ಶುದ್ಧೋಧನ
ಒಬ್ಬಂಟಿ, ಹಾಗಂತ ಯಾರೂ ಇಲ್ಲದವನಲ್ಲ. ಇರುವವರೆಲ್ಲರೂ ದೂರದಲ್ಲಿದ್ದಾರೆ. ಅವರು ಬರುವುದು ಇವನಿಗೂ
ಅಷ್ಟು ಇಷ್ಟವಲ್ಲ. ತನ್ನ ಪ್ರಪಂಚಕ್ಕೆ ಅವರೆಲ್ಲ ಸರಿ ಹೊಂದುವವರಲ್ಲ ಅನ್ನುವುದೇ ಅವನ ಭಾವನೆ.
ಅವನಿಗೂ
ಒಂದು ಪ್ರೇಮವಿತ್ತು. ಅಲ್ಲಿ ಅದಲು ಬದಲಾದ ನೂರಾರು ಕನಸುಗಳಿದ್ದವು. ಹಂಚಿಕೊಂಡ ಸಾವಿರ ಕ್ಷಣಗಳಿದ್ದವು.
ಆದರೆ ಆಕೆ ಇವನಿಂದ ದೂರವಾಗಿ ಸುಮಾರು ವರ್ಷಗಳೇ ಆದವು. ಆದರೂ ಆಕೆ ಬರೆದ ನೂರು ನೂರು ಪತ್ರಗಳ ಕಂತೆ
ಇವನಲ್ಲಿತ್ತು. ಈತ ಭಗ್ನ ಪ್ರೇಮಿ. ಆಕೆಗೆ ತಾನು ಕೊಟ್ಟ ಉಡುಗೊರೆಗಳನ್ನು ಸಂಬಂಧ ಮುರಿದಾಗ ಆಕೆ ತಿರುಗಿ
ಕೊಟ್ಟಿದ್ದರೂ, ಅವೆಲ್ಲವನ್ನು ಸೇರಿಸಿ ಒಂದು ಸಂಗ್ರಹಾಲಯವನ್ನೇ ಮಾಡಿದ್ದ. ಎಷ್ಟೋ ಸಲ ಅವಳ ನೆನಪು
ಅತಿಯಾಗಿ ಕಾಡಿದಾಗ ಅವಳ ವಂಚನೆ ನೆನಪಾಗಿ ಅವೆಲ್ಲವನ್ನೂ ಸುಡಬೇಕೆಂದು ಮನಸ್ಸಾದರೂ ಕೈ ಬರುತ್ತಿರಲಿಲ್ಲ.
ದಿನವೂ ಅದಾವುದೋ ಭಾರ ಇವನ ಮನಸ್ಸನ್ನು ಹಿಡಿದು ಜಗ್ಗುತ್ತಿತ್ತು. ಕುಗ್ಗಿಸುತ್ತಿತ್ತು.
ಹೀಗಿದ್ದಾಗ
ಒಂದು ದಿನ ಇವನ ದೂರದ ಸಂಬಂಧಿ ಗೋಪಾಲಣ್ಣನ ಕುಟುಂಬ ಇವನ ಮನೆಗೆ ಬಂತು. ೩ ಮಕ್ಕಳಿರುವ ತುಂಬು ಸಂಸಾರ.
ಬೇಡವೆಂದು ಹೇಳಲಾಗದೆ ಶುದ್ಧಿ ಚೆನ್ನಾಗಿಯೇ ಉಪಚರಿಸಿ ಅಡುಗೆಗೆ ಏನಾದರೂ ತರಲು ಹೊರಗೆ ಹೋಗಿದ್ದ. ವಾಪಾಸು
ಬರುವವನಿಗೆ, ಮನೆಗೆ ಹತ್ತಿರತ್ತಿರಾಗುತ್ತಿದ್ದಂತೆ ಒಂದೊಂದೇ ಕಾಗದ ತುಂಡುಗಳು ಬೆತ್ತಲಾಗಿ ಮೆಟ್ಟಿಲುಗಳ
ಮೇಲೆಲ್ಲ ಬಿದ್ದಿದ್ದು ಕಂಡಿತು. ಅದರಲ್ಲಿ ತನ್ನ ಮತ್ತು ಅವಳ ಬರಹಗಳೆಲ್ಲ ಕಂಡವು. ಅವಳಿಗೆ ತಾನು ಕೊಟ್ಟ
ಗೊಂಬೆ ಕೈ ಮುರಿದು ಬಿದ್ದಿತ್ತು. ಮತ್ತರ್ಧ ಕಾಗದದ ಕಟ್ಟು ಬಚ್ಚಲಿನ ನೀರಿನ ತೊಟ್ಟಿಯಲ್ಲಿ ದೋಣಿಯಾಗಿದ್ದವು.
ನೆನಪುಗಳೆಲ್ಲಾ ನೀರಿನ ಪಸೆ ತಾಗಿ ಹಸಿಯಾಗಿದ್ದವು. ಹೃದಯ ಒಳಗೆ ಕಿರಿಚುತ್ತಲೇ ಇತ್ತು. ಹೊರಗೆ ಧ್ವನಿ
ಬರಲಿಲ್ಲವಷ್ಟೆ. ಒದ್ದೆಯಾದ ಹರಕು ಕಾಗದವೊಂದನ್ನು ಕೈಗೆತ್ತಿಕೊಂಡು ಕುಸಿದು ಓದತೊಡಗಿದ. ಅವನ್ನು ಕೂಡಿಟ್ಟು
೧೦ ವರ್ಷಗಳೇ ಕಳೆದಿತ್ತು. ಅದರಲ್ಲಿದ್ದ ಬರಹವನ್ನು ಆತ ಮತ್ತೆಂದೂ ತೆಗೆದು ನೋಡಿರಲಿಲ್ಲ. ಆಶ್ಚರ್ಯವಾಯಿತು!!
ಇಷ್ಟು ವರ್ಷಗಳು ತಾನು ಅವುಗಳನ್ನು ತೆರೆದು ನೋಡೇ ಇಲ್ಲ ಎಂದ ಮೇಲೆ ಕೂಡಿಟ್ಟುಕೊಂಡದ್ದಾದರೂ ಯಾತಕ್ಕೆ?!!
ಓದುತ್ತಾ
ಹೋದ. ಓದುವಾಗ ಅವನ ಭಾವನೆಗಳಿಗೂ, ಆಕೆ ಬರೆದಿದ್ದಕ್ಕೂ ಭಾವನೆಗಳ ಅಂತರ ಸಾಕಷ್ಟು ಕಾಣಹತ್ತಿತು. ಅವಳು
ಅವನನ್ನು ಪುಸಲಾಯಿಸಿ ಬರೆದದ್ದು, ಅವನು
ಅವಳಿಗೆ ಬರೆದದ್ದು ಎಲ್ಲಾ ಸುಳ್ಳು ಸುಳ್ಳೇ ಅನಿಸಿತು. ಭಾರವಾದ ಎದೆಯ ಕೊನೆಯ ಕಣ್ಣ ಹನಿ ಕಾಗದದ
ಮೇಲೆ ಬಿದ್ದಾಗ ಅವನ ಮುಖದಲ್ಲಿ ಮೊದಲ ನಗು ಅರಳಿತು.
Thanks and Regards,
Bhavya
No comments:
Post a Comment