟು ಬರಲು ಒಪ್ಪದೇ ಹೋದಾಗ ಇರುವ ಅವಕಾಶದಲ್ಲೇ  ಜೀವನವನ್ನು ಪೂರ್ಣ ಅನುಭವಿಸುವವಳು ,ಕನಸು ಕಾಣುವ ಹಂಬಲದವಳು. ಊರಿನ ಕೊನೆಯ ಮನೆಯವರು ಊರು ಬಿಟ್ಟು ದೋಣಿಯಲ್ಲಿ ನದಿ ದಾಟಿ ಹೋಗುವಾಗ, ಅವಳ ಮನಸಲ್ಲಿ ಏನೇನು ಓಡುತ್ತಿದ್ದಿತ್ತೊ  ಭಾವುಕಳಾಗಿ ಮತ್ತೆ ಮನುಷ್ಯರ ಭೇಟಿ ಆಗುತ್ತದೋ ಇಲ್ಲವೋ ಎಂದು ,ಅವರು ಮರೆಯಾಗುವವರೆಗೂ ಕಂಡು ಮನೆಗೆ ಬಂದಿದ್ದಳು.  ಹಾಗಂತ ನಾಗಿಯ ಪಾತ್ರ ಪೂರ್ತಿ ಅಸಹಾಯಕ ಪಾತ್ರವೂ ಅಲ್ಲ. ಗಂಡ ಗಣಪ ಒಳ್ಳೆಯವನೇ. ಆದರೆ ಅವನದ್ದು ತನ್ನ ತಂದೆಯ ಮಾತನ್ನು ತೆಗೆದು ಹಾಕಲಾರದ ಪರಿಸ್ಥಿತಿ. ತನ್ನ ಕುಲದ ಆಚರಣೆಯನ್ನು ಬಿಡಲಾರದ ಮನಸ್ಥಿತಿ. ಬೇರೆ ಯಾವ ದಾರಿಯೂ ಇಲ್ಲದಾಗ ಆ ಸಂಸಾರ, ಭವಿಷ್ಯ ಗೊತ್ತಿರದ ಊರಲ್ಲೇ ಬದುಕು ಕಳೆಯಲು ಹೊರಡುತ್ತದೆ. ಜೊತೆಗೆ ಅವಳ ತಾಯಿ ಕಳಿಸಿದ ಪ್ರಾಯದ ಹುಡುಗನೊಬ್ಬ ಸಹಾಯಕ್ಕೆಂದು ಅವರ ಜೊತೆ ಹೊರಡುತ್ತಾನೆ.  ಆಗ ಮುಳುಗುತ್ತಿರುವ ಬದುಕಲ್ಲಿ ಮುಳುಗಡೆಗಿಂತ ಹಿರಿದಾಗಿ, ಕಾಡುವ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಇಷ್ಟು ವರ್ಷ ಜೊತೆಗಿದ್ದ ಹೆಂಡತಿ ನಾಗಿ ಗಣಪನಿಗೆ ಅಪರಾಧಿಯಂತೆ ಕಾಣಲು ಶುರುವಾಗುತ್ತಾಳೆ. ಹೆಣ್ಣು ಜೀವನವಿಡೀ ತಾನು ಒಳ್ಳೆಯವಳೇ ಎಂದು ಸಾಭೀತು ಮಾಡಲು ಕೆಲವು ಸಂಬಂಧಗಳನ್ನು ಕಳಚಿಕೊಳ್ಳಲೇಬೇಕು. ಹರಿವನದಿ ತಾನು ಹೊತ್ತುಕೊಂಡು ಬಂದ ಹೂವು ಹಣ್ಣು ಮರಳುಗಳಲ್ಲಿ ಕೆಲವನ್ನು ಅಲ್ಲಲ್ಲೇ ಬಿಟ್ಟು ಬರುವಂತೆ. ಕೊನೆಗೆ ಅವಳಿಗೆ ಗಂಡ, ಅವನ ಕೋಪ, ಅವನ ಖುಷಿಗಳೇ ಮುಖ್ಯವಾಗಬೇಕೆಂಬ ನಿಯಮಕ್ಕೆ ನಾಗಿ ಆಗಾಗ ತಲೆಕೊಡುತ್ತಾಳೆ.
ಸುತ್ತ ಯಾರು ಇರದಾಗ ಕಣ್ಣು ಹಾಯಿಸಿದಲ್ಲೆಲ್ಲ ಬರಿ ಕಾಡು, ನೀರೇ ಕಾಣಿಸುವ ಊರು ಆ ಹೆಣ್ಣಿನ ಹೊಟ್ಟೆಯಲ್ಲಿ ಎಂತಹ ದಿಗಿಲು ಹುಟ್ಟಿಸಿರಬಹುದು.  ಅದರೊಟ್ಟಿಗೆ ಮಳೆಯ ಆರ್ಭಟ ಹೆಚ್ಚಾದಂತೆ ಗಂಡ ಹೆಂಡತಿಯ ಮನದೊಳಗೂ ಬಿರುಕು, ಸಿಡಿಲಿನ ಚಿತ್ತಾರದಂತೆ ಮೂಡತೊಡಗುತ್ತದೆ. ಎಲ್ಲಾ ಅನಿಶ್ಚಿತತೆಗಳ ಮಧ್ಯವೂ , ಬದುಕು ಮುಳುಗುವ ಹೊತ್ತಿಗೂ ಗಂಡ ಹಟ ಹಿಡಿದು ಕುಳಿತೇ ಬಿಡುತ್ತಾನೆ. ನೀರು ಏರಿದಂತೆಲ್ಲ ಸೀತಾ ಪರ್ವತದಲ್ಲಿ ಕಣ್ಣಿಗೆ ಕಾಣದೆ ಕಾಡುತ್ತಿದ್ದ ವ್ಯಾಘ್ರ ಹುಲಿ ಕೇಳುವಿಕೆಗೆ ನಿಲುಕಲು ಶುರುವಾಗುತ್ತದೆ. ಆ ಹುಲಿ ಅವಳೊಳ ಬದುಕಿನ ಹೋರಾಟದ ಅಬ್ಬರದ ಪ್ರತೀಕದಂತೆ ಕಾಣುತ್ತದೆ. ನಾಗಿ ಸೋಲುವುದೇ ಇಲ್ಲ ಯಾಕೆಂದರೆ ಅವಳಿಗೆ ಬದುಕುವ ಕನಸು ಕಂಡಷ್ಟೇ ಗೊತ್ತು. ರಾತ್ರಿಯಿಡೀ ಹೋರಾಡಿ ಮನೆಯ ಸುತ್ತೆಲ್ಲ ಬೆಂಕಿ ಮಾಡಿ ಹಚ್ಚಿ ಹೇಗೊ ಹುಲಿ ಮನೆ ಹೊಕ್ಕದಂತೆ ನೋಡಿಕೊಳ್ಳುತ್ತಾಳೆ. ಕಡಾ ಖಂಡಿತವಾಗಿ ಮುಳುಗೇ ಮುಳುಗುತ್ತದೆ ಎಂದು ಇಲಾಖೆಯವರು ಹೇಳಿದ್ದ ಸೀತಾ ಪರ್ವತ ಇನ್ನು ಜೀವಂತವಾಗಿ ಮತ್ತೆ ಹೊಸ ಮುಂಜಾನೆಯನ್ನು ಕಂಡಾಗ ನಾಗಿ ಮತ್ತು ಗಣಪನ ಎದೆಯಲ್ಲಿ ಹೊಸ ಜೀವ ಪಡೆದ ಅನುಭವ. ಇಬ್ಬರೂ ಸೀತಾ ಪರ್ವತದ ಮಂಟಪದ ಹತ್ತಿರ ಹೋಗಿ ಮತ್ತೆ ಹೊಸ ಕಣ್ಣಿಂದ ಊರನ್ನು ನೋಡತೊಡಗುತ್ತಾರೆ. ನಾಗಿಯ ಬಗೆಗಿನ ವ್ಯಘ್ರತೆಯೆಲ್ಲ ಗಣಪನಲ್ಲಿ ಕರಗಿರುತ್ತದೆ. ನಾಗಿಯ ಕಣ್ಣಲ್ಲಿ ಎಲ್ಲೋ ಒಂದು ಸಣ್ಣ ನಿರೀಕ್ಷೆ ಮೂಡಿ ತನ್ನ ಹೋರಾಟದ ಬಗೆಗೆ ಹೆಮ್ಮೆ ಎನಿಸುತ್ತದೆ.  ಆದರೆ ಅವಳ ಹೋರಾಟವೆಲ್ಲ ದೈವ ಪ್ರೇರಣೆಯ ನಿಮಿತ್ತದಂತೆ ಗಣಪನಿಗೆ ಕಂಡಾಗ, ನಾಗಿಗೆ ಕಾಲಡಿಯ ಸೀತಾಪರ್ವತ ನೀರೊಳಗಿನ ಪ್ರಪಾತದಲ್ಲಿ ಉಸಿರುಗಟ್ಟಿ ಬಿಕ್ಕಿದಂತಾಗುತ್ತದೆ. ಏನೂ ಆಗೇ ಇಲ್ಲವೆಂಬಂತೆ ಗಣಪ ಮನೆ ಕಡೆ ಹೊರಡುತ್ತಾನೆ.

Thanks and Regards,

Bhavya

Thursday, 31 December 2015

ಹೊಸ ವರ್ಷ


ಹೊಸ ಬೆಳಗಿನ ಬಾನಿನೊಳು ರವಿ ಉದಯಿಸೊ ಸಮಯ
ಭುವಿಯೆಲ್ಲವು ರಂಗಾಯಿತು ಹೊಸ ವರ್ಷದ ಉದಯ
ಹಳೆ ವರ್ಷವು ಜೀಕಿರುವ ಜೋಕಾಲಿಯು ಮೆಲ್ಲ
ನವಿರಾಗಿಯೆ ತೂಗುತ್ತಿದೆ ಹಳೆ ನೆನಪನ್ನೆಲ್ಲಾ

ಮನೆ ಮುಂದಿನ ರಂಗೋಲಿಯು ಕಾದಂತಿದೆ ಇಂದು
ಹೊಸ ವರ್ಣದ ರವಿ ಬಾನಲಿ ಹುಟ್ಟುವ ತಾನೆಂದು
ಚಿಗುರೆಲೆಗಳು ಮಾತಾಡಿವೆ ಒಂದರ ಕಿವಿಲೊಂದು
ಹೊಸ ವರ್ಷದ ತೊಟ್ಟಿಲಿಗೆ ತೋರಣ ತಾವೆಂದು

ಹಳೆ ಸಂಸ್ಕೃತಿ ಬೇರಿನೊಳು ಹೊಸ ಟಿಸಿಲೊಂದೊಡೆದು
ಹೊಸ ಭರವಸೆ ಮರವಾಗಲಿ ಮುಗಿಲಿಗೆ ತಾ ಬೆಳೆದು
ಕುಡಿಯೊಡಯಲಿ ಮರದೊಡಲಲಿ ಖುಷಿಯಲಿ ಚಿಗುರದ್ದಿ
ಚಿಗುರೆಲೆಗಳು ಮಾತಾಡಲಿ ಹೊಸ ವರುಷದ ಸುದ್ದಿ

- ಭವ್ಯ

Tuesday, 17 November 2015

ಹೇಳು ಯಾರು ಯಾರಿಗೆ


ಜೀವ ಭಾವ ಮಿಡಿವ ದೇವ ಹೇಳು ಯಾರು ಯಾರಿಗೆ
ಭುವಿಯ ಒಡಲ ಒಡೆದು ತೆಗೆದ ಚಿನ್ನ ಯಾರ ಕೊರಳಿಗೆ
ತುಂಡು ನಗುವ ತೋರೊ ಮೊಗವ ಹೊರುವುದಾರ ನಗುವಿಗೆ
ತುಂಡು ಮೋಡ ತುಸುವೆ ಅಳುವುದೇಕೆ ಯಾರ ಅಗಲಿಕೆ

ಬಡ್ಡು ಕತ್ತಿ ಮಸೆವುದೇಕೆ ಯಾರು ಇಂದು ಗಲ್ಲಿಗೆ
ದಾರ ನೆಂದು ನಗುವುದೇಕೆ ಯಾರ ಮುಡಿಗೆ ಮಲ್ಲಿಗೆ
ಅತ್ತ ಕಣ್ಣ ನೀರಿನಲ್ಲಿ ಎಷ್ಟು ಪಾಲು ನೆನಪಿಗೆ
ಸತ್ತು ಮಣ್ಣು ಸೇರುವಾಗ ಎಷ್ಟು ಅಂಗ ಪರರಿಗೆ

ನೂರು ಕೋಟಿ ಜೀವದಲ್ಲಿ ಎಷ್ಟು ಅರ್ಥ ಬಾಳಿಗೆ
ಯಾವ ಪದದ ಅರ್ಥ ಯಾರು ಬರೆದು ಕೊಟ್ಟರಾರಿಗೆ
ಲೆಕ್ಕವಿಟ್ಟರೆಷ್ಟು ದಿನಕೆ ಮೂಳೆ ದೊಗಲ ಬಾಡಿಗೆ
ಕಾಮ ಕ್ರೋಧವೆಲ್ಲ ಮೊಟ್ಟೆ ಇಟ್ಟ ಪುಟ್ಟ ಗೂಡಿಗೆ

ಬಡ್ಡು ಕತ್ತಿ- ಹರಿತವಿಲ್ಲದ ಕತ್ತಿ

Thanks and Regards,

Bhavya

Thursday, 8 October 2015

ಕುಶಾಲಿಗೆ ಬರೆದದ್ದು

"ಏ ಬಾರಾ.. ಬತ್ತಿಲ್ಯಾ? ಬಾ ಅಲಾ.."
"ನಾ ಬತ್ತಿಲ್ಲಾ"
"ಏ ಬಾ ಮರತ್ಯಾ.. ಆಗಳಿಂದ ಕೇಂತಿದ್ದೆ ಅಲನಾ.."
"ನೀ ಕೇಂಬುದೇ ಬ್ಯಾಡ. ನಾ ಬತ್ತಿಲ್ಲ ಅಂದ್ರೆ ಬತ್ತಿಲ್ಲ. ಇಲ್ ನಿತ್ತದ್ ಎಂತಕೆ.  ಹೋಗ್ ಬೇಕಾದಲ್ಲಿಗೆ"
"ಹೋಗ್ ಆಂಬೂಕೆ ಮೆಜೆಸ್ಟಿಕ್ ನಿನ್ ಅಪ್ಪಯ್ಯಂದಾ?"
ನಾನಾದರೆ ನಕ್ಕೆ ಬಿಡುತ್ತಿದ್ದೆನೇನೋ, ಅವಳು ನಗಲಿಲ್ಲ. ಮುಖ ಬಿಗಿದುಕೊಂಡಿದ್ದಳು. ಸಾಧಾರಣ ಮೈ ಕಟ್ಟು, ಗೋಧಿ ಬಣ್ಣ. ತುಟಿಗೆ ಒಂಚೂರು ಜಾಸ್ತಿಯೇ ಬಣ್ಣ ಹಚ್ಚಿದಂತಿತ್ತು. ಅವನು ಸಿಕ್ಕುವ ಸಡಗರಕ್ಕೇನೋ. 
                 ನಿಲ್ಲಬೇಡ ಅಂದವಳು, ನಿಲ್ಲಲಿ ಅಂತಲೇ ಹೇಳಿದಳೇನೊ. ಹೌದಪ್ಪ!! ಈ ಹುಡುಗಿಯರನ್ನ ಅರ್ಥಮಾಡಿಕೊಳ್ಳುವುದಕ್ಕಿಂತ ಜೈಲಲ್ಲಿ ಜಲ್ಲಿ ಕುಟ್ಟುವುದೇ ಮೇಲು.
ಅವನು ಕೊಂಚ ಹಿಂದೆ ಸರಿದ.
" ಟೈಮ್ ವೇಷ್ಟ್ ಮಾಡ್ಬೇಡ ಬಾ" ಧ್ವನಿ ಗಡುಸಾಗುತ್ತಿತ್ತು.
ಈ ಕಡೆಯಿಂದ ಬರಿ ಮೌನರಾಗ.
ಮೆಜೆಸ್ಟಿಕ್ ಅಲ್ಲಿ ನಿತ್ತು ಅವಳು ಬಸ್ಸಿಗಾಗಿ ಕಾಯುತ್ತಿದ್ದಳು. ಮತ್ತವನು ಅವಳಿಗಾಗಿ. ಅಲ್ಲಿಗೆ ಬಸವೇಶ್ವರ ನಗರದ ಕಡೆಗೆ ಹೋಗುವ ಬಸ್ ಬಂದೇ ಬಿಟ್ಟಿತು. ಅದು ಹೇಗೆ ಮನಸ್ಸಾಯಿತೊ ಅಂತೂ ಬಸ್ ಹತ್ತಿಯೇ ಬಿಟ್ಟಳು.  ಅವ ಹೋದನ ಅಂತ ಒಮ್ಮೆ ಕತ್ತು ಬಗ್ಗಿಸಿ, ಹೆಚ್ಚು ಬಗ್ಗದೆ ನೋಡಿದಳು. ಅವ ಅಲ್ಲೆ ಇದ್ದ, ಒಳಗೊಳಗೆ ಚೂರು ಖುಷಿ ಆಕೆಗೆ. ಅವ ಕೈ ಮುಗಿಯುವುದೊಂದು ಬಾಕಿ ಇನ್ನೆಲ್ಲ ಸನ್ನೆಗಳಲ್ಲಿ ದಯವಿಟ್ಟು ಬಂದುಬಿಡು ಅನ್ನುತ್ತಿದ್ದ. ಆಕೆ ಬಯಸಿದ್ದಳೋ ಇಲ್ಲವೋ ತಟ್ಟನೆ ಬಸ್ಸು ಹತ್ತಿ ಪಕ್ಕ ಕೂತು, "ಬಾರಾ" ಎಂದು ದೈನ್ಯವಾಗಿ ಅಂದ. ಆಕೆ ಇನ್ನೆತ್ತಲೋ ನೋಡ ತೊಡಗಿದಳು. ಅಯ್ಯೊ ಕರ್ಮವೇ!!! ಇವನಿಗೆ ಊಟ ತಿನ್ನಿಸಲಿಕ್ಕೆ ಇವನಮ್ಮ ಅದೆಷ್ಟು ಗೋಗರೆದಿದ್ದಳೋ, ಶಾಲೆಗೆ ಹೋಗು ಪುಣ್ಯಾತ್ಮ ಎಂದು ಅಜ್ಜಿ ಎಷ್ಟು ಸಲ ಅಂದಿದ್ದಳೋ, ಅಪ್ಪ, “ ಮರಾಯ ಇನ್ನು ನನ್ಗೆ ನಿನ್ನ
ಕಾಲಿಗೆ ಚಪ್ಪಲಿ ಹೊರುವುದಕ್ಕಾಗುವುದಿಲ್ಲ, ನೀ ಬರಿಗಾಲಲ್ಲಿ ಹೋಗು ಶಾಲೆಗೆ, ಇಲ್ಲ ಒಂದು ಜೊತೆ ಕಬ್ಬಿಣದ ಚಪ್ಪಲಿ ಮಾಡಿಸಿಕೊಡುತ್ತೇನೆ” ಅಂದು ಹೆಣಗಿದ್ದರೋ, ಆದರೆ ಇವನು ಕುಲ ತಿಲಕ ಅದ್ಯಾವುದು ಮಂಡೆಗೆ ಹೋಗದೆ, ಅವರಿಗೂ ಒಂದು ಫೀಲಿಂಗ್ ಉಂಟು ಎಂದು ಅನಿಸದೆ, ತನಗೆ ಬೇಕೆಂದಂತೆ ಬದುಕಿದವ, ಇವತ್ತು ಬಸ್ಸಿನಲ್ಲಿ ಹೀಗೆ ಗೋಗರೆಯುವಾಗ, ನಗು ಬರುತ್ತದೆ. ಅಂತದ್ಯಾವುದಿದು ಸೆಳೆತ ಅನ್ನಿಸುತ್ತದೆ. ಶೋಕಿಯಾ ಅಥವ ನನ್ನ ಓರಗೆಯವರಿಗೆಲ್ಲ ಇರುವಾಗ ನನಗೂ ಒಬ್ಬಳಿರಲಿ  ಬೇಜಾರಿಗೆ ಅಂತಲ ಇವರ ವರಸೆ? ಏನೊ ನನಗಂತು ಅರ್ಥವೇ ಆಗುವುದಿಲ್ಲ. ಹಾಂ! ಹೇಳುವುದು ಮರೆತೆ, ಆಕೆ ಒಲ್ಲೆ ಎಂದಳು ಆತ ಬಸ್ ಇಳಿದು ಹೋದ. ಕತೆ ಇಲ್ಲಿಗೆ ಮುಗಿಯುವುದಿಲ್ಲ. ಒಮ್ಮೆಲೆ ನೂರು ಬಣ್ಣದ ಯೋಚನೆಗಳು ಅವಳ ಮನಸೊಳಗೆ. ಹೋಗಲಾ ಬೇಡವಾ, ಹೋದರೇನು ಹೋಗದಿದ್ದರೇನು ಇನ್ನು ಏನೇನೋ, ಆತ ಕರೆದದ್ದೆಲ್ಲಿಗೆ ಇವಳು ಬರುವುದಿಲ್ಲ ಅಂದದ್ದೆಲ್ಲಿಗೆ ಎರಡೂ ನನಗೆ ಗೊತ್ತಿಲ್ಲ.. ಸುಮ್ಮನೆ ಇಬ್ಬರು ನನ್ನ ಬರಹದ ವಸ್ತುಗಳಾದರು. ಬಸ್ಸು ಹೊರಟಿತು. ಇನ್ನೇನು ಅವನ ಕಣ್ಣಿನ ಮಿಂಚು ಮಣ್ಣು ಸೇರುವುದರಲ್ಲಿತ್ತು, ಕೂತಿದ್ದವಳು, ಡ್ರೈವರ್ ಹತ್ತಿರ ಹೋಗಿ ಸ್ವಲ್ಪ ಬಸ್ ನಿಲ್ಸಿ ಸಾರ್ ಅಂದಳು. ಚಾಲಕನ ಮುಖದಲ್ಲಿ ಅಸಹನೆಯ ಪುಟ್ಟ ಗೆರೆಯೊಂದು ನಿಟ್ಟುಸಿರಿಟ್ಟಿತು.
ಅರ್ಥ
ಕುಶಾಲು- ತಮಾಶೆ
ಮರತ್ಯಾ - ಮರಾಯ್ತಿ
ಆಗಳಿಂದ - ಆಗ್ಲಿಂದ
ಕೇಂತಿದ್ದೆ - ಕೇಳ್ತಿದ್ದೀನಿ
ಅಲನಾ - ಅಲ್ವ
ಕೇಂಬುದು - ಕೇಳೋದು
ಅಪ್ಪಯ್ಯಂದಾ - ಅಪ್ಪಂದಾ?
ಅಂಬೂಕೆ - ಅನ್ನೋಕೆ

ಓರಗೆ - ಸಮಾನ ವಯಸ್ಕರು 

Tuesday, 1 September 2015

ಹೊರೆ


ಶುದ್ಧೋಧನ ಒಬ್ಬಂಟಿ, ಹಾಗಂತ ಯಾರೂ ಇಲ್ಲದವನಲ್ಲ. ಇರುವವರೆಲ್ಲರೂ ದೂರದಲ್ಲಿದ್ದಾರೆ. ಅವರು ಬರುವುದು ಇವನಿಗೂ ಅಷ್ಟು ಇಷ್ಟವಲ್ಲ. ತನ್ನ ಪ್ರಪಂಚಕ್ಕೆ ಅವರೆಲ್ಲ ಸರಿ ಹೊಂದುವವರಲ್ಲ ಅನ್ನುವುದೇ ಅವನ ಭಾವನೆ.
ಅವನಿಗೂ ಒಂದು ಪ್ರೇಮವಿತ್ತು. ಅಲ್ಲಿ ಅದಲು ಬದಲಾದ ನೂರಾರು ಕನಸುಗಳಿದ್ದವು. ಹಂಚಿಕೊಂಡ ಸಾವಿರ ಕ್ಷಣಗಳಿದ್ದವು. ಆದರೆ ಆಕೆ ಇವನಿಂದ ದೂರವಾಗಿ ಸುಮಾರು ವರ್ಷಗಳೇ ಆದವು. ಆದರೂ ಆಕೆ ಬರೆದ ನೂರು ನೂರು ಪತ್ರಗಳ ಕಂತೆ ಇವನಲ್ಲಿತ್ತು. ಈತ ಭಗ್ನ ಪ್ರೇಮಿ. ಆಕೆಗೆ ತಾನು ಕೊಟ್ಟ ಉಡುಗೊರೆಗಳನ್ನು ಸಂಬಂಧ ಮುರಿದಾಗ ಆಕೆ ತಿರುಗಿ ಕೊಟ್ಟಿದ್ದರೂ, ಅವೆಲ್ಲವನ್ನು ಸೇರಿಸಿ ಒಂದು ಸಂಗ್ರಹಾಲಯವನ್ನೇ ಮಾಡಿದ್ದ. ಎಷ್ಟೋ ಸಲ ಅವಳ ನೆನಪು ಅತಿಯಾಗಿ ಕಾಡಿದಾಗ ಅವಳ ವಂಚನೆ ನೆನಪಾಗಿ ಅವೆಲ್ಲವನ್ನೂ ಸುಡಬೇಕೆಂದು ಮನಸ್ಸಾದರೂ ಕೈ ಬರುತ್ತಿರಲಿಲ್ಲ. ದಿನವೂ ಅದಾವುದೋ ಭಾರ ಇವನ ಮನಸ್ಸನ್ನು ಹಿಡಿದು ಜಗ್ಗುತ್ತಿತ್ತು. ಕುಗ್ಗಿಸುತ್ತಿತ್ತು.
ಹೀಗಿದ್ದಾಗ ಒಂದು ದಿನ ಇವನ ದೂರದ ಸಂಬಂಧಿ ಗೋಪಾಲಣ್ಣನ ಕುಟುಂಬ ಇವನ ಮನೆಗೆ ಬಂತು. ೩ ಮಕ್ಕಳಿರುವ ತುಂಬು ಸಂಸಾರ. ಬೇಡವೆಂದು ಹೇಳಲಾಗದೆ ಶುದ್ಧಿ ಚೆನ್ನಾಗಿಯೇ ಉಪಚರಿಸಿ ಅಡುಗೆಗೆ ಏನಾದರೂ ತರಲು ಹೊರಗೆ ಹೋಗಿದ್ದ. ವಾಪಾಸು ಬರುವವನಿಗೆ, ಮನೆಗೆ ಹತ್ತಿರತ್ತಿರಾಗುತ್ತಿದ್ದಂತೆ ಒಂದೊಂದೇ ಕಾಗದ ತುಂಡುಗಳು ಬೆತ್ತಲಾಗಿ ಮೆಟ್ಟಿಲುಗಳ ಮೇಲೆಲ್ಲ ಬಿದ್ದಿದ್ದು ಕಂಡಿತು. ಅದರಲ್ಲಿ ತನ್ನ ಮತ್ತು ಅವಳ ಬರಹಗಳೆಲ್ಲ ಕಂಡವು. ಅವಳಿಗೆ ತಾನು ಕೊಟ್ಟ ಗೊಂಬೆ ಕೈ ಮುರಿದು ಬಿದ್ದಿತ್ತು. ಮತ್ತರ್ಧ ಕಾಗದದ ಕಟ್ಟು ಬಚ್ಚಲಿನ ನೀರಿನ ತೊಟ್ಟಿಯಲ್ಲಿ ದೋಣಿಯಾಗಿದ್ದವು. ನೆನಪುಗಳೆಲ್ಲಾ ನೀರಿನ ಪಸೆ ತಾಗಿ ಹಸಿಯಾಗಿದ್ದವು. ಹೃದಯ ಒಳಗೆ ಕಿರಿಚುತ್ತಲೇ ಇತ್ತು. ಹೊರಗೆ ಧ್ವನಿ ಬರಲಿಲ್ಲವಷ್ಟೆ. ಒದ್ದೆಯಾದ ಹರಕು ಕಾಗದವೊಂದನ್ನು ಕೈಗೆತ್ತಿಕೊಂಡು ಕುಸಿದು ಓದತೊಡಗಿದ. ಅವನ್ನು ಕೂಡಿಟ್ಟು ೧೦ ವರ್ಷಗಳೇ ಕಳೆದಿತ್ತು. ಅದರಲ್ಲಿದ್ದ ಬರಹವನ್ನು ಆತ ಮತ್ತೆಂದೂ ತೆಗೆದು ನೋಡಿರಲಿಲ್ಲ. ಆಶ್ಚರ್ಯವಾಯಿತು!! ಇಷ್ಟು ವರ್ಷಗಳು ತಾನು ಅವುಗಳನ್ನು ತೆರೆದು ನೋಡೇ ಇಲ್ಲ ಎಂದ ಮೇಲೆ ಕೂಡಿಟ್ಟುಕೊಂಡದ್ದಾದರೂ ಯಾತಕ್ಕೆ?!!
ಓದುತ್ತಾ ಹೋದ. ಓದುವಾಗ ಅವನ ಭಾವನೆಗಳಿಗೂ, ಆಕೆ ಬರೆದಿದ್ದಕ್ಕೂ ಭಾವನೆಗಳ ಅಂತರ ಸಾಕಷ್ಟು ಕಾಣಹತ್ತಿತು. ಅವಳು ಅವನನ್ನು ಪುಸಲಾಯಿಸಿ ಬರೆದದ್ದು, ಅವನು ಅವಳಿಗೆ ಬರೆದದ್ದು  ಎಲ್ಲಾ ಸುಳ್ಳು ಸುಳ್ಳೇ ಅನಿಸಿತು. ಭಾರವಾದ ಎದೆಯ ಕೊನೆಯ ಕಣ್ಣ ಹನಿ ಕಾಗದದ ಮೇಲೆ ಬಿದ್ದಾಗ ಅವನ ಮುಖದಲ್ಲಿ ಮೊದಲ ನಗು ಅರಳಿತು.

Thanks and Regards,

Bhavya