ಅಪಾರ್ಟ್ಮೆಂಟಿನ ಬಾಲ್ಕನಿಯಲ್ಲಿ ಒಣಗಿಸಿದ ಉದ್ದಿನ ಬೇಳೆಯ ಮೇಲೆ ಕೈಯಾಡಿಸಿ, ಹುಳಮಾಲೆಯನ್ನು ಎತ್ತಿ ಬಿಸಾಡುವಾಗ ಮೂಗಿಗೆ ಬಡಿದ ಉದ್ದಿನ ಬೇಳೆಯ ಪರಿಮಳ ನನ್ನೂರನ್ನು, ಅಲ್ಲಿದ್ದ ಮಮತಾಮಯಿ ಅಜ್ಜಿಯನ್ನು ನೆನಪಿಸುತ್ತದೆ. ಕಾರಣವಿಷ್ಟೇ, ಆಗ ಮಿಕ್ಸರ್ ಗ್ರೈಂಡರ್ ಇರಲಿಲ್ಲ. ಅಸಲಿಗೆ ಕರೆಂಟ್ ಸಹ ಇರಲಿಲ್ಲ. ನಮ್ಮಜ್ಜಿ ನಮ್ಮ ಹೊಲದಲ್ಲೇ ಬೆಳೆದ ಉದ್ದನ್ನು ಎರಡು ಚಪ್ಪಡಿಯಂತಿರುವ ಕಲ್ಲಿನ ಮಧ್ಯಕ್ಕೆ ಆಗಾಗ ಮುಷ್ಟಿಯಷ್ಟು ಹಾಕಿ, ಮೇಲಿನ ಕಲ್ಲಿನ ತುದಿಯಲ್ಲಿದ್ದ ಗೂಟವನ್ನು ಹಿಡಿದು ತಿರುಗಿಸುತ್ತಾ ಉದ್ದಿನ ಬೇಳೆ ಮಾಡುತ್ತಿದ್ದಳು. ನಾವು ಮೊಮ್ಮಕ್ಕಳೆಲ್ಲಾ ಅವಳ ಸುತ್ತ ಕುಳಿತು ಮಾತು ಹೆಕ್ಕುತ್ತಿದ್ದೆವು. ರಾಶಿ ಪ್ರಶ್ನೆ ಕೇಳುತ್ತಿದ್ದೆವು. ಅದೊಂದು ಕರಿ ಕೋಣೆಯಿತ್ತು. ಅದು ಅಕ್ಷರಶಃ ಕರಿ ಕೋಣೆಯೇ. ಅದರ ಬಾಗಿಲಿನಿಂದ ಹಿಡಿದು, ಗೋಡೆ, ನೆಲದ ಬಣ್ಣ ಎಲ್ಲವು ಕಪ್ಪು. ಅದೊಂತರ ಈಗಿನ ಸ್ಟೋರ್ ರೂಮ್ ಇದ್ದ ಹಾಗೆ. ಪುರುಸೊತ್ತಿದ್ದಾಗ ನಾವೆಲ್ಲಾ ಅಲ್ಲಿ ಅಂಗಡಿ ಆಟ ಆಡುತ್ತಿದ್ದೆವು. ಹೆಚ್ಚು ಕಮ್ಮಿ ಅಂಗಡಿಯಲ್ಲಿ ಸಿಗುವ ಎಲ್ಲಾ ವಸ್ತುಗಳು ಅಲ್ಲಿರುತ್ತಿದ್ದವು. ಹೆಚ್ಚಿನವು ಮನೆಯಲ್ಲಿ ಬೆಳೆದವು. ಅಕ್ಕಿ, ಗೇರು ಬೀಜ, ಉದ್ದು, ಹೆಸರುಕಾಳಿನ ಉಗ್ರಾಣದಂತಿತ್ತು ಆ ಕೋಣೆ. ಅದು ಬರೀ ಸಾಮಾಗ್ರಿಗಳ ಉಗ್ರಾಣವಲ್ಲ, ನಮ್ಮ ಬಾಲ್ಯದ ನೆನಪಿನ ಉಗ್ರಾಣವೇ ಆಗಿತ್ತು. ಪಾವು, ಸೇರನ್ನು ಹಿಡಿದು ಅಳೆದುದ್ದನ್ನೇ ಅಳೆದು, ಅಂಗಡಿಯವರಂತೆ ಪೊಟ್ಟಣ ಕಟ್ಟಿ ಕೊಡುತ್ತಿದ್ದೆವು. ಮತ್ತೆ ಅದೇ ಪಾತ್ರೆಗೆ ಸುರಿಯುತ್ತಿದ್ದೆವು. ದುಡ್ಡಿಗಂತೂ ಬರವೇ ಇರಲಿಲ್ಲ. ಚಲಾವಣೆಯಲ್ಲಿರದ ೧೦, ೨೦ ಪೈಸೆ ನಾಣ್ಯಗಳೇ ನಮ್ಮ ಬಂಡವಾಳ. ಆದರೆ ಆ ಕೋಣೆ ತೆರೆಯುವುದಕ್ಕೆ ನಮ್ಮ ಶತ್ರುವೆಂದರೆ , ಆ ಕೋಣೆಯ ಬಾಗಿಲು. ಹೆಚ್ಚಾಗಿ ಆ ಕೋಣೆಯ ಬಾಗಿಲು ಮುಚ್ಚಿಯೇ ಇರುತ್ತಿತ್ತು. ಯಾಕೆಂದರೆ ಮಕ್ಕಳು ಆಡಲು, ಬೆಕ್ಕುಗಳು ಮರಿಹಾಕಲು ಆರಿಸಿಕೊಳ್ಳುತ್ತಿದ್ದುದು ಅದೇ ಕೋಣೆಯನ್ನು. ಅಪ್ಪಿ ತಪ್ಪಿ ಅಜ್ಜಿ ಮಲಗಿದ್ದಾಗ ಆ ಕೋಣೆಯ ಬಾಗಿಲು ತೆಗೆದೆವೆಂದರೆ, ಪೆಟ್ಟು ಬಿತ್ತೆಂದೇ ಲೆಕ್ಕ. ಯಾಕೆಂದರೆ ತೋಳಿನಷ್ಟು ದಪ್ಪವಿರುವ ಆ ಬಾಗಿಲನ್ನು ತೆರೆಯ ಹೋದರೆ, ಏನೋ ಕೊಂದೇ ಬಿಟ್ಟೆವೇನೋ ಎನ್ನುವಂತೆ ಅರಚುತ್ತಿತ್ತು. ಅದೊಂತರ ನಮ್ಮಜ್ಜಿಗೆ ಎಮರ್ಜೆನ್ಸಿ ಅಲಾರಾಂ ಇದ್ದಂತೆ. ಕೂಡಲೇ ಸ್ಕ್ವಾಡ್ ಕಾರ್ಯನಿರತವಾಗಿ ಬೆನ್ನಿನ ಮೇಲೆ ರಪ ರಪ ರಪ ಗುದ್ದುಗಳು ಬಿದ್ದಿದ್ದೊಂದೇ ಗೊತ್ತಾಗುತ್ತಿತ್ತು.
ಈಗ ಅಜ್ಜಿ ಮನೆ
ಕುಸಿದಿದೆ. ಬೀಳುತ್ತಿರುವ ಮನೆಯೊಂದಿಗೆ ಆ ಕೋಣೆಯ ಗೋಡೆಗಳು ಕುಸಿದಿವೆ. ಸ್ವಲ್ಪ ದಿನಗಳ ಹಿಂದೆ,
ಅಜ್ಜಿಯ ಬೆನ್ನೂ ಮುರಿದು,
ಅವಳ ನೆನಪಿನ ಶಕ್ತಿಯು
ಕುಸಿಯಿತು. ಆಕೆಗೆ ೮೫ ವರ್ಷ, ಆಗಾಗ ಅವಳ ಬಾಲ್ಯದ
ದಿನಗಳು ನೆನಪಿಗೆ ಬಂದು , ಶಾರದಾ ಬಾರೆ
ಕಟ್ಟಿಗೆ ತರುವ ಅಂತಿದ್ದಳು. ಆ ಶಾರದಾ ಯಾರೋ ಗೊತ್ತಿಲ್ಲ. ಆದರೆ ಅವಳು ಅಜ್ಜಿಗೆ ಮೆಚ್ಚಿನ
ಗೆಳತಿಯಾಗಿದ್ದಳೇನೋ. ಗಂಡನ ಮನೆಯೇ ಜೀವನಾಡಿ ಎಂದು ಬದುಕುತ್ತಿದ್ದ ಅಜ್ಜಿ ಯಾವತ್ತೂ ಶಾರದಾಳನ್ನು
ಮೊದಲು ನೆನಪಿಸಿಕೊಂಡದ್ದೇ ಇಲ್ಲ. ಇಲ್ಲಿನ ನಿತ್ಯ ಕರ್ಮಗಳಲ್ಲಿ, ಮಕ್ಕಳು ಮೊಮ್ಮಕ್ಕಳ ಸೇವೆಯಲ್ಲಿ, ಅವಳ ಒಳ್ಳೆಯ ದಿನಗಳನ್ನು ನೆನೆದು ಖುಷಿಪಡಲು ಅಜ್ಜಿಗೆ
ಪುರುಸೊತ್ತೇ ಇರಲಿಲ್ಲ. ಆದರೆ ಬೆನ್ನು ಮುರಿದು ಮಲಗಿದ ಮೇಲೆ, ಯಾರಿಗೂ ಚಾಕರಿ ಮಾಡಲು ಆಗದ ಪರಿಸ್ಥಿತಿಯಲ್ಲಿ,
ಅವಳದೇ ಹಳೆ ಪ್ರಪಂಚ
ನೆನೆಸಿಕೊಳ್ಳಲು ಮತ್ತೆ ಸಮಯ ಸಿಕ್ಕಿರಬೇಕು. ಅವಳ ಈಗಿನ ದಿನಗಳ ನೆನಪೇ ಬೇಡ ಎನಿಸಿರಬೇಕು.
ಎಲ್ಲವನ್ನು ಮರೆತಿದ್ದಾಳೆ. ಮುಂದೆ ನಿಂತು ಅಜ್ಜಿ ನಾನ್ಯಾರು ಅಂದರೆ, ಏನೋ ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿ ಸೋಲುತ್ತಾಳೆ.
ಕಣ್ಣೀರು ಹಾಕುತ್ತಾಳೆ. ಒಮ್ಮೊಮ್ಮೆ ಅವಳ ಮಕ್ಕಳ ಹೆಸರು ನೆನಪಾಗುತ್ತದೆ. ಗಂಡನ ಹೆಸರು
ನೆನಪಾಗುತ್ತದೆ. ಇಲ್ಲವೆಂದರೆ ಅದೂ ಇಲ್ಲ. ಬರೀ ತನ್ನ ಅಪ್ಪ, ಅಮ್ಮ, ಹಾಗು ಬಾಲ್ಯದ ನೆನಪಲ್ಲೇ ತೇಲುತ್ತಿರುತ್ತಾಳೆ. ನನ್ನ ಬಾಲ್ಯದ
ನೆನಪೆಲ್ಲವೂ ಅವಳ ಸುತ್ತವೇ ಸುತ್ತುತ್ತವೆ. ದಿನ ಕಳೆದಂತೆ, ಆಕೆ ಕಳೆದು ಹೋಗುವ ಭಯ ಶುರುವಾಗುತ್ತಿತ್ತು. ಆಕೆ ನಮ್ಮ
ಬಾಲ್ಯದ ಕೊನೆಯ ಕೊಂಡಿ. ಆಲದ ಮರದಂತೆ ನೆರಳು ಕೊಟ್ಟವಳು. ನಾವೆಲ್ಲಾ ಅವಳ ರೆಂಬೆ ಕೊಂಬೆಗಳಾಗಿ
ಬೆಳೆಯುತ್ತಿದ್ದೇವೆ. ಬದುಕಿನ ಓಟದಲ್ಲಿ ರೆಂಬೆ
ಕೊಂಬೆಗಳೆಲ್ಲ ದಿನದಿಂದ ದಿನಕ್ಕೆ ದೂರವಾಗುತ್ತಲೇ ಹೋಗುತ್ತವೆ. ಆಗಾಗ ದೋಸೆಗೋ , ಇಡ್ಲಿಗೂ ಉದ್ದು ನೆನೆಸುವಾಗ ಅವಳು ನೆನಪಾಗುತ್ತಾಳೆ.
ಅವಳ ನೆನಪುಗಳಿಗೋಸ್ಕರ ಮತ್ತೆ
ಮತ್ತೆ ಉದ್ದಿನ ಡಬ್ಬಿಯ ಮುಚ್ಚುಳ ತೆರೆಯುತ್ತೇನೆ. ಅಜ್ಜಿ ಕೆಲವು ತಿಂಗಳ ಹಿಂದಷ್ಟೇ, ತೀರಿಕೊಂಡಳು. ಆದರೆ ನನ್ನೆದೆಯ ಆಧಾರವಾಗಿ ನನ್ನೊಳಗೆ
ಉಸಿರಾಗಿ ಸಂಚರಿಸುತ್ತಲೇ ಇರುತ್ತಾಳೆ.