Monday, 12 January 2015

ಅ”ಗಮ್ಯ”

                                                  
                 ಅ”ಗಮ್ಯ”
              ನನ್ನಷ್ಟಕ್ಕೆ ಶೂನ್ಯವನ್ನ ದಿಟ್ಟಿಸುತ್ತಿದ್ದ ನನಗೆ ಮುಖದಲ್ಲಾಗುತ್ತಿದ್ದ ಭಾವದ ಬದಲಾವಣೆಯ ಕಿಂಚಿತ್ತೂ ಅರಿವಿರಲಿಲ್ಲ. ತಲೆಯಲ್ಲಿ ಮೂಟೆಗಟ್ಟಲೆ ತರ್ಕ ನಡೆದಿತ್ತು. ಹಾದು ಹೋದವರಿಬ್ಬರು ಕಂಡು ನಕ್ಕಿದ್ದೂ ಆಯ್ತು. ನಾನಾಗ ನಡು ರಸ್ತೆಯಲ್ಲಿದ್ದೆ ಎಂಬ ಯೋಚನೆಯು ಬಂದಿರಲಿಲ್ಲ ನನ್ನ ತಲೆಗೆ. ನಾ ಮಾಯೆಯೊ ನನ್ನೊಳು ಮಾಯೆಯೊ ತಿಳಿಯದೆ ನಾನೂ ನಕ್ಕೆ. ತಿರು ತಿರುಗಿ ಮತ್ತದೇ ಗೊಂದಲದ ಹುತ್ತದೊಳಗೆ ಪ್ರಶ್ನೆ ಬುಸುಗುಡುತ್ತಿತ್ತು. ಹೇಗೋ ನಡೆದು ಬಸ್ ನಿಲ್ದಾಣ ತಲುಪಿದೆ. ಖಾಲಿ ಕೂತಿದ್ದ ಬೆಂಚೊಂದು ನನ್ನನ್ನು ಕಾಯುತ್ತಿತ್ತು.

೩೦ ವರ್ಷಗಳ ಹಿಂದೆ ಒಲ್ಲದ ಮನಸ್ಸಿಂದ ಇಂಜಿನಿಯರಿಂಗ್ ಪದವಿ ಪಡೆದು  ಖಾಸಗಿ ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿ ಬೆಂಗಳೂರಿನ ಬಾಯೊಳಗೆ ಬಂದಾಗ ಹಣ ಗಳಿಸಿ ಇನ್ನೊಂದೆರಡು ವರ್ಷಗಳೊಳಗೆ ಊರಿಗೆ ಹೋಗಿ ವ್ಯವಸಾಯ ಮಾಡಬೇಕೆಂಬ ಮಹದಾಸೆ ಇತ್ತು ಮನಸ್ಸಲ್ಲಿ. ಅದಕ್ಕೆಂದೆ ಪರವೂರಾದ ಬೆಂಗಳೂರನ್ನು ಬಾಡಿಗೆ ನೆಲದಂತೆಯೇ ಕಂಡೆ, ಇಂದೂ ಕಾಣುತ್ತಿದ್ದೇನೆ. ಹಾಗಾಗಿಯೇ ಬಾಡಿಗೆಯ ಊರು ಬೇಡಾಗಿದೆ. ಆದರೆ ಬದುಕಿನ ಬೇರುಗಳು ಆಗಲೇ ಈ ನೆಲದಲ್ಲಿ ಕಿತ್ತು ತೆಗೆದರೆ ಜೀವವೇ ಹೋಗುವಂತೆ ಹೂತುಹೋಗಿವೆ.
            ಕೆಲಸಕ್ಕೆ ಸೇರಿದ ಮೊದಲೆರಡು ವರ್ಷ ಅದಮ್ಯ ಆತ್ಮ ವಿಶ್ವಾಸವಿತ್ತು. ಮಿತವ್ಯಯದಿಂದ ಒಂದಷ್ಟು ಉಳಿಸಿದೆ. ಅಪ್ಪ ಅಮ್ಮನಲ್ಲಿ ನನ್ನ ಬಹುಕಾಲದ ಕನಸನ್ನು ತೋಡಿಕೊಂಡಾಗ ಅವರೇನು ಖುಷಿ ಪಟ್ಟಂತೆ ಕಾಣಲಿಲ್ಲ. ಒಬ್ಬರ ಜೀವನ ಇನ್ನೊಬ್ಬರ ಕನಸಾಗಿರಬಹುದು ಎಂಬಂತೆ, ಅವರಂತೆ ಹಳ್ಳಿಗೆ ಹೋಗಿ ತಂಗಾಳಿಯ ತಂಪಲ್ಲಿ ಕೂತು ನಾ ನೆಟ್ಟ ಪೈರು ತೆನೆ ತುಂಬುವುದನ್ನು ಕಾಣುವ ಆಸೆ ನನ್ನದಾಗಿದ್ದರೆ ನನ್ನಂತೆ ಪಟ್ಟಣದಲ್ಲಿನ ಐಷಾರಾಮ ಅವರ ಕನಸಾಗಿತ್ತೇನೊ. ಅವರನ್ನು ದೂರುವುದಿಲ್ಲ ಪಾಪ ಅನುಭವಿಸದ ಜೀವನ ಯಾವಾಗಲೂ ಮನುಷ್ಯನನ್ನು ಸೆಳೆಯುವುದು ಜಾಸ್ತಿ. ನಾನು ಊರಿಗೆ ಬರುತ್ತೇನೆಂದಾಗ ನೋವಾದರೂ ತೋರಿಸಿಕೊಳ್ಳದೆ ಅಪ್ಪ ಅಂದರು, ಇನ್ನೊಂದು ವರ್ಷ ಇದ್ದರೆ ಇನ್ನೊಂದೊ ಎರಡೊ ಲಕ್ಷ ಉಳಿಸಬಹುದಲ್ಲ. ನನಗೂ ಹೌದೆನಿಸಿತು. ಇನ್ನೊಂದು ಗದ್ದೆಯನ್ನು ಆ ದುಡ್ಡಲ್ಲಿ ಕೊಳ್ಳಬಹುದು ಎಂದುಕೊಂಡೆ.

ಆಗ ನಾನು ಏನನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ಒಂದು ಹನಿ ಯೋಚನೆಯೂ ಇರಲಿಲ್ಲ ನನಗೆ. ಹಾಗೆ ಹೇಳಿ ವರ್ಷಗಳೆರೆಡು ಕಳೆದವು. ನನ್ನ ಕನಸು ಒಂಚೂರು ಮಸುಕಾಗಲಿಲ್ಲ. ಇನ್ನೊಮ್ಮೆ ಹೊರಡುವ ತಯಾರಿ ಮಾಡಿದೆ. ಮ್ಯಾನೇಜರ್ ನಾನು ಪ್ರಮೋಷನ್ ಗೆ "ದ ಮೋಸ್ಟ್ ಎಲಿಜಿಬಲ್ ಕ್ಯಾಂಡಿಡೇಟ್" ಆಗಿರೋದ್ರಿಂದ  ಈ ಹೊತ್ತಲ್ಲಿ ಕೆಲಸ ಬಿಡೋದು ಬುದ್ಧಿವಂತರ ಲಕ್ಷಣ ಅಲ್ಲವೇ ಅಲ್ಲ ಎಂದರು. ಈ ಜಾಲದಿಂದ ಪಾರಾಗುತ್ತಿದ್ದೆನೇನೊ, ಆದರೆ ಅದೇ ಆಫೀಸಿನಲ್ಲೊಂದು ಪಾಶಕ್ಕೆ ಸಿಲುಕಿದ್ದೆ. ಅದೇ ಪ್ರೀತಿಯ ಪ್ರೇಮಪಾಶ. ಅವಳು ನನ್ನೊಟ್ಟಿಗೆ ಕೆಲಸ ಮಾಡುತ್ತಿದ್ದಳು. ಒಬ್ಬರನ್ನೊಬ್ಬರು ಪರಸ್ಪರ ಒಪ್ಪುವಾಗಲೇ ಹೇಳಿದ್ದೆ ನನ್ನ ಕನಸೇನೆಂದು. ಆಗ ಸರಿ ಅಂದಿದ್ದಳು. ಆದರೆ ಈಗ ಹೊಸರಾಗ ತೆಗೆದಳು. ಈ ವಿಚಾರ ಮನೆಯಲ್ಲಿ ಹೇಳಿದಾಗ ಮನೆಯವರು ಮದುವೆಗೆ ಕೂಡಲೇ ಸಮ್ಮತಿಸಿದರು. ಈಗ ಅವರಿಗೆ ಪ್ರೇಮವಿವಾಹವನ್ನು ವಿರೋಧಿಸುವುದಕ್ಕಿಂತ ನನ್ನ ವ್ಯವಸಾಯದ ಹುಚ್ಚು ಬಿಡಿಸುವುದು ಅಗತ್ಯವಾಗಿತ್ತು. ಆದರೆ ಪ್ರೀತಿ ನನ್ನ ಕನಸುಗಳಿಗೆ ಕೊಳ್ಳಿ ಇಡುವಂತೆ ಆಡಿದ ಮಾತ್ಯಾಕೋ ಮನಸ್ಸನ್ನು ಅತೀವ ಚುಚ್ಚಿದವು. ಬಿಟ್ಟು ಬಿಡುವ ಈ ಮದುವೆ ವಿಚಾರ, ನನ್ನ ಕನಸಿಗೆ ಅದು ಪೂರಕವಾಗಿಲ್ಲ ಅಂದುಕೊಂಡೆ. ಸ್ವಲ್ಪ ದಿನ ಅವಳಿಂದ ದೂರವೂ ಇದ್ದೆ.  ಆದರೆ ಹೇಳಿಕೇಳಿ ಪ್ರಕೃತಿ ಪ್ರೇಮಿ ನಾನು. ಒಂದು ಹೆಣ್ಣಿನ ಮನಸನ್ನು ಹೇಗೆ ನೋಯಿಸಿಯೇನು? ಮುಖ್ಯವಾಗಿ ೨ ವರ್ಷಗಳ ಪ್ರೀತಿ ಸಂಬಂಧ ಹೇಗೆ ದೂರವಾಗಲು ಬಂದೀತು? ಮತ್ತೆ ಮಾತಾಡಿಸಿದೆ. ಪ್ರೀತಿ ಕುರುಡು ಎಂಬುದು ಮತ್ತೊಮ್ಮೆ ಸಾಭೀತಾಯಿತು. ಆಕೆಯೂ ಒಪ್ಪಿ ನಮ್ಮ ಮದುವೆಯ ಅತ್ಯಂತ ಸುಂದರವಾದ ಇನ್ನೊಂದೆರಡು ವರ್ಷವನ್ನು ಇಲ್ಲಿ ಕಳೆದು ಹೋಗುವ ಎಂದಳು.

ಅವಳ ಕೆನ್ನೆಯ ಗುಳಿಯಲ್ಲಿ ಕಳೆದು ಹೋದ ನನಗೆ, ಈ ಗುಳಿಕೆನ್ನೆ ನೋಡುತ್ತಾ ಇನ್ನೆರೆಡು ವರ್ಷ ಕಳೆಯುವುದು ಕಷ್ಟವೇ ?ಅನ್ನಿಸಿತು. ಅಂತು ಮದುವೆ ಮುಗಿಯಿತು. ನಾ ಎಣಿಸಿದಂತೆ ಇಬ್ಬರ ಸಂಬಳದಲ್ಲಿ ಅತಿ ಹೆಚ್ಚು ಉಳಿಸಬಹುದು ಎಂಬ ಎಣಿಕೆಗೆ ವಿರುದ್ಧವಾಗಿ ಮೊದಲು ಗದ್ದೆ ಕೊಳ್ಳಲು ಕೂಡಿಟ್ಟ ಹಣವೂ ನಮ್ಮ ದರ್ಬಾರಲ್ಲಿ ಕರಗಿ ಹೋಯಿತು. ನನ್ನ ಕನಸೀಗ ಕಾಲಿಗೆ ಪೆಟ್ಟು ಬಿದ್ದು ಕುಂಟುತ್ತಿತ್ತು. ಆದರೂ ಬದುಕಿತ್ತು. ಎರಡೆನೆಯ ವರ್ಷಕ್ಕೆ ಕಾಲಿಟ್ಟಾಗ ಲೋಕ ನಿಯಮದಂತೆ ನಾನು ತಂದೆಯಾಗುತ್ತಿದ್ದೆ. ಪ್ರೀತಿ ಪ್ರತಿ ಕ್ಷಣವೂ ನಾನು ಅವಳ ಬಳಿಯೇ ಇರಬೇಕೆಂದು ಬಯಸುತ್ತಿದ್ದಳು. ಮುಖ್ಯವಾಗಿ ಅವಳು ಭಾರ ಎತ್ತದಂತೆ ಹೆಚ್ಚು ನಡೆಯದಂತೆ ನೋಡಿಕೊಳ್ಳಬೇಕೆಂದು ಡಾಕ್ಟರ್ ಕಣ್ಣಗಲಿಸಿ ಹೇಳಿದ್ದರು ಅಥವಾ ಹೆದರಿಸಿದ್ದರು ಎನ್ನಬಹುದು. ಈ ಪರಿಸ್ಥಿತಿಯಲ್ಲಿ ಅವಳನ್ನು ಕರೆದುಕೊಂಡು ಹೋಗುವುದು  ಅಥವಾ ಬಿಟ್ಟು ಹೋಗುವುದು ಎರಡೂ ನ್ಯಾಯ ಸಮ್ಮತವಲ್ಲ. ಅವಳ ಗರ್ಭದ ಕೂಸು ಚೆನ್ನಾಗಿಯೇ ಬೆಳೆಯುತ್ತಿತ್ತು, ಆದರೆ ನನ್ನ ಕನಸಿನ ಕೂಸು ಅತೀವ ಸೊರಗಿತ್ತು. ನಾನೀಗ ಮೂಕ ಪ್ರೇಕ್ಷಕನಂತಾಗಿದ್ದೆ. ಖೆಡ್ಡಾಕ್ಕೆ ಬೀಳುವಾಗ ತಿಳಿಯಲಿಲ್ಲ, ಆದರೀಗ ನನ್ನ ಭವಿಷ್ಯ ಮೋಡಕಟ್ಟಿದ ಮುಗಿಲಾಗಿದೆ. ಎಲ್ಲಾ ಮಸುಕು. ಆದರೂ ನಾನು ಕೈಲಾಗದವ. ಕೃಷಿಯ ವಿಷಯ ತೆಗೆದಾಗಲೆಲ್ಲಾ ಪ್ರೀತಿ ಕಣ್ಣೀರು ತೆಗೆದು ಬಾಯಿ ಮುಚ್ಚಿಸುತ್ತಿದ್ದಳು. ಮೊದಲ ಮಗು ಆದ ಮೇಲೆ ಎರಡನೆಯದು. ಈಗ ಅವೆರಡೂ ಬೆಳೆದು ಮದುವೆಗೆ ಸಿದ್ಧವಾಗಿವೆ.
ನನ್ನ ತಲೆಕೂದಲು ನೆರೆತಿದೆ. ಆದರೆ ವ್ಯತ್ಯಾಸವೇನಿಲ್ಲ, ಪ್ರಶ್ನೆ ಪತ್ರಿಕೆ ಅದೆ, ಆದರು ಉತ್ತರ ಹುಡುಕಲು ಸೋತಿದ್ದೇನೆ. ಆದರು ಆಗೊಮ್ಮೊ ಈಗೊಮ್ಮೊ  ನನ್ನದೆಯ ಕನಸು ಎಲ್ಲೋ ಕ್ಷೀಣವಾಗಿ ಉಸಿರಾಡಿದ ಸದ್ದು ಕೇಳುತ್ತಿದೆ. ಈಗ ಭುಜದೆತ್ತರಕ್ಕೆ ಬೆಳೆದ ಒಬ್ಬ ಮಗ, ಒಬ್ಬಳು ಮಗಳ ಜವಾಬ್ದಾರಿಯುತ ತಂದೆ ನಾನು. ಆದರೆ ನಾನ್ಯಾವಾಗ ಜವಾಬ್ದಾರಿ ಹೊತ್ತಿರಲಿಲ್ಲ?  ಕನಸನ್ನು ಪಣವಿಟ್ಟರೂ ನನ್ನ ತ್ಯಾಗದ ಬಗ್ಗೆ ಚೂರು ಹೆಮ್ಮೆ ಅನ್ನಿಸಿತು.  ಒಳಗೆ ಕೊರಗಂತು ಇದ್ದೇ ಇತ್ತು. ಇಷ್ಟೆಲ್ಲಾ ಯೋಚಿಸಿ ಆಗುವಾಗ ನಾ ಕೂತಿದ್ದ ಬಸ್ ನಿಲ್ದಾಣದಿಂದ ನನ್ನನ್ನು ಮನೆ ತಲುಪಿಸಬೇಕಾದ ಎಲ್ಲಾ ಬಸ್ ಗಳು ಹೋಗಿದ್ದವು. ಈ ಸಂದರ್ಭಕ್ಕೂ ನನ್ನ ಜೀವನಕ್ಕೂ ಎಷ್ಟು ಸಾಮ್ಯವಿದೆ. ನನ್ನನ್ನು ನನ್ನತನಡೆಗೆ ತಲುಪಿಸುವ ದಾರಿಯು ಮುಚ್ಚಿದೆ ಅನ್ನಿಸಿತು. ಆಳವಾದ ನಿಟ್ಟುಸಿರಿನ ಶಬ್ದಕ್ಕೆ ಎದೆ ಬಡಿತವೂ ಜೊತೆಯಾಯಿತು. ಗಂಟೆ ಕಂಡರೆ ೧೦:೪೦. ಒಂದು ಆಟೋದ ಸುಳಿವೂ ಇಲ್ಲ. ಆಕಾಶ ನೋಡುತ್ತಾ ಚಂದ್ರನಿಗೂ ಚುಕ್ಕಿಗಳಿಗೂ ನಡುವೆ ಗೆರೆ ಎಳೆಯ ತೊಡಗಿದೆ. ಚಂದ್ರ ಓಡುತ್ತಲೇ ಇದ್ದ ಗೆರೆಗಳ ಅಳತೆಯನ್ನು ಮೀರಿ. ಪ್ರಶಾಂತ ಮೌನವನ್ನು ಸೀಳಿದ ಒಂದು ಬಸ್ ನನ್ನತ್ತ ಬಂತು, ಮುಖದಲ್ಲೀಗ ಅರ್ಧಚಂದ್ರಾಕಾರದ ನಗು. ಪಕ್ಕನೆ ಏನೋ ಹೊಳೆದಂತಾಯಿತು. ಬಸ್ಸು ಹತ್ತಿ ಹತ್ತು - ಹನ್ನೆರೆಡು ಕರೆಮಾಡಿದೆ. ಚಂದ್ರಾಕಾರ ಮುಖದಲ್ಲಿನ್ನೂ ಹಾಗೇ ಇತ್ತು. ಇನ್ನು ಎಂದೆಂದಿಗೂ ಇರಬಹುದೇನೋ ಅನ್ನುವ ಕುರುಹು ಸಿಕ್ಕಿತು.

ಮಾರನೆ ದಿನ ರಜೆ ಹಾಕಿದೆ. ಒಂದು ಘಳಿಗೆಯೂ ಮನೆಯಲ್ಲಿರಲಿಲ್ಲ. ಎಲ್ಲವೂ ವ್ಯವಸ್ಥಿತವಾಗಿದೆ ಅನ್ನಿಸಿದ ಮೇಲೆ ಕೊಂಚ ತಣಿದೆ. ಅದರ ಮಾರನೆಯ ದಿನ ಸಿದ್ಧಾಪುರದ ಬಳಿಯ ದಟ್ಟ ಹಳ್ಳಿಯೊಂದನ್ನು ಬಂದು ತಲುಪಿದೆ. ಕಣ್ಣು ರಾತ್ರಿಯ ಪ್ರಯಾಣದ ಬಗ್ಗೆತಲೆಕೆಡಿಸಿಕೊಳ್ಳದೆ ತುಂಬಿಕೊಳ್ಳಬಹುದಾದಷ್ಟು ಹಸಿರು ಚಿತ್ರಗಳನ್ನು ಕಣ್ತುಂಬಿಕೊಂಡಿತು. ಆಕಾಶದ ನೀಲಿಯೊಂದನ್ನು ಬಿಟ್ಟರೆ ಅಲ್ಲಿದ್ದುದು ಹಸಿರು ಬಣ್ಣದ ಏಕತಾನತೆಯೊಂದೆ. ಪ್ರಕೃತಿ ನನ್ನನ್ನು ಕರೆಸಿಕೊಳ್ಳಲು ಇಷ್ಟು ತಡಮಾಡಿತು ಅನಿಸಿದರೂ, ತುಂಬಾ ತಡವಾಗಲಿಲ್ಲವಲ್ಲ ಎಂದು ಸಮಾಧಾನವಾಯಿತು. ಅಪ್ಪನ ಸ್ನೇಹಿತರೊಬ್ಬರಿಗೆ ನಿನ್ನೆಯೆ ಕರೆ ಮಾಡಿ ಇಲ್ಲಿ ೫ ಎಕ್ರೆ ಜಾಗ ಕೊಂಡು, ತಾತ್ಕಾಲಿಕಕ್ಕಾದರು ಒಂದು ಚಿಕ್ಕ ಮನೆಯನ್ನು ಗೊತ್ತು ಮಾಡಿಕೊಂಡು, ಮಾಡಬೇಕಿದ್ದ ಇತರ ವ್ಯವಸ್ಥೆಗಳೊಂದಿಗೆ ಒಂದೆರಡು ಜೊತೆ ಬಟ್ಟೆಯೊಟ್ಟಿಗೆ ಊರು ಬಿಟ್ಟಿದ್ದು ನನಗೇ ಇನ್ನು ನಂಬಲಾಗುತ್ತಿಲ್ಲ. ಆಫೀಸಿಗೆ ರಾಜಿನಾಮೆಯನ್ನು ಬರೆದು ಕಳಿಸುವುದರೊಂದಿಗೆ, ನಾನು ಇಂತಲ್ಲಿದ್ದೇನೆ, ಕರೆಯುವ ಪ್ರಯತ್ನ ಮಾಡಬೇಡಿ ಎಂತಲೂ ಮನೆಗೆ ಪತ್ರ ಬರೆದೆ. ಮಕ್ಕಳ ಮದುವೆಗೆ ಬೇಕಾದ್ದೆಲ್ಲವನ್ನು ಕೂಡಿಟ್ಟು, ಹೆಂಡತಿಗು ಹೆತ್ತವರಿಗು ಸಾಕಷ್ಟು ಬರೆದಿಟ್ಟು ನನಗೆ ಬೇಕಾದ್ದಷ್ಟು ಹಣವನ್ನು ಮಾತ್ರ ಇಟ್ಟುಕೊಂಡು ಒಂದು ಆಳನ್ನು ಹುಡುಕಿಕೊಂಡು ಮೊದಲೆ ಗೊತ್ತು ಮಾಡಿದ ಮನೆ ಸೇರಿದೆ. ಆಳು ಕೆಂಪ, ಹೆಂಡತಿ ಮಕ್ಕಳು ಯಾರು ಇಲ್ಲದ ನಂಬಿಕಸ್ತ. ತಲೆಯಲ್ಲೊಂದು ಹಾಳೆ, ಸೊಂಟದಲ್ಲೊಂದು ಕತ್ತಿ ನೆನಪಾದರೆ ಊದಲು ಒಂದು ಕೊಳಲು ಇವುಗಳೇ ಅವನ ಆಯುಧ. ಅವನಿಗೆ ಜೊತೆಗಾರ ನಾಯಿ ಕರಿಯ ನನಗೆ ಬಹು ಬೇಗ ಆಪ್ತರಾದರು.ನಾನು ಕೊಂಡ ಹೊಲ ಗದ್ದೆಗಳನ್ನು ಬೆಳಿಗ್ಗೆ ಎದ್ದು ಸುತ್ತುವುದು ನನ್ನ ಮತ್ತು ಕರಿಯನ ಅಭ್ಯಾಸವಾಗಿತ್ತು. ಅಷ್ಟರಲ್ಲಿ ಕೆಂಪನ ಕಪ್ಪು ಚಾ ತಯಾರಿರುತ್ತಿತ್ತು. ಮುಂದೆ ಒಂದು ವಾರ ಇಡೀ ಊರನ್ನು ಸುತ್ತಿ ಪರಿಚಯವಾಗಲು ಹವಣಿಸಿದೆ. ಜೊತೆಗೆ ಕೆಂಪ ಇದ್ದರೆ ಹತ್ತಾಳಿನ ಬಲ. ದಿನಾಲು ಕೂತು ಮುಂದಿನ ಕೆಲಸಗಳ ಬಗ್ಗೆ, ಆಳುಗಳನ್ನು ಗೊತ್ತು ಮಾಡುವ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದೆವು. ೧೫ ದಿನಗಳಲ್ಲಾಗಲೆ ಕೆಂಪ ೨ ನಂಬಿಕಸ್ತ ಒಕ್ಕಲಿನ ಮನೆಗಳನ್ನು ಗೊತ್ತು ಮಾಡಿಕೊಂಡು ಬಂದ. ಅವರು ಮುಂದೆ ಇಲ್ಲೆ ಅಕ್ಕ ಪಕ್ಕದಲ್ಲಿ ಸಂಸಾರ ಹೂಡುವುದೆಂದು ತೀರ್ಮಾನವಾಯಿತು. ಅವರ ಸಂಬಳವನ್ನು ಗೊತ್ತು ಮಾಡಿಯಾಯಿತು. ಇದರಲ್ಲೆಲ್ಲ ಕೆಂಪ ನಿಪುಣ, ಯಾವ ಕೆಲಸಕ್ಕೆ ಎಷ್ಟು ಕೊಡುವುದು ಎಂಬ ಲೆಕ್ಕವನ್ನೆಲ್ಲ ಅವನೇ ಹೇಳುತ್ತಿದ್ದ. ಹೊರಗಿನ ಪ್ರಪಂಚದ ಹೊಟ್ಟೆಬಾಕತನದ, ಅನಾಗರಿಕವಾಗಿ ಹಗಲುದರೋಡೆ ಮಾಡುವ ಪ್ರವೃತ್ತಿ ಇಲ್ಲಿನ ಮಂದಿಗಿರಲಿಲ್ಲ. ಇವರು ಅಲ್ಪ ತೃಪ್ತರು.  ಆಳುಗಳಿಗೆ ಓದುವ ವಯಸ್ಸಿನ ಚಿಕ್ಕ ಮಕ್ಕಳಿದ್ದವು. ಇವಕ್ಕೆ ಮುಂದೆ ನಾನೆ ಪುರುಸೊತ್ತಾದಾಗಲೆಲ್ಲ ಮರದ ಕೆಳಗೆ ಪಾಠ ಮಾಡಲು ಶುರು ಮಾಡಿದೆ. ಆ ಬಡ ಜೀವಗಳಿಗೇನೊ ಸಂಭ್ರಮ ತಮ್ಮ ಮಕ್ಕಳು ಒಂದೆರಡು ತಮಗರ್ಥವಾಗದ "ಇಂಗ್ಲೀಸಿ"ನಲ್ಲಿ ಏನೊ ಅಂದಾಗ. ಈ ನಡುವೆ ಮನೆಯಿಂದ ಬರುವಷ್ಟು ಬೆದರಿಕೆಯ ಪತ್ರಗಳು ಬಂದವು. ಮೊಬೈಲ್ ನೆಟ್ ವರ್ಕ್ ಇಲ್ಲದ್ದನ್ನು ಅದೆಷ್ಟು ಸಲ ನೆನೆದು ಖುಷಿಪಟ್ಟೆನೋ ಕಾಣೆ. ನಾನೂ ತಿರುಗಿ ಬರೆದೆ. ಜೀವನದ ಪ್ರತಿ ಕ್ಷಣವನ್ನು ನಿಮ್ಮೆಲ್ಲರಿಗಾಗಿ ಕಳೆದಿದ್ದೇನೆ. ಇನ್ನು ಕೆಲವು ವರ್ಷಗಳಾದರೂ ನನ್ನ ಜೀವನದ ಮೇಲಿನ ಪೂರ್ತಿ ಹಕ್ಕನ್ನು ನನಗೆ ಕೊಡಿ. ಅತೀ ತಡವಾಗಿ ಬದುಕೊಂದನ್ನು ಆರಿಸಿಕೊಂಡಿದ್ದೇನೆ, ಬದುಕಲು ಬಿಡಿ. ಧರ್ಮಪತ್ನಿಯಾದ ಪ್ರೀತಿಯಲ್ಲಿ ವಿನಂತಿಸುವುದಿಷ್ಟೆ. ನನ್ನಿಂದಾದ ಕರ್ತವ್ಯವನ್ನೆಲ್ಲ ಪತಿಯಾಗಿ ನಿಷ್ಠೆಯಿಂದ ಮಾಡಿದ್ದೇನೆ. ನಿನ್ನನ್ನು ಬಿಟ್ಟಿರುವುದು ನನಗೂ ಅತೀವ ಕಷ್ಟ. ಆದರೆ ನನ್ನ ಕನಸಿನ ಸಲುವಾಗಿ ನಿನ್ನನ್ನು ಬಲಿಕೊಡಲಾರೆ. ಸ್ವಂತ ಇಚ್ಛೆಯಿಂದ ಬರುವುದಾದರೆ ನನ್ನ ಮನೆ ಬಾಗಿಲು ಯಾವಾಗಲೂ ತೆರೆದಿದೆ. ಇಲ್ಲಿರುವ ಖುಷಿಯನ್ನು ಅರಿತವರು ಮಾತ್ರ ಬಲ್ಲರು. ಮಕ್ಕಳು ಆಗಲೇ ಅವರ ಸಂಗಾತಿಗಳನ್ನು ಹುಡುಕಿಕೊಂಡಿದ್ದಾರೆ. ಮದುವೆಗೆ ಒಬ್ಬ ಹೆಮ್ಮೆಯ ಅಪ್ಪನಾಗಿ ಬಂದೇ ಬರುವೆ.
                                                                                                                  ಇಂತೀ ನಿನ್ನವ,
                                                                                                                    ಸಂತೋಷ
ಬರುವಳೆಂಬ ನಿರೀಕ್ಷೆ ಇರಲಿಲ್ಲ ಆದರೆ ಒಂದು ತಿಂಗಳ ನಂತರ ಒಂದು ಮುಂಜಾನೆ ನಮ್ಮ ಕರಿಯ ರಸ್ತೆ ನೋಡಿ ಜೋರಾಗಿ ಬೊಗಳುತ್ತಿದ್ದ. ಎದ್ದು ರಸ್ತೆಯೆಡೆ ದಿಟ್ಟಿಸಿದಾಗ ನನ್ನ ಹೆಂಡತಿಯನ್ನು ಹೋಲುವ ದೇಹ ನಡೆದು ಬರುತ್ತಿತ್ತು. ಜೊತೆಗೆ ಮಕ್ಕಳಿದ್ದರು. ಕೈಯಲ್ಲಿ ಒಬ್ಬರದಾಗುವಷ್ಟು ಲಗ್ಗೇಜ್ ಇತ್ತು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಪ್ರೀತಿ ಮತ್ತೆ ನನ್ನ ಪರಿಧಿಯೊಳಗೆ ಬಂದಾಗಿತ್ತು. ಒಕ್ಕಲ ಮಕ್ಕಳು, ಹೆಂಗಸರು  ಕಣ್ಣು ಕಣ್ಣು ಬಿಟ್ಟು ಕಂಡರು. ಪ್ರೀತಿ ಮಗುವೊಂದರ ಗಲ್ಲವನ್ನು ಪ್ರೀತಿಯಿಂದ ಸವರಿ ನಕ್ಕಳು. ಮಗು ನಾಚಿತು. ನನ್ನದು ಸರಿಯಾದ ಆಯ್ಕೆ ಎಂಬುದು ಇಷ್ಟು ವರ್ಷಗಳ ನಂತರ ಅನ್ನಿಸಿತು. ಸುಮ್ಮನೆ ನಕ್ಕೆ. ಇನ್ನೊಂದು ವಾರಕ್ಕೆ ಮಕ್ಕಳು ಮರಳಿದರು. ಮುಂದೆ ನನ್ನ ಚಂದದ ಊರು ನನ್ನ ಮಕ್ಕಳ ಮೊಮ್ಮಕ್ಕಳ ನೆಚ್ಚಿನ ಬೇಸಿಗೆ ತಾಣವಾಯಿತು.
ಧನ್ಯವಾದಗಳು,
ಭವ್ಯ
 
 
 
 
 
 

Monday, 11 August 2014

ಹಂಗು

ಬಿಚ್ಚಿಟ್ಟ ಓಲೆಗಳು,
ಕುಳಿತಲ್ಲೆ ಮಲಗಿವೆ
ಬಾಗಿಲಿಗೆ ಅಲೆದಲೆದು
ಗೆಜ್ಜೆಗಳು ಸೋತಿವೆ

ಕೆನ್ನೆಯ ಕೆಂಪಿಗೆ
ಕಣ್ಣ ಕಾಡಿಗೆ ಬೆರೆತು
ಅವ ಬರುವ ದಾರಿಗೆ
ಹೂವಾಗಿವೆ

ಮಾತು ಮೌನದ
ನಡುವೆ ತವಕದೇಣಿಯ ಹಾಕಿ
ಹೃದಯ ಬಡಿತವು ಏರಿ
ಇಳಿಯುತ್ತಿದೆ

ಪಾತ್ರದೊಟ್ಟಿಗೆ ಅತ್ತು
ನಗುವ ಪ್ರೇಕ್ಷಕನಂತೆ
ಹಳದಿ ಬಣ್ಣದ ಸೀರೆ
ಮಿಡುಕುತ್ತಿದೆ

ಮಲಗಿದ್ದ ಓಲೆಗಳು
ಮೈಮುರಿದು ನೋಡುತಿವೆ
ಅವಳಿಗೀಗೆಮ್ಮ
ಹಂಗಿಲ್ಲವೆ

ಹಂಗು ಇಹುದೇಕಿನ್ನು
ಅವನು ತಂದಿಹ ಓಲೆ
ಅವಳ ಮುಖ ಮುದ್ರಿಕೆಯ
ಸಿಂಗರಿಸಿವೆ

ಭಾವ ಅರ್ಥ ಆಗದೇ ಇದ್ದ ಪಕ್ಷದಲ್ಲಿ ಕೆಳಗಿನ ಸಾರಾಂಶ ಓದಿ :p

ಸಾರಾಂಶ
ಅವಳನ್ನು ಸಿಂಗರಿಸಬೇಕಾದ ಓಲೆ, ಯಾರದೋ ದಾರಿ ಕಾದು ಸಾಕಾಗಿ ನಿದ್ದೆ ಹೋಗಿದೆ, ಕಾಲಿನ ಗೆಜ್ಜೆ ಅವ ಬಂದನೋ ಎಂದು ಬಾಗಿಲಿಗು ಒಳಗೂ ಸುತ್ತಿ ಸುಸ್ತಾಗಿದೆ
ಅವನು ಬರದೇ ಇದ್ದುದು ನೋಡಿ ಈಕೆ ಕೊಂಚ ಅತ್ತಿರಬಹುದೇನೊ, ಆಗಲೆ ಕೆನ್ನೆಯ ಬಣ್ಣಕ್ಕು ಕಣ್ಣ ಕಾಡಿಗೆಗು ಸಂಧಾನವಾಗಿ, ಆ ಹನಿಯೊಂದೊಂದೂ ಅವನ ಹಾದಿಗೆ ಹೂವಾಗಿದೆ
ಚಡಪಡಿಕೆ ಹೆಚ್ಚಾಗಿದೆ
ಅವಳ ಸೀರೆ, ಅವಳ ಓಡಾಟಕ್ಕೆ ತಕ್ಕಂತೆ ಮುದುರುತ್ತಿದ್ದೆ, ನಲಿಯುತ್ತಿದೆ.
ಆಗ ಒಮ್ಮೆಲೆ ಮೈಮುರಿದು ಎಚ್ಚೆತ್ತ ಓಲೆಗಳು, ನಿತ್ತು ನೋಡುತ್ತವೆ, ಆಕೆಗೆ ಇವುಗಳ ಹಂಗೇ ಇಲ್ಲದಂತಿದ್ದಾಳೆ. ಅವನು ಬಂದಿದ್ದಾನೆ, ಬಂದವನು ಹೊಸದೊಂದು ಓಲೆಯನ್ನು ಉಡುಗೊರೆಯಾಗಿ ತಂದಿದ್ದಾನೆ. ಇನ್ನು ಅವಳಿಗೇಕೆ ಆ ಮಲಗಿರುವ ಓಲೆಗಳ ಹಂಗು??

Wednesday, 2 July 2014

ಕನಸು

                                         
                            
          ಅದೊಂದು ಕನಸುಗಳ ಸಂತೆ, ಅಲ್ಲಿ ಯಾವ ಬಣ್ಣದ ಕನಸುಗಳನ್ನು ಯಾರು ಬೇಕಾದರೂ ಬೆಲೆ ಕೊಟ್ಟು ಕೊಂಡುಕೊಳ್ಳಬಹುದಿತ್ತು. ವಾರಕ್ಕೆ ಒಂದು ಸಲ ಮಾತ್ರ ಆ ಸಂತೆ ನಡೆಯುತ್ತಿದ್ದುದು. ದೂರದೂರುಗಳಿಂದೆಲ್ಲಾ ಆ ಸಂತೆಗೆ ಜನ ದೌಡಾಯಿಸುತ್ತಿದ್ದರು. ನಾ ಮುಂದು ತಾ ಮುಂದು ಎನ್ನುತ್ತಾ ಕನಸುಗಳ ವ್ಯಾಪಾರದಲ್ಲಿ ತೊಡಗುತ್ತಿದ್ದರು.
ಕನಸಿನ ವ್ಯಾಪಾರವೇನು ಕಮ್ಮಿ ಇರಲಿಲ್ಲ. ಅದಕ್ಕೆ ಸಾಕಷ್ಟು ನಿಯಮಗಳಿದ್ದವು. ಒಂದೊಂದು ಕನಸಿನ ಬೆಲೆಯು ಆ ದಿನದ ಮುಂಜಾವಿನಿಂದಲೆ ನಿಗದಿಯಾಗುತ್ತಿತ್ತು. ಆ ಬೆಲೆಗಿಂತ ಒಂದು ರೂಪಾಯಿ ಹೆಚ್ಚಿಗೆ ದರದಲ್ಲಿ ಮಾರ ಹೊರಟರೂ, ಎಲ್ಲ ವ್ಯಾಪಾರಿಗಳು ಆ ವ್ಯಾಪಾರಿಯ ಎಲ್ಲಾ ಕನಸುಗಳನ್ನು ನಾಶ ಮಾಡಬಹುದಿತ್ತು. ಕಟ್ಟಳೆಗಳು ಸಮರ್ಥವಾಗಿ ಜಾರಿಗೆ ಬರುತ್ತಲಿದ್ದದ್ದರಿಂದ ಎಲ್ಲರು ನಿಷ್ಠೆಯಿಂದಿದ್ದರು.
           ಕನಸಿನ ಸಂತೆಯೆಂಬುದು ಆ ಊರಲ್ಲಿ ಸಣ್ಣ ಸ್ವರ್ಗವನ್ನೇ ಸೃಷ್ಠಿಸುತ್ತಿತ್ತು. ಎಲ್ಲೆಲ್ಲೂ ಬಣ್ಣಗಳು. ಎಲ್ಲೆಲ್ಲೂ ಖುಷಿ. ಸದ್ದು, ಗದ್ದಲ, ಗೌಜು. ಇಲ್ಲಿ ವರ್ತಕರಾಗಲು ವಯಸ್ಸಿನ ಮಿತಿ ಇರಲಿಲ್ಲ. ಎಷ್ಟೋ ಹುಡುಗರು ಮನ ಬಂದಂತೆ ಬದುಕಲು ಅಪ್ಪ ಅಮ್ಮ ದುಡ್ಡು ಕೊಡದೇ ಇದ್ದಾಗ ಮನೆಯವರ ಕಣ್ಣು ತಪ್ಪಿಸಿ, ಈ ಜಾತ್ರೆಯಲ್ಲಿ ಎಷ್ಟೋ ಸುಂದರ ಕನಸ್ಸುಗಳನ್ನು ಮಾರಿಕೊಂಡಿದ್ದಾರೆ. ಅಪಪೋಲಿ ಕನಸುಗಳನ್ನು ಮಾರಿದ ಯುವಕರಿಗೇನು ಕಮ್ಮಿ ಇಲ್ಲ. ಆದರೆ ಕನಸನ್ನು ಒಂದು ಸಲ ಮಾರಿದರೆ ಬೇಕೆಂದರೂ ಆತ ಆ ಕನಸ್ಸನ್ನು ಮತ್ತೆಂದೂ ಕಾಣಲಾರ, ಮತ್ತೆ ಎಷ್ಟು ಬೆಲೆ ತೆತ್ತರೂ ಹಿಂದೆ ಪಡೆಯಲಾರ, ಇದು ಆ ಜಗತ್ತಿನ ನಿಯಮವಾಗಿತ್ತು.  ಆದ್ದರಿಂದ ಎಷ್ಟೋ ಯುವಕರು ಆತುರಾತುರವಾಗಿ ಮಾರಿಕೊಂಡ ಬದುಕಿನ ಸುಂದರ ಕನಸುಗಳಿಂದ ವಂಚಿತರಾಗಿ ಬದುಕುತ್ತಿದ್ದರು. ಆ ಕನಸಿನ ನೆನಪೂ ಇರದಷ್ಟು ಮಾಸಿ ಹೋಗುತ್ತಿತ್ತು ಅವರ ಮನಸ್ಸಿನಿಂದ.
ಕನಸನ್ನು ಕೊಳ್ಳುವ ವರೆಗೂ ವರ್ತಕನ ಕನಸಾಗಿರುವ ಅವು, ಕೊಂಡ ನಂತರ ಕೊಂಡವನ ಸ್ವಂತದ್ದಾಗಿ ಬದಲಾಗುತ್ತಿದ್ದವು. ಜಾಗ್ರತೆಯಿಂದ ಪ್ರತಿಯೊಬ್ಬರೂ ಸುಂದರ ಕನಸುಗಳನ್ನಷ್ಟೇ ಆಯ್ದು ಕೊಳ್ಳುತ್ತಿದ್ದರು.
           ಆ ದಿನ ಸಂತೆಯ ರಂಗಲ್ಲೊಂದು ಸಾತ್ವಿಕ ಕಳೆಯಿತ್ತು. ಯಾವುದೋ ಸೌಮ್ಯ ಲಹರಿ ಅಲ್ಲೆಲ್ಲಾ ಓಡಾಡಿದಂತಿತ್ತು. ಎಲ್ಲರ ಮನದಲ್ಲೂ ಖುಷಿ ದ್ವಿಗುಣವಾಗಿತ್ತು. ಸಂಭ್ರಮ ಮುಗಿಲೇರಿತ್ತು. ಆದರು ಯಾರಿಗು ಆ ಖುಷಿಯ ಕಾರಣ ತಿಳಿದಿರಲಿಲ್ಲ. ಆದರೆ ಅಂದು ಕಣ್ಣಿಗೆ ಕಾಣಬಹುದಾಗಿದ್ದ ಒಂದೇ ಬದಲಾವಣೆಯೆಂದರೆ ಸಂತೆಯ ಮೂಲೆಯಲ್ಲಿ ಕಟ್ಟಿದ್ದ ಕುರುಡು ಲ್ಯಾಂಟೀನದ ಕೆಳಗೆ ತನ್ನ ಕನಸ್ಸೊಂದನ್ನು ಹೊತ್ತು ಮಾರಲು ಹವಣಿಸುತ್ತಿದ್ದ ಒಬ್ಬ ಮಧ್ಯ ವಯಸ್ಸಿನ ಸನ್ಯಾಸಿ. ನೋಡಿದ ಜನರೆಲ್ಲಾ ಹುಬ್ಬೇರಿಸುವವರೇ. ಇವನೆಲ್ಲಿಯ ಕಳ್ಳ ಸನ್ಯಾಸಿ, ಸನ್ಯಾಸಿಗಳಿಗೆಲ್ಲಾದರೂ ಕನಸಿರುವುದುಂಟೇ ಎಂದುದು ಸಾಮಾನ್ಯರ ತಾತ್ಸಾರ.
            ಸನ್ಯಾಸಿಯ ಕನಸ್ಯಾವುದೋ ಕಂಡವರಾರು! ತಾತ್ಸಾರಕ್ಕೆ ತಾನೇಕೆ ಗುರಿಯಾಗುತ್ತಿದ್ದೇನೆ ಎಂಬುದು ತಿಳಿಯುತ್ತಿರಲಿಲ್ಲ ಅವನಿಗೆ. “ಅಷ್ಟಕ್ಕು ನನ್ನ ಕನಸ್ಸೇನು ಲೌಕಿಕವಾದುದಲ್ಲ. ಕೋಟಿ ತೇಜ ಪುಂಜಗಳ ಸಾಕ್ಷಾತ್ಕಾರದ ಕನಸು. ನಾನು ಅತ್ತಲೇ ಹೆಜ್ಜೆ ಹಾಕುತ್ತಿದ್ದೆ. ನನ್ನ ಕನಸಿನ ಸಾಕ್ಷಾತ್ಕಾರಕ್ಕೆ ಇನ್ನೇನು ಒಂದು ಹಗಲು ಜಾರುವುದಷ್ಟೆ ಬಾಕಿಯಿತ್ತು. ತುಂಬಾ ವೇಗವಾಗಿ ಆ ಎಡೆಗೆ ಹೆಜ್ಜೆ ಹಾಕುತ್ತಿದ್ದೆ. ಒಂದೊಂದು ಕಿರಣವನ್ನು ಕಣ್ತುಂಬಿಸಿಕೊಳ್ಳುವ ಆತುರದಲ್ಲಿತ್ತು ಮನ. ಇಷ್ಟು ವರ್ಷ ಬೆಟ್ಟ ಗುಡ್ಡವನ್ನು ಹಾವುಗೆಯನ್ನೂ ಹಾಕದೆ ಅಲೆದುದ್ದಕ್ಕೆ ಇಂದು ರಾತ್ರಿ ಫಲ ಉಣ್ಣುವೆನು. ಅನಂತ ಸುಖದ ತೊಟ್ಟಿಲಲ್ಲಿ ಒಂದಷ್ಟು ಹೊತ್ತು ನನ್ನನ್ನಿಟ್ಟು ಪ್ರಕೃತಿ ತೂಗುವಳು. ಇಂದು ರಾತ್ರಿ ಮಹಾ ತೇಜಪುಂಜವೊಂದು ಆಕಾಶದಲ್ಲಿ ಹುಟ್ಟಿ, ತನ್ನ ಪ್ರತಿ ಕಿರಣದಲ್ಲೊಂದೊಂದು ಬಣ್ಣ ಸ್ಫುರಿಸಿ, ಮಹಾ ಶಕ್ತಿಯಾಗಿ ಮಿಂಚಿ ಮರೆಯಾಗುವ ನನ್ನ ಕನಸಿನ ಕೂಸು ಜೀವ ತಳೆಯುವ ಒಂದು ಅಧ್ಭುತ ಪುಳಕ” ಮತ್ತೆ ಆತನಲ್ಲಿ ರೋಮಾಂಚನ ತಂದಿತು.” ಆದರೆ ಅಂತ ಅಧ್ಭುತವನ್ನು ಒಂದು ಮಗುವಿನ ಕಾರಣಕ್ಕೆ ನಾನೇಕೆ ಮಾರಲು ಹೊರಟಿರುವೆ? “ಆ ಮಗುವಿನ ಮುಖ ನೆನಪಾಗಿ ತಾನೇ ಮಂತ್ರಮುಗ್ಧನಾಗಿ ಮಾತಾಡಿಕೊಂಡ. "ಆ ತಾಯಿ ನನ್ನ ಹೆಜ್ಜೆಗೆ ಅಡ್ಡ ಬಂದು ಗೋಗರೆದ ಹೃದಯ ಕಲಕುವ ಕ್ಷಣ ನನ್ನೆಲ್ಲ ಕನಸಿಗೆ ಬೆಂಕಿ ಹಾಕಬೇಕೆನಿಸಿತು. ಇಷ್ಟು ವರ್ಷ  ಕಾಡನ್ನು ಅಲೆದರು, ಆ ಮಗುವಿಗೆ ಅಂಟಿದ ಬೇನೆಯನ್ನು ಗುಣಪಡಿಸುವ ಸಣ್ಣ ವಿಧ್ಯೆಯೂ ನನಗೊಲಿದಿಲ್ಲ. ಆಕೆ ನಾನು ಮಹಾಪುರುಷನೆಂದು ನಂಬಿ ನನ್ನ ಮೊರೆ ಹೋಗಿದ್ದಳು. ಕೊನೆಯ ಪಕ್ಷ ಆಕೆಯ ಆಸ್ಪತ್ರೆಯ ಖರ್ಚಿಗೆ ನನ್ನ ಬಳಿ ಬಿಡಿಗಾಸಾದೂ ಇದ್ದಿದ್ದರೆ!" ಮತ್ತೆ ಪ್ರಶ್ನಿಸಿಕೊಂಡು ತಲೆ ತಗ್ಗಿಸಿ ಕುಗ್ಗಿತು ಸನ್ಯಾಸಿಯ ಜೀವ. "ಮತ್ತೆ ಮತ್ತೆ ತಾಯಿಯ ಆರ್ತನಾದ ಕೇಳಿತು. ಎದೆಯಲ್ಲಿ ಅಗಾಧವಾಗಿ ಚುಚ್ಚಿದರೂ ಅಸಹಾಯಕನಾಗಿ ಮುನ್ನಡೆದೆ. ಅವಳು ಅಲ್ಲೇ ಬಿಕ್ಕುತ್ತಿದ್ದಳು.
           “೧೦ ಹೆಜ್ಜೆಯ ಅಂತರದಲ್ಲಿ ಜನರು ಯಾವುದೋ ಅಯೋಮಯ ಬಣ್ಣಗಳನ್ನು ಹಿಡಿದು ಸಾಲಾಗಿ ನಿಂತಿದ್ದು ಕಂಡಿತು. ಲೋಕ ಸಹಜವಾದ ಕುತೂಹಲದಿಂದ ಹಿರಿಯನೊಬ್ಬನನ್ನು ಕೇಳಿ ನೋಡಿದೆ. ಆತ ಇದು ಕನಸುಗಳ ಮಾರುಕಟ್ಟೆ ಈ ಸಂಜೆಯೆ ವ್ಯಾಪರ ಎಂದನು. ಯೋಚಿಸಲು ಈ ವರೆಗೂ ಯಾವ ದಾರಿಯೂ ಇರದಿದ್ದ ನನಗೆ ಈಗ ಮಾನವೀಯ ನೆಲೆಯಲ್ಲಿ ನಿತ್ತು ನನ್ನದೇ ಬಿಂಬಗಳು ಪ್ರಶ್ನಿಸಹತ್ತಿದ್ದವು. ಯಾವುದು ನಿನ್ನ ಸಾಧನೆ? ಒಂದೇ ಒಂದು ಜೀವಿಗೂ ಪ್ರಯೋಜನವಾಗದೆ ಬದುಕಿದ್ದೆ?  ಕಾಡುಮೇಡು ಸುತ್ತಿದ್ದೆ? ಅಥವಾ ಕನಸಲ್ಲಿ ಕಂಡ ಆ ಶಕ್ತಿಯ ದರ್ಶನಕ್ಕೆ ಹೊರಟಿದ್ದೆ? ಪ್ರಶ್ನೆಗಳಿಗೆ ಉತ್ತರ ಹುಡುಕುವ ಮೊದಲೇ ನನ್ನ ಮುಂದಿದ್ದ ಸಾಲು ಕರಗಿ ನಾನು ಮೊದಲನೆಯವನಾಗಿದ್ದೆ. ಒಬ್ಬರನ್ನೊಬ್ಬರು ತಳ್ಳಿಕೊಳ್ಳುತ್ತಿದ್ದ ಜನ ನನ್ನ ಕಾಲ್ಗಳ ಇಚ್ಛೆಯನ್ನು ಮೀರಿ ನನ್ನನ್ನು ಸಾಲಿನಲ್ಲಿ ಮುಂದೆ ತಳ್ಳಿದರು. ಅಲ್ಲಿದ್ದ ಅಧಿಕಾರಿ ನನ್ನ ಕನಸನ್ನು ಬಿಚ್ಚಿ ನೋಡಿ ಬೆಲೆ ನಿಗದಿ ಪಡಿಸಿ ಮುಂದಕ್ಕೆ ತಳ್ಳಿದ್ದ ಈ ಲೌಕಿಕ ಪ್ರಪಂಚವೇಕೆ ಹೀಗೆ. ಬೇಕೋ ಬೇಡವೊ ಎಂಬ ಗೋಜೂ ಇಲ್ಲದೆ ಯಾವುದಕ್ಕೋ ತಳ್ಳಿ ಖುಷಿ ನೋಡುತ್ತದೆ. ಈಗ ಉಳಿದದ್ದು  ನನ್ನ ತೀರ್ಮಾನವಷ್ಟೆ ಕನಸನ್ನೊ ಅಥವ ವಾಸ್ತವವನ್ನು ಆರಿಸುವುದೋ ಎಂದು.            ಏನಾದರಾಗಲಿ ನನ್ನ ಕನಸನ್ನು ಕೊಳ್ಳಲು ಯಾರು ಬರದಿದ್ದರೆ ನನ್ನ ದಾರಿ ನನ್ನದು, ಈ ಲೌಕಿಕದಲ್ಲಿ ಸಿಲುಕಿ ಹಾಕಿಕೊಳ್ಳಲಾರೆ" ಎನ್ನುತ್ತಾ, ಅರಿವಿಲ್ಲದಂತೆ ಈ ಲೌಕಿಕದ ಕಗ್ಗಂಟಿನ ಒಂದು ಎಳೆಯಾಗಿ ಸಿಕ್ಕಿ ಹಾಕಿ ಕೊಂಡಿದ್ದ.  "ಕೂತ ಮರು ಘಳಿಗೆಯಲ್ಲೇ ಒಬ್ಬ ದರಿದ್ರನಂತೆ ಕಾಣುತ್ತಿದ್ದ ಯುವಕ ನನ್ನ ದಾರಿಯನ್ನು ಹಾದು ಮತ್ತೆ ಹಿಂದೆ ಬಂದು ನನ್ನ ಕನಸನ್ನು ಕೊಳ್ಳಬಹುದೇ ಎಂದು ಕೇಳಿದ.  ಮನಸ್ಸು ಸಂಧಿಗ್ಧತೆಯತ್ತ ವಾಲಿತು. ಆದರೆ ನನ್ನ ಕನಸ್ಸನ್ನು ಕೊಳ್ಳಲು ಒಬ್ಬ ಯುವಕನೇ ಆಗಬೇಕು. ಈ ಕನಸು ಅವನ ಬದುಕಿನ ದಿಕ್ಕನ್ನೇ ಬದಲಾಯಿಸಬಹುದು" ಎಂದು ಸನ್ಯಾಸಿ ದೃಡ ಮನಸ್ಸು ಮಾಡಿ ಮಾರಿಯೇ ಬಿಟ್ಟ.
             ಆ ರಾತ್ರಿ ಅಲೌಕಿಕ ಸುಖದ ಮತ್ತಲ್ಲಿರಬೇಕಾಗಿದ್ದ ಸನ್ಯಾಸಿ ಹೀಗೆ ಸಿಕ್ಕಿಹಾಕಿಕೊಂಡು ನರಳುತ್ತಿದ್ದ. ಮತ್ತೆ ೧೦ ಹೆಜ್ಜೆ ಹಿಂದೆ ಬಂದು ಆ ತಾಯಿಯನ್ನು ಕರೆದು , ಊರಿನ ವೈದ್ಯರತ್ತ ಹೆಜ್ಜೆ ಹಾಕಿದ. ಕಂದ ಬದುಕಿದರೆ ಕನಸ್ಸನ್ನು ಮಾರಿದ್ದಕ್ಕೊಂದು ಬೆಲೆ ಬಂದೀತು. ಇಲ್ಲದಿದ್ದರೆ ಬದುಕು ಮತ್ತಷ್ಟು ಅರ್ಥಹೀನವಾಗುವುದು ಎಂಬ ಮಾನವ ಸಹಜ ಭಯ ಮೊದಲುಗೊಟ್ಟಿತು. ಆತ್ಮ ವಿಮರ್ಶೆಗೆ ಸಮಯವಿದಲ್ಲವೆಂಬ ಸಮಯ ಪ್ರಜ್ನೆಯು ಇತ್ತು.  ಚಿಕಿತ್ಸೆಗೆಂದು ಒಳಹೋದ ವೈದ್ಯರು ಎಷ್ಟು ಹೊತ್ತಾದರು ಹೊರ ಬರದಿದ್ದಾಗ ತಾಯಿಯ ಆತಂಕ ಹೆಚ್ಚಾಗುತ್ತಿತ್ತು. ಸನ್ಯಾಸಿ ಸಮಾಧಾನ ಹೇಳಲು ತಿಳಿಯದವನಾಗಿ ಕಂಗೆಟ್ಟ. ಮನಸ್ಸನ್ನು ಸಮಸ್ಥಿತಿಗೆ ತರುವ ಯೋಗ ಮುದ್ರೆಯಲ್ಲಿ ಕುಳಿತ, ಚಡಪಡಿಸುವ ಮನಸು ಕೈಗೆ ಸಿಗದೆ ಕಾಡಿಸುತ್ತಿತ್ತು. ಧೈರ್ಯ ಮಾಡಿ ತನ್ನ ಕನಸು ನುಚ್ಚು ನೂರಾದ್ದನ್ನು ನೋಡಿಯೇ ಬಿಡುವೆ ಎಂದು ಅಪ್ಪಣೆಯನ್ನೂ ಕೇಳದೆ ವಾರ್ಡಿಗೆ ನುಗ್ಗಿ ಬಿಟ್ಟ ಸನ್ಯಾಸಿ, ನೇರ ಮಗುವಿನ ಮುಖವನ್ನು ದೃಷ್ಟಿಸಿ, ಕೈಯ ನಾಡಿ ಮಿಡಿತವನ್ನು ನೋಡಲು ಮಗು ನಿಧಾನ ಕಣ್ತೆರೆಯಿತು.
               ಅಲ್ಲಿದ್ದ ವೈದ್ಯರು ಈ ಒಂದು ನಿಮಿಷಕ್ಕಾಗಿ ಕಾದು ನಿತ್ತಿದ್ದರು, ಕಣ್ಣು ತೆರೆಯುವ ಕ್ಷಣಕ್ಕಾಗಿ ಉಸಿರು ಹಿಡಿದು ನಿಂತಿದ್ದರು. ಈಗ ಸನ್ಯಾಸಿ ಮುಟ್ಟಿದಾಗ ಖಂಡಿತವಾಗಿಯೂ ಅಲ್ಲೊಂದು ಅದ್ಭುತ ನಡೆದದ್ದು ಎಲ್ಲರ ಗಮನಕ್ಕೆ ಬಾರದೇ ಇರಲಿಲ್ಲ. ಮಗು ಮತ್ತೆ ಉಸಿರಾಡಿತ್ತು. ಸನ್ಯಾಸಿಯ ಕಣ್ಣು ಕೋರೈಸುವಷ್ಟು ಬೆಳಕಿತ್ತು ಆ ಪುಟ್ಟ ಕಣ್ಣುಗಳಲ್ಲಿ. ಎಷ್ಟೋ  ಕಿರಣಗಳ ಬಣ್ಣಗಳಿದ್ದವು ಆ ಮುಗ್ಧ ನಗುವಲ್ಲಿ, ತನಗರಿವಿಲ್ಲದಂತೆ ಆತನ ಎರಡೂ ಕೈಗಳು ಮುಗಿದಿದ್ದವು. ಶಿರ ಬಾಗಿತ್ತು.